Friday, January 27, 2017

ಬದುಕಬೇಕಿದೆ ನಿನ್ನೊಡನೆ

ಮೂಡುತಿದೆ ಮೋಹ
ಮೋಡದ ಮರೆಯಿಂದ
ಮಲೆಗಳ ತುದಿಯ
ಚುಂಬಿಸೊ....
ಹಂಬಲವ ಹೊತ್ತು
ಬರುವ ರವಿಯಂತೆ

ಚಿಮ್ಮುತಿದೆ ಆಸೆ
ಕಡಲ ತಟವ ಚಿಮ್ಮಿ ಚಿಮ್ಮಿ
ಸಾಗರದ ಬಂಧನವ ತೊಡೆದು
ಬಂಡೆಯನು ತೊಯಿಸುವ
ನೀರಂತೆ

ಉಕ್ಕೇರುತಿದೆ ಪ್ರೀತಿ
ಮನದ ಕುಡಿಕೆಯಿಂದ
ವಿರಹದ ಕುದಿಗೆ ಕುದ್ದು ಕುದ್ದು
ಇನ್ನು ತಡೆಯಲಾಗದೆಂದು
ಪುಟಿ ಪುಟಿದು ಬರುವ
ಹಾಲಿನಂತೆ

ಕಟ್ಟಬೇಕಿದೆ ಬದುಕು
ಅರ್ಧ ಚಂದ್ರಾಕೃತಿಯ
ಹುಳುವಿನರಮನೆಯಂತೆ
ಅದರೊಳು ನಿನ್ನ ಸದಾ
ನನ್ನ ಪ್ರೀತಿಯ ಬೆಚ್ಚಗಿನ
ಹೊದಿಕೆಯಲಿ ಮಲಗಿಸಿ
ಹೊನ್ನ ಕನಸುಗಳ ಕಾಣುವಂತೆ

ಬದುಕಬೇಕಿದೆ ನಾನು
ನಿನ್ನೊಡನೆ

ವೇದನೆಯ ಮರೆಯಲು

ನೀ ಬಿಟ್ಟು ಹೋದ
ಗಾಯದ ಗುರುತನ್ನು
ಊದು ಊದು ಊದಿದೆ
ವಲೆಗೆ ಊದಿದ ಬೆಂಕಿ
ಹೆಚ್ಚಾದಂತೆ, ಊದಿದ
ಗಾಯವು ಮರೆಯಾದರೂ
ಕೆಂಡದ ನೋವು ಇನ್ನೂ
ಹಾಗೆ ಮನವ ಸುಡುತಿದೆ

ಗಾಯದೆದೆಗೆ ಮುಲಾಮು
ಹಚ್ಚುವ ವೈದ್ಯರಾರು
ಇಲ್ಲವಿಲ್ಲಿ
ನಿನ್ನ, ನಿನ್ನ ನೆನಪುಗಳ
ಕೇಳಿ ಹೇಳಿ ಸೀಳಿ
ಕೆಂಡವ ಕೆದರಿ ಅವರ
ಚಳಿಯ ಮನವ
ಕಾಯಿಸಿಕೊಳ್ಳುವರಿಲ್ಲಿ

ಅವರಾಡುವ ಮಾತುಗಳು
ಉರಿವ ಸೌದೆಗೆ ನೀರು
ಚಿಮುಕಿಸಿದಂತೆ
ಕಾಯ್ದ ಎಣ್ಣೆಯೂ
ಕೈಗೆ ಸಿಡಿದಂತೆ
ಕುದಿವ ಗಂಜಿಯ
ಗಟಗಟನೆ ಕುಡಿದಂತೆ
ಸುಡುವ ಬೆಂಕಿಯ
ಮೈಗೆ ಹಚ್ಚಿಕೊಂಡು
ನಿಂತಂತಾಗಿದೆ

ಬಂದುಬಿಡು, ಯಾವುದಾದರೂ
ನೆನೆಪಿನ ಮದ್ದನು ತಂದು
ಲೇಪಿಸು ಆದ ಗಾಯದ
ಗುರುತಿಗೆ
ಮನಸಿಗೆ ಮಾತುಗಳ ಸಿಂಚನವ
ಸಿಂಪಡಿಸದಿದ್ದರೂ ನಿನ್ನ
ಮಂದಾರದ ಮೌನವದೊಂದಾದರೂ
ಸಾಕು ಸಾವಿರ ವೇದನೆಯ ಮರೆಯಲು

ಮನದ ಪನ್ನೀರು

ಚಕೋರಿ
ಬಾನೊಳ್ಹಾರುವ ಜೋಡಿ ಹಕ್ಕಿಗಳ
ರಕ್ಕೆಗಳ ಬಲವಾದರು ಕುಂದುವುದು
ನಮ್ಮಿಬ್ಬರ ಮನದಾಸೆಯ ಹಕ್ಕಿಗಳ
ರೆಕ್ಕೆಗಳೆಂದಾದರೂ ಕುಂದಾವು

ಚಂದ್ರಿಕೆ
ಕತ್ತಲ ಬೆಳ್ಳಿಗೆ ಹೇರುವುದು
ಹಗಲೆ ಬಂಧ
ಮಿಂಚಿನ ಬಳ್ಳಿಯ
ಮೊಗದ ನಗುವ ಬೆಳ್ಳಿಗೆ
ಯಾವ ಋತುವು
ಯಾವ ಹೊತ್ತು
ಹೋರಿಸಲಾದಿತು
ನಿರ್ಬಂಧ

ದೀಪಿಕೆ
ತರುವಿನಾ ತಂಗಾಳಿ ತರುವುದು
ದೀಪಕೆ ತಮಸ್ಸು
ಜೀವನಾ ಜ್ಯೋತಿ ಬೆಳಗುವಾ
ಸುಮತಿ
ತಮವಾರು ತುಂಬುವರು ನಮ್ಮಲಿ
ನೀ ಸುಡುವ ಬೆಂಕಿ

ಅಸ್ತಿನಿ
ಅಸ್ತಮವಾಗುವನವನು ಅವಧಿ
ಅಳಿದ ಬಳಿಕ
ಯಾವ ಅವಧಿಗಳಿಲ್ಲ ಜಗದಲಿ
ಎರಡು ಮನಗಳಸ್ತಮವ ಕಾಣಲು
ಕಾಯದ ಕಾಯಿ ಒಡೆದು ಬಿದ್ದರೂ
ಚೆಲ್ಲುವುದು ಹರಿಯುವುದು
ತಣಿಸುವುದು ಮನದ ಪನ್ನೀರು

ನಯವಂಚಕಿ

ಕಾದ ಕಂಗಳಲಿ ಕಣ್ಣೀರು ಸುರಿದಿರೆ
ಬೆಂದ ಮನದಲಿ ಅಗ್ನಿ ಸುಡುತಿರೆ
ನೀ ಬರುವ ದಾರಿಗೆ ಕಾದಿಹೆ ನಾ
ಹೋಗುವ ದಾರಿ ಅರಿಯೆ ನಾ

ಕಾದು ಸೋತ, ಕನಸು ಕಂಡ
ನಿನ್ನಂದವ ಮನದಲಿ ರೂಪಿಸಿದೀ
ಕಣ್ಣೇರಡನು ಕಿತ್ತು ಹಾಕಲೆ?
ನಿಜ
ಮನದ ಮೋಹದ ಸೆಳೆತಕೆ
ಬಲಿಯಾಗಿ ನೋಡುವ
ಕಂಗಳಿಗೇಕಿ ಶಿಕ್ಷೆ

ಕಾಣದ ಮನವ ಹೇಗೆ ದಂಡಿಸಲಿ
ನಿಲ್ಲದೆ ಕುಳ್ಳದೆ ಮಲಗದೆ
ಎಲ್ಲಿಯೂ ನಿಲ್ಲಗೊಡದೆ
ಕಣಕಣದಳವಳ ಹರಿಸಿ
ಅವಳಿಲ್ಲದ ಬಾಳು ರಸವಿರದ
ಬಾಳೆಯಂತಾಗಿಸಿ
ದೇಹವ ನೋವಿನ ಮುದ್ದೆಯ
ಮಾಡಿದ ಮನಸನು
ಹೇಗೆ ಲತಾಯಿಸಲಿ

ನಿಗ್ರಹಣಕ್ಕದಾವ ಮಂತ್ರವ ಪಠಿಸಲಿ
ಹರೆಯದೆ ಹಾರದೆ ನುಸುಳದಂತೆ
ನಿನ್ನ ಚೆಲುವು ನನ್ನ ಕಾಡದಂತೆ
ನಿನ್ನ ನಗವು ನನ್ನಿರಿಯದಂತೆ
ನಿನ್ನ ಮಾತುಗಳು ಕೊರೆಯದಂತೆ
ಅಷ್ಟಧಿಗ್ಬಂಧನದಲಿ ಕುಳಿತುಬಿಡಲೆ

