Tuesday, April 28, 2020

ಕಥೆ-

'ಲೆ ಹಂಸಿ..., ಹಂಸಿ' ಎರಡು ಸಾರಿ ಮೆತ್ತಗೆ ಕೂಗಿದಳು ಮನೆಯ ಆವರಣದಲ್ಲಿ ಕುಳಿತುಕೊಂಡಿದ್ದಂತಹ  ನೀಲವ್ವ, ಅವಳು ಬರಲಿಲ್ಲ ಈ ಸರ್ತಿ ಬೀದಿಗೂ ಕೇಳುವ ಹಾಗೆ ಚೀರಿ ಕರೆದಳು'ಲೇ ಹಂಸಿ' ಅಷ್ಟೇ ಈ ಸಲ ಮಾತ್ರ ಒಂದೆ ಕೂಗಿಗೆ ಹೊರಗಡೆ ಬಂದಿತ್ತು ಆಕೃತಿ ಆದರೆ ಇದು ಬೇರೆ. ಅಂದರೆ ಹಂಸಿಯ ಮಮ್ಮಿ. 'ಏನತ್ತೆ‌ ಹೀಗೆ ಮನೆಯ ಮುಂದೆ ಕುಳುತುಕೊಂಡು ಹೀಗೆ ಕೂಗಿದರೆ ಹೇಗೆ? ಅದು ಕರೆಯುವುದಾದರು ಹೇಗೆ ಅವಳ ಹೆಸರು ಹಂಸಿಕಾ ಮೊಮ್ಮಗಳ ಹೆಸರನ್ನು ಚೆನ್ನಾಗಿ ಕರೆಯೊದಿಕ್ಕೆ ಬರೋದಿಲ್ವಾ ನಿಮ್ಗೆ, ನಾಳೆ ಅವಳ ಪ್ರೆಂಡ್ಸೆಲ್ಲ ಹಾಗೆ ಕರೆಯುವುದಿಲ್ಲವಾ? ಹಂಸಿ ಅಂತಾ ಕರೆದರೆ ಅವಳಿಗೆ ಎಷ್ಟೊಂದು ನೋವಾಗುತ್ತದೆ ಗೊತ್ತಿಲ್ಲನ ನಿಮ್ಗ ಆಕಿ ಗೆಳ್ತೆರೆಲ್ಲ
ನಾಳೆ ಹಂಗಾ ಕರೆಕ ಹತ್ತಿದ್ರ ಆಕಿ ಅತ್ಗೊಂತ ಮನಿಗ ಬರ್ತಾಳ ಮತ್ತಕಿನ ಸಮಾಧಾನ ಮಾಡೋದ ಎಷ್ಟ ಕಷ್ಟ ಐತಂದ ನಿಮ್ಗೂ ಗೊತ್ತೈತಿ.
'ಅಲ್ವಾ, ನಾನು ಮೊದ್ಲಾಕ ಮೆತ್ಗ ಕರ್ದ್ನೆಲ್ಬೆ ಓ ಅನ್ಲಿಲ್ಲ ಅದ್ಕ ಚೂರ ಜೋರಾಗಿ ಕರ್ದ್ನಿ'
'ಏನ್ ಬೇಕಾಗಿತ್ತ ಹೇಳ್ರಿ ' ಸಿಡಿಮಿಡಿಯಲ್ಲಿ ಕೇಳಿದಳು ಸೊಸೆ ಪಲ್ಲವಿ.
'ಟೈಂ ಎಷ್ಟಾತವ?'
'ಐದ್ಸಲ ಆತೀಗ ಕೇಳಾಕ ಹತ್ತ್ ಏನ್ಮಾಡ್ತಿರಿ ಟೈಂ ತಗೊಂಡು, ಯಾಕ? ಯಾರಾರ ಬರೋರ ಅದಾರನು ಮತ್ತ ನಿಮ್ಮ ಊರಿಂದ' ಕೊಂಕು ನುಡಿಯಲ್ಲಿ ಕೇಳಿದಳು.
'ಹಂಗೆನಿಲ್ಲವ, ನಿಮ್ಮಾಂವ ಇಲ್ಲೆ ಎರ್ಡ ಹೆಜ್ಜಿ ಹೋಗಿ ಬರ್ತಿನಂತಂದ ಹೋದವ್ರು ಇನ್ನ ಬಂದಿಲ್ಲ ಅದ್ಕ ಕೇಳಿದ್ನವ'
'ಹ್ಞೂಂ... ಇವ್ರೊಬ್ರು ಮಾಡಿದ್ನ ತಿಂದ ಕುಂದ್ರಲಾರ್ದನ ಇಂತ ದೊಡ್ಡ ಊರಾಗ ಅಡ್ಯಾಡಕ ಹೋಗ್ಯಾರನು ಅದು ಈ ಮೆಡಿಸನ್ ಸಿಗಲಾರ್ದ ರೋಗ ಬಂದಂತ ಟೈಂನ್ಯಾಗ'
ಈ ಸಲ ಕಲ್ಲವ್ವನ ಎದಿ ಝಲ್ ಎಂದಿತ್ತು ರೋಗದ ಮಾತನ್ನು ಕೇಳಿ
'ಯವ್ವ, ಮಗ್ಗರ ಒಂಚೂರು ಪೋನ ಮಾಡ್ವಾ ಎಲ್ಲೆದನ ಅನ್ನೊದರ ಹುಡ್ಕೊಂಡ ಬರ್ತಾನ ಬರೊ ದಾರ್ಯಾಗ' 
'ಅಯ್ಯ.. ಅವ್ರಿಗೆ ಆಫೀಸ್ನಾನ ಕೆಲಸ ಮಾಡಿ ಮಾಡಿ ಸುಸ್ತಾಗಿ ಬರ್ತಿರ್ತಾರ ಅಂತದ್ರಾಗ ಈ ತಲಿನೋವೊಂದನ್ನು ಅವ್ರಗೆ ಪೋನ್ ಮಾಡಿ ಹೇಳ್ಲೆನು?, ಬರ್ತಾರ ತಗೋರಿ ಇನ್ನ ಟೈಮ್ ರ ಎಷ್ಟ ಆಗೈತಿ, ಊಟದ ಹೊತ್ತಿಗೆ ಬಂದ್ರ ಸಾಕಾಗೈತಿ '
ಕಲ್ಲವ್ವನ ಮರುಮಾತಿಗೂ ಕಾಯದೆ ಮನೆಯೊಳಗೆ ನಡೆದು ದಪ್ಪೆಂದು ಬಾಗಿಲನ್ನು ಹಾಕಿಕೊಂಡಳು. 
ಸೊಸೆಯ ಈ ನಡೆಯಿಂದ ಹೊಟ್ಟೆಯಲ್ಲಿ ಖಾರ ಕಲಿಸಿದಷ್ಟು ಸಂಕಟಗೊಂಡು, ಉಕ್ಕಿ ಬರುವ ದುಃಖವನ್ನು ನುಂಗಿಕೊಂಡು ಎದೆಯ ಮೇಲಿನ ರವಿಕೆಯಿಂದ ಕಂಚಿಯನ್ನು ತೆಗೆದು ಎರಡೆಲೆ ಅಂಬಾಡಿ ಅಡಕೆ, ಕಾಚು ಸುಣ್ಣವನ್ನು ಸವರಿ ಬಾಯಲ್ಲಿ ಹಾಕಿಕೊಂಡು ಕುಳಿತುಕೊಂಡಳು ಗೇಟನ್ನೆ ದಿಟ್ಟಿಸುತ್ತಾ.

