Thursday, June 29, 2017

ಕುರುಪಿ...

ನಾನೇಕೆ ಈ ವಸುಂಧರೆಯಲ್ಲಿ ಜನ್ಮಿಸಿದೇನೊ..?
ಜನ್ಮಿಸಿದರೂ... ಈ ಕುರುಪಿ ಬಾಳನು ವಿಧಿಯು
ನನಗೇತಕೆ ನೀಡಿತೊ...
ಕಾಮದ ಕಣ್ಣುಗಳಿಗೆ ಕುಕ್ಕುವ ಅಂದವನ್ನಾದರೂ..
ನನ್ನಲೇಕೆ ತುಂಬಿತೊ..
ಹೆತ್ತ ತಪ್ಪಿಗೆ ಹೆತ್ತೊಡಲುಗಳೆರಡು ದಿನವೂ
ಕಣ್ಣೀರಿನಲಿ ಕೈ ತೊಳೆಯುವ ಭಾಗ್ಯವನೇತಕೆ
ನೀಡಿತೊ..

ಹುಟ್ಟಿದಾಗ ಪುರಿಯಂತೆ ಉಬ್ಬಿದ್ದ ಕೆನ್ನೆಗಳ..ಎಣ್ಣೆಯ
ಹಚ್ಚಿ ತಿಕ್ಕಿ.. ತಿಕ್ಕಿ..ಕೆಂಪಗಾಗಿಸಿದ್ದ ಅಜ್ಜಿಯು
ಇಂದು ನನ್ನ ರೂಪವ ಕಂಡರೆ ಜೀವದಿಂದಿರುವಳೆ..
ಕಾಲೇಜಿಗೆ ಬರುವವರೆಗೂ ಅಮ್ಮನು.. ಮುಖಕ್ಕೆ
ನೋವಾಗುವುದೇನೊ ಎಂಬಂತೆ.. ಹತ್ತಿಯಿಂದ
ಮೆತ್ತಗೆ ಪೌಡರ ಹಚ್ಚಿ.. ಕಣ್ಣಿಗೆ ಕಾಡಿಗೆ ತೀಡಿ..
ಹಣೆಗೆ.... ಬಟ್ಟೆಗೆ ಹೊಂದುವಂತಹ ಬಿಂದಿಯನ್ನು ಹಚ್ಚಿ
ಗಲ್ಲಕೆ ದೃಷ್ಟಿಬೊಟ್ಟನಿಟ್ಟು.. ಹೇಳುತ್ತಿದ್ದಳು... ಎದುರಿಗೆ
ನಿಂತು ಲಟಿಕೆಯ ಮುರಿಯುತ್ತಾ... ನಿನ್ನನ್ನ ಹುಡುಕಿಕೊಂಡು
ಹತ್ತೂರ ಸರದಾರನೆ ಕಣೇ ಬರೊದು ಮದುವೆಯಾಗೋಕೆ
ಎನ್ನುತ್ತಿದ್ದ ನನ್ನ ಅವ್ವಳ ಕಂಗಳು ಸಹಿಸಿತೆ...ಹೆತ್ತ ಕರುಳು
ತಡೆದಿತೆ ಈ ಆಕಾರವ...
ಹತ್ತೂರಿನ ಸರದಾರನಿರಲಿ ಮನೆಯ ಮುಂದಿನ
ನಾಯಿಯು ಸಹ ಹೆದರುತ್ತಿದೆ ನನ್ನೆದುರು ಬರಲು
ಹೆಣ್ಣೆಂದು ಕಿಳಾಗಿ ಕಾಣದೆ.. ನನ್ನನು ಒಂದು ಗಂಡು
ಮಗುವಾಗಿ ಬೆಳಸಿ.. ಒಳ್ಳೆಯ ಅಭ್ಯಾಸವ ಕೊಡಿಸಿ
ನಿನ್ನ ಕಾಲಮೇಲೆ ನಿಲ್ಲುವಂತೆ ಮಾಡುವೆ ಮಗಳೆ
ಹೆಣ್ಣೆಂದರೆ ಅಸಹ್ಯಿಸುವ ಸಮಾಜವು ನಿನ್ನತ್ತ ತಲೆಯತ್ತಿ
ನೋಡುವಂತೆ ಮಾಡುವೆ ನೆಂದಿದ್ದ ತಂದೆಗೆ..
ನಾನೆ ಸಮಾಜದೆದುರು ಹೋಗಿ ನಿಂತರು...ಯಾರು
ತಲೆಯತ್ತಿ ನೋಡದ ಹಾಗಿದೆ ನನ್ನಿ ರೂಪ..
ಅಪ್ಪ.. ನೀನು ಒಂದು ಹೆಣ್ಣು ಹುಣ್ಣೆನ್ನುವವರ ಸಾಲಿಗೆ
ಸೇರಿದ್ದರೂ ಪರ್ವಾಗಿರಲಿಲ್ಲ.. ತಾಯಿಯ ಗರ್ಭದಲ್ಲೆ
ನನ್ನನು ಚಿವುಟಿಬಿಟ್ಟಿದ್ದರೆ ನಿಮಗೂ ನನಗೂ ಇಂದು
ಈ ವಿಷಮಸ್ಥಿತಿ ಬರುತ್ತಿರಲಿಲ್ಲ..