ಮೋಸಗಾತಿ ಮಾಟಗಾತಿ ವಂಚಕಿ
ಪ್ರೇಮ ಸಂಚಲಿ ಸಿಲುಕಿಸಿ
ಮೋಹದ ಬಲೆಯಲಿ ಬಿಳಿಸಿ
ವಿಲವಿಲನೆ ಒದ್ದಾಡಿ ನಿನ್ನ ಹೆಸರ
ಕೂಗಿ ಕೂಗಿ ಬಾಯಾರಿ ಸಾಯಲೆಂದು
ಸಂಚನು ಹೂಡಿದೆಯಾ ನಯವಂಚಕಿ

ಬುದ್ದಿ ಬಾರದು

ಜಡೆ ಹಿಂದ ಅಲೆಯವಗ
ನಡು ಬಾಗಿದ ಮ್ಯಾಲೂ
ಬುದ್ಧಿ ಬರೋದಿಲ್ಲ
ಮಾತ ಮಾತಿಗೂ ನಗಾಕಿಗೆ
ಮನಿ ತುಂಬಾ ಮೊಮ್ಮಕ್ಳ
ಬಂದ್ರು ಬುದ್ದಿ ಬರೋದಿಲ್ಲ

ಮಾಸ್ತರ್ರು ಎಷ್ಟೋ ವರ್ಷ
ಪಾಠ ಮಾಡಿದ್ರು ಹುಡುಗರ
ಬುದ್ದಿ ಹೋಗೊದಿಲ್ಲ
ಕೆಲಸದಾಕಿ ಎಷ್ಟೋ ವರ್ಷ
ಅಂಗಳದ ಕಸ ಹೋಡದ್ರು
ಎದಿ ಮ್ಯಾಲಿನ ಸೆರಗ
ಹೊದಿಯೊದ ಕಲಿಯೊದಿಲ್ಲ

ಯಾವ ಶಿಕ್ಷೆ

ಹಣೆಗೆ ಕುಂಕುಮವಿರದ ನಿನ್ನ
ಗಂಡು ಮೊಗದ ರೂಪಕೆ
ಮೋಸ ಹೋದ ಕಣ್ಣುಗಳಿಗೆ
ಯಾವ ಶಿಕ್ಷೆಯ ನೀಡಲಿ

ಮೋಹದ ಮಾತುಗಳ
ಹೆಣೆದ ಬಲೆಯಲಿ ಬಿದ್ದ
ನನ್ನ ತಿರುಳನು ಯಾವ ಕಾರಗೃಹಕ್ಕೆ
ತಿರುವಲಿ

ಉದ್ದವಿರದ, ಹೂಗಳ ಮುಡಿಯದ
ಆ ಜಡೆಯನು ಹಿಂಬಾಲಿಸಿದ
ದೇಹಕೆ ಎಷ್ಟು ಭಾರದ
ಸರಪಳಿಯ ಬೀಗಿಯಲಿ

ಗೆಜ್ಜೆಗಳ ಕಟ್ಟದ ನಿನ್ನ ಕಾಲುಗಳ
ದಾರಿಯಲೆ ನಡೆದ ನನ್ನ
ಕಾಲುಗಳಿಗಾವ
ಹಗ್ಗವ ಕಟ್ಟಲಿ

ಸರಿ ತಪ್ಪುಗಳ ವಿಮರ್ಶಿಸದೆ
ಪ್ರೀತಿ ಪ್ರೇಮಗಳೆಂಬ ಹಗಲು
ಕನಸುಗಳ ಸವಿಯುತ
ಅಮವಾಸೆಯ ಕತ್ತಲಲೂ
ಚಂದಿರನ ಬೆಳಕನು ಹಂಬಲಿಸಿದ
ಅಂಕೆ ಮೇರೆಗಳಿರದ, ಗೋಡೆ
ಕೋಣೆಗಳಿರದ ಮನವು
ಸರಿಯಾದದ್ದನ್ನೆ ಅನುಭವಿಸುತ್ತಿದೆ

ಜಾರಿ ಬಿದ್ದಿದೆ ನೀ ತೊಡಿಟ್ಟಿದ್ದ
ಪ್ರಣಯವೆಂಬ ಖೇಡ್ಡಕ್ಕೆ
ಮನವೆಲ್ಲ ಜರ್ಜರಿತಗೊಂಡಿದೆ
ಏರುವ ಸಾಹಸಗಳೆಲ್ಲವ
ಮುಗಿಸಿ
ಬಾಯಾರಿದೆ ಮನಕೆ ನಿನ್ನ
ಹೆಸರನು ಕೂಗಿ ಕೂಗಿ

ನೀನು ಕೊಟ್ಟಿರುವ ನೋವಿಗೆ
ತಪ್ಪಿ ನಿನ್ನ ಹಿಂದೆ ಬಿದ್ದ ಮನಕೆ
ನಾನಾವ ಶಿಕ್ಷೆಯ ವಿಧಿಸಲಿ

Thursday, January 26, 2017

ಈ ಪ್ರೀತಿಗೆ

ಅಂಗ ಸಂಗವ ಬಯಸಿರೆ
ಕಪ್ಪು ಬಿಳುಪಿನ ಬಟ್ಟಲು
ಕಂಗಳು
ಹರೆಯದ ನಶೆಯಲಿ
ತೇಲುತಿವೆ ರೆಪ್ಪೆಗಳು
ಎಚ್ಚರಗೊಳಿಸುವರಾರೊ
ಸೌಂದರ್ಯದ ಸೇರಗನು
ಎಳೆದು
ಕಣ್ಣ ಕಾ..ಮನಾ... ಬಿಲ್ಲುಗಳ
ಕಟ್ಟಿ

ತಿಳಿಯ ಹರೆವ ಹಳ್ಳದ
ಮನವು ಬಯಸುತಿರೆ
ನೂರೆಂಟು ಕಾಮನೆಗಳ
ಅಗ್ನಿಯ ಸ್ಪರ್ಶವ
ಸಮಾಧಾನದ ಮಳೆಯದೇಷ್ಟು
ಧೋ ಎಂದು ಸುರಿದರೂ
ಮರೆಯೆಂಬ ಹರಿವ ಕಾಲುವೆಯನೆ
ಹರಿಸಿದರೂ
ಹೂ ಬಾಣದ ಬೇಡನು ಹಚ್ಚಿದ
ಕಾಮಾಗ್ನಿಯು ಆರುತ್ತಿಲ್ಲವಲ್ಲ

ನೋಡಿದೊಡೆ ಹುಟ್ಟಿ
ಮುಟ್ಟಿದೊಡೆ ಉರಿದು
ಸರಿದೊಡೆ ಬೂದಿಯಾಗುವ
ಅಂಗ ಸಂಗದ ಪ್ರೀತಿಗೆ
ನಾನೇನನ್ನಲಿ ?

ಹುಟ್ಟುವವರೆಗೂ ಕಾದು
ಮೊಗ್ಗಾದ ಮೇಲೆ ಕಾವಿಟ್ಟು
ಅರಳಿದ ಸುಮದ ಘಮವ ಹೀರಿ
ಅಂತರಂಗದ ಆಳಕೆ ಮಧುವನು
ತುಂಬಿ
ಪ್ರೀತಿಯ ಹೂವನು
ಹಿಸುಕದೆ ಹೊಸುಕದೆ ಕಾಯುವ
ಮುಳ್ಳಿನ ಪ್ರೀತಿಗೆ
ನಾನೇನ ಹೇಳಲಿ

Wednesday, January 25, 2017

ರಾಗರಸದ ಗಂಗೆ

ನಲ್ಲ
ನೀ ಕೊಟ್ಟ ಗುಲಾಬಿಯ
ಎಸಳುಗಳು ಒಣಗಿ
ಉದುರಿದರು
ಅದರ ಕೆಂಪು ರಂಗು
ಇನ್ನೂ ಅಚ್ಚಳಿಯದೆಯಿದೆ

ನಂಜಾ
ತುರುಬಿಗಿಟ್ಟ ಮಲ್ಲಿಗೆ
ಮಲಗಿದೆ ಮೈಸೋರಿ
ರಸದ ಕಂಪು ಮನಕೆ
ಸೋರಿ ಹೆಪ್ಪಾಗಿದೆ

ಸಖ
ಸವಿದ ಸುಖದ ಹೊತ್ತುಗಳು
ಸೊರಗಿ ಸೊರಗಿ ಸೊರಗಿ
ನೀರಾಗುತಿವೆ ಹತ್ತಿಯ
ಶಯನದ ಸ್ವಪ್ನಗಳಲಿ

ದೀನ
ಕಳೆದ ದಿನಗಳು ನಿಮಿಷಗಳಾಗುತಿವೆ
ನೀನಿರದ ಈ ಕ್ಷಣ
ಉರಿಸಿ ಕಾಯಿಸಿ ಬೇಯಿಸಿ
ಒಣಹಾಕುತಿವೆ ಅನುಕ್ಷಣ