ಮತ್ತರ್ದ ಗಂಟೆ ಕಳೆಯಿತು, ಎಂದಿನಂತೆ ಬರುವ ಮಗನು ಇವತ್ತು ಸಮಯಕ್ಕೆ ಸರಿಯಾಗಿ ಬಂದಿರಲಿಲ್ಲ, ಬಾಯೊಳಗೆ ಹಾಕಿಕೊಂಡಿದ್ದಂತಹ ಎಲೆ ಅಡಿಕೆ ಖಾಲಿಯಾಗಿತ್ತು, ಚಡಪಡಿಕೆ ಮತ್ತಷ್ಟು ಶುರುವಾಗಿತ್ತು. ಈ ಸಲ ಮಾತ್ರ ತಡೆದುಕೊಳ್ಳಲಾಗಲಿಲ್ಲ ನಿಧಾನವಾಗಿ ನೆಲದ ಮೇಲೆ ಕೈಯೂರಿ ಎದ್ದು ಮನೆಯೊಳಗೆ ಹೋದಳು. ಪಲ್ಲವಿ ಅಡುಗೆ ಮನೆಯಲ್ಲಿ ಏನೊ ತಯಾರಿಯನ್ನು ಮಾಡುತ್ತಿದ್ದಳು ಬಹಳಷ್ಟ ಹಡಾಹುಡಿಯಿಂದ ಕೂಡಿದ್ದಳು. ಮೊಮ್ಮಗಳು ಹನ್ಸೀಕಾ ಟಿ.ವಿ.ಯೊಳಗಿನ ಕಾರ್ಟೋನ್ ನನ್ನು ನೋಡುತ್ತಾ ಕುಳಿತುಕೊಂಡಿದ್ದಳು. ಅಡುಗೆ ಮನೆಯ ಬಾಗಿಲ ಹತ್ತಿರ ಹೋಗಿ 'ಯವ್ವಾ,?' ಎಂದು ಕೂಗಿದಳು ಮೆತ್ತಗಿನ ಧನಿಯಲ್ಲಿ.
ಪಲ್ಲವಿಗೆ ಅತ್ತೆ ಕೂಗಿದ್ದು ಕೇಳಿಸದಾಗಿತ್ತು, ಕೆಲಸದ ಧಾವಂತದಲ್ಲಿ. ಈ ಸಲ ಮತ್ತೊಮ್ಮೆ ಚೂರು ಜೋರಾಗಿ ಕೂಗಿದಳು. ಅತ್ತೆ ಕರೆದದ್ದಕ್ಕೆ ಸಿಡಿಮಿಡಿಗೊಂಡ ಪಲ್ಲವಿ
'ಏನ್ರಿ ಅತ್ತೇರ? ಭಾಳ ಕಾಟ ಆತಲ್ಲ ನಿಮ್ದು, ಒಂದಿಷ್ಟ ನೆಮ್ದಿಯಾಗಿ ಕೆಲ್ಸ ಮಾಡಾಕನು ಬಿಡೊದಿಲ್ಲ ನೋಡ ನೀವು'
ಏನೊ ಹೇಳಲು ಮುಂದಾದ ಕಲ್ಲವ್ವನಿಗೆ ಮನೆಯ ಕಂಪೌಂಡಿನ ಗೇಟು ತೆರೆದ ಸದ್ದು ಕಿವಿಗೆ ಬಿದ್ದಿತು. ಒಂದೆ ಉಸಿರಿನಲ್ಲಿ ಮನೆಯಿಂದಾಚೆ ಅವಸರಿಸಿ ಹೊರ ಬಂದಿದ್ದಳು.
ಮಗ ಶ್ರೀಕಾಂತ ಗೇಟನ್ನು ತೆಗೆದು ಬೈಕನ್ನು ಕಂಪೌಂಡಿನ ಒಳಗಡೆ ಒತ್ತಿಕೊಂಡು ಬರುತ್ತಿದ್ದನು. ಮಗ ಬಂದಿದ್ದನ್ನು ಕಂಡು ಸ್ವಲ್ಪ ಧ್ಯರ್ಯ ಬಂದಂತಾಗಿ ಅವನ ಹತ್ತಿರ ಹೋದಳು ಕಲ್ಲವ್ವ.
