'ಮತ್ತೀಗ ಏನ ಮಾಡೊದ್ರಿ ಗೌಡ್ರ', ಮೌನವ ಮುರಿದು ತಾನೆ ಮಾತನಾಡಿದನು ಸೋಮಣ್ಣ, ಭರಮಪ್ಪ ಸಣ್ಣ ಮುಗುಳುನಗೆಯೊಂದಿಗೆ ನೋಡುತ್ತಾ ಟೇಬಲ್ ನ ಡ್ರಾಯರ್ ನಿಂದ ಒಂದು ಸೂಟಕೇಸ್ ನ್ನು ತೆಗೆದು ಸೋಮಣ್ಣನ ಮುಂದಿಡುತ್ತಾನೆ, ಜೊತೆಗೆ ಅವನ ಮನೆ ಮತ್ತು ಹೊಲದ ಕಾಗದ ಪತ್ರಗಳನ್ನು ಇಟ್ಟು ಹಾರಾಡದಂತೆ ಅವುಗಳ ಮೇಲೆ ಗಾಜಿನ ಗುಂಡೊಂದನ್ನು ಇಡುತ್ತಾನೆ. ಸೋಮಣ್ಣನಿಗೆ ಕ್ಷಣ ಭರಮಪ್ಪನ ನಡೆಯನ್ನು ಕಂಡು ಅಯೋಮಯವಾಯಿತು.
'ನೋಡ ತಮ್ಮ ನಂದೊಂದ ಕೆಲ್ಸ ಐತಿ ನೀನದನ್ನ ನಡ್ಸಿಕೊಟ್ರ
ನಿನ್ನ ಹೊಲ್ಮನಿ ಕಾಗದ ಪತ್ರಾನು ಕೊಟ್ಬಿಡ್ತೀನಿ, ಸಾಲಾನು ಕಳೆದ್ಬಿಡ್ತೀನಿ, ಜೊತ್ಗೆ ಈ ಸೂಟಕೇಸ್ ನ್ಯಾಗ ನಾಕ ಲಕ್ಷ ರೊಕ್ಕ ಐತಿ ಇದನ್ನು ಕೊಡ್ತೀನಿ, ಏನಂತಿ ಮಾಡಿಕೊಡ್ತೀಯಾ?'
ಭರಮಪ್ಪನ ಮಾತನ್ನು ಕೇಳಿ ಸೋಮಣ್ಣನಿಗೆ ಸ್ವರ್ಗಕ್ಕೆ ಮೂರೆಗೇಣು ಅನ್ನುವಷ್ಟು ಸಂತೋಷವಾಗಿಬಿಟ್ಟಿತು. ಊರಲ್ಲೆಲ್ಲಾ ಮಂದಿ ಎಷ್ಟೊಂದು ತಪ್ಪ..ತಪ್ಪಾಗಿ ಮಾತಾಡ್ತಾರ ಈ ವಯ್ಯನ ಬಗ್ಗೆ, ಇವರ ನೋಡಿದ್ರ ಇಷ್ಟ ಒಳ್ಳೆ ಮನಸ್ನೊರ ಅದಾರ, ಹಂಗಾದ್ರ ಜನ ಹೇಳಿದ್ದೆಲ್ಲಾ, ನಾ ಕಂಡಿದ್ದೆಲ್ಲಾ ಸುಳ್ಳೇನು..? ' ಒಂಥರಾ ಮನಸ್ಸು ಗೊಂದಲದ ಗೂಡಾಗಿ, ಭರಮಪ್ಪನ ಬಗ್ಗೆ ಯಾವುದೇ ರೀತಿಯ ಒಂದು ಸ್ಪಷ್ಟ ನಿರ್ಧಾರಕ್ಕೆ ಬರಲಾರದೆ ಹೋದನು. ' ಹೇಳ್ರೀ..ಗೌಡ್ರ, ಏನ್ರೀ ವಿಷಯ' ಉಗುಳನ್ನು ನುಂಗಿಕೊಳ್ಳುತ್ತಾ ಅಳುಕಿನಿಂದಲೆ ಕೇಳಿದನು. ಭರಮಪ್ಪ ಮುಂದಕ್ಕೆ ಬಾಗಿ ಹತ್ತಿರ ಬಾ ಎಂದು ಬೆರಳಿನಿಂದ ಸನ್ನೆಯನ್ನು ಮಾಡಿದನು. ಸೋಮಣ್ಣನು ಮುಂದಕ್ಕೆ ಬಾಗಿದನು, ಭರಮಪ್ಪನು ಸೋಮಣ್ಣನ ಕಿವಿಯ ಹತ್ತಿರ ಬಂದು ಮೆಲು ಧ್ವನಿಯಲ್ಲಿ ' ಏನಿಲ್ಲ, ಇವತ್ತೊಂದು ರಾತ್ರಿ ನಿನ್ನ ಹೆಂಡ್ತಿ ಮುಡಿಗೆ ನಾ ಮಲ್ಗಿ ಮುಡ್ಸ್ತೀನಿ'.