ರಾಂಗ
ರಾಗವ ಮೀಟಲು ಕಾಯುತಿದೆ
ಏರುಇಳುವಿನ ಅಂಗ ಸಾಧನಗಳು
ಮೀಟಿ ಮೀಟಿ ಮೀಟಿ
ಸುರಿಸಿ ಹರಿಸು ರಾಗರಸದ
ಗಂಗೆಯ

Monday, January 23, 2017

ಬದುಕಬೇಕು

ನಡದದ್ದನ್ನ ಅಳಸಾಕ ಆಗೋದಿಲ್ಲ
ಇದ್ದದ್ದನ್ನ ತಿದ್ದೋಕ ಅಗೋದಿಲ್ಲ
ಬರೋದನ್ನ ಬರೆಯೋಕ ಆಗೋದಿಲ್ಲ

ಆಗಿದ್ದನ್ನ ಇನ್ನೊಮ್ಮೆ ಆಗಲಾರದಂಗ
ಬದುಕಬಹುದು
ಇರೋದನ್ನ ನಮ್ಮ ಶಕ್ತಿಯನ್ನಾಗಿಸಿ
ಮುನ್ನುಗಬಹುದು
ಬರುವದೆಲ್ಲ ನಮ್ಮ ಒಳ್ಳೇಯದಕೆ
ಬರುತಿದೆ ಎಂದು ಬದುಕಬೇಕು

ಅಳಿಸಲಾಗದ ನೆನಪುಗಳನಿಟ್ಟುಕೊಂಡು
ಅಳಿಸಲಾಗದ ಸಾಧನೆಗಳ ಬಿಟ್ಟು ನಡೆಯುತಿರಬೇಕು
ಇರುವ ಶಕ್ತಿಯಲ್ಲಿಯೆ ಹಿಮಾಲಯದಷ್ಟೆತ್ತರದ
ಕೆಲಸವ ಮಾಡಿಟ್ಟಿರಬೇಕು
ಬರುವ ಸಮಯ ನಮ್ಮ ಸಾಧನೆಯ ಬದುಕಿಗೆ
ಹಾದಿಯಾಗಲು ಹಾತೊರೆಯುತ್ತಿರಬೇಕು

ಆದ ಇರುವ ಬರುವ ಎಲ್ಲ ಎಲ್ಲೆಗಳ
ಮೀರಿ ಬದುಕಿ ತೋರಿಸಬೇಕು

ಮುದ್ರಿಸಲಾಗದೆಂದು

ಬರೆಯಲು ಮನಸ್ಸಾಗುತ್ತಿಲ್ಲ
ನೀವು ಮೂಡುತ್ತಿಲ್ಲವೆಂದಲ್ಲ
ಕವಿತೆಗಳಾಗುತ್ತಿಲ್ಲವೆಂದಲ್ಲ
ಓದುಗರ ಬಳಗವಿಲ್ಲವೆಂದು

ಓದಲು ಹಿತವಾಗುತ್ತಿಲ್ಲ
ನಿಮ್ಮಲಿ ಸತ್ವವಿಲ್ಲವೆಂದಲ್ಲ
ಸಾಹಿತ್ಯವಿಲ್ಲದಿರುವುದೆಂದಲ್ಲ
ಕೇಳುಗರ ಕಿವಿ ಬರಿದಾಗುತಿವೆಯೆಂದು

ನನ್ನ ಬಾಹುಗಳು ಸೋಲುತಿವೆ
ನಿಮ್ಮನು ಹೊರಲಾಗದೆಂದಲ್ಲ
ಬರೆಯಲಾಗದೆಂದಲ್ಲ
ಮುದ್ರಿಸಲಾಗದೆಂದು

ಗಾಳಿಮಾತು

ಯಾರೊ ಹೇಳಿದರೆಂದು ಗಾಳಿಯ
ಸಿದ್ದಾಂತವನು ನಂಬದಿರು
ನೀನರಿತಿರುವ ನಿನಗೆ
ಮನವರಿಕೆಯಾಗಿರುವ ಚಿಕ್ಕ
ಬಂಡೆಯಂತಹ ವಿಷಯದ
ನೆಲಗಟ್ಟಲಿ ಗಟ್ಟಿಯಾಗಿ ನಿಲ್ಲು
ಯಾವ ಊಹಾಪೋಹಗಳ
ಗಾಳಿ ಬೀಸಿದರು ಬಂಡೆ ನಿನ್ನ
ಕೆಡವದು

ಯಾರೂ ಹೇಳಿದ ಗಾಳಿಯ ಮಾತುಗಳ
ಹಿಡಿದಿಡಲಾಗದು ನಿರೂಪಿಸಲಾಗದು
ಗಾಳಿಯ ಮಾತು
ಕಾಲದಿಂದ ಕಾಲಕ್ಕೆ, ಬಾಯಿಂದ ಬಾಯಿಗೆ
ಬುದ್ಧಿಯಿಂದ ಬುದ್ಧಿಗೆ ಹಾರುವದು
ಯಾರಲ್ಲಿಯೂ, ಯಾರೊಬ್ಬರೂ ಸ್ಪಷ್ಟ
ನಿರ್ಧಾರವ ತೆಳೆಯಲಾರದ ಅರ್ಧ
ದಾರಿಯಲೆ ಬಿಟ್ಟು ಬಿಡುವದು

ಇರಲಿ ನಿನ್ನದೊಂದು ಮಾತು
ನಂಬುಗೆಯ, ಭದ್ರ ಬುನಾದಿಯ
ಹೊಂದಿದ, ಸಾವಿರಾರು ಜನರು ನಿಂತು
ಕುಣಿದು ಕುಪ್ಪಳಿಸಿದರೂ ಅದರದ
ಬಂಡೆಯಂತೆ
ಸಮಯ ಸರಿದರೂ, ಋತುಗಳುರುಳಿದರೂ
ಕತ್ತಲು ಕಳೆದರೂ, ಹಗಲುಗಳಳಿದರೂ
ಕೇಳಿದವರ ಓದಿದವರ ಮನದಲಿ
ಮನೆಯ ಮಾಡಿ ನಿಲ್ಲುವಂಥಹದು

ನಿಲ್ಲಲಿ ನಿನ್ನಲಿ ನಿಲುವೊಂದು
ನಕ್ಷತ್ರದಂತೆ

ನೀನಿಲ್ಲದ ಏಕಾಂತ

ನೀನಿಲ್ಲದ ಏಕಾಂತ
ಕಲ್ಲಾಗಿಸುವುದೊ ಕವಿಯಾಗಿಸುವುದೊ
ಹೇಳಲು ಯಾರಿಲ್ಲದಿರುವಾಗ
ಕೇಳಲು ನೀನೆ ಇಲ್ಲದಿರುವಾಗ

ಕವಿಯಾಗಲೆ
ಪ್ರೀತಿಯ ಹೊಳೆಯಲಿ ಮಿಂದು
ವಿರಹದ ಬೇಗೆಯಲಿ ಬೆಂದು
ಚೆಲುವಿಗೆ ಪದಗಳ ಬರೆದು
ಹಾಡಲೆ ಯಾವ ರಾಗವ ಕರೆದು

ಕೇಳು ಪದೇ ಪದೇ ಮನವಿಟ್ಟು
ಗಾನದಲಿದೆ ನಮ್ಮಿಬ್ಬರ ಗುಟ್ಟು
ಎಷ್ಟೊಂದು ಮಾಡಿಸಲಿ ಮನದಟ್ಟು
ಕೇಳಬಾರದೆ ಒಮ್ಮೆಯಾದರೂ ಕಿವಿಗೊಟ್ಟು

ಕಲ್ಲಾಗಲೆ
ವಿರಹದುಳಿಯ ಪೆಟ್ಟನು ತಿಂದು ತಿಂದು
ಒಲವಿನ ತುಣುಕುಗಳ ಕೊಂದು ಕೊಂದು
ಅರಳದೆ ನಮ್ಮಿಬ್ಬರಲಿ ಅನುರಾಗ
ಬಯಲು ಪ್ರೀತಿಯಾಗದಿರಲಿ ಇಬ್ಭಾಗ

ಕೊರೆಯುತಿದೆ ಸಂಜೆಯ ಏಕಾಂತ
ನೋಡಿ ನನ್ನ ನಗುತಿರೆ ಇರುಳ ಕಾಂತ
ಆಗಲೇ ಹೇಳು ಪ್ರೀತಿಯಲಿ ನಾನು ಸಂತ
ಇಲ್ಲವೇ ಮೂಡಿಸು ಬಾಳಲಿ ವಸಂತ