ಕಲ್ಲವ್ವಳ ಹಿಂದೆಯೆ ಸೊಸೆ ಪಲ್ಲವಿನು ಬಂದಿದ್ದಳು. ಅತ್ತೆ ಮಾತನಾಡುವ ಮುನ್ನವೆ ಇವಳು ಶುರುವಿಟ್ಟುಕೊಂಡಳು. 'ಏನ್ರೀ ಎಷ್ಟ ಲೇಟಾಗಿ ಬಂದ್ರೆಲ್ಲ ಇವತ್ತ, ನಾಳೆ ಏನೈತಂದ ಗೊತ್ತಿಲ್ಲನ ನಿಮ್ಗ ಇಷ್ಟೊತ್ತಾಗಿ ಬಂದ್ರ ಕೆಲ್ಸ ಹ್ಯಾಂಗ ಮಾಡೋದ, ಕಿರಾಣಿ ಅಂಗಡಿಗೆ ಹೋಗಿ ಸಾಮಾನೆಲ್ಲ ತರೋದ ಯಾವಾಗ, ನಾ ರೆಡಿ ಮಾಡ್ಕೊಳ್ಳದ' ಅಂತವಳ ಬಾಯೊಳಗಿನ ಮಾತನ್ನು ಶ್ರೀಕಾಂತ ಮಾತು ತುಂಡರಿಸಿಬಿಟ್ಟಿತು.
'ಸಾಕು ಸುಮ್ನಿರ್ತಿಯನು ಒಂದಿಟು. ಕಣ್ಗೆ ಕಾಣ್ಸುವಲ್ದ ನಿಂಗ ಗಾಡಿ ಗಾಲಿ ಪಂಕ್ಚರ್ ಆಗಿದ್ದು, ಅರ್ಧ ದಾರಿಲಿಂದ ಹೆಣಾ‌ನ ಹೊತ್ಗಂಡ ಬಂದಂಗ ಒತ್ಗೊಂಡ ಬಂದೀನಿ, ದಾರ್ಯ್ಯಾಗಿದ್ದ ಎರ್ಡ ಪಂಕ್ಚರ್ ಅಂಗಡಿನು ಬಾಗ್ಲಾ ಹಾಕ್ಯವು ಈ ಸೋಂಕಿನ ಕಾಟಕ್ಕ' ಸಿಡುಕಿಲೆ ನುಡಿದನು. ಗಾಡಿಯನ್ನು ತಳ್ಳಿಕೊಂಡು ಬಂದಿದ್ದರಿಂದ ಮೈಯೆಲ್ಲಾ ಬೆವತು ಹಾಕಿಕೊಂಡ ಶರ್ಟ್ ಬೆವರಿನಲ್ಲಿಯೆ ಮಿಂದು ಹೋಗಿತ್ತು. 
'ನಿಮ್ಮಪ್ಪ ಕೊಡೊದ ಕೊಡ್ಸಿದ ಟೂಬಲೆಸ್ ಟೈಯರ್ ಇರೋ ಗಾಡಿನರ ಕೊಡ್ಸದ ಬಿಟ್ಕೊಟ್ಟು ಇಂಥ ಡಗ್ಗಾ ಗಾಡಿ ಕೊಡ್ಸ್ಯಾನ'
'ಹ್ಞೂಂ.... ಕೊಟ್ಟಿದ್ದನ್ನ ಚನ್ನಾಗಿ ಇಟ್ಗೊಳ್ಳಾಕ ಬರೋದಿಲ್ಲ ಮತ್ತ್ ಬ್ಯಾರೆ ಗಾಡಿ ಕೊಡ್ಸಬೇಕಿತ್ತನ'
ಇಬ್ಬರ ನಡುವೆ ಕಲ್ಲವ ಬಾಯಿ ಹಾಕಿ 'ಯವ್ವಾ ಮನಿ ಅಂಗಳದಾಗ ನಿಂತ್ಗೊಂಡ ಬಾಯಿ ಮಾಡಾಕ ಹೋಗಬ್ಯಾಡ್ರಿ, ಅಕ್ಕಪಕ್ಕದವ್ರ ನೋಡ್ತಾರ' ಅಂದಾಗ ಇಬ್ಬರ ಬಾಯಿಗೂ ಬೀಗ ಬಿದ್ದಿತ್ತು. 
ಸ್ನಾನ ಮಾಡಿ, ಪಲ್ಲವಿ ಮಾಡಿಕೊಟ್ಟ ಚಹಾವನ್ನು ಕುಡಿಯುತ್ತ ಟಿ.ವಿ‌ ಮುಂದೆ ಕುಳಿತುಕೊಂಡನು ಶ್ರೀಕಾಂತ.
ಮೆಲ್ಲಗೆ ಮಗನ ಹತ್ತಿರ ಬಂದು ಕುಳಿತುಕೊಂಡ ಕಲ್ಲವ್ವ 'ಶ್ರೀ...'
'ಹ್ಞೂಂ'