ಭರಮಪ್ಪನು ಮಂಜಿನಗಡ್ಡೆಯ ತಂಪಿನಷ್ಟೆ ಮೆತ್ತಗೆ ಹೇಳಿದ್ದರು, ಸೋಮಣ್ಣನಿಗೆ ಬಯಲಿಗೆ ಬಡೆದ ಸಿಡಿಲಿನಂತಾಗಿ ಅಷ್ಟು ದೂರ ಹಿಂದೆ ಸರೆದು ಬಿದ್ದುಬಿಟ್ಟನು. ಅವನು ಬಿದ್ದದ್ದನ್ನು ನೋಡಿ ಭರಮಪ್ಪನು ಕೋಣೆಯೆ ಪ್ರತಿಧ್ವನಿಸುವಂತೆ ಗಹಗಹಿಸಿ ನಗತೊಡಗಿದನು. ಅವನ ದರ್ಪದ ನಗುವನ್ನು ಕಂಡ ಸೋಮಣ್ಣನ ಕಣ್ಣುಗಳು ಬೆಂಕಿಯನ್ನುಗುಳಲಾರಂಭಿಸಿದವು, ದೇಹದೊಳಗಿನ ನರನಾಡಿಗಳೆಲ್ಲ ಕಬ್ಬಿಣದಂತಾಗಿಬಿಟ್ಟವು, ಎದೆಯಲ್ಲಿ ಸಾವಿರಾರು ಕುದುರೆಗಳ ಒಟದಷ್ಟು ವೇಗವಾಗಿ ಎದೆಯು ಬಡೆದುಕೊಳ್ಳತೊಡಗಿತು,'ಹೂವಂದ್ಕೊಂಡಿದ್ದು ಹಾವಾಗಿ ವಿಷಾನ ಕಕ್ಕಿಬಿಟ್ತು, ದೇವ್ರೆಂತಂದ ನಂಬಿ ತಲಿನ ಬಾಗ್ಸಿದ್ದಕ್ಕ ಕತ್ತನ್ನ ಕೊಯ್ದುಬಿಟ್ಟಿಯಲ್ಲೊ ಪಾಪಿ, ಎಂತಾ ನಂಬ್ಕಿ ದ್ರೋಹ' ಅಂದುಕೊಳ್ಳುತ್ತಲೆ ಬಲಗೈಯನ್ನು ಎತ್ತಿ ಬಲವಾಗಿ ಟೇಬಲ್ ಮೇಲೆ ಗುದ್ದಿಬಿಟ್ಟನು ಸೋಮಣ್ಣ. ಅವನು ಗುದ್ದಿನಿಂದಾಗಿ ಟೇಬಲ್ ಮೇಲೆ ಕುಡಿಯಲಿಕ್ಕೆಂದು ಇಟ್ಟಿದ್ದ ಗಾಜಿನ ಲೋಟದ ನೀರು ಭರಮಪ್ಪನ ಮುಖಕ್ಕೆ ಸಿಡಿದರೆ ಲೋಟವು ನೆಲಕ್ಕೆ ಬಿದ್ದು ಫಳ್ಳೆಂದು ಶಬ್ಧ ಮಾಡುತ್ತಾ ಚೂರುಚೂರಾಯಿತು.