ಮಾಡದಿರು ನನ್ನನು ಏಕಾಂತ
ನಿನ್ನ ನೋಡದೆ ಇರಲಾರನು
ಈ ಕಾಂತ

Saturday, January 21, 2017

ನಮ್ಮವ್ವ ೧೪

ರೊಟ್ಟಿ ಬಡದ ಬಡದ
ಬಟ್ಟಿ ಒಗದ ಒಗದ
ಮುಸುರಿ ತೊಳದ ತೊಳದ
ಅಂಗೈಯನವು ಅದೃಷ್ಟ ರೇಖೆ
ಅನ್ನುವ ಮರೆಯಾಗ್ಯಾವು
ಕೇಳವ್ವ
ಆ ದ್ಯಾವ್ರು ಅಂಗೈಯಾಗಲ್ಲದಿದ್ರೂ
ಹಣ್ಯಾಗರ ನಾಕ ಸಾಲು ಚಲೋ
ಬರಿಲಿಲ್ಲಲ್ಲೆ
ನಮ್ಮವ್ವ

ಬಾವಿ ನೀರ್ ಹೊತ್ತ ಹೊತ್ತ
ಮನಿ ತುಂಬಾ ಮಕ್ಳ ಹೆತ್ತ ಹೆತ್ತ
ಹೊಲದನ ಕಸ ಕಿತ್ತ ಕಿತ್ತ
ನಡ ಅನ್ನೊದ ಬಿದ್ದ ಹೋಗೈತಿ
ಕೇಳವ್ವ
ಆ ನಡ ತಾಮ್ರದ ಕೊಡ ಹೊತ್ತ ಹೊತ್ತ
ಹೋತು, ಬಂಗಾರನ್ನೊದ ಕಾಣಲಿಲ್ಲೊ
ನಮ್ಮವ್ವ

ಕೆಣಕು

ಹರಿದಾಡೊ ಹಾವನ್ನ
ಕೆಣಕಬಾರದು
ಜೇನು ತುಂಬಿದ ಗೂಡನ್ನ
ಬಿಡಿಸಬಾರದು

ಒದಿಯೊ ಆಕಳದ
ಕೆಚ್ಚಲಕ್ಕ ಕೈ ಹಾಕಬಾರದು
ಗುದ್ದೊ ಟಗರಿನ ಮುಂದ
ಹೋಗಿ ನಿಲ್ಲಬಾರದು

ಅರಿವಿಲ್ದವನ ಹತ್ತಿರ
ಬಹಳ ಮಾತಾಡಬಾರ್ದು
ದುಡ್ಡಿದ್ದವನ ಹತ್ತಿರ
ದ್ವೇಷ ಕಟ್ಕೊಬಾರ್ದು

ನಗೊ ಹೆಣ್ಣಿನ
ಸ್ನೇಹ ಮಾಡಬಾರ್ದು
ಗರತಿ ಹೆಣ್ಣಿನ
ಕೋಪಾನ ಕೆಣಕಬಾರ್ದು

Friday, January 20, 2017

ನನ್ನ ಅಂಗಳ

ನೋಡಿರಿವಿರಾ ನನ್ನ ಅಂಗಳವನು
ಇಲ್ಲೆ ಇತ್ತು ನನ್ನ ಬಾಲ್ಯ ಓಡಾಟಗಳ
ಕುರುಹುವಾಗಿ
ನನ್ನ ಹಿರಿತನದ ಕಾರ್ಯಗಳು
ಮದುವೆ ಅರಿಷಿಣದ ನೀರನು
ಹೊದ್ದು ಮಲಗಿದ ಅಂಗಳವ
ಯಾರಾದರೂ ಕಾಣಿರೇನು?
ನಾನಿಲ್ಲದ ಸಮಯದಲಿ‌‌
ಹೊತ್ತೊಯ್ದರೇನು

ರಂಗೋಲಿಯ ಕಲಿಸಿ ಕೊಟ್ಟ
ಮೆಣಸಿನಕಾಯಿಯ ಒಣಗಿಸಲು ಹಾಕುತ್ತಿದ್ದ
ಹೆಸರು, ಕಡಲೆ, ಶೇಂಗಾ ಹಾಗೂ ಜೋಳದ
ಬೆಳೆಗಳ ರಾಶಿಯ ಮಾಡುತ್ತಿದ್ದ
ಹಬ್ಬ ಹರಿದಿನಗಳಿಗೆ ಬಳೆಗಾರನ ಬಳೆಗೆ
ಮುತ್ತೈದೆಯರಿಂದ ತುಂಬುತ್ತಿದ್ದ
ಜಾತ್ರೆಯ ಕಾಲಕೆ ಎತ್ತುಗಳ ಸಿಂಗರಿಸಿ
ಬಂಡಿ ನೇಗಿಲುಗಳ ಪೂಜಿಸುತ್ತಿದ್ದ
ಬೇಸಿಗೆಯ ಬೇಗೆಗೆ ತಂಗಾಳಿಗಾಗಿ
ಎಲ್ಲರೂ ಮಲಗುತ್ತಿದ್ದ
ಅಕಾಲ ಮರಣವ ಹೊಂದಿ ಇನ್ನಿಲ್ಲದ
ಅವ್ವನ ಮಲಗಿಸಿದ ಅಂಗಳವ
ನೆನಪಿದೆಯಾ?

ಮದುವೆಯಾಗಿ ಬಂದ ಎರಡು
ತಿಂಗಳಿಗೆ ಕಟ್ಟಡವಾಗಿಬಿಟ್ಟಿದೆ
ಅಂಗಳ
ಬರುವ ಹೋಗುವ ಅಳಿಯಂದಿರ
ಸೌಕರ್ಯಕ್ಕಾಗಿ
ಹುದುಗಿ ಹೋಗಿದೆ ಅಂಗಳ ಕಲ್ಲು
ಕಬ್ಬಿಣಗಳ ಅಡಿಪಾಯದೊಳಗೆ
ಮರೆಯದ ನೆನಪುಗಳನೊಂದನುಳಿಸಿ

Thursday, January 19, 2017

ಸ್ವತಂತ್ರ ಇರಲಿ ನನಗೂ

ಇರಲು ಬಿಡಿ ನನ್ನನು ಇನ್ನೂ
ಚಿಕ್ಕ ಮಗುವಾಗಿ
ಆಡಿ ಅಲೆದಾಡುವ ಓಡಿ ಆನಂದಿಸುವ
ನನ್ನ ಸಮಯವನ್ನು ಕಟ್ಟಿಹಾಕದಿರಿ
ಕೋಣೆಯೊಳಗೆ

ಎಸಳು ಮೈಯ ನನ್ನನು ಕುಳ್ಳರಿಸಿಗೊಡದೆ
ತಪ್ಪು ಹೆಜ್ಜೆಗಳ ಹಾಕುತಿದ್ದವಳಿಗೆ
ಆ ತುದಿಯಿಂದ ಈ ತುದಿಗೂ
ಈ ಮನೆಯಿಂದ ಆ ಮನೆಗೂ
ಹಕ್ಕಿಯ ಹಾಗೆ ಹಾರುತ ಜಿಂಕೆಯ
ಹಾಗೆ ಜಿಗಿಯುವಂತೆ, ಮನೆಯಂಗಳದ
ಮೂಲೆ ಮೂಲೆಯು ಉಳಿಸದಂತೆ
ಓಡಾಡಲು ಬಿಡುತ್ತಿದ್ದ ನೀವು ಇಂದೇಕೆ
ಹರೆಯ ಹೊಕ್ಕ ಈ ದೇಹಕೆ
ಅದೇಷ್ಟು ಸರಳುಗಳ ಹಿಂದೆ ಕುಳ್ಳರಿಸುವಿರಿ
ಬಲಿತು ಓಡಾಡಲು ಕಲಿತ ಈ ಕಾಲಿಗೆ
ನೀನು ದೊಡ್ಡವಳೆಂಬ ನನ್ನ ತಿಳುವಿಗೆ
ತಿಳಿಯದ ಆ ಶಬ್ದದ ಸಂಕೋಲೆಯಿಂದ
ನನ್ನ ಕಾಲನ್ನು ಏಕೆ ಕಟ್ಟಿ ಹಾಕಿರುವಿರಿ

ನನ್ನ ದೇಹವ ಬಂಧಿಸಿಡಬಹುದಾದರೂ
ನಾ ಕಾಣುವ ಕನಸುಗಳಿಗಾವ ಪಂಜರವ
ಕಟ್ಟುವಿರಿ , ಆ ಗೆಳತಿ ಗಿರಿಜೆಯ ಜೊತೆಯಾಡಿದ
ಕುಂಟುಬಿಲ್ಲೆ , ಅಕ್ಕನೊಡಗೂಡಿ ಬಿಡಿಸಿದ
ರಂಗೋಲಿ , ಹೊಸ ಗಾದೆಯನು ಹಾಕಲು
ಬಂದ ಇಮಾಮು ತಾತನಿಗೆ ಗೊಳು
ಹೊಯ್ದಿದ್ದು , ಮಳೆ ಬಂದು ಅಂಗಳಲಿ
ತೊಯ್ದು ಜಿಗಿದಾಡಿ ಅಪ್ಪನ ಕೈಲಿ
ಬೈಸಿಕೊಂಡಿದ್ದು ಇವೆಲ್ಲವ ಮರಳಿ
ಮರಳಿ ಅನುಭವಿಸುವಾಸೆ ಎನಗೆ

