Sunday, July 15, 2018

ಸಾಕಿ 8

ಇಷ್ಟೊಂದು ಮುನಿಸೇಕೆ..ಬಡವನ ಮೇಲೆ
ಸಾಕಿ....
ಹಿಡಿ ಪ್ರೀತಿಯ ಬೇಡಿ ಬಂದ ಭಿಕ್ಷುಕ ನಾನು...
ಅಲೆದ ಬೀದಿಗಳಲ್ಲಿ ತಂಗಳೊಲವು ದಕ್ಕಲಿಲ್ಲ...
ಮುಖದ ತುಂಬಾ ಪರದೆಯನ್ನು ಹಾಕಿಕೊಂಡು,
ಹಳಸಿದ ನಟನೆಯಲ್ಲಿಯೆ... ಪ್ರೀತಿಯ ತುತ್ತೊಂದ
ನಾದರೂ... ನೀಡು ಬಾ....

ಮೂಗ ಮುಚ್ಚಿ... ದೂರ ನಿಂತುಕೊಳ್ಳುವಷ್ಟು..
ದೇಹವಿನ್ನು ಮೈಲಿಗೆಯಾಗಿಲ್ಲ.... ಸಾಕಿ...
ನೆನಪುಗಳ ಸುಳಿಗೆ ಸಿಕ್ಕು...ಕೊಳೆತು ನಾರುವ
ಮನದ ವಾಸನೆ, ನಿನ್ನ ಮೂಗಿಗೆ ತಾಕಿದರೆ....
ಹೊಣೆ ನನ್ನದಲ್ಲ... ಮದ್ದನ್ನು ಸವರಬೇಕಾದವರೆ...
ಗಾಯವ ಮಾಡಿ ಹೋಗಿರುವಾಗ... ವಾಸಿಮಾಡಿಕೊಳ್ಳ
ಬೇಕೆಂಬ ದರ್ಧು ನನಗೆನಿಲ್ಲ....

ನೋಡಿಲ್ಲಿ... ಮಧು ಶಾಲೆಯ ಮುಂದೆ.....
ನೋವುಂಡು ಸರತಿಯಲ್ಲಿ ನಿಂತವರ ಸಾಲು... 
ಊರ ಅಗಸಿಯನ್ನೆ ದಾಟಿ ನಿಂತಿದೆ, ಸಾಕಿ....
ಅರೆ ಘಳಿಗೆ ನಿ ತಡ ಮಾಡಿದರೆ...
ಊರ ಹೊರಗಿನ ಸ್ಮಶಾನದಲ್ಲಿ ಗೋರಿಗಳನ್ನು
ತೋಡಲು ಸ್ಥಳವಿಲ್ಲದಂತಾದಿತು...,
ಪಿಂಡವನುಣ್ಣಲು ಬರುವ ಕಾಗೆಗಳಿಗೂ...
ಬರ ಬಂದಾತು...

ಸಾಕಿ...
ಮಧುಶಾಲೆಯ ಮೇಲೆ‌...ಒಂದೆ ಒಂದು ಹದ್ದು ಸಹ
ಹಾರಾಡುತ್ತಿಲ್ಲವಿಂದು...., ಸತ್ತು ಬೀಳುವವರ ಹೆಣವನ್ನು
ಕುಕ್ಕಿ ತಿನ್ನಲು.....
ಬಹುಶಃ ಅವುಗಳಿಗೂ...ಗೊತ್ತಾಗಿರಬೇಕೇನೊ...?
ಅವಳ ನೆನಪುಗಳೆ ನಮ್ಮನು ಕಿತ್ತು..ಕಿತ್ತು ತಿಂದಿರುವಾಗ..
ರುಚಿಯಾದರು ಎಲ್ಲಿ ಉಳಿದಿತೆಂದು...,ಈಗೀಗ ದೇಹದ
ತುಂಬೆಲ್ಲ ಮಧುಶಾಲೆಯ ಮದ್ಯವೆ ತುಂಬಿಕೊಂಡಿರುವಾಗ...

ಬಾಗಿಲು ತೆರೆಯದೆ ಹೋದರೂ.... ಹೋಗಲಿ ಬಿಡು
ಸಾಕಿ...
ತುಸು ನಸುನಕ್ಕಿಬಿಡು ಮಹಡಿ ಮೇಲಿನ ಕಿಟಕಿಯಿಂದ,
ಈಗಲೊ...ಆಗಲೊ..ಎನ್ನುವವರು...ನಿನ್ನ ನಗೆಯ
ಚಿಲುಮೆಯಿಂದ... ಇನ್ನೆರಡು ದಿನ ಬದುಕುಳಿಯಲಿ...
ಹರೆಯದ ಹೊರೆಯನು ಹೊತ್ತು ನಿಂತವರೆದೆಯಲ್ಲಿ
ಭರವಸೆಯ ಬೆಳಕೊಂದಾದರೂ...ಮೂಡಲಿ...

ಅಂಗೈಯಲ್ಲಾದರು ಚೂರೆ...ಚೂರಾದರು..ಮಧುವನ್ನು
ಸುರಿದುಬಿಡು ಸಾಕಿ... ತೀರ್ಥದಂತೆ...
ಗಂಟಲಪಸೆಯಿಂದೇಕೊ ಬಹುವಾಗಿ ಒಣಗುತಿಹುದು...
ಹಸಿ‌ಮಣ್ಣಿನ ವಾಸನೆ ಮೂಗಿಗೆ ಬಡಿಯುತಿಹುದು...
ಗೊತ್ತಿಲ್ಲ....ಎದೆಯ ಬಡಿತವಿಂದೇಕೊ ದಿನದಂತಿಲ್ಲ...
ನಾಳೆಯ ಸಂಜೆಗೆ ನಿನ್ನ ಮಧು ಬಟ್ಟಲಿಗೆ ಮುತ್ತಿಕ್ಕುವ,
ತುಟಿಗಳ ಅಂಚಲ್ಲಿ ಹಿಡಿಯಕ್ಕಿಯಿರಬಹುದೇನೊ...
ನಿನಗೆ ಮುಡಿಸಲೆಂದು ತರುತ್ತಿದ್ದ ಮಲ್ಲಿಗೆ... ಗೋರಿಗೆ ಚಾದರವಾದರು ಆಗುವುದೇನೊ...?

No comments:

Post a Comment