ಮೂಡಣದಿ ಮೂಡಿದ ರವಿಯು
ಕಗ್ಗತ್ತಲಿನ ಚಂದಿರನಿಗೆ ಹಾಜರಿ
ಹಾಕುವವರೆಗೂ... ಶಶಿಯು ಮತ್ತೆ
ಹೊಂಬೆಳಕಿನ ದಿನಕರನಿಗೆ ಹಾಜರಿಯ
ಹಾಕುವವರೆಗೂ..
ಈ ತೋಳಲಿ ಉಳಿದುಬಿಡು ಗೆಳತಿ
ಇನ್ನೊಂದು ಅರೆ ಘಳಿಗೆ
ಲತೆಯಲಿ ಮೊಗ್ಗರಳಿ.. ಮೊಗ್ಗುಗಳು
ಸುಮವಾಗಿ.. ಸುಮಗಳು ಗಂಧವ
ಸೂಸಿ...ಗಂಧವ ದುಂಬಿಯು ಹೀರಿ
ಸಂಜೆಗೆ ನಲುಗಿ ಹೂವು ಉದುರುವ
ವರೆಗಾದರೂ...
ಈ ತೋಳಲಿ ಉಳಿದುಬಿಡು ಗೆಳತಿ
ಇನ್ನೊಂದು ಅರೆ ಘಳಿಗೆ
ನಾ ಮುಡಿಸಿದ ಮಲ್ಲಿಗೆಯ
ಘಮವು ಮಾಸುವವರೆಗಾದರೂ
ನಿನಗೆ ಹೇಳುವ ಮನದ ಮಾತುಗಳು
ಮುಗಿಯುವವರೆಗಾದರೂ
ನೀ ಕೊಟ್ಟ ಈ ಕೆನ್ನೆಗೆ ಮುತ್ತಿನ
ಮತ್ತು ಇಳಿಯುವವರೆಗಾದರೂ
ಈ ತೋಳಲಿ ಮಲಗಿಬಿಡು ಗೆಳತಿ
ಜಗದ ಪರಿವಿಲ್ಲದಂತೆ...
ಘಳಿಗೆ ಅರೆ ಘಳಿಗೆಗಳ
ಅರಿವಿಲ್ಲದಂತೆ
No comments:
Post a Comment