ಓ...ಕಾಮದ ಗಂಡೆ ನಿನ್ನ ವಿಕೃತ ಮನಸ್ಸಿನ
ಪ್ರೀತಿಯ ಒಪ್ಪಿಕೊಳ್ಳಲಾರದ್ದಕ್ಕೆ... ನಿನ್ನ ಕೆಟ್ಟ
ಮನಸ್ಸಿನ ಕಾರ್ಕೂಟಕ ವಿಷವನು ನನ್ನ ಮೊಗದ ಮೇಲೆಲ್ಲ
ಸುರಿದುಬಿಟ್ಟೆಯಲ್ಲ... ಅರಿವಾಗುವುದೊ ಗಂಡೆ.. ನಿನಗೆ
ನನ್ನ ಸಂಕಟವ..ಹನಿ ಹನಿಯು ನೀಡುವ ನರಕ ಯಾತನೆಯ
ಮೂರು ಹೊತ್ತು.. ನನ್ನ ಬದುಕಿನ ಅವಿಭಾಜ್ಯ ಅಂಗವೆ ಆಗಿದ್ದಂತಹ ಕನ್ನಡಿಯ ಮುಂದೆ... ನಾನಿಂದು ನಿಂತು ಸಿಂಗರಿಸಿಕೊಳ್ಳಬಲ್ಲೇನೆ.. ಗೆಳೆಯ ಗೆಳತಿಯರು ನನ್ನನು ಎದುರಿಸಿ ಮಾತನಾಡಬಲ್ಲರೆ.. ಅಂದವಿದ್ದಾಗಲೆ ತೀರಸ್ಕರಿಸಿ ಹೋಗುತ್ತಿದ್ದ ಮದುವೆಯ ಗಂಡುಗಳು..ಇನ್ನೂ ಈ ಚೆಲುವನು
ಮೆಚ್ಚುವರೆ.. ಬದುಕಿನ ಅಳಿದುಳಿದ ದಿನಗಳೆ.. ನನ್ನೊಡನೆ
ಜೊತೆಯಾಗಿರಲು ಅಸಹ್ಯಯಿಸುತಿರುವಾಗ... ಬದುಕಲೆ.?

ಬದುಕಬೇಕಿದೆ ಕಣೋ... ನಿಮ್ಮಂಥವರ ತಿದ್ದದೆ ಹಾದಿಯಲಿ
ಕೋಣಗಳ ಹಾಗೆ ಬೆಳೆಯಲು ಬಿಟ್ಟ ನಿನ್ನ ಹೆತ್ತವರಿಗೆ..
ನನ್ನಂಥವರ ಸಂಕಟವೆನೆಂದು ಅರಿವಾಗುವವರೆಗೂ..
ನನ್ನನು ಮಾತ್ರ ಮನೆಯ ಕತ್ತಲು ಕೋಣೆಯಲ್ಲಿ ಕುಳ್ಳರಿಸಿ
ನಿಮ್ಮಂಥ ಸಮಾಜಘಾತುಕರನ್ನು ಶಿಕ್ಷಿಸದೆ ಸುಮ್ಮನೆ ನೋಡುತ್ತ ಕೈ ಕಟ್ಟಿ ಕುಳಿತ ಸಮಾಜಕ್ಕೆ ಚಾಟಿಯ ಬೀಸುವವರೆಗೂ...
ನನ್ನಂಥ ನೂರಾರು ಅಬಲೆಯರ ಬಾಳಲಿ ಮತ್ತೆ
ಹೂ ನಗೆಯ ಅರಳಿಸುವವರೆಗೂ.. ನನ್ನ ತಂದೆ ಕಂಡ
ಕನಸಂತೆ ಈ ಸಮಾಜ ಮತ್ತೆ ನನ್ನತ್ತ ತಿರುಗಿ ನೋಡುವವರೆಗೂ.. ಬಾಳುವೆನು ಕಣೊ.. ಗಂಡೆ
ನೋಡುತಿರು.. ನೀನು ನನ್ನಂದದ ಎಸಳುಗಳನ್ನಷ್ಟೇ..
ಕಿತ್ತಿರುವುದು... ನನ್ನೊಳಗಿನ ನಗುವಿನ ಆತ್ಮವಿಶ್ವಾಸದ ಸುಗಂಧವನ್ನು ನಿನ್ನ ಕೈಲಿಂದ ಅಳಿಸಲಾಗದು..
ಬದುಕು ಬರಡಾಗಿರಬಹುದು ನಿನ್ನಿಂದ.. ನಿನ್ನಂಥವರ
ಮೆಟ್ಟಿ ನಿಲ್ಲುವೆನೆಂಬ ಮೊಗದ ಮೇಲಿನ ನಗುವ
ಅಳಿಸಲಾದಿತೆ ನಿನ್ನಿಂದ... ?

No comments:

Post a Comment