Thursday, April 25, 2019

ನಮ್ಮನು ಬಿಡುವುದೇನು?

ಮುಳುಗಿಯೇ... ಹೋಗುತ್ತಿರುವ ತೆಪ್ಪಕ್ಕೆ
ಹುಟ್ಟಿನ ಹಂಗೇತಕೆ?
ಉಸಿರೆ ಭಾರವಾಗಿರುವ ಬದುಕಿಗೆ
ಊರುಗೋಲಿನ ಆಸೆಯೇತಕೆ?
ಬಂದಂತೆ ನಡೆದು ಬಂದಿದ್ದೇವೆ...ಬೇಸರಿಸದೆ
ಬಾಳು ಇಂದಿಲ್ಲಿಗೆ ತಂದು ನಿಲ್ಲಿಸಿದೆ ವಿಷವನುಣಿಸದೆ.

ಇರುವುದಾದರು ಇನ್ನೇಷ್ಟು ಹೊತ್ತು....
ಬೇಕಿರುವುದು ಒಡಲಿಗೆ ಒಂದೆ ತುತ್ತು...
ಹಿಡಿಗಾಗಿ ಕೈ ಚಾಚಲೆ ಇಂದು ಅತ್ತು...
ಹತ್ತು ಜನರಿಗೆ ಅನ್ನವಿತ್ತ ಕೈ, ಚಾಚುವುದಿಲ್ಲ ಯಾವತ್ತು..

ಜೊತೆಗೂಡಿ ಹಾಕಿದ ಹೆಜ್ಜೆಗಳೇನಿರಲಿಲ್ಲ ಸಸ್ತಾ...
ನೋವಿನೊಳಗೂ ಅರಳುತ್ತಿದ್ದೇವು ನಕ್ಕು ನಗಿಸುತ್ತಾ...
ವಿಧಿಯು ಆಗಾಗ್ಗೆ ವಸೂಲಿ ಮಾಡಿಕೊಂಡೆ ಬರುತ್ತಿದೆ ಹಫ್ತಾ...
ಉಳಿದಿರುವುದೊಂದೆ, ಅವನೇದುರಿಗೆ ಆಗಬೇಕಿದೆ
ಎಲ್ಲಾ ಚುಕ್ತಾ..

ನಾವಾರತ್ತ ಬೊಟ್ಟು ಮಾಡೋಣ
ನಾವೇ.. ಬದುಕಿ ಬಾಳಿದ ಸಮಾಜವಿದು..
ಯಾರಲ್ಲಿ ಏನಂತ ಕೇಳೊಣ
ಹಿಡಿಯಾಗಿ ಹೋಗುವ ನಮಗೆ, ಹುಡಿಯಾಗುವವುಗಳ
ಮೇಲೆ ಮೋಹವಿಲ್ಲ!!
ಹೋಗಿ ಬರುವವರೆಲ್ಲ, 'ಅಯ್ಯೋ..ಪಾಪ'ವೆಂದಾಗಲೆಲ್ಲ
ಸತ್ತು ಬದುಕಿದಂತಾಗುವುದಲ್ಲ!!!

ನಡೆಸಿಕೊಂಡವರ ಬಗ್ಗೆ ಮಾತಿಲ್ಲ...
ಅವರವರ ಕರ್ಮ ಅವರನ್ನು ಬಿಡುವುದಿಲ್ಲ,
ಇಂದು ನಮಗೆ.. ನಾಳೆ ಅವರಿಗೆಲ್ಲ....
ದಶರಥನು ಬಿಟ್ಟ ಬಾಣ ಅವನಿಗೆ ನಾಟಿದ್ದು
ಅರಿವಿಲ್ಲವೇನು?
ಅರಮನೆಯನ್ನೆ ಬಿಡದದ್ದು ನಮ್ಮನ್ನು ಬಿಟ್ಟಿತೇನು?

No comments:

Post a Comment