Sunday, October 14, 2018

ಭಾಗ ೪

ಇಬ್ಬರ ನಡುವಿನ ಮೌನ ಅಖಿಲನನ್ನು ಉಸಿರುಗಟ್ಟಿಸುವಂತೆ ಮಾಡತೊಡಗಿತು, ಎದ್ದು ನಿಂತು ಕೈಯಲ್ಲಿ ಹಿಡಿದಿದ್ದ ನೀರಿನ ಬಾಟಲಿಯನ್ನು ರಮೇಶನ ಕಾಲಿನತ್ತ ಒಗೆದು ಬೀರಿಸಿನಿಂದ ಹೊರಡಲು ಅನುವಾದನು. ಆಗ ರಮೇಶನು ತಲೆತಗ್ಗಿಸಿಕೊಂಡೆ 'ಒಂದು ವೇಳೆ ನಾವು ಸಿಕ್ಕಿಬಿದ್ದರೆ ?'
ಹೊರಟ ಅಖಿಲನ ಕಾಲುಗಳು ದಾರಿಯಲ್ಲಿ  ರಭಸವಾಗಿ ಹೋಗುವ ವಾಹನಕ್ಕೆ ಮಗುವೊಂದು ಅಡ್ಡಬಂದಾಗ ಯಾವ ರೀತಿ ಬ್ರೇಕ್ ನ್ನು ಹಾಕಲು ಪ್ರಯತ್ನಿಸುತ್ತಾರೊ ಹಾಗೆ ತನ್ನ ನಡಿಗೆಯ ವೇಗವನ್ನು ನಿಯಂತ್ರಿಸಲು ಹೋಗಿ ಕಾಲು ತೊಡರಾಗಿ ಬಿದ್ದುಬಿಟ್ಟನು. ಅಖಿಲನು ಬಿದ್ದದ್ದನ್ನು ಕಂಡು ರಮೇಶನು ಓಡಿಹೋಗಿ ಕೈ ಹಿಡಿದೆತ್ತಿದನು. ಇಬ್ಬರೂ ಬಂದು ಬೆಂಚಿನ ಮೇಲೆ ಕುಳಿತುಕೊಂಡರು. ಒಂದು ಕ್ಷಣ ಮತ್ತೆ ಮೌನಕ್ಕೆ ಜಾರಿದರು. 'ಈಗ ನಿಮ್ಮ ನಿರ್ಣಯವಾದರು ಏನು?' ಎಂದನು ಅಖಿಲನು.
'ಅಲ್ಲ...ಒಂದು ವೇಳೆ ನಾವು ಸಿಕ್ಕಿಬಿದ್ದರೆ ಹೇಗಂತ'
'ಅಂದರೆ ನಿಮಗೆ ಈ ಕೆಲಸ ಒಪ್ಪಿಗೆ ಇದೆ'
'ಇಲ್ಲ'
ಅಖಿಲನು ಹುಬ್ಬು ಗಂಟಿಕ್ಕಿ 'ಮತ್ತೆ'
'ಏನು ಕಳ್ಳತನ ಅಂದ್ರೆ ಹುಡುಗಾಟ ಅಂದ್ಕೊಂಡ ಬಿಟ್ಟಿದ್ದೀಯಾ, ಇವತ್ತು ಕಳ್ಳತನ ಆಗಿದೆ ಅಂದ್ರೆ, ನಾಳೆನೆ ಬ್ಯಾಂಕಿನ ಎದುರು ಒಬ್ಬ ಸೆಕ್ಯೂರಿಟಿ ಗಾರ್ಡನ್ನು ಹೆಚ್ಚಿಗೆ ನೇಮಿಸುತ್ತಾರೆ, ಸಿ.