ನೋಡಿರಿವಿರಾ ನನ್ನ ಅಂಗಳವನು
ಇಲ್ಲೆ ಇತ್ತು ನನ್ನ ಬಾಲ್ಯ ಓಡಾಟಗಳ
ಕುರುಹುವಾಗಿ
ನನ್ನ ಹಿರಿತನದ ಕಾರ್ಯಗಳು
ಮದುವೆ ಅರಿಷಿಣದ ನೀರನು
ಹೊದ್ದು ಮಲಗಿದ ಅಂಗಳವ
ಯಾರಾದರೂ ಕಾಣಿರೇನು?
ನಾನಿಲ್ಲದ ಸಮಯದಲಿ
ಹೊತ್ತೊಯ್ದರೇನು
ರಂಗೋಲಿಯ ಕಲಿಸಿ ಕೊಟ್ಟ
ಮೆಣಸಿನಕಾಯಿಯ ಒಣಗಿಸಲು ಹಾಕುತ್ತಿದ್ದ
ಹೆಸರು, ಕಡಲೆ, ಶೇಂಗಾ ಹಾಗೂ ಜೋಳದ
ಬೆಳೆಗಳ ರಾಶಿಯ ಮಾಡುತ್ತಿದ್ದ
ಹಬ್ಬ ಹರಿದಿನಗಳಿಗೆ ಬಳೆಗಾರನ ಬಳೆಗೆ
ಮುತ್ತೈದೆಯರಿಂದ ತುಂಬುತ್ತಿದ್ದ
ಜಾತ್ರೆಯ ಕಾಲಕೆ ಎತ್ತುಗಳ ಸಿಂಗರಿಸಿ
ಬಂಡಿ ನೇಗಿಲುಗಳ ಪೂಜಿಸುತ್ತಿದ್ದ
ಬೇಸಿಗೆಯ ಬೇಗೆಗೆ ತಂಗಾಳಿಗಾಗಿ
ಎಲ್ಲರೂ ಮಲಗುತ್ತಿದ್ದ
ಅಕಾಲ ಮರಣವ ಹೊಂದಿ ಇನ್ನಿಲ್ಲದ
ಅವ್ವನ ಮಲಗಿಸಿದ ಅಂಗಳವ
ನೆನಪಿದೆಯಾ?
ಮದುವೆಯಾಗಿ ಬಂದ ಎರಡು
ತಿಂಗಳಿಗೆ ಕಟ್ಟಡವಾಗಿಬಿಟ್ಟಿದೆ
ಅಂಗಳ
ಬರುವ ಹೋಗುವ ಅಳಿಯಂದಿರ
ಸೌಕರ್ಯಕ್ಕಾಗಿ
ಹುದುಗಿ ಹೋಗಿದೆ ಅಂಗಳ ಕಲ್ಲು
ಕಬ್ಬಿಣಗಳ ಅಡಿಪಾಯದೊಳಗೆ
ಮರೆಯದ ನೆನಪುಗಳನೊಂದನುಳಿಸಿ
No comments:
Post a Comment