ನೀಡದಿರಿ ನನ್ನಂಗಳಕೆ ಒಂದು ಚೌಕಟ್ಟು
ಬಲಿತ ಕಾಲುಗಳು ಕುಣಿದು ಕುಣಿದು
ಎದೆಯುಸಿರು ಬಿಡುವವರೆಗೂ
ಮದುವೆ ಪಂಜರಕೆ ಸಿಲುಕಲಾರದಷ್ಟೂ
ನನ್ನ ದುಡಿಮೆಯ ನಾ ಹೊಂದುವವರೆಗೂ
ಎಳೆಯದಿರಿ ನನ್ನ ಅಂಗಳಕೆ ಒಂದು
ಗೆರೆಯನು
ಪುರಾಣದ ಗೆರೆಗಳ ಕಥೆಗಳ ಹೇಳುತ

Wednesday, January 18, 2017

ನಾನೊಂದು ಹೆಣ್ಣು ಗೊಂಬೆ

ನಾನೊಂದು ಹೆಣ್ಣು ಗೊಂಬೆ
ಹುಟ್ಟಿದ ಮೇಲೆಲ್ಲರಿಗೂ ಬೇಸರವಾಗುವ
ಯಾರ ಬಾಯಿಗೂ ಸಿಹಿಯ ಹಂಚದ
ಬಂಧು ಬಳಗಕ್ಕೆ ಮುಜುಗರವಾಗುವಂತಹ
ಹುಟ್ಟಿದ ಹೆಣ್ಣು ಗೊಂಬೆ

ಬಾಲ್ಯದಲಿ ಅವ್ವನಿಗೆ
ಮೈಯನೆರೆದು, ಕಾಡಿಗೆ ತಿಡಿ
ಪೌಡರ ಹಾಕಿ ಜುಟ್ಟು ಕಟ್ಟಿ
ಹೂವ ಸುತ್ತಿ ಮೈತುಂಬ ಬಣ್ಣ ಬಣ್ಣದ
ಬಟ್ಟೆಯ ತೊಡಿಸಿ ಗಲ್ಲಕೊಂದು
ದೃಷ್ಟಿಬೊಟ್ಟನೊಂದನಿಟ್ಟು
ಸಿಂಗರಿಸಿ ಅಂಗಳದ ಅಜ್ಜಿಯ ತೊಡೆಯ
ಮೇಲೆ ಕುಳ್ಳರಿಸುವ ಬೊಂಬೆ

ಬಾಲ್ಯ ಹಾಗೂ ಯೌವ್ವನಕೆ ತಂದೆಯು
ಆಗೊಮ್ಮೆ ಈಗೊಮ್ಮೆ ಎತ್ತಾಡಿ
ಬೇಕಾದಾಗ ಮುದ್ದಾಡಿ ಬೇಡವಾದಾಗ ಗದರಿ
ಪ್ರೌಡತೆಗೆ ಬಂದ ನನ್ನನು ಅನುಮಾನದ
ಮನದಿದಂದಲೆ ಕಾಲೇಜು ಸೇರಿಸಿದ ಎರಡು
ಮೂರು ತಿಂಗಳೊಳಗೆ
ಅಂದವಾದ ಒಂದು ಸೀರೆಯನುಡಿಸಿ ಪೋಟೊವ
ತಗೆಸಿ ಬಂಧು ಬಳಗದವರಿಗೆಲ್ಲ ಹಂಚುವನು ಈ
ಹೆಣ್ಣು ಗೊಂಬೆ ಮಾರಾಟಕ್ಕಿವುದೆಂದು

ನೋಡ ಬರುವವರಾದರೂ ಈ ಗೊಂಬೆಗೆ
ಮೂಗು ಉದ್ದ, ಹಲ್ಲು ಉಬ್ಬು, ಬಣ್ಣ ಕಪ್ಪು
ಎತ್ತರ ಕಡಿಮೆ ಓದು ಸಾಕಾಗಿಲ್ಲ ಹೀಗೆ
ಎಲ್ಲ ಸರಿಯಿದ್ದರೂ ಕುದುರದ ವ್ಯವಹಾರ
ಪ್ರತಿಸಲ ಬಂದು ಹೋಗುವವರೆದುರಿಗೆ
ಬಣ್ಣಗಳ ಮೆತ್ತುಕೊಂಡು ಅವರೆದುರು
ತಲೆತಗ್ಗಿಸಿ ಕುಳಿತು ಕೇಳುವ ಪ್ರಶ್ನೆಗಳಿಗೆಲ್ಲ
ಉತ್ತರಿಸಿ ಪಾಸಾದ ನಂತರ ಮದುವೆಯ
ವ್ಯಾಪಾರವ ಮುಗಿಸಿ ಅಂದದ ಬೆಲೆಬಾಳುವ
ರೇಷ್ಮೆ ಸೀರೆಯಲಿ ಸೇರಿಸಿ ಮಾರಾಟವಾಗುವ
ಗೊಂಬೆ

ನೆನಪಿನ ಜೋಳಿಗೆ

ನಿನ್ನ ನೆನಪಿನ ಜೋಳಿಗೆಯ
ಅದೇಷ್ಟು ದಿನಗಳ ನಾ ಹೊತ್ತು
ಅಲಿಯಲಿ
ಹಸಿದ ಶ್ವಾನದ ಜನರು
ನಮ್ಮ ಪ್ರೀತಿಯ ನೆನಪುಗಳ ಹರಿದು
ಮುಕ್ಕಲು ಕಾಯುತಿರುವಾಗ

ಎದೆಯ ಗೋಡೆಯಲಿ ಚಿತ್ರಿತ
ನಿನ್ನ ರೂಪವ ಹೇಗೆ ನಾ ಕಾಯಲಿ
ವಿಚಿತ್ರ ವಿಲಕ್ಷಣ ಮನದ ಜನರು ನೀರ
ಎರೆಚಲು ನಿಂತಿರುವಾಗ

ಮನದಿ ಬರೆದ ಪ್ರೇಮ ಪತ್ರಗಳ
ಎಷ್ಟೆಂದು ಎತ್ತಿಡಲಿ
ಒಲವನರಿಯದ ಜನರು ಆ ಪ್ರೀತಿ
ಓಲೆಗಳ ರಾಶಿಗೆ ಕಡ್ಡಿಯ ಗೀಚಲು
ಕುಳಿತಿರುವಾಗ

ನೀ ಬರದ ದಿನಗಳೆದಷ್ಟು ಸಹಿಸಲಿ
ದಾರಿಯ ಕಾಯುತ್ತ
ಬರುವ ಹಾದಿಗೆ ಕಲ್ಲು ಮುಳ್ಳುಗಳ
ಸುರಿಯಲು ಹಾತೊರೆಯುತಿರುವಾಗ

ಜೊಳಿಗೆಯ ಹರಿದರದೇಷ್ಟು
ನೆನಪುಗಳ ಮಾಸಬಲ್ಲರು
ಚಿತ್ರವನದೇಷ್ಟು ಅಳಿಸಿದರೂ
ರೂಪವ ಮರೆಸಬಲ್ಲರು
ಪತ್ರಗಳ ಸುಟ್ಟರದೇಷ್ಟು
ಪದಗಳ ಬೂದಿಗೊಳಿಸಬಲ್ಲರು
ಹಾದಿಯನೇಷ್ಟು ತಡೆದರು
ಮನದ ಅಂತರವ ತಗ್ಗಿಸಬಲ್ಲರು

ತುಂಡಾಗಿಸಿದರೂ , ವರೆಸಿದರೂ
ಬೆಂಕಿಯಿಟ್ಟರೂ, ಕಲ್ಲನಿಟ್ಟರೂ
ಮತ್ತೆ ಮತ್ತೆ ಅಲೆವೆ ಮನದ
ಜೊಳಿಗೆಯ ಹೊತ್ತು
ನಾನು ನೀನು ಕೂಡಿ ಕಳೆದ ಸ್ಥಳಗಳಲಿ
ಹೋಗಿ ಬೇಡುವೆ ನೆನಪುಗಳ ಭಿಕ್ಷೆಯನು
ಮತ್ತೆ ತುಂಬಿಸುವೆ ಜೊಳಿಗೆಯನು

ಸ್ವಾಮಿ ವಿವೇಕಾನಂದರು

ನೋಡಿದಿರಾ
ಸಿಂಹ ನಡಿಗೆಯ ಬೆಟ್ಟದೆದೆಯ
ಸಲಗರೆಟ್ಟೆಯ ನಕ್ಷತ್ರಪುಂಜವದನದ
ಕಾವಿಯ ಧರಿಸಿ ಬರುವ ಕಾಳಿ ಸುತನ
ಧಾರ್ಮಿಕ ಬುಟ್ಟಿಯೊಳಗಿನಿಂದ
ಭರತ ಖಂಡವ ಉದ್ಧರಿಸಲು
ಅವಳ ಕೀರ್ತಿ ಪತಾಕೆಯ ಜಗದ ಮನೆ
ಮನಗಳಲಿ ಹಾರಿಸಿಬರಲು
ವೀಣೆಯಸುತನೇತ್ತಿದ ಶಿಷ್ಯನ 

