ಗೆಳತಿ...
ಮುಡಿಗೆ ಮಲ್ಲಿಗೆ ಮುಡಿಸಿ.. ಗಲ್ಲಕೆ
ಗಂಧವ ಲೇಪಿಸಿ... ಪಚ್ಚೆ ಹಸಿರಿನ
ಸೀರೆಯ ತೊಡಿಸಿ... ನನ್ನ ಮಡಿಲಲಿ
ಮಲಗಿಸಿಕೊಂಡು ನಿನ್ನ ಹಣೆಗೊಂದು
ಸವಿಮುತ್ತ ನೀಡುವ ಮುನ್ನ ಹೊರಡಬೇಕಿದೆ ಕಣೇ...
ಆಷಾಡವು ಕಳೆದು... ನಾಗರಕಟ್ಟೆಗೆ
ಬಂದವರ ಹೊಟ್ಟೆಯುರಿಸುವಂತೆ ಜೊತೆಯಲೆ ಹೋಗಿ... ನನ್ನ ನಿನ್ನ
ಮನೆ ಮಂದಿಯದರೆಲ್ಲ ಪಾಲೆನ್ನುತ
ಹಾಲನೆರೆದು... ಬಗೆಬಗೆಯ ಸಿಹಿಯ
ಉಂಡಿಗಳ ಕಟ್ಟಿ ನನಗೆ ನೀ ತಿನಿಸುವ
ಮುನ್ನವೇ ಹೊರಡಬೇಕಿದೆ ಕಣೇ...
ಶ್ರಾವಣ ಜೋಕಾಲಿಯಲಿ ನಿನ್ನ
ಕುಳ್ಳರಿಸಿ ತೂಗಿ... ತೂಗಿ... ನಿನಗೆ
ತಲೆಸುತ್ತು ಬಂದು.. ನನ್ನೆದೆಯ ಮೇಲೊರಗಿ
ರೋಮಗಳೊಡನೆ ನಿನ್ನ ತೋರು ಬೆರಳು
ಆಟವಾಡುವ ಮೊದಲೆ ಹೊರಡಬೇಕಿದೆ ಕಣೆ..
ಮದುವೆಯ ಮದರಂಗಿಯ ಬಣ್ಣವಿನ್ನೂ
ಮಾಸಿಲ್ಲ... ಕೂಡಿ ಕಳೆದ ರಾತ್ರಿಗಳ ಹಸಿಯಿನ್ನು ಆರಿಲ್ಲ... ಮಿಲನದ ಸಂಕೇತಕೆ
ನಿನ್ನ ಬಾಯಿನ್ನು ಹುಳಿಯ ಬಯಸಿಲ್ಲ...
ಈಗಲೇ ಹೊರಡಬೇಕಿದೆ ಕಣೇ....
ನಿನ್ನ ಬಿಟ್ಟು ದೂರವುಳಿದ ಆಷಾಡ
ಮಾಸದ ವಿರಹವಿನ್ನೂ ತಣಿದಿಲ್ಲ..
ಇನ್ನೀ ವರುಷದ ವಿರಹದ ವಿಷವುಣ್ಣಲು
ಹೊರಡಲೆ ಬೇಕಿದೆ ಕಣೆ...
ನಗು ನಗುತಾ ಕಳಿಸಿಬಿಡು.. ತಾಯಿ ಸೇವೆಗೆ
ಗಡಿಯ ಕಾಯ್ದು ಮತ್ತೆ ಬರುವೆ ನಿನ್ನ ಮಡಿಲಿಗೆ
ಬರುವುದರೊಳಾಗಾಗಿ ಕಟ್ಟು ನೀನೊಂದು
ಜೋಳಿಗೆ..
ಹಾರುವ ಹಕ್ಕಿಯಾಗಿ ಬಂದು ಸೇರುವೆ
ನಿನ್ನೊಲವಿನ ಗೂಡಿಗೆ...
ಬರಲೇ ಗೆಳತಿ..
ಹೋಗಲೆಬೇಕಿದೆ...ಈಗ
No comments:
Post a Comment