ಸಿ. ಕ್ಯಾಮರಾವನ್ನು ಅಳವಡಿಸುತ್ತಾರೆ, ಅಷ್ಟೇ ಅಲ್ಲದೆ ನಮಗೆ ತೊಂದರೆ ಇದೆಯಂದೆ ಹಣವನ್ನು ಡ್ರಾ ಮಾಡಿಕೊಂಡು ಬಂದು ತಗೊಳ್ಳಿಯಪ್ಪ ಅಂತಾ ನಮ್ಮ ಕೈಯೊಳಗೆ ಕೊಟ್ಟು ಹೋಗ್ತಾರೇನು, ಜನರು ಮೊದಲಿನ ಹಾಗೇನೂ ಇಲ್ಲ ಈಗ ಲಕ್ಷಗಟ್ಟಲೆ ಹಣವನ್ನು ಪೇಟಿಯಮ್, ಕ್ಯಾಷ್ ಲೆಸ್ ವ್ಯವಹಾರವನ್ನು ಮಾಡುತ್ತಿದ್ದಾರೆ, ಅಲ್ಲದೆ ಅಷ್ಟೊಂದು ಹಣವನ್ನು ಅವರು ತರಬೇಕಾದರೆ ತಮ್ಮದೆ ಹುಷಾರಿಯಲ್ಲೂ ಇರುತ್ತಾರೆ ಕೂಡ, ಅದರಲ್ಲೂ ನಾವಿಬ್ಬರು ಹೊಸಬರು, ಎಲ್ಲೊ ಒಂದು ಚಿಕ್ಕ ಎಡವಟ್ಟಾಗಿ ಸಿಕ್ಕು ಬಿದ್ದರೆ,
ಪೋಲಿಸ್ ಸ್ಟೇಷನ್ ನಲ್ಲಿ ನಮ್ಮ ತಿಥಿಯಾಗುತ್ತೆ, ಟಿ.ವಿ. ವಾಟ್ಸಪ್, ಪೇಸಬುಕ್ ಮುಂತಾದ ಸಾಮಾಜಿಕ ಜಾಲತಾಣಗಳಲ್ಲಿ ನಮ್ಮ ಹೆಸರು ಪೋಟೊಗಳು ಹರಿದಾಡುತ್ತವೆ. ರಾತ್ರೊ ರಾತ್ರಿ ನಾವು ಜಗತ್ತಿಗೆ ಪರಿಚಯವಾಗಿಬಿಡ್ತೀವಿ, ನಮ್ಮ ಕೆಲಸದಿಂದ ಆಮೇಲೆ ನಮ್ಮನ್ನೆ ನೆಚ್ಚಿಕೊಂಡ ನಮ್ಮ ಮನೆಯವರ ಗತಿಯೇನು,? ನಿನಗಂತು ನಿನ್ನ ತಾಯಿಯನ್ನು ಬಿಟ್ಟರೆ, ಮತ್ತ್ಯಾರು ಇಲ್ಲವೆನ್ನುತ್ತೀಯಾ? ನನಗೆ ವಯಸ್ಸಾದ ತಂದೆ ಹೆಂಡತಿ ಹಾಸಿಗೆ ಹಿಡಿದಿರುವ ಮಗಳಿದ್ದಾಳೆ, ನಾಳೆ ನನ್ನ ಸಂಸಾರ ತಲೆ ಎತ್ತಿಕೊಂಡು ಹೇಗೆ ಬಾಳಬೇಕು ಈ ಸಮಾಜದಲ್ಲಿ, ಅವರಿಗೆ ಯಾರು ದಿಕ್ಕು, ಎಲ್ಲಾ ಹೋಗ್ಲಿ, ಕಡೆಗೆ ಎಲ್ಲವು ಸುಖಾಂತ್ಯವೆ ಅಗುತ್ತದೆ ಅನ್ನುವುದಕ್ಕೆ ಏನು ಗ್ಯಾರಂಟಿ' ಒಂದೆ ಉಸಿರಿನಲ್ಲಿ ತನ್ನ ಮನದೊಳಗಿದ್ದ ಅಷ್ಟು ಸಂಶಯಗಳನ್ನು ಗಡಿಯಲ್ಲಿ ಎದುರಾಳಿಗಳ ಮೇಲೆ ಹಾರಿಸುವ ಗುಂಡಿನಂತೆ ಮಾತಿನ ಮಳೆಗೇರೆದು ಈಗ ನಿನ್ನ ಸರದಿ ಅನ್ನುವ ಭಾವದಲ್ಲಿ ಅಖಿಲನ ಮುಖವನ್ನು ನೋಡುತ್ತಾ ಕುಳಿತುಬಿಟ್ಟನು.