ಅಬ್ಬಬ್ಬಾ ! ಮೊಗದಲೆಂದತಹ ಕಾಂತಿ
ಕಲ್ಲು ಮನಸ್ಸಿನ ನಾಸ್ತಿಕನು ಕಂಡೊಡೆ
ದೈವಾಸಕ್ತಿಯ ಹೊಂದುವಂತೆ
ಕತ್ತಲು ತುಂಬಿದ ಮನಗಳಿಗೆ ಜ್ಞಾನದ
ಹಾದಿಯ ತೋರುವ ದೀವಿಗೆಯಂತೆ
ಪಾಪದ ಗಂಟುಗಳೆಲ್ಲ ಸುಟ್ಟು
ಬೂದಿಯಾಗುವನುಭವ ತೋರಿದಂತೆ
ಮನದ ಸಂಕಟದ ಸಂಕೋಲೆಗಳ
ಕತ್ತರಿಸುವಂಥಹ ನೋಟ

ಆಡುವ ನುಡಿಗಳಾದರೂ ಬಯಲು
ಬಂಡೆಗೆ ಸಿಡಿಯುವ ಸಿಡಿಲ ನುಡಿಗಳು
ಈ ನೆಲವೆಂದರೆ ಅಸ್ಪೃಶ್ಯರ ಗೂಡು
ಮತಾಂಧರ ಕೋಟೆ, ಜಗದೊಟದ
ಪರಿವೆಯಿರದ ಕೊಳಚೆಯೊಳಗೆ ಬಿದ್ದು
ಹೊರಳಾಡುವವರೆಂದವರ ಕಣ್ಣಿಗೆ
ಕಟ್ಟಿದ ಪೊರೆಯನು, ಮನಸಲಿ
ಬೆಳೆಸಿದ್ದ ಕೊಳಕನು ಒಂದೇ ಮಾತಿನಲಿ
ತೊಡೆದು ಹಾಕಿದೆ
ನನ್ನ ಸಹೋದರ ಸಹೋದರಿಯರೆ

ಆ ಮಾತು
ಕೆಂಪು ಬಣ್ಣದ ಮುಖದವರ ಮನದ
ಕಪ್ಪು ಗೋಡೆಯನು ಒಡೆದು ಹಾಕಿತು
ವಿಶ್ವಕ್ಕೆ ಸಾರಿತು ಭರತ ಭೂಮಿ ಸರ್ವ
ಧರ್ಮ ಸಮನ್ವಯ ತೋಟವೆಂದು
ಅವರೆಲ್ಲ ತಲೆಯೆತ್ತಿ ಇತ್ತ ನೋಡಲಾರಂಬಿಸಿದರು
ಒಂದು ಹೂ ಇಷ್ಟೊಂದು ಸುಗಂಧ
ಬೀರುವುದೆಂದರೆ  ಆ ಖಂಡದ
ಇತರ ಹೂವುಗಳು ಎಷ್ಟು ಸುಗಂಧಗಳ
ಸೂಸಬಹುದೆಂದು

ಪ್ರತಿ ಹೆಣ್ಣಿಗೂ ತಾಯಿ ತಾಯಿ ಎಂದು
ಕರೆಯುತ್ತ ಎಲ್ಲ ಹೆಣ್ಣು ರೂಪಗಳಲ್ಲಿಯೂ
ತಾಯಿಯ ಕಂಡ ಮಹಾನ ವಾಗ್ಮಿ
ಜಗತ್ತನ್ನೆ ಭರತಖಂಡದತ್ತ ನಿಬ್ಬೆರಗಾಗಿ
ನೋಡುವಂತೆ ಮಾಡಿದ ಸನ್ಯಾಸಿ
ಕ್ರೈಸ್ತರು ಕೈ ಕೈ ಹೊಸೆದು ಮತಾಂತರಗೈಯಲು
ಈ ಭೂಮಿಗೆ ಕಳಿಸುತ್ತಿದ್ದವರೆ ತಮ್ಮ
ನೆಲದಲ್ಲಿ ಸಂಕುಚಿತಗೊಳ್ಳುವಂತೆ
ಮಾಡಿದ ವೀರಸನ್ಯಾಸಿ

ಹೊಸತೊಂದು ಕಿರಣ ಚಿಮ್ಮುವದು
ನಿನ್ನ ಹೊತ್ತಿಗೆಯ ತೆರೆದರೆ
ಬಾಳಿಗೆ ದಾರಿ ಕಾಣುವುದು
ಸಾಧಿಸಲು ಗುರಿ ಸಿಕ್ಕುವುದು
ಈ ಪುಣ್ಯಭೂಮಿಯ ಮಗನೆಂದು
ಎದೆತಟ್ಟಿ ಹೇಳಲು ಹರುಷವಾಗುವುದು

Tuesday, January 17, 2017

ಕನಸು

ತೂಗು ತೊಟ್ಟಿಲಾಗಿದೆ
ನಾ ಕಂಡ ಕನಸು
ನಿಲ್ಲದೆ ಇರಲಿ ತೊಟ್ಟಿಲು
ತೂಗಿ ತೂಗಿ ಜಾರಿಸಲಿ
ನನ್ನನು ಸ್ವಪ್ನಕೆ
ಕಾಣಬಯಸುವೆ
ಅವನೊಡನೆ ಕಳೆದ
ಘಳಿಗೆಗಳ ಕಳೆಯದೆ

ಎಚ್ಚರವಾಗದಿರಲಿ
ಅವನೊಂದಿಗಿನ ದಾರಿ
ಅಪೂರ್ಣವಾದರೂ
ಕನಸುಗಳಾದರೂ
ಪೂರ್ಣಗೊಳ್ಳುವವರೆಗೂ
ಕಟ್ಟಿದ್ದ ಭಾವನೆಯ
ಮೋಡಗಳೆಲ್ಲ ಕರಗಿ
ನೀರಾಗಿ ಸುರಿಯುವ
ವರೆಗಾದರೂ

ರಾತ್ರಿಗಳೆ ದೀರ್ಘವಾಗಿರಿ
ಮಾತನಾಡುವ ಮಾತುಗಳು
ಮನದಲಿ ಮನೆ ಮಾಡಿ
ಮಲುಗುವ ಮೊದಲೆ
ಅವನೊಂದಿಗೆ ಹಂಚಬೇಕಿದೆ
ದೇಹವ ಹಂಚದಿದ್ದರೂ
ಉಸಿರ ಬಿಸಿಯು ಆರುವ
ಮುನ್ನ ಉಸುರಬೇಕಿದೆ
ಅವನೆದೆಗೆ ನಾಲ್ಕು ಮಾತು

ಬಾರದಿರೂ ಸೂರ್ಯ
ಹೊನ್ನಿನ ಕಿರಣಗಳ ಸೂಸುತ್ತ
ಕನಸನ್ನು ಅರ್ಧಕ್ಕೆ ಕತ್ತರಿಸಲು
ಕರೆದು ತರಬೇಕಿದೆ ಮನದ
ಮಂದಿರಕೆ ಅವನನ್ನು ನೀ
ಬರುವ ಮೊದಲೆ
ನಿನ್ನ ಕಿರಣದ ಕಾಂತಿಗೆ
ಮಸುಕಾಗಿ ಸಿಗದೆ ಹೋಗುವನವನು

ನಿದಿರೆ ಲಕ್ಷ್ಮೀಯೆ ತೊರೆಯದಿರು
ಇನ್ನೆರಡು ಮೆಟ್ಟಿಲನು
ಅವನಿರದ ಸಂಜೆಗೆ ಕಾಯುತ್ತಿದ್ದೇನೆ
ನನ್ನನು ನಿರಾಕರಿಸಿ ಬೆನ್ನು ತೋರಿದ
ಸಮಯವನು ಮತ್ತೆ ತಿದ್ದಬೇಕಿದೆ
ಆ ಸಂಜೆಯ ಅಳಿಸಿ
ಅವನ ಮರಳಿ ಕರೆದು ತಂದು ನಿಲ್ಲಿಸಬೇಕಿದೆ
ಸ್ವಪ್ನದಲಿ
ವೇದನೆ ನೀವೇದನೆಗಳ ಹಂಚಿಕೊಳ್ಳಬೇಕಿದೆ
ಈ ರಾತ್ರಿಯಲಿ
ತೂಗು ಇರುಳ ಕಾಂಚಳೆ ತೊಟ್ಟಿಲ
ಮನದ ಹೊಸ್ತಿಲು ಅವನು
ದಾಟುವ ಮುನ್ನ