'ಟೈಮು ಏಟಾತ್ಪಾ?'
ಕೈಯಲ್ಲಿದ್ದ ವಾಚನ್ನು ನೋಡುತ್ತಾ, 'ಏಳು ಚಿಲ್ರ ಆಗೈತಿ'
'ಹೌದಾ!!, ಇನ್ನೇನು ಅವ್ರ ಉಂಡು ಮಲ್ಗೊ ಹೊತ್ತು, ಶ್ರೀ..
'ಮತ್ತೇನಬೆ ನಿಂದು'
'ನಿಮ್ಮಪ್ಪ ಯಾಡ ಹೆಜ್ಜಿ ಹಿಂಗ ಹೋಗ್ ಬರ್ತಿನಂತಂದ ಹೋದೊರು ಇನ್ನ ಬಂದಿಲ್ಲ, ಹಾಂಗ ತಟಗ ಒಂದಿಟು ಹೊರಗ ಹಣಕಿ ಹಾಕ್ಕೊಂಡ ಬರ್ತಿಯೇನು?'
'ಏನು?, ಇಂಥಾ ಹೊತ್ನ್ಯಾಗ ಹೊರ್ಗ ಅಡ್ಯಾಡಕ ಹೋಗ್ಯಾನ, ಬುದ್ದಿಗಿದ್ದಿ ನೆಟ್ಗ ಐತಿಲ್ಲೊ ಅತಂದು. ನಾವ್ ಪಾಸ್ ಇಲ್ದ ಅಡ್ಯಾಡಿದ್ರ ಮುಕ್ಳಿ ಮೇಲೆ ಬಾರಿಸಿ ಕಳಸ್ತಾರ. ಅದು ಒತ್ತೊಟ್ಟಿಗಿರ್ಲಿ ಆ ಹಾಳ ಜಡ್ಡನ್ನ ತಾನು ಅಂಟಿಸ್ಗೊಂಡ ಬಂದು ನಮ್ಗು ತಂದು ಹಚ್ಚಿದ್ರ ಏನ ಮಾಡೊದು. ತಿಂದ ಒಂದ ಮೂಲ್ಯಾಗ ಸುಮ್ಕ ಕುಂದ್ರಾಕ ಏನಾಗಿತ್ತಂತ ಅತ್ಗ, ಇನ್ನೊಂದ ಅರ್ಧ ತಾಸ ನೊಡುಣ ತಡಿ, ಬಂದ್ರ ಸರಿ ಇಲ್ದಿದ್ರ ಪೋಲಿಸ್  ಕಂಪ್ಲೇಟ್ ಕೊಡೊಣಂತ. ಇನ್ನ ಏನ ಊಟದ ಟೈಂ ಆಗಿಲ್ಲಲ್ಲ ಇನ್ನ' ಎಂದು ಬಿರುಸಾಗಿಯೆ ಮಾತನಾಡಿದನು ಶ್ರೀ.
ಅವನಾಡಿದ ಮಾತುಗಳನ್ನು ಕೇಳಿ, ಕಲ್ಲಿನ ಮೇಲೆ ಈರುಳ್ಳಿಯನ್ನು ಇಟ್ಟು ಅಂಗೈಯಿಂದ ಜಜ್ಜಿದಾಗ ಹೇಗೆ ಅಪ್ಪಚ್ಚಿಯಾಗುವುದೊ, ಹಾಗೆ ಅವಳೆದೆಯ ಮೇಲೆ ಮಗನ ಮಾತುಗಳು ಗುದ್ದಿದವು. ಹೊಟ್ಟೆಯೊಳಗಿನ ಸಂಕಟವನ್ನು ಹತ್ತಿಕ್ಕಿಕೊಂಡು ಮತ್ತೆ ಮನೆಯ ಅಂಗಳಕ್ಕೆ ಬಂದು ಕುಳಿತುಬಿಟ್ಟಳು ಕಳೆದ ದಿನಗಳನ್ನು ಮೆಲಕು ಹಾಕುತ್ತ.
' ಹನ್ನೆರಡು ಲಕ್ಷ! ಅಷ್ಟಕೊಂಡ ರೊಕ್ಕಾ ನಮ್ಕಡೆ ಎಲ್ಲ ಅದಾವೊ ಯಪ್ಪ, ಇರೋದೆರ್ಡ ಎಕ್ರೆ, ಅದ್ರಾಗಿಂದ ಬಂದ ರೊಕ್ಕದಾಗಿಂದ ನಿನ್ನ ಇಷ್ಟ ಒದ್ಸಿದ್ದ ದೊಡ್ದದಾದದ್ದು, ಅಂತಾದ್ರಾಗ ನೌಕ್ರಿ ಸೇರಾಕ ಅಷ್ಟ ರೋಕ್ಕಾ ಕೇಳಿದ್ರ ನಾನೆಲ್ಲಿಂದ ತರ್ಲೆಪ್ಪ' ಸಣ್ಣಪ್ಪನು ಭಯಮಿಶ್ರಿತ ಧನಿಯಲ್ಲಿ ಕೇಳಿದನು.