ಒಂದು ಕ್ಷಣ ರಮೇಶನ ಮಾತುಗಳನ್ನು ಕೇಳಿ ವಾಸ್ತವಕ್ಕೆ ಬಂದ ಅಖಿಲನು ಎದ್ದು ನಿಂತು ಅತ್ತಿಂದಿತ್ತ ಅಲೆದಾಡತೊಡಗಿದನು, ಕೈ ಯಲ್ಲಿನ ವಾಚನ್ನು ನೋಡಿಕೊಂಡನು ರಾತ್ರಿ ಎಂಟರ ಹತ್ತಿರ ಸಮಿಪಿಸುತ್ತಿತ್ತು, ಯಾಕೊ ಏಳಕ್ಕೆ ಬರುವ ಪಾರ್ಕಿನ ಕಾವಲುಗಾರ ಇಷ್ಟೊತ್ತಾದರು ಬಂದಿಲ್ಲವೆಂದರೆ, ಬಹುಶಃ ಇವತ್ತು ಅವನು ಬರುತ್ತಿಲ್ಲದಿರಬಹುದೇನೊ.. ಅಂತ ಮನಸ್ಸಿನಲ್ಲಿ ಮಾತನಾಡುತ್ತ ಮತ್ತೆ ತನ್ನ ವೇಗವನ್ನು ಹೆಚ್ಚಿಸಿದನು, ಆಗೊಮ್ಮೆ ಈಗೊಮ್ಮೆ ತನ್ನ ಕೆಳತುಟಿಯನ್ನು ಚಿವುಟಿಕೊಳ್ಳುತ್ತಾ, ಎಡಗೈಯ ಅಂಗೈಗೆ ಬಲಗೈಯಿಂದ ಗುದ್ದಿಕೊಳ್ಳುತ್ತಾ, 'ಛೇ..ಏನಪ್ಪಾ ಮಾಡೋದು ಬೇರೆ ದಾರಿನೆ ಹೊಳಿತಿಲ್ವೆ, ಮತ್ತೆ ಇಂತಹ ಐಡಿಯಾ ಬಿಟ್ಟು ಬೇರೆ ಐಡಿಯಾನು ನಮ್ಮ ಹತ್ತಿರ ಇಲ್ಲ, ಎರಡ್ಮೂರು ದಿನದಲ್ಲಿ ದಿಢೀರ್ ಎಂದು ಹಣಗಳಿಸಲು,' ಗೊಣಗುತ್ತಲೆ ಮತ್ತೆ ಲೆಪ್ಟ ರೈಟ್ ನಡಿಸತೊಡಗಿದನು. ಒಂದರ್ಧ ತಾಸು ಕಳೆದ ಮೇಲೆ ಏನೊ ಹೊಳೆದಂತವನಾಗಿ, ' ಸರ್ ನಿಮ್ಮ ಮನೆಗೆ ಪೋನ್ ಮಾಡಿ, ಇವತ್ತು ಸ್ವಲ್ಪ ತಡವಾಗಿ ಬರುತ್ತೇನೆಂದು ಹೇಳಿಬಿಡಿ'
'ಕಾರಣ'
' ನಮಗೆ ಹೆಚ್ಚು ಸಮಯವಿಲ್ಲ ಅದೇನಿದ್ದರು ಬೆಳಕು ಹರಿಯುವ ಮುನ್ನವೆ ನಾವು ಒಂದು ತಯಾರಿಯನ್ನು ಮಾಡಿಕೊಳ್ಳಲೆಬೇಕು. ನನ್ನಲ್ಲಿ ಒಂದು ಮಾಸ್ಟರ್‌ ಪ್ಲಾನ್ ಇದೆ, ಅದರ ಬಗ್ಗೆ ಈಗ ಚರ್ಚಿಸುವ, ಅದಕ್ಕು ಮೊದಲು ಹೊಟ್ಟೆ ಚುರ್ರಗುಟ್ಟುತ್ತಿದೆ, ಇಲ್ಲೆ ಪಕ್ಕದಲ್ಲೆ ಇರುವ ಉಡುಪಿ ಹೊಟೇಲ್ ಗೆ ಹೋಗಿ ಎರಡೂಟವನ್ನು ಕಟ್ಟಿಸಿಕೊಂಡು ಬಂದು ಬಿಡುವೆ'
'ನನ್ನ ಹತ್ತಿರ ಅಷ್ಟೊಂದು ಹಣವಿಲ್ಲ'
'ಈಗ ಸಂಪಾದನೆಯಾಯಿತಲ್ಲ'
'ಓ....!!!!'
