ಮೊದಲಿಗೆ,
ನಿನ್ನನ್ನು ನಾನೆಂದು ಕರೆಯಬೇಕೆಂಬುದೆ ತಿಳಿಯದಂತಾಗಿದೆ ನನಗೆ. ಮಿತ್ರನೆನ್ನಲೆ, ಸಹೋದರನೆನ್ನಲೆ ಇಲ್ಲಾ ಈ ದೇವಾಲಯದಲ್ಲಿ ಎಲ್ಲರಿಗೂ ಮುಕ್ತಿಯನ್ನು ಕೊಡಲೆಂದೆ ನಸುನಗುತ್ತ ಕುಳಿತುಕೊಂಡ ಕಾಲ ಭೈರವನೆಂದುಕೊಳ್ಳಲೆ, ನಿಜ..ನಿಜ ನೀನು ನನ್ನ ಪಾಲಿಗೆ ಸಾಕ್ಷಾತ್ ಕಾಲ ಭೈರವನೆ.
ಬಾಳಿನ ದೋಣಿಯಲ್ಲಿ ಹುಟ್ಟಿಲ್ಲದೆ ಸುಳಿಗೆ ಸಿಕ್ಕು ಮುಳುಗುತ್ತಿದ್ದ ನನ್ನ ಹಡುಗನ್ನು ದಡವ ಸೇರಿಸಿದ ಆಪತ್ಭಾಂದವ, ಸರಿಯಾದ ಸಮಯಕ್ಕೆ ಸಿಕ್ಕು ನನ್ನೆಲ್ಲ ಕಷ್ಟದ ದಿನಗಳಿಗೆ ಪರದೆಯನ್ನು ಎಳೆದವನು ನೀನು. ನನಗಿಂತಲು ವಯಸ್ಸಿನಲ್ಲಿ ಕಡಿಮೆಯಾದರು, ನಿನ್ನ ಬುದ್ದಿ, ಸಾಮರ್ಥ್ಯ, ಶಕ್ತಿ, ಧೈರ್ಯಗಳಿಗೆ ನಾನು ಶಿರಸಾವಹಿಸಿ ನಮಿಸುತ್ತೇನೆ. ಇಂದು ನೀನು ಮಾಡಿದ ಈ ಉಪಕಾರವನ್ನು ನಾನದೇಷ್ಟು ಜನ್ಮಗಳನೆತ್ತಿ ಬಂದರು ತೀರಿಸಲಾರದಂತದ್ದು. ಸಾಯುವವರೆಗೂ ನಿನ್ನ ಹೆಸರನ್ನು ನಾನು ನನ್ನ ಕುಟುಂಬವು ನೆನಪಿಸಿಕೊಂಡೆ ಉಣ್ಣುತ್ತೇವೆ.
ವಿಷಯ ಇದಲ್ಲವೀಗ. ವಿಷಯ ಹಣವನ್ನು ಹಂಚಿಕೊಂಡಾಗ ನಿನ್ನ ತಾಯಿಯ ಆಪರೇಷನ್ ಖರ್ಚಿಗೆ ಹಣವು ಕಡಿಮೆಯಾದದ್ದು, ಹಣವು ಕಡಿಮೆ ಬಂದಿದ್ದರಿಂದ ನಿನ್ನ ಮೊಗದಲ್ಲಿ ಸಂತಸದ ಬದಲು, ನೋವೆ ಮನೆ ಮಾಡಿಕೊಂಡಿದ್ದನ್ನು ನಾನು ಗಮನಿಸಿದೆ. ಅದನ್ನು ನೀನು ನನ್ನೆದುರು ನೀನು ತೋರ್ಪಡಿಸದೆ ಹೋದೆ, ಸ್ವಲ್ಪವು ನೊಂದುಕೊಳ್ಳದೆ ನನ್ನ ಆರೋಗ್ಯ, ಯೋಗಯೋಕ್ಷೇಮದ ಬಗ್ಗೆ ನೀನು ತೋರಿಸುತ್ತಿರುವ ಕಾಳಜಿಯನ್ನು ನೋಡಿ ನನ್ನ ಮನಸ್ಸು ತುಂಬಿ ಬಂದಿತು. ಹತ್ತು ಹೋರಿಗಳನ್ನು ಹೇರುವುದಕ್ಕಿಂತ ಒಂದು ಮುತ್ತನ್ನು ಹೇರು ಎಂದು ಹಿರಿಯರು ಹೇಳಿರುವ ಮಾತುಗಳು ಅದೇಷ್ಟು ಸತ್ಯವೆಂಬುದನ್ನು ನಿನ್ನ ನಡೆ ನುಡಿಗಳಿಂದ ನೀನು ನಿರೂಪಿಸಿಬಿಟ್ಟೆ.
