Thursday, March 7, 2019

ಸಾಕಿ

ಕೋವಿಯ ತುದಿಯಲ್ಲಿ....
ಮದ್ದು ಹಾರಿಸಿದ ಬಿಸಿ ಇನ್ನೂ ಹಾಗೆ
ಸುಡುತಿಹುದು ಸಾಕಿ....
ಹೇಗೆ ಬಂದು ಕೂರಬೇಕಲ್ಲಿ ಶಾಂತಿಯ ಹಕ್ಕಿ...
ರಣಹದ್ದುಗಳೆ ಕಾಯುತಿವು, ಅಮಾಯಕರ
ಬದುಕನ್ನೆ ತಿನ್ನಲು ಹುರಿದು ಮುಕ್ಕಿ...

ಕರುಳ ಕತ್ತರಿಸಿ, ಆರಡಿ ಭಂಟನ ಗಡಿ
ಕಾಯಲು ಕಳಿಸಿಕೊಟ್ಟವಳ ಮಡಿಲಲಿಂದು
ಮಗನ ಬೂದಿಯೆ ತುಂಬಿಕೊಂಡಿದೆ ಸಾಕಿ....
ಹೇಗೆ ನಿಂತುಕೊಳ್ಳಲಿ ? ನಾನವಳ ಮುಂದೆ...
ವೈರಿಗಳೆಂದರೆ...ಸಿಡಿಸಿಡಿಯುತ್ತಿದ್ದವನು, ತುಂಡು
ಸಿಡಿಮದ್ದಿಗೆ ಸಿಕ್ಕು, ಹಿಡಿ ಮಾಂಸದ ಮುದ್ದೆಯಾಗಿ,
ತೊಡೆಯ ಮೇಲೆ ಮಲಗಸಿಕೊಂಡು ಅಳಲು
ಇಂಚು ದೇಹವು ಉಳಿಯದೆ ಹೋಗಿರುವಾಗ

ಬುದ್ಧನಿಲ್ಲವೆ?.... ಇರುವನಲ್ಲ !!!! ಇದ್ದುದರಿಂದಲ್ಲವೆ
ಅವರಿನ್ನು ಉಸಿರಾಡುತ್ತಿರುವುದು ಸಾಕಿ...
ಆಸೆಯೇ ದುಃಖಕ್ಕೆ ಮೂಲವೆಂದನವನು..
ದುರಾಸೆಯೆ ಆದಾಯವೆಂದುಕೊಂಡಿಹರಿವರು...
ಅವರೇನಾದರು..‌ ಮರೆತು ಕುಳಿತಿರಬಹುದೇನೊ..?
ಬುದ್ಧನ ಹೆತ್ತ ಒಡಲು...ಭಗತ್ ಸಿಂಗ್ ನಂತಹಾ
ಕಿಡಿಗಳನ್ನು ಹೆತ್ತಿದ್ದನ್ನು...
ತಗ್ಗಿ..ಬಗ್ಗಿ ನಡೆದರೆ ಬುದ್ಧನ ಹಾದಿ, ಇಲ್ಲಸಲ್ಲದ
ರಕ್ತಪಾತವನ್ನು ಹರಿಸುವಂತಹ ಹೇಯ ಕೃತ್ಯಕ್ಕೆ
ಕೈ ಹಾಕಿದರೆ.....ಹೇಳುವುದು ಮಂತ್ರವನಲ್ಲ.!!!
ಉಗುಳುವೆವು ಬೆಂಕಿಯ ಉಂಡೆಗಳನ್ನ...

ಇರುವ ಜಾಗವನ್ನೆ ಜನ್ನತ್ ನ್ನಾಗಿ ಮಾಡಿಕೊಳ್ಳದವರು...
ನರಮೇಧವ ಮಾಡಿ ಇನ್ನೆಲ್ಲಿ ಸ್ವರ್ಗವ ಕಾಣುವರು
ಸಾಕಿ...
ಯಾವ ಧರ್ಮ ಹೇಳಿದೆ ನೀನೆ ಹೇಳು...?
ಒಬ್ಬರ ಸಮಾಧಿಯ ಮೇಲೆ ನಿನ್ನ ಧರ್ಮದ
ಝೆಂಡಾವನ್ನು ಹಾರಿಸಿಬಿಡೆಂದು...
ಗುಂಡು..ಸಿಡಿಮದ್ದಿಗಳಿಗೇನು ಗೊತ್ತು? ಕೊಲ್ಲುವುದೊಂದನು
ಬಿಟ್ಟು...
ಆದದ್ದು ಆಗಿ ಹೋಯಿತು...ಎಲ್ಲವ ತೊರೆದು
ಸೃಷ್ಟಿಕರ್ತನ ಕದವನ್ನು ತಟ್ಟು...
ಆಗದಿದ್ದಲ್ಲಿ.. ಉರಿದು ಹೋಗುವಿರಿ, ಕಟ್ಟೆಯೊಡೆದ
ಜಗದ ಕೋಪಕ್ಕೆ ಸುಟ್ಟು...

No comments:

Post a Comment