'ಬೇಗ ಬಂದ್ಬಿಡ್ತೀನಿ, ಎಲ್ಲಿ ಹೋಗ್ಬೇಡಿ, ಆಯ್ತಾ'
ಸರಿ ಎನ್ನುವಂತೆ ತಲೆಯನ್ನಾಡಿಸಿದನು ರಮೇಶ.
ಬಿಲ್ಲಿನಿಂದ ಬಿಟ್ಟ ಬಾಣದಂತೆ ಪಾರ್ಕನಿಂದ ಮರೆಯಾಗಿದ್ದನು ಅಖಿಲ್.
ಅಖಿಲನು ಕತ್ತಲೆಯಲ್ಲಿ ಕರಗುತ್ತಿದ್ದಂತೇಯೆ ರಮೇಶನು ತನ್ನೊಳಗೆ ತಾನು ಚಿಂತಿಸತೊಡಗಿದನು,
'ನಾನು ತೆಗೆದುಕೊಳ್ಳುತ್ತಿರುಬ ನಿರ್ಣಯ ಸರಿಯಯಾಗಿದೇಯಾ?, ಅದು ಒಬ್ಬ ಅಪರಿಚಿತ ವ್ಯಕ್ತಿಯ ಜೊತೆಗೆ, ನಾಳೆ ಅವನೇನಾದರೂ ನನಗೆ ಮೋಸ ಮಾಡಿಬಿಟ್ಟರೆ, ತಾನು ಹಣವನ್ನು ಲಪಟಾಯಿಸಿಕೊಂಡು ಹೋಗಿ, ನನ್ನನ್ನು ಪೋಲಿಸರಿಗೆ ಹಿಡಿಸಿ ಕೊಟ್ಟುಬಿಟ್ಟರೆ, ‌ಇಂತಹ ಇಳಿವಯಸ್ಸಿನಲ್ಲಿ ನನ್ನ ತಂದೆ, ಇನ್ನೂ ಸಂಸಾರ ಸುಖವನ್ನೆ ಅನುಭವಿಸದ ನನ್ನ ಮಡದಿ, ಹೊರಗಿನ ಪ್ರಪಂಚವನರಿಯದ ನನ್ನ ಮಗಳು ನೆನಪಿಸಿಕೊಳ್ಳಲು ಸಂಕಟವಾಗುತ್ತಿದೆಯಲ್ಲಾ, ನಾಳೆ ಜನರೆಲ್ಲ ಏನಂದಾರು ? ಒಬ್ಬ ಹುಡುಗನ ಜೊತೆ ಸೇರಿಕೊಂಡು ಕಳ್ಳತನಕ್ಕೆ ಇಳಿದಿದ್ದೀಯಾ, ಎಂದೆಲ್ಲರೂ ಆಡಿಕೊಳ್ಳುವುದಿಲ್ಲವೆ, ಜೈಲಿಗೆ ಹೋಗಿ ಬಂದ ಮೇಲೆ ನನಗೆ ಕೆಲಸವನ್ನು ಯಾರು ಕೊಡುತ್ತಾರೆ, ಕಳ್ಳನೆಂಬ ಪಟ್ಟ ಅಷ್ಟು ಸಲಿಸಾಗಿ ಸ್ನಾನ ಮಾಡಿದರೆ ಹೋಗುವಂತಂದ್ದೆ, ಇಲ್ಲ...ಇಲ್ಲ... ಇದು ನನ್ನಿಂದಾಗದ ಕೆಲಸ' ಎಂದು ಮನದಲ್ಲಿ ಮಾತನಾಡುತ್ತಾ, ಕಳ್ಳತನ ಮಾಡಲು ಧೈರ್ಯ ಸಾಲದೆ ಹೊರಡಲನುವಾದನು ರಮೇಶ.