Monday, January 16, 2017

ನೀ ಬರೆದ ಬದುಕು

ನೀನು ತೊರೆದು ಹೋದ
ದಿನದಿಂದ
ಎದೆಯ ಕಣ್ಣೀರ ಪಾತ್ರೆಯು ತುಂಬಿ
ಕಂಗಳ ಬಟ್ಟಲಲಿ ಜಿನುಗುತಿಹುದು
ಹನಿ ಹನಿಯಾಗಿ

ಮಾತನಾಡದೆ ಮರೆಯಾದೆ
ನಾನಾಡುವ ಮಾತುಗಳ ಉಸಿರಲಿ
ಬೆರೆತು ಉಸಿರಾಗುವೆನೆಂದವಳು
ಮುಳ್ಳು ಚುಚ್ಚಿದ ಗಾಲಿಯ ಗಾಳಿಯು
ಹಾರಿದಂತೆ ಕರಗಿಹೋದೆ

ನಡೆಸದೆ ಕುಳ್ಳರಿಸಿ ನಡೆದೆ
ಬಾಳಿನುದ್ದಕೂ ಬರುವೆನೆಂದವಳು
ದಾರಿಯನರಿಯದ ಘಟ್ಟಗಳ
ತೆಪ್ಪಲಲಿ ಬಿಟ್ಟು

ಸಾಯಿಸದೆ ಮಲಗಿಸಿ ಹೋದೆ
ಹೀಗೆ ಕಹಿ ನೆನಪುಗಳೆಂಬ ಭತ್ತದ
ಬಣವೆಯ ಹುಲ್ಲಿನ ಮೇಲೆ

ನಾನು ನಂಬಿದ್ದೆ ಬ್ರಹ್ಮ ಬರಹವನು
ಇಂದು ನೀನು ಸುಳ್ಳಾಗಿಸಿದೆ
ಕಾರಣ
ಮುಂದಿನ ಬದುಕು ನೀ ಬರೆದುದಾಗಿದೆ

ಉಳಿಯುವುದೆ?

ಗಾಳಿಗೆ ಸಿಕ್ಕ ಎಲೆಯು
ರಂಬೆಯ ತೊರೆಯದೆ?
ಗಾಳಕ್ಕೆ ಸಿಕ್ಕ ಮೀನಿನ
ಜೀವ ಹರಿಯದೆ ?

ಮೋಹಕ್ಕೆ ಬಿದ್ದ ಮನಸ್ಸು
ದುರಾಸೆಯ ಹೊಂದದೆ?
ಕ್ರೋಧಕ್ಕೆ ಬಿದ್ದ ಬುದ್ದಿ
ದುರ್ಗತಿಯ ಹೊಂದದೆ?

ಬಾಣ ಹೊಕ್ಕ ಎದೆಯು
ಉಸುರುವುದೆ ?
ದುಂಬಿ ಹೊಕ್ಕ ಹೂವು
ಬಸರುವುದೆ?

ಕತ್ತಿಗೆ ಕೊಟ್ಟ ಕತ್ತು
ನಿಲ್ಲುವುದೆ ?
ಹೆಣ್ಣಿಗೆ ಕೊಟ್ಟ ಮನಸ್ಸು
ಉಳಿಯುವುದೆ?

ಮಂದಿರ ಮಸೀದಿ ಮತ್ತು ಚರ್ಚ್

ನನಗೆ ಅರಿವು ಬಂದಾಗಿನಿಂದ
ನೋಡುತ್ತಿದ್ದೇನೆ ಕೇಳುತ್ತಿದ್ದೇನೆ
ಇನ್ನೂ ಓದುತ್ತಲೆ ಇದ್ದೇನೆ
ಯಾವ ಪತ್ರಿಕೆಯಲ್ಲಾಗಲಿ
ದೂರದರ್ಶನದಲ್ಲಾಗಲಿ ಸಭೆ
ಸಮಾರಂಭಗಳಲ್ಲಾಗಲಿ ವಾಚಿಸುವ
ಕವಿಯಾಗಲಿ ಬರಹಗಾರನಾಗಿರಲಿ
ಇದರ ಬಗ್ಗೆ ಬರೆದು ವಾಚಿಸದೆ ಇರುವವಂತಿರುವರಿಲ್ಲ
ಅದುವೆ ಮಸೀದಿ ಮಂದಿರ ಮತ್ತು ಚರ್ಚ್

ಈ ಮಣ್ಣಿನಲಿ ಮಾತೊಂದಿದೆ
ಧರ್ಮದಿಂದಲೆ ವಿಶ್ವಕ್ಕೆ ಶಾಂತಿ
ಎಲ್ಲಿಹುದು ?
ಧರ್ಮದಿಂದಲೆ ಹಚ್ಚುತಿರುವಲ್ಲ ವಿಶ್ವಕ್ಕೆ ಬೆಂಕಿ
ಕಟ್ಟಿದ ಕಲ್ಲುಗಳಿಗೇನೂ ಗೊತ್ತು
ಅದು ಮಂದಿರ ಮಸೀದಿ ಚರ್ಚ್ ಎಂದು
ಅದನೊಡೆದು ಇದನ್ನು ಕಟ್ಟುವರು ಇದನೊಡೆದು
ಅದನ್ನು ಕಟ್ಟುವರು
ಮಂದಿರ ಚರ್ಚ್ ಗಳಲಿರುವ ಕಲ್ಲು ಮೂರ್ತಿಗಳಿಗೆ
ಮಸೀದಿಯ ಗೋಡೆಗಳಿಗೇನೂ ಗೊತ್ತು
ತಾವು ಯಾವ ಜಾತಿಯೆಂದು
ಕುಲವ ಹುಟ್ಟಿಸಿದವರು ಹೇಳದ ಹೊರತು

ಎಲ್ಲ ಧರ್ಮಗಳು ಸಾರುವದು ತೋರುವದು
ಮಾನವ ಜನ್ಮಕ್ಕೆ ಮುಕ್ತಿಯ ದೊರಕಿಸಿ ಕೊಡುವದಾಗಿದೆ
ಎಂದು ಎಂದವರು ಸದಾ ಹಸನ್ಮುಖ ಮೊಗದ
ಪರಮಹಂಸರು
ಯಾವ ಕಟ್ಟಡದ ಮೆಟ್ಟಿಲೇರಿದರೂ ಮುಕ್ತಿಗೆ
ದಾರಿ ದೀವಿಗೆಯ ತೋರಬೇಕು
ಏನು ಮಾಡುವುದು
ಒಳಗಿರುವ ಜನರೇನೂ ಸಾಮಾನ್ಯರಲ್ಲವಲ್ಲ
ಬರುವ ಜನರಿಗೆ ಮುಕ್ತಿಯ ಮಾರ್ಗ ತೋರದೆ
ರಾಜಕೀಯಕ್ಕೆ ಜಾತಿಯ ಆಧಾರದ ಓಟ್ ಬ್ಯಾಂಕಿನಂತೆ
ಇವರ ಧರ್ಮದ ಪ್ರಚಾರಕ್ಕಾಗಿ ಮತಾಂತರದ
ಮಾತುಗಳ ಮೂಲಕ ಅವರ ಸುಪ್ತ ಮನಸ್ಸಿಗೆ
ಕಿಡಿಯನಿಟ್ಟು ಸ್ವಾಸ್ಥ ಸಮಾಜದಲ್ಲಿ ಧರ್ಮದ
ಹೊಗೆಯನೆಬ್ಬಿಸುವರು

ಕುಂತಿರುವ ನಿಂತಿರುವ ಇಲ್ಲದಿರುವ ಕಟ್ಟಡದೊಳಗಿನ
ದೇವರಾದರೂ ಏನು ಮಾಡಬೇಕು ಸೂತ್ರದಾರಿಯ
ಮುಂದೆ ಇವರಾಡುವ ನಾಟಕವ ಕಂಡು ಮನದಲಿ
ನಗುವುದನೊಂದ ಬಿಟ್ಟು
ಬರುವ ಭಕ್ತರಿಗಾದರೂ ಬುದ್ದಿಯಿಲ್ಲ ಯಾಕೆಂದರೆ
ಅವರ ಬುದ್ದಿ ಬಾಗಿಲ ಬಳಿ ಬಿಟ್ಟ ಮೆಟ್ಟನು
ಕಾಯುತ್ತಿರುವದಲ್ಲ
ಮನಸಿನ ಶಾಂತಿ ಬದುಕಿನ ಮುಕ್ತಿ ಎರಡೂ
ನಿಮ್ಮ ನಡೆ ನುಡಿಗಳಲೆ ಅಡಗಿದೆ
ಮನದ ಕದವ ತೆರೆದು ನೋಡಿರಿ
ಲೋಕವನೊಮ್ಮೆ ಒಳಗಣ್ಣಿನಿಂದ ಕಾಣಿರಿ
ದಾನವ ನೀಡುವ ಶಾಂತಿಗಿಂತ ಮಿಗಿಲಿಲ್ಲ
ಇನ್ನೊಬ್ಬರ ಏಳ್ಗೆಗೆ ಬಾಳುವ ಬದುಕಿಗಿಂತ ಮುಕ್ತಿಯಿಲ್ಲ