'ಅದೆಲ್ಲ ನಂಗ ಗೊತ್ತಿಲ್ಲ ನೋಡ್ಪಾ, ನಾನೀಗ ವ್ಯವಹಾರ್ನ ಕುದ್ರಿಸಿ ಬಂದೀನಿ. ರೊಕ್ಕ ಹೊಂದಿಸಿ ಕೊಡಬೇಕಷ್ಟೆ.‌ ಅದೇನ ಸಣ್ಣ ಪೋಸ್ಟ್ ಅಲ್ಲದು ಜಗ್ ಆಗಿ ಇನಕಂ ಬರೊವಂತದ ಐತಿ.
ಆ ಏಜೆಂಟ್ ನಡುಮನಿ ಸಂಗಯ್ಯನ ಹತ್ರ ಮಾತಾಡೀನಿ ಎರ್ಡ ಎಕ್ರೆಕ ಹತ್ತ  ಲಕ್ಷ ಕೊಡ್ಸತಾನಂತ, ಮತ್ತ ಈ ಮನಿನೊಂದ ಮಾರಿದ್ರ ಅದೊಂದ ನಾಕ ಲಕ್ಷ ಬರ್ತೈತಿ, ಹನ್ನೆರ್ಡ ಅಲ್ಲಿ ಕೊಟ್ಟ, ಇನ್ನೆರಡ ನಿಂ ಹಂತ್ಯಾಕ ಇಟ್ಗೊಂಡಿರಿ, ಇಲ್ಲಾ ಬ್ಯಾಂಕನ್ಯಾಗ ಎಫ್ ಡಿ ನರ ಮಾಡಿಡ್ರಿ ಬಡ್ಡಿ ರೊಕ್ಕ ಬರ್ತದ. ನಾನು ನೌಕ್ರೀ ಸೇರಿದ ಯಾಡ ವರ್ಷದಾಗ ಇದ್ರಪ್ಪನಂತಾದ ಹೊಲ್ಮನಿ ಮಾಡಿ ಕೊಡ್ತೇನ ಬೇಕಿದ್ರ.'
'ಆಯ್ತಪಾ ವಿಚಾರ ಮಾಡಿ ನೊಡೋಣ ತಗೋ '
'ವಿಚಾರ ಅಲ್ಲ, ಇದಾ ಕಡೆದು ' ಎಂದು ಕಡ್ಡಿ ತುಂಡ ಮಾಡಿ ಹೇಳಿದ ಹಾಗೆ ಹೇಳಿ ಹೊರಗೆ ಹೊರಟು ಹೋದನು ಶ್ರೀ.
ಕಲ್ಲವ್ವ ಗಂಡನ ಹತ್ತಿರ ಬಂದು ' ಏನ್ರೀ ಆಸ್ತಿ ಅಳಿಯೊ‌ ಮಾತ್ ಮಾತಾಡ್ತಾನಲ್ರೀ ಇಂವಾ' ಆತಂಕದಿಂದಲೆ ಕೇಳಿದಳು 
'ಒಬ್ನ ಮಗಾ ಅಂತಂದ ನೆತ್ತಿ ಮ್ಯಾಲಿಟ್ಟ ಬೆಳ್ಸಿದ ಪರಿಣಾಮ ಇದ ಕಲ್ಲಿ, ಒಂದೀನಾನರ ಹೊಲ್ಮನಿ ಕೆಲ್ಸಕ್ಕ ತಬ್ಬಿದ್ರ ಅರವಾಗ್ತಿತ್ತು ರೊಕ್ಕದ ಬೆಲಿ. ಶಾಲ್ಯಾಗ ಶ್ಯಾಣೆ ಅದಾನ ಶ್ಯಾಣೆ ಅದಾನ ಅನ್ಕೊಂಡು ಹೊಟ್ಟಿಬಟ್ಟಿ ಕಟ್ಟಿ ಇಲ್ಲಿ ತನ್ಕ ಒದ್ಸಕೊಂತ ಬಂದಿವೆಲ್ಲ ಅದು ನಮ್ ತಪ್ಪು. ಹೋಗ್ಲಿಬಿಡು ಮುಂದ್ಕೆಲ್ಲ ಅವ್ನ ಹೆಸ್ರಿಗೆ ಹೋಗುವಲ್ಲ ಎಲ್ಲಾ, ಅವಂಗ ಅದ್ರಾಗ ಆಸಕ್ತಿ ಇಲ್ಲ ಅಂದ ಮ್ಯಾಲ ನಾವೇನ ಮಾಡೊದೈತ ಹೇಳು?' ನೋವಿನ ಧನಿಯಲ್ಲಿ ಹೇಳಿದನು.