ಎರಡು ಹೆಜ್ಜೆ ಮುಂದೆ ಬಂದ ಕ್ಷಣವೆ ಮನದಲ್ಲಿ ಅವಳ ಮಗಳ ನಗು ಮೊಗವು ಮೂಡಿತು, ಆಫೀಸನಿಂದ ಬಂದಾಗ ಮನೆಯ ತಲಬಾಗಿಲಲ್ಲಿ ತನ್ನ ದಾರಿಯನ್ನು ಕಾಯುತ್ತಾ ಕುಳಿತಿದ್ದು, ತನ್ನ ಬರುವಿಕೆಯಿಂದ ಓಡೋಡಿ ಬಂದು ತೊಡೆಯನ್ನು ಎರಡು ಕೈಯಿಂದ ಅಪ್ಪಿಕೊಂಡು ತೊದಲು ನುಡಿಯಿಂದ ಚಾಕಿ...ಚಾಕಿ..ಎಂದು ಅವಳು ಗೋಳು ಹೊಯ್ದುಕೊಳ್ಳುವ ಪರಿಯು ಕಣ್ಮುಂದೆ ಸುಳಿದು, ಕಾಲುಗಳು ಮುಂದೆ ಹೋಗಲು ಶಕ್ತಿಯಿಲ್ಲದಂತಾಗಿ, ಅಲ್ಲೆ ನೆಲದ ಮೇಲೆ ಕುಸಿದು ಕುಳಿತುಕೊಂಡುಬಿಟ್ಟನು, ತಲೆಯ ಮೇಲೆ ಕೈಯನ್ನು ಇಟ್ಟುಕೊಂಡು, ಆಸ್ಪತ್ರೆಯ ಬೆಡ್ಡಿನಲ್ಲಿ ನೋವಿನಿಂದ ನರಳಾಡುತ್ತಿರುವ ಮಗಳನ್ನು ನೆನೆದು ಕಣ್ಣೀರಾದನು.