ಮಿತ್ರ, ನೀನು ತಿಂಡಿಯನ್ನು ತರಲು ಹೋದಾಗ, ಇವೆಲ್ಲ ವಿಷಯಗಳು ನನ್ನನ್ನು ಕಾಡಿ ನನ್ನ ಮನಸ್ಸಿಗೆ ಯಾಕೊ ಸಮಾಧಾನವೇನಿಸಲಿಲ್ಲ, ನಿನ್ನ ಬ್ಯಾಗನ್ನು ತೆಗೆದುಕೊಂಡು ಅದರಲ್ಲಿ ನನ್ನದೊಂದು ಹತ್ತು ಸಾವಿರ ಹಣವನ್ನು ನಿನ್ನ ಭಾಗದಲ್ಲಿ ಸೇರಿಸಿದೆ, ಮತ್ತೆರಡು ನಿಮಿಷದ ನಂತರ ಏನೊ ಹೇಳಿಕೊಳ್ಳಲಾಗದಂತಹ ಸಂಕಟ, ಮತ್ತಿಪ್ಪತ್ತು ಸಾವಿರ ಹಣವನ್ನು ನಿನ್ನ ಭಾಗಕ್ಕೆ ಸೇರಿಸಿದೆ, ಕರಳು ತಡೆದುಕೊಳ್ಳಲಾಗಲಿಲ್ಲ, ಕೊನೆಗೆ ನನ್ನೆಲ್ಲ ಪಾಲಿನ ಹಣವನ್ನೆಲ್ಲ ನಿನ್ನ ಭಾಗಕ್ಕೆ ಸೇರಿಸುತ್ತಿರುವೆ. ಒಪ್ಪಿಸಿಕೊಂಡುಬಿಡು, ಈ ಹಣವೆನ್ನೆಲ್ಲಾ ನೋಡಿ ನೀನು ಭಾವಪರವಶವಾಗಿ ನನ್ನನ್ನು ಹುಡುಕಿಕೊಂಡು ಬಂದು ಹಣವನ್ನು ಕೊಡುವುದು ಬೇಡ. ಅದು ಅಸಾಧ್ಯದ ಮಾತು ಕೂಡಾ. ಹಾಗೆಂದೆ ನಿನಗೆ ಹೇಳದೆ ಹಣವನ್ನೆಲ್ಲ ನಿನ್ನ ಬ್ಯಾಗಿನಲ್ಲಿ ಇಡುತ್ತಿರುವೆ. ಎದುರಿಗೆ ಮಾತನಾಡಿ ಕೊಡೋಣವೆಂದರೆ ನೀನೆನಾದರು ಪಡೆದುಕೊಳ್ಳುವೇಯ್ಯಾ..? ಇಲ್ಲ ಅಸಾಧ್ಯದ ಮಾತು. ಯಾಕೆಂದರೆ ನಿನ್ನೊಳಗೆ ಅಂತಹದೊಂದು ನಿಷ್ಟೆಯಿದೆ.