'ತಲೆತಲಾಂತರಗಳಿಂದ ಬಾಳಿ ಬದ್ಕಿದಂತ ಮನಿ ಇದು, ನಮ್ಮವ್ವ ಹೇಳ್ತಿದ್ಲು ಆಕಿ ಈಟ ಇರಾಕಿಂತ ಈ ಮನಿ ನೋಡ್ಯಾಳಂತ ಆವಾಗ ಹ್ಯಾಂಗ ಇದ್ವೊ ಈಗೂ ಅಷ್ಟ ಗಟ್ಟಿಮುಟ್ಟಿ ಅದಾವು ಮನಿ ತೊಲಿಗಳು ಅಂತಂದ್ಲು ನಮ್ಮವ್ವ.'
'ಕಲ್ಲಿ ಸಾವ್ರ ವರ್ಷ ಬಾಳಿದ್ರೇನು ಸಾಯೋದ ತಪ್ಪತೈತನು? ನೋಡಿದಿಲ್ಲ ನಂ ಗಡಾದ ಮ್ಯಾಲಿನ ಶಿವಾಜಿ ಮಹಾರಾಜ್ರ ಕಟ್ಸಿದ ಉಡೇದ ತೊಟ್ಲ, ಅಕ್ಕ-ತಂಗಿ ಹೊಂಡ ಹ್ಯಾಂಗ ಪಾಳ ಬಿದ್ದಾವು. ಅಂತಂಥ ಕೋಟಿ ಕಟ್ಟದವ್ರ ಅಳ್ದ ಹೋಗ್ಯಾರ ಇನ್ನ ನಮ್ದು ಯಾವ ಲೆಕ್ಕ'
'ಮತ್ತ್ ಹೊಟ್ಟಿಬಟ್ಟಿಗೆ ಏನ್ ಮಾಡೊದ ರಿ, ಇದ್ದ ಗಂಗಾಳ್ದನ ಅನ್ನ ಚೆಲ್ಲಿ ಮಂದಿ ಮನಿಗೆ ಭಿಕ್ಷೆಕ ಹೋಗೊನು?'
'ಹೋಗ್ಬೇಕು ಕಲ್ಲಿ, ಹೊಗ್ಬೇಕು. ಮಗನ ಸುಖಕ್ಕ ನಾವ್ ಎಲ್ಲಾ ತಯಾರ್ ಆಗಿರ್ಬೇಕು. ಏನು? ಇವತ್ತ್ ನಂ ಹೊಲ್ದಾಗ ದುಡ್ದದ್ದನ್ನು ನಾಳೆ ಇನ್ನೊಬ್ರ ಹೊಲ್ದಾಗ ದುಡಿಯಾಕ ಹೊಕ್ಕಿವಿ ಅಷ್ಟ. ಅಷ್ಟಕ್ಕೂ ನಾಳೆ ಶ್ರೀಯಪ್ಪಂದು ನೌಕ್ರಿ ಆತಂದ್ರ ಕುಂದ್ರಿಸಿ ಕೂಳ ಹಾಕೊದಿಲ್ಲನು'
'ಆದ್ರೂ ಯಾಕಾ ಇದು ನಂಗ ಅರಿ ಕಂಡ ಬರುವಲ್ದ ಆಗೈತಿ ನೋಡ್ರಿ'
'ಸರಿಯೇನು, ಬೆಸಯೇನು ಹುಡ್ಗ ಆಗ್ಲೆ ನಿರ್ಧಾರ ಮಾಡ್ಕೊಂಡ ಬಿಟ್ಟಾನ. ದೇವ್ರ ಮಾಡ್ದಂಗ ಆಕ್ಕತೆ ನಡಿ ಅತ್ಲಾಗ' ಎನ್ನುತ್ತಾ ಎದ್ದು ನಿಂತನು.
'ಮತ್ತೆಲ್ಲಿಗೆ ಹೊಂಟ್ರಿ?'
'ಏಜೆಂಟ ಸಂಗಯ್ಯನ ಮನಿಕಡೆಗೆ'
ಕಲ್ಲಿಯ ಮರು ಮಾತಿಗೂ ಕಾಯದೆ ಹೊರ ನಡೆದುಬಿಟ್ಟನು ಸಣ್ಣಪ್ಪ.