ಆ ಸದ್ದಿಗೆ ಭರಮಪ್ಪನ ನಗು ಅರ್ಧಕ್ಕೆ ಸತ್ತು ಹೋಗಿತ್ತು, ಸೋಮಣ್ಣನ ರೌದ್ರಾವತರವ ಕಂಡು ಕ್ಷಣ ಬೆಚ್ಚಿಬಿದ್ದನು ಭರಮಪ್ಪ. ಕಟಕಟನೆ ಹಲ್ಲನ್ನು ಕಡಿಯುತ್ತಾ ' ಬೋಳಿ ಮಗನೆ, ಹೊಟ್ಟಿಗೇನ್ ಅನ್ನಾ ತಿಂತೀಯೊ ಇಲ್ಲಾ ಹೊಲ್ಸ ತಿಂತೀಯೊ, ನಿನ್ ಮಗ್ಳ ವಯಸ್ಸಿನ ಹೆಂಡ್ತದಾಳ ನನ್ನಾಕಿ, ಅಕಿಮ್ಯಾಲ ಆಸೆಪಟ್ಟಿ, ನಾಚ್ಕಿಲ್ಲೇನ್ಲೆ ನಿಂಗ, ಅದು ನನ್ನ ಹೆಂಡ್ರಿನ ನಾನ ಕರ್ಕೊಂಡ ಬಂದ ನಿನ್ನ ಮಂಚಕ್ಕ ಹತ್ತಸ್ಲಿ, ನಿಮ್ಮೌನ, ಇನ್ನ ನಮ್ಮ ಮದುವ್ಯಾಗಿನ ವರ್ಸ ಸೈತಿ ಆಗಿಲ್ಲ, ಅಷ್ಟರಾಗ ಸಾಕಷ್ಟು ನೋವುಂಡಿವ ನಾವು, ಏನ ಕಷ್ಟಕಾಲ್ದಾಗ ನಮ್ಗ ನೆರಳಕೊಟ್ಟಿದಿ ಅಂತಂದ ತಗ್ಗಿಬಗ್ಗಿ ನಡದ್ರ ನಮ್ಮ ಹೊಟ್ಟಿಮ್ಯಾಲ ಕುಣಿಯಾಕ ಬರ್ತೀ, ನಮ್ಮ ತಂದಿಯಷ್ಟ ವಯಸ್ಸಾಗೈತಿ, ಆ ವಯಸ್ಸಿಗರ ತಕ್ಕಷ್ಟ ಬುದ್ದಿ ಬ್ಯಾಡ, ಬೆಳ್ಕ ಹರ್ದ್ರ ನಾಕ ಮಂದಿ ಜೊತಿ ಅಡ್ಡಾಡ್ತಿಯಲ್ಲ, ಅವ್ರು ಇದನ್ನ ಮಾಡ್ತಾರನ, ಅವ್ರ ಹೆಂಡ್ರ ಮಕ್ಳನ್ನು ಕರಿತಿಯೇನ ಹಾಸ್ಗಿಗೆ, ಏನ ನಮ್ಗ ಹೇಳೊರ ಕೇಳೊರ ಯಾರಿಲ್ಲಂತದ ಕಿತ್ಬಿ ಏಬ್ಸಿಯೇನ ಮಗ್ನ, ನೋಡ ನಾನ ನೋಡೊಕಷ್ಟ ಸಾಚಾ ಕಾಣ್ತೀನಿ, ಹೊಲ್ಮನಿಯಾಗ ದುಡ್ದ ಮೈಯಿದ ಮನಸ್ಸ ಮಾಡಿದ್ನೆಂದ್ರ ಐದ ನಿಮಿಷ್ದಾಗ ನಿನ್ನೆದಿನ ಇಲ್ಲೆ ಸೀಳಿ ಬಗ್ದ ಹಾಕ್ಬಿಡ್ತೀನಿ ಹುಷಾರ್, ನೀನೆಷ್ಟು ಸಾಚಾ ಅದಿ ಅಂತಂದ ಊರೂರ ಮಾತಾಡತೈತಿ ಮಗ್ನ,ಹಳೆ ಮ್ಯಾನೇಜರ್ ರಾತ್ರೊ ರಾತ್ರಿ ಹೆಂಡ್ತಿ ಮಕ್ಳನ್ನ ಕರ್ಕೊಂಡು ಯಾಕ ಊರ್ಬಿಟ್ಟ ಹೋದ, ಮೂಲಿಮನಿ ಬಸ್ಯಾನ ಹೆಂಡ್ತಿ ಅಡ್ಗಿ ಮನ್ಯಾಗ ಊರ್ಲ ಹಾಕ್ಕೊಂಡ ಯಾಕ ಸತ್ಲು, ನಿಮ್ಮನಿ ಕೆಲ್ಸದಾಕಿ ಬೆಳ್ಕ ಹರಿಯೊ ಮೊದ್ಲ ಕೆರಿಯಾಗ ಹೆಣ ಅಗಿ ಯಾಕ ತೇಲಾಡಕ ಹತ್ತಿದ್ಳು, ಹಿಂಗ ಸಾಕಷ್ಟ ವಿಷ್ಯ ನಂಗು ಗೊತ್ತಾದವು, ಗೊತ್ತಿದ್ರು ನಾನ್ಯಾಕ ಸುಮ್ನಿದ್ಯಾ..? ಕೆಲ್ಸ ಇಲ್ದ ಹೊತ್ತನ್ಯಾಗ ಕರ್ದ ಕೆಲ್ಸ ಕೊಟ್ರಿ ಆ ಒಂದ ಋಣಕ್ಕ ಸುಮ್ನಿದ್ನಿ ಇಷ್ಟ ದಿವ್ಸ. ಸಾಕ ಇವತ್ತಿಗ ಈಗ ಸಿಟಿಗೆ ಹೋಗಿ ಒಬ್ಬ ಬ್ರೋಕರ್ ಕರ್ಕೊಂಡ ಬಂದ ಹೊಲ್ಮನಿ ಎಲ್ಲಾ ಮಾರಿ ನಿನ್ನ ಸಾಲದ ರೊಕ್ಕಾನೆಲ್ಲ ಈ ವಾರ್ದಾಗ ನಿನ್ನ ಮೊಸಡಿಗೆ ಒಗಿತಿನಿ, ಥೂ.. ನಾಲಾಯಕ ನನ್ಮಗನ ನಿನ್ಮುಖ ನೋಡೊಕ ಹೆಸ್ಗಿ ಆಗಕ ಹತ್ತೈತಿ ನಂಗೀಗ ' ರೋಷಾವೇಶದಿಂದಲೆ ಮಾತಾಡಿ ಭರಮಪ್ಪನ ಹಣೆಯ ಮೇಲೆ ಬೆವರಿಳಿಸಿ, ಹೊರಡಲನುವಾದನು. ಸೋಮಣ್ಣನ ಮಾತುಗಳನ್ನು ಕೇಳಿ ಕ್ಷಣ ಭಯಭೀತನಾಗಿಬಿಟ್ಟಿದ್ದನು ಭರಮಪ್ಪ, 'ಅಲ್ಲಾ ಇಲಿ ಹಂಗಾ ಇದ್ದಂತೋನು ಇವತ್ತೇನ, ಹುಲಿಯಾಗ್ಬಿಟ್ಟೀವ, ಹ್ಞೂಂ... ಹ್ಞೂಂ... ಹ್ಞೂಂ... ನಾನೇನ ಹಗರ ಅದೀನೆನ ಎಂತೆಂತಾ ಸಿಂಹಗಳನ್ನ ಮಣ್ಣ ಮುಕ್ಸಿದ ಬೇಟೆಗಾರ ಅದೀನ ನಾ, ನಂಗ ಸವಾಲ್ ಹಾಕ್ತಾನ ಇಂವಾ' ಎಚ್ಚೆತ್ತ ಭರಮಪ್ಪ.
'ನಿಂದ್ರಲ್ಲೆ...' ಎಂದು ಗಡಸು ಧನಿಯಲ್ಲಿ ಆಜ್ಞಾಪಿಸಿದನು. ಸೋಮಣ್ಣನು ನಿಂತು ಹಿಂತಿರುಗಿ ಕೆಂಗಣ್ಣಿನಲ್ಲೆ ಕೆಕ್ಕರಿಸಿ ನೋಡಿದನು.