ನಿಮ್ಮ ಮನಕೆ ನೀವು ಶಾಂತಿಯ ತರಲಾರದೆ
ಸಮಾಜ ನಾಡು ವಿಶ್ವದಲಿ ಶಾಂತಿಯ ಹೇಗೆ
ಕಾಣುವಿರಿ ತುಂಬುವಿರಿ
ನಿಮ್ಮ ದಾರಿಗೆ ಮುಕ್ತಿಯ ಪಡೆಯದೆ
ಪರರಿಗೆ ಯಾವ ಹಾದಿಯ ತುಳಿಸುವಿರಿ
ಸಾಕಿನ್ನೂ ಪ್ರಕೋಪಗಳಿಗೆ ಬುಡಸಡಿಲುಗೊಳ್ಳುವ
ಭೂಕಂಪಗಳಿಗೆ ಉರುಳುವ, ಗುಡುಗು ಸಿಡಿಲಿಗೆ
ಕತ್ತರಿಸಿ ಛಿದ್ರಗೊಳ್ಳುವ ಕಟ್ಟಡಗಳ ನಂಬದೆ
ಮನದ ದೇವರವನು ಮನುಜರ ಏಳ್ಗೆಯಲಿ
ಪ್ರತಿಫಲಾಕ್ಷೆ ಬಯಸದೆ ಮಾಡುವ ಕಾರ್ಯಗಳಲಿ
ಕಾಣೋಣ

ಮಂದಿರ ಮಸೀದಿ ಮತ್ತು ಚರ್ಚ್

ನನಗೆ ಅರಿವು ಬಂದಾಗಿನಿಂದ
ನೋಡುತ್ತಿದ್ದೇನೆ ಕೇಳುತ್ತಿದ್ದೇನೆ
ಇನ್ನೂ ಓದುತ್ತಲೆ ಇದ್ದೇನೆ
ಯಾವ ಪತ್ರಿಕೆಯಲ್ಲಾಗಲಿ
ದೂರದರ್ಶನದಲ್ಲಾಗಲಿ ಸಭೆ
ಸಮಾರಂಭಗಳಲ್ಲಾಗಲಿ ವಾಚಿಸುವ
ಕವಿಯಾಗಲಿ ಬರಹಗಾರನಾಗಿರಲಿ
ಇದರ ಬಗ್ಗೆ ಬರೆದು ವಾಚಿಸದೆ ಇರುವವಂತಿರುವರಿಲ್ಲ
ಅದುವೆ ಮಸೀದಿ ಮಂದಿರ ಮತ್ತು ಚರ್ಚ್

ಈ ಮಣ್ಣಿನಲಿ ಮಾತೊಂದಿದೆ
ಧರ್ಮದಿಂದಲೆ ವಿಶ್ವಕ್ಕೆ ಶಾಂತಿ
ಎಲ್ಲಿಹುದು ?
ಧರ್ಮದಿಂದಲೆ ಹಚ್ಚುತಿರುವಲ್ಲ ವಿಶ್ವಕ್ಕೆ ಬೆಂಕಿ
ಕಟ್ಟಿದ ಕಲ್ಲುಗಳಿಗೇನೂ ಗೊತ್ತು
ಅದು ಮಂದಿರ ಮಸೀದಿ ಚರ್ಚ್ ಎಂದು
ಅದನೊಡೆದು ಇದನ್ನು ಕಟ್ಟುವರು ಇದನೊಡೆದು
ಅದನ್ನ ಕಟ್ಟುವರು
ಮಂದಿರ ಚರ್ಚ್ ಗಳಲಿರುವ ಕಲ್ಲು ಮೂರ್ತಿಗಳಿಗೆ
ಮಸೀದಿಯ ಗೋಡೆಗಳಿಗೇನೂ ಗೊತ್ತು
ತಾವು ಯಾವ ಜಾತಿಯೆಂದ
ಕುಲವ ಹುಟ್ಟಿಸಿದವರು ಹೇಳದ ಹೊರತು

ಎಲ್ಲ ಧರ್ಮಗಳು ಸಾರುವದು ತೋರುವದು
ಮಾನವ ಜನ್ಮಕ್ಕೆ ಮುಕ್ತಿಯ ದೊರಕಿಸಿ ಕೊಡುವದಾಗಿದೆ
ಎಂದು ಎಂದವರು ಸದಾ ಹಸನ್ಮುಖ ಮೊಗದ
ಪರಮಹಂಸರು
ಯಾವ ಕಟ್ಟಡದ ಮೆಟ್ಟಿಲೇರಿದರೂ ಮುಕ್ತಿಗೆ
ದಾರಿ ದೀವಿಗೆಯ ತೋರಬೇಕು
ಏನು ಮಾಡುವುದು
ಒಳಗಿರುವ ಜನರೇನೂ ಸಾಮಾನ್ಯರಲ್ಲ
ಬರುವ ಜನರಿಗೆ ಮುಕ್ತಿಯ ಮಾರ್ಗ ತೋರದೆ
ರಾಜಕೀಯಕ್ಕೆ ಜಾತಿಯ ಆಧಾರದ ಓಟ್ ಬ್ಯಾಂಕಿನಂತೆ
ಇವರ ಧರ್ಮದ ಪ್ರಚಾರಕ್ಕಾಗಿ ಮತಾಂತರದ
ಮಾತುಗಳ ಮೂಲಕ ಅವರ ಸುಪ್ತ ಮನಸ್ಸಿಗೆ
ಕಿಡಿಯನಿಟ್ಟು ಸ್ವಾಸ್ಥ ಸಮಾಜದಲ್ಲಿ ಧರ್ಮದ
ಹೊಗೆಯನೆಬ್ಬಿಸುವರು

ಕುಂತಿರುವ ನಿಂತಿರುವ ಇಲ್ಲದಿರುವ ಕಟ್ಟಡದೊಳಗಿನ
ದೇವರಾದರೂ ಏನು ಮಾಡಬೇಕು ಸೂತ್ರದಾರಿಯ
ಮುಂದೆ ಇವರಾಡುವ ನಾಟಕವ ಕಂಡು ಮನದಲಿ
ನಗುವುದನೊಂದ ಬಿಟ್ಟು
ಬರುವ ಭಕ್ತರಿಗಾದರೂ ಬುದ್ದಿಯಿಲ್ಲ ಯಾಕೆಂದರೆ
ಅವರ ಬುದ್ದಿ ಬಾಗಿಲ ಬಳಿ ಬಿಟ್ಟ ಮೆಟ್ಟನು
ಕಾಯುತ್ತಿರುವದಲ್ಲ
ಮನಸಿನ ಶಾಂತಿ ಬದುಕಿನ ಮುಕ್ತಿ ಎರಡು
ನಿಮ್ಮ ನಡೆ ನುಡಿಗಳಲೆ ಅಡಗಿದೆ
ಮನದ ಕದವ ತೆರೆದು ನೋಡಿರಿ
ಲೋಕವನೊಮ್ಮೆ ಒಳಗಣ್ಣಿಂದ ಕಾಣಿರಿ
ದಾನವ ನೀಡುವ ಶಾಂತಿಗಿಂತ ಮಿಗಿಲಿಲ್ಲ
ಇನ್ನೊಬ್ಬರ ಏಳ್ಗೆಗೆ ಬಾಳುವ ಬದುಕಿಗಿಂತ ಮುಕ್ತಿಯಿಲ್ಲ

ನಿಮ್ಮ ಮನಕೆ ನೀವು ಶಾಂತಿಯ ತರಲಾರದೆ
ಸಮಾಜ ನಾಡು ವಿಶ್ವದಲಿ ಶಾಂತಿಯ ಹೇಗೆ
ಕಾಣುವಿರಿ ತುಂಬುವಿರಿ
ನಿಮ್ಮ ದಾರಿಗೆ ಮುಕ್ತಿಯ ಪಡೆಯದೆ
ಪರರಿಗೆ ಯಾವ ಹಾದಿಯ ತುಳಿಸುವಿರಿ
ಸಾಕಿನ್ನೂ ಪ್ರಕೋಪಗಳಿಗೆ ಬುಡಸಡಿಲುಗೊಳ್ಳುವ
ಭೂಕಂಪಗಳಿಗೆ ಉರುಳುವ, ಗುಡುಗು ಸಿಡಿಲಿಗೆ
ಕತ್ತರಿಸಿ ಛಿದ್ರಗೊಳ್ಳುವ ಕಟ್ಟಡಗಳ ನಂಬದೆ
ಮನದ ದೇವರ ಮನುಷ್ಯರ ಏಳ್ಗೆಯಲಿ
ಪ್ರತಿಫಲಾಕ್ಷೆ ಬಯಸದೆ ಮಾಡುವ ಕಾರ್ಯಗಳಲಿ
ಕಾಣೊನ