ಯಾಕೊ ಏನೊ ಮನಸ್ಸು ಸಹೋದರ ಎಂದು ಕರೆಯಲು ಹಪಹಪಿಸುತ್ತಿದೆ, ಕರೆಯುತ್ತೇನೆ ತಪ್ಪೇಣಿಸದಿರು. ಹುಟ್ಟುವ ಮೊದಲೆ ತಾಯಿಯನ್ನು ಕಳೆದುಕೊಂಡ ಬೆಳೆದವನು ನಾನು. ನನ್ನ ತಂದೆ ನನ್ನ ಸುಖಕ್ಕಾಗಿ ತಮ್ಮ ಸುಖವನ್ನು ತ್ಯಾಗ ಮಾಡಿಕೊಂಡು ನನ್ನನ್ನು ಬೆಳೆಸಿದರು. ತಾಯಿಯ ಕೊರತೆ ಕಾಡದಂತೆ, ಹ್ಹ...ಹ್ಹ....ಹ್ಹ... ಕಾಡದಿರುವುದೆ ...?ನೀನೆ ಹೇಳು.? ಆಡಲಿಕ್ಕೆ ಹೋದಾಗ ಎಡವಿ ಬಿದ್ದು ಆದ ಗಾಯಕ್ಕೆ ಮದ್ದನ್ನು ಹಚ್ಚಲು, ದೀಪಾವಳಿ ಹಬ್ಬಕ್ಕೆ ಎಣ್ಣೆ ಸ್ನಾನ ಮಾಡಿಸಿ, ನೀಟಾಗಿ ಹಣೆಯಲ್ಲಿ ಕ್ರಾಫ್ ಒಂದನ್ನು ಎಳೆದು, ಹೊಸ ಹೊಸ ಬಟ್ಟೆಗಳನ್ನು ಹಾಕಿ, ದೇವರ ಮುಂದೆ ಕೈ ಮುಗಿದು ನಿಲ್ಲಿಸಿಕೊಂಡು ಮಂಗಳಾರತಿ ಕಲಿಸಿಕೊಡಲು, ನಾನು ಬದುಕಿನಲ್ಲಿ ಸೋತಾಗ, ಮಡಿಲಲ್ಲಿ ಮಲಗಿಸಿಕೊಂಡು ಬದುಕಿ ಸಾಧಿಸುವುದಕ್ಕೆ ಸಾವಿರಾರು ದಾರಿಗಳಿವೆ ಕಂದಾ, ನಿನ್ನಿಂದಾಗದೇನಿದೆ ಈ ಜಗದಲೆಂದು ಹುರಿದುಂಬಿಸಲು, ತನ್ನ ಮಗನಿಗೆ ತಕ್ಕಂತ ಹುಡುಗಿಯನ್ನು ಹುಡುಕಿ ನಾಲ್ಕು ಅಕ್ಷತೆ ಕಾಳುಗಳನ್ನು ತಲೆಯ ಮೇಲೆ ಹಾಕಿ, ಸಂಸಾರದ ಏಳು ಬೀಳುಗಳನ್ನು ತೂಗಿಸಿಕೊಂಡು ಹೋಗುವುದನ್ನು ಕಲಿಸಲಿಕ್ಕಾದರು ಅಮ್ಮಾ ಬೇಕಲ್ಲವೆ ಸಹೋದರಾ.
ನೋಡು ನನಗೇನೊ ಒಬ್ಬಳೆ ಮಗಳು ನಿಜ. ಅವಳ ಮೇಲೆ ಬೆಟ್ಟದಷ್ಟು ಪ್ರೀತಿಯಿದೆ, ನನ್ನಾಕೆ, ಮಗಳ ಮೇಲೆ ಜೀವವನ್ನೆ ಇಟ್ಟುಕೊಂಡಿದ್ದಾಳೆ. ಅವಳು ಸತ್ತರೆ....?????,
ಸತ್ತಾಳು... ಅವಳು ಸತ್ತರೆ ಸತ್ತಾಳು ನಾಲ್ಕು ದಿನದ ದುಃಖವಷ್ಟೆ, ನನ್ನಾಕೆ ನನ್ನನ್ನು ಬೈಯ್ಯುವುದು, ಮಗಳನ್ನು ಉಳಿಸಿಕೊಳ್ಳಲಾಗದ ಕೈಲಾಗದ ಗಂಡ, ತಂದೆ ಎಂದೆಲ್ಲ ನನ್ನನ್ನು ಜರಿಯಬಹುದು, ನನ್ನೊಂದಿಗೆ ಮಾತನಾಡುವುದನ್ನು