     ಇತ್ತ ಹೊಟೇಲ್ ಗೆ ಬಂದು ಎರಡು ಊಟವನ್ನು ಪಾರ್ಸಲ್ ಹೇಳಿ, ಕುಡಿಯಲಿಕ್ಕೆ ಒಂದು ಟೀಯನ್ನು ತರಿಸಿಕೊಂಡು ಕುಡಿಯುತ್ತಾ, ತನ್ನದೆ ಆದ ಆಲೋಚನಾ ಲಹರಿಯಲ್ಲಿ ಮುಳುಗಿದನು.' ಹೌದು ಸರ್ ಹೇಳುತ್ತಿರುವುದು ಸರಿಯಾಗಿಯೆ ಇದೆ. ನಮ್ಮಿಬ್ಬರಿಗೂ ಮೊದಲು ಅನುಭವವಿಲ್ಲ, ನನಗಿಂತಲೂ ಸಂಸಾರದ ಜವಾಬ್ದಾರಿಯ ಭಾರ ಅವರ ಮೇಲಿದೆ, ಆದರೆ ನಮ್ಮಿಬ್ಬರಿಗೂ ಇದನ್ನು ಬಿಟ್ಟರೆ ಬೇರೆ ದಾರಿನೆ ಕಾಣ್ತಿಲ್ವಲ್ಲ.... ಇರಲಿ ನನಗಾಗ ಹೊಳೆದ ಐಡಿಯಾವನ್ನೆ ಅವರ ಮುಂದೆ ಹೇಳಿಕೊಂಡರಾಯಿತು ಆಮೇಲೆ ಬೇಕಿದ್ರೆ ನೋಡೊಣ ಏನ್ಮಾಡೊದು ಅಂತ,' ಎಂದು ಚಹಾವನ್ನು ಕುಡಿದು ಲೋಟವನ್ನು ಕೆಳಗಿಟ್ಟನು, ಅಷ್ಟರಲ್ಲಿ ಒಂದಿಬ್ಬರು ಮಧ್ಯಮ ವಯಸ್ಸಿನ ವ್ಯಕ್ತಿಗಳು ಬಂದು ಇವನ ಹಿಂದಿನ ಟೇಬಲ್ ಗೆ ಆನಿಸಿಕೊಂಡು ಕುಳಿತು ಒಂದು ವ್ಯವಹಾರದ ಬಗ್ಗೆ  ಮಾತನಾಡತೊಡಗಿದರು. ಅವರ ಮಾತುಗಳನ್ನು ಕೇಳಿ ಇವನ ಕಿವಿಗಳು ಬೇಟೆ ನಾಯಿಗಳ ಹಾಗೆ ಚುರುಕಾಗಿಬಿಟ್ಟವು.
' ಇಲ್ಲ ಕಣಯ್ಯ ನಿಂಗೆ ಕೊಡೊ ಕಮೀಷನ್ ಇಷ್ಟೆ, ನೀನೇನು ಈ ಸಲದ ಟೆಂಡರ್ ನಲ್ಲಿ ನನಗೇನು ಲಾಭ ಮಾಡಿ ಕೊಡ್ಲಿಲ್ಲ, ಆ ಅಧ್ಯಕ್ಷನಿಗೊಂದಿಷ್ಟು, ಮೆಂಬರ್ಗೊಂದಿಷ್ಟು ನಿಂಗೊಂದಿಷ್ಟು ಅಂತ್ಹೇಳಿ ಕೊಟ್ರೆ ನನಗೇಷ್ಟು ಉಳಿತದೆ ಹೇಳು ಮಹಾ, ಈ ಬಿಜನೆಸ್ಸೆ ಸಾಕಾಗಿ ಹೋಗಿ ಬಿಟ್ಟಿದೆ ನಂಗೆ' ಬೇಸರದ ನುಡಿಗಳಿಂದ ಮಾತನಾಡಿದನು ಮೊದಲನೇಯವನು.