Sunday, April 26, 2020

ನಿರ್ಭಾವುಕತೆಗಳು

ಬೆಂಕಿಗೆ ಸಿಕ್ಕ
ಕಲ್ಲು ಬಂಡೆಯು
ಸಿಡಿದು
ಹೋಗುತ್ತದೆ
ಪಾಗಲ್!!
ಹೂವಿನಂತವಳೆಂದು
ನೀನೆ.... ಹೇಳುತ್ತಿದ್ದೆಯಲ್ಲ!
ಹೇಳು, ತಾಳಿಕೊಳ್ಳಲಿ ಹೇಗೀಗ
ವಿರಹದ ಬಿಸಿಯ!
ಅದುಮಿಟ್ಟುಕೊಳ್ಳುವುದಾದರು
ಎಲ್ಲಿ? ಅಲೆಗಲೆಗಳಂತ ಉಕ್ಕಿ ಬರುತಿರುವ
ಬಯಕೆಗಳ ಹಸಿಯ!
ಬೇಡ...ಬೇಡವೆಂದರು ತನುವಿದು
ನೆನೆದು ನಿನ್ನ ಬಿಸಿ ಸ್ಪರ್ಶದ ಸವಿಯ
ಏರಿಸಿಕೊಳ್ಳುತಿದೆ ಅಮಲಿನ ನಶೆಯ
ಕೇಳಿಸಿದೇನು ನಿನಗೆ ನನ್ನೊಳಗಿನ
ಒಂಟಿ ಹಕ್ಕಿಯ ನೋವಿನ ಮಿಡಿತ