' ಹಾಂಗ ನೋಡಬ್ಯಾಡ್ಲೆ ತಮ್ಮ ಕೆಕ್ಕರಿಸಿ, ಕಣ್ಣ ಕಿತ್ತ ಬೊಂಡಾ ಬಜಿ ಮಾಡ್ಕೊಂಡ ತಿಂದ ಬಿಡಾವದೀನ ನಾ, ನನ್ಬಗ್ಗೆ ನಿಂಗಿನ್ನು ಗೊತ್ತಿಲ್ಲ ಲೆ ಮಳ್ಳ, ನಾ ರಾತ್ರಿ ಕಂಡಷ್ಟು ನಿ ಹಗ್ಲಿನ ಮುಖಾ ನೋಡಿಲ್ಲಾ ಸರಿಯಾಗಿ ತಿಳ್ಕೊ, ನಂಗ ದುಡ್ಡ ಮುಖ್ಯ ಅಲ್ಲಲೆ ಮಬ್ಬ, ಸುಖಾ...!!! ಸುಖಾ...!!! ಸುಖಾ ಬೇಕ ನನ್ಗ ಅದು ರೊಕ್ಕ ಎಷ್ಟರ ಖರ್ಚಾಗ್ಲಿ, ಹೇ.. ಹೆಣ್ಣು ಯಾ ವಯಸ್ಸಿಂದಾದ್ರೇನು, ಮಗಳ್ದಾದ್ರೇನು, ಹೆಂಡ್ತಿದಾದ್ರೇನು, ಅಕ್ಕಂದಾದ್ರೇನು, ನಮ್ಗ ಮನಸ್ಸಿಗ ಬಂದ ತೋಟ್ದಾಗ ನಾವ್ ನೀರ ಹಾಸೋರ, ಖರ್ಚ ಎಷ್ಟರ ಬರ್ಲಿ ತೂಗಸ್ತೀವ ನಾವ್, ನಿನಿನ್ನು ಎಳ್ಸು ಲೆ ತಮ್ಮಾ, ಕದ್ದ ತಿನ್ನೊ ಹಣ್ಣಿನ ರುಚಿ ಅದು ಬ್ಯಾರೇನ ಇರ್ತತಲೆ' ಅಮಲುಗಣ್ಣಿನಲ್ಲಿ ಮಾತನಾಡಿದನು,
' ಕಂಡ ಕಂಡೋರ ಹೊಲ್ದಾಗ ನೀರ ಹಾಸಿದ್ರ ಫಲ ಛಲೋ ಸಿಗೊದಿಲ್ಲ' ಸಿಟ್ಟಿನಿಂದಲೆ ಉತ್ತರಿಸಿದನು ಸೋಮಣ್ಣ
'ಫಲದ ನೀರಿಕ್ಷೆ ನಾನಿಟ್ಕೊಂಡಿಲ್ಲ'
' ನಿ ಹಿಂಗ ಮಾಡಿದ್ರ ಒಂದು ಹೆಣ್ಣಿನ ಮಾನ ಹೋಗ್ತೈತಿ, ಒಂದ ಹೆಣ್ಣಿನ ಮಾನಂದ್ರ ಒಂದು ಕುಟುಂಬದ ಮಾನ ಹೋದ್ಹಾಂಗ, ಮಾನಾ ಹೋದಾಕಿ ಸತ್ತ ಹೋದ್ಲಂದ್ರ, ಆ ಕುಟುಂಬನ ಸತ್ತ ಹೋದ್ಹಾಂಗಾಕೈತಿ, ನಿನ್ನ ಕ್ಷಣ್ದ ಸುಖಕ್ಕ ಇಡೀ ಒಂದ ಕುಟುಂಬಾನ ಉರ್ದ ಹೊಕ್ಕೈತಿ, ನಿನ್ಗ ಪಾಠ ಕಲ್ಸೊರು ಯಾರಿಲ್ಲಂತಂದ ಇಷ್ಟೇಲ್ಲಾ ಹಾರಾಡಕ ಹತ್ತಿದಿ, ಈಗ ಪೋಲಿಸ್ ಸ್ಟೇಶನ್ಗೆ ಹೋಗಿ ಕಂಪ್ಲೇಟ್ ಕೊಟ್ಟ, ಒದ್ದ ಒಳಗ ಹಾಕಸ್ತೀನಿ'