'ಏನಣ್ಣಾ.. ನೀನು ಹಿಂಗದ್ಬಿಟ್ಟೆ, ನಾನು ಈ ಟೆಂಡರ್ ನ ನಿನಗೆ ಅಂತಂದು ಹಿಡಿದುಕೊಡೊಕೆ ಎಷ್ಟೇಷ್ಟು ದೊಡ್ದ ದೊಡ್ದ ಕುಳಗಳ ಕೈ ಕಾಲ ಹಿಡ್ದಿದ್ದೀನಿ,' ಗಿಂಜುತ್ತಾ ನುಡಿದನು ಎರಡನೇಯವನು
'ಸರಿ...ಸರಿ ಅದಕ್ಯಾಕೆ ಅಷ್ಟೊಂದು ಗೋಗರಿತಿಯಾ ಬಿಡು, ಆದರೆ ಮುಂದಿನ ಟೆಂಡರ್ ನಲ್ಲಿ ನಂಗೆ ಲಾಭ ಬರೋ ಹಾಗೆ ಮಾಡಲಿಲ್ಲಾಂದ್ರೆ ಇದೆ ಕೊನೆ ಗೊತ್ತಾಯ್ತಾ,'
'ಹಣ ಯಾವಾಗ ಕೊಡ್ತೀಯಾ ಅಣ್ಣಾ'
'ಇದೊಂದು ಇಪ್ಪತ್ತ ಲಕ್ಷದ ಚೆಕ್ ಕೊಡ್ತೀನಿ ನಾಳೆ ಬ್ಯಾಂಕ್ ಅಕೌಂಟನಿಂದ ಡ್ರಾ ಮಾಡ್ಕೊ,'
'ಅಷ್ಟು ದುಡ್ಡು ಒಮ್ಮೇಲೆ ಕೊಡ್ತಾರ,'
'ಮತ್ತೆ ನಂದೇನು ಕಾಂಜಿಪಿಂಜಿ ವ್ಯವಹಾರ ಅನ್ಕೊಂಡಿಯೇನು,
ಮ್ಯಾನೇಜರ್ ಅವರಿಗೆ ಹೇಳಿರ್ತಿನಿ, ನಾಳೆ ಸಾಯಂಕಾಲ ನಾಲ್ಕು ಗಂಟೆ ಸುಮಾರಿಗೆ ನೇರ ಮ್ಯಾನೇಜರ್ ಚೇಂಬರ್ ಗೆ ಹೋಗು ಅವರಿಗೆಲ್ಲ ನಾನು ಹೇಳಿ ಇಟ್ಟಿರ್ತೀನಿ, ಸರಿನಾ'
ಹಣದ ಮಾತು ಕಿವಿಗೆ ಬಿಳುತ್ತಲೆ ಜೋರಾಗಿ ಒಮ್ಮೆ ಚೀರಿ ಬಿಡುವಂತೆ ಆಸೆಯಾಗಿ ಎದ್ದು ನಿಂತನು ಅಖಿಲ್ ನು, ಆದರೆ ತಾನಿರುವುದು ಹೊಟೇಲನಲ್ಲಿ ಎಂಬ ವಾಸ್ತವಕ್ಕೆ ಬಂದು ಸುಮ್ಮನಾದನು, ಅವರಿಬ್ಬರು ಮತ್ತೆ ಬೇರೆ ವಿಷಯದ ಬಗ್ಗೆ ಮಾತನಾಡತೊಡಗಿದರು, ಊಟದ ಪಾರ್ಸಲ್ ಬಂದಿತು, ಬಿಲ್ ಕೊಟ್ಟು, ಅಂಗಿಯ ಜೇಬಿನಲ್ಲಿ ತನ್ನ ಮೊಬೈಲನಿಂದ ವಿಡಿಯೋ ರೆಕಾರ್ಡಿಂಗ ಆನ್ ಮಾಡಿಕೊಂಡು ಆ ಇಬ್ಬರು ವ್ಯಕ್ತಿಗಳ ಹತ್ತಿರ ಹೋಗಿ ಅವರಿಗೆ ಗೊತ್ತಾಗದಂತೆ ಅವರಿಬ್ಬರ ವಿಡಿಯೋವನ್ನು ರಿಕಾರ್ಡ ಮಾಡಿಕೊಂಡು ಹೊರ ನಡೆದನು. ಒಂದು ನಿಮಿಷ ಏನೊ ನೆನಪಾದವರಂತೆ ನಿಂತು ಅಲ್ಲೆ ಪಕ್ಕದಲ್ಲೆ ಇದ್ದ ಮೆಡಿಕಲ್ ಶಾಪ್ ಗೆ ಹೋಗಿ ಒಂದು ವಸ್ತುವನ್ನು ತೆಗೆದುಕೊಂಡು, ಎರಡು ವಾಟರ್ ಬಾಟಲ್ ಗಳನ್ನು ತೆಗೆದುಕೊಂಡು ಪಾರ್ಕಿನತ್ತ ಅವಸರದ ಹೆಜ್ಜೆಗಳನ್ನು ಹಾಕಿದನು.

No comments:

Post a Comment