Saturday, April 25, 2020

ಚುಟುಕು

ಕನಸನ್ನೆ...
ಅವಳ ಮಲ್ಲಿಗೆಯ 
ನಗುವಿಗೆ ಸೋತ
ಮನವಿದು.. ಬೇಡುತಿದೆ
ಮರಳಿ ಮರಳಿ ಅವಳ
ನಗುವನ್ನೆ..

ನಗುವಿಗೆ ಸೋತ
ಮನಸ್ಸಿದು.. ತಾರೆಗಳ
ರಾತ್ರಿಗಳಿಗೂ.. ಬೇಡುತಿದೆ
ಬರೀ.. ಅವಳ
ಕನಸನ್ನೆ..

ವಿರಹದ ಶಾಹಿ 

ವಿರಹದ ಬಿಸಿ ಶಾಯಿಗೆ
ಎದೆಯ ಬಿಳಿ ಹಾಳೆಯು
ಉರಿಯುತಿವುದು...!!!

ಬರೆಯಲಿ ಹೇಗೆ ?
ಪದಗಳ... 
ಎದೆಹಾಳೆಗೆ
ಸಹಿಸಿಕೊಳ್ಳಲಾರದಷ್ಟು
ನೋವಿರುವಾಗ...!!!

ಮೊದಲೆ

ನಿನ್ನ ಮನದ ಮೂಲೆಯಲಿ
ನಮ್ಮೊಲವಿನ ಕುರುಹುವಾಗಿ
ಒಂದೆ ಒಂದು ಹಣ್ಣೇಲೆಯಷ್ಟು
ನೆನಪಿದ್ದರೂ.... 
ಬಂದು ಬಿಡು ಗೆಳತಿ
ನಿನ್ನ ಪ್ರೀತಿಯ ಚಿಗುರು
ವಿರಹಿಗಳ ಹಾದಿಯ ಗೊಬ್ಬರ
ವಾಗುವ ಮೊದಲೆ..

ಹಂಬಲ ಚಪಲ
ಸುರಿವ ಮಳೆಯ
ಕೊನೆಯ ಹನಿಯಾಗಿ
ನಿನ್ನ ಚುಂಬಿಸೊ..
ಹಂಬಲ

ಮೊದಲ ದುಂಬಿಯಾಗಿ
ನಿನ್ನೆದೆಯ ಮಧುವ
ಸವಿಯಬೇಕೆನ್ನುವ
ಚಪಲ..

ಮುತ್ತಿನ ಹನಿಗಳು

ಗೆಳತಿ
ನಿನ್ನ ಮಾತಿಲ್ಲದ ಮೌನಕೆ
ಮುಗಿಲ ಮೋಡವದು
ಹೆಪ್ಪಾಗಿ ಕಪ್ಪಾಗಿ ಮಲಗಿತ್ತದು
ನಿನ್ನಷ್ಟೇ ಮುನಿಸಿನಿಂದಲೆ..
ಈಗ ನೋಡು ನಿನ್ನೀ.. ಬೆಳ್ಳಿ
ಬೆಳದಿಂಗಳ ನಗುವಿಗೆ...
ಮೋಡವದು ಕರಗಿ... ನಾಚಿ
ನೀರಾಗಿ ನಮ್ಮ ಪ್ರೀತಿಯ
ಅಂಗಳಕೆ ಮುತ್ತಿನ ಹನಿಗಳನೆ....
ಸುರಿಸುತಿದೆ..

ನನ್ನ ಬಿಡುತಿಲ್ಲ

ಹೊತ್ತುಗಳು.... ಸರಿದವು
ಮುತ್ತುಗಳು.. ನೆನಪಾದವು
ಬಿಡುವ ಉಸಿರುಸಿರು... ಬಿಸಿಯಾಯ್ತು..
ನಿನ್ನ ನೆನೆ