ಬಿಡಬಹುದು, ಅವಳನ್ನು ಸಂತೈಸಿ ಮತ್ತೆ ಸರಿ ದಾರಿಎ ತರಲು ತಿಂಗಳು ವರುಷಗಳೆ ಕಳೆದು ಹೋದಾವು, ಹೋಗಲಿ ಬಿಡು. ಇಬ್ಬರ ಮನಸ್ಸುಗಳು ತಿಳಿಯಾಗಿ, ಮತ್ತೆ ನಾನು ನನ್ನಾಕೆಯ ಮಿಲನದ ನಂತರ ಮತ್ತೊಂದು ಜ್ಯೋತಿಯನ್ನು ಬೆಳಗಿಸಿಕೊಳ್ಳಬಲ್ಲೆವು ಮಿತ್ರ. ಆದರೆ ತಾಯಿ..? ತಾಯಿಯನ್ನು ಒಮ್ಮೆ ಕಳೆದುಕೊಂಡರೆ ಮರಳಿ ಪಡೆಯಲು ಸಾಧ್ಯವೇನೊ ಸಹೋದರ. ಇಂತಹ ಎಷ್ಟೊ ಲಕ್ಷ ಲಕ್ಷಗಳ ತುಂಬಿದ ಬ್ಯಾಗನ್ನು ತುಂಬಿಕೊಟ್ಟರು ತಾಯಿ ಎಂಬ ದೈವವನ್ನು ಮರಳಿ ತರಲಾದಿತೆ. ಇಲ್ಲವಲ್ಲ.. ಆಪರೇಷನ್ ಮಾಡಿದರೆ ಉಳಿಯಬಹುದು ಉಳಿಯದಲೆ ಇರಬಹುದು, ಆದರೂ ತಾಯಿಯನ್ನು ಉಳಿಸಿಕೊಳ್ಳಲು ನೀನು ನಡೆಸಿರುವ ಹೋರಾಟಕ್ಕೆ ಇದು ನನ್ನ ಚಿಕ್ಕ ಕಾಣಿಕೆ. ಈ ಹಣವನ್ನು ತೆಗೆದುಕೊಂಡು ತಾಯಿಯನ್ನು ಗುಣಪಡಿಸಿಕೊ, ನಾನು ಆ ದೇವರಲ್ಲಿ ಪ್ರಾರ್ಥಿಸುವೆ ನಿನ್ನ ಅಲ್ಲ ಅಲ್ಲ ನಮ್ಮಿಬ್ಬರ ತಾಯಿ ಬೇಗ ಗುಣಮುಖವಾಗಲೆಂದು. ಋಣವಿದ್ದರೆ, ತಾಯಿಯು ಆರೋಗ್ಯವಾಗಿ ಮನೆಯನ್ನು ಸೇರಿದರೆ ನಾನೆ ಆವಾಗ ಕುಟುಂಬ ಸಮೇತನಾಗಿ ಬಂದು ನಿನ್ನ ಮನೆಯಲ್ಲಿ ತಾಯಿಯ ಕೈಯಿಂದ ಒಂದೆರಡು ತುತ್ತನ್ನು ಉಂಡು ಹೋಗುತ್ತೇನೆ. ಹೇಗಿದ್ದರು ನೀನು ಕೊಟ್ಟಿರುವ ನಂ ನನ್ನ ಹತ್ತಿರ ಭದ್ರವಾಗಿಯೆ ಇದೆ. ಈಗ ನಾನು ಕಾಯುತ್ತಿರುವುದು ನೀನು ತರುವ ಅಮೃತದಂತಹ ತಿಂಡಿಯನ್ನು. ಅದನ್ನು ತಿಂದು ಹೊರಟು ಹೋಗಿಬಿಡುವೆ ಸಹೋದರ. ಪುನರ್ ಜನ್ಮವಂತ ಒಂದಿದ್ದರೆ ಒಂದೆ ತಾಯಿಯ ಹೊಟ್ಟೆಯಲ್ಲಿ ಅಣ್ಣತಮ್ಮಂದಿರಾಗಿ ಹುಟ್ಟುವ. ಇಂತಿ ನಿನ್ನ ಶ್ರೇಯೊಭಿಲಾಷಿ.
ರಮೇಶ
Sunday, October 14, 2018
ಭಾಗ ೧೪
Subscribe to:
Post Comments (Atom)
No comments:
Post a Comment