'ಹ್ಹ.....ಹ್ಹ.........ಹ್ಹ.....ಹ್ಹ.....' ಹೊಟ್ಟೆಯನ್ನು ಹಿಡಿದುಕೊಂಡು ಕಣ್ಣಲ್ಲಿ ನೀರು ಬರುವವರೆಗೂ ನಕ್ಕನು ಭರಮಪ್ಪ ' ಲೇ ಮಳ್ಳ, ಎಮ್ಎಲ್ಎ ನನ್ನ ಬಕ್ಣದಾಗ ಅದಾನ, ಸ್ಟೇಷನ್ ನನ್ನ ಮನಿ ಇದ್ಹಂಗ, ಇಡಿ ಊರ್ಗೆ ಊರ್ ನನ್ನ ಅಂಗೈಯ್ಯಾಗ ಐತಿ, ಮೊನ್ನೆ ಇದ ಕೊಣ್ಯಾಗ ನಮ್ಮನಿ ಕೆಲ್ಸದಾಕಿ ನೆಲಾ ವರ್ಸಾಕಂತ ಬಂದಿದ್ಲು, ಸೀರಿ ಸೆರಗ ಬೆಸ್ಯಾಗಿ ಹೊದ್ಕೊಬೇಕಿಲ್ಲ, ನನ್ನೆದ್ರುಗೆನ ಎದಿ ಬೆಣ್ಣಿ ಕಾಣ್ಸುವಂಗ ಕೆಲ್ಸ ಮಾಡಾಕ ಹತ್ತಿದ್ಲು, ತಡ್ಕೊಳ್ಳಾಕ ಆಗ್ಲಿಗ ಬೆಣ್ಣಿನ ಕರ್ಗಿಸಿ ತುಪ್ಪ ಮಾಡ್ಕೊಂಡ ಗಟಗಟಂತಾ ಕುಡ್ದ ಬಿಟ್ನಿ, ಉಡಿತುಂಬಾ ರೊಕ್ಕಾ ತುಂಬಿ ಕಳ್ಸದ್ನಿ, ಹುಚ್ಚ ಮುಂಡೇದ ಹೊಳಿಗೆ ಹಾರಿ ಪ್ರಾಣ ಬಿಡ್ತು, ಅದರ ಬಗ್ಗೆ ಯಾರರ, ಏನರ ಚಕಾರ ಏತ್ತಾರನು ಊರಾಗ, ಇಲ್ಲ, ಕೇಳಿಲ್ಲೆ ಕೊನೆದಾಗಿ ಹೇಳ್ತಿನಿ ತಮ್ಮಾ, ನಿನೇರ ಈ ವಿಷಯಕ್ಕ ಒಪ್ಕೊಲಿಲ್ಲಂದ್ರ, ನನ್ನ ಕಾಮಗಾರಿ ಕೆಲ್ಸದಾಗ ಸಾಕಷ್ಟ ರೊಕ್ಕಾ ಗೋಲಮಾಲ ಮಾಡಿ ಅಂತಂದ ಹೇಳಿ ಕಂಪ್ಲೆಟ್ ಕೊಡ್ಸಿ, ಮ್ಯಾಕ ಏಳಾಕ ಬರ್ಲಾರ್ದಂಗ, ಹೆಂಡ್ತಿ ಮಗ್ಲ ಮತ್ತ ಮಲಗಾಕ ಬಂದಿರ್ಬಾರ್ದು ಹಂಗ ಮೈಯೊಳ ಸಣ್ಣಾಗಿ ಲಾಠಿಲೆ ನಾದಿಸಿಬಿಡ್ತೀನ ಮಗ್ನ, ನಿ ಹಣ್ಣಾದ ಮ್ಯಾಕ, ನಿನ್ನ ಹೆಂಡ್ತಿಯನ್ನೊ ಹಣ್ಣನ್ನ ತಿನ್ನೊದು ನಂಗೇನು ಕಷ್ಟದ ಕೆಲ್ಸ ಅಗೋದಿಲ್ಲ, ಏನೊ.. ಒಂದ ರಾತ್ರಿ, ಇಲ್ಲ ಬೇಜಾರಾದಾಗೊಮ್ಮೊಮ್ಮೆ ಕರೆದಾಗ ಕಳ್ಸುವಂತಿ, ನಾನೇನ ದಿನಾ ಬೇಕಂತ ಏನರ ಕೇಳಿನೇನ ನಿಂಗ, ಹ್ಯಾಂಗ ಮಾಡ್ತಿ ಹೇಳ
ಹಣ, ಮಣ್ಣು ತಗೊಂಡು ಹೆಣ್ಣ ಕಳ್ಸು ಇಲ್ಲಾಂದ್ರ ಎರಡು ಸಿಗ್ದ ಸುಡಗಾಡ ಸೇರು' ಆಗ ಕೋಣೆಯ ಬಾಗಿಲನ್ನು ಜೋರಾಗಿ ಬಡೆದು ಸದ್ದನ್ನು ಕೇಳಿ ಭರಮಪ್ಪನು ಸುಮ್ನಿರಬೇಕು ಎಂದು ತುಟಿಯ ಮೇಲೆ ಬೆರಳಿಟ್ಟು ಸನ್ನೆ ಮಾಡಿ, ಬಾಗಿಲನ್ನು ತೆರೆದಾಗ ಎದುರಿಗೆ ಅವನ ಮಗಳು ನಿಂತಿದ್ದಳು.
Friday, July 6, 2018
೪
Subscribe to:
Post Comments (Atom)
No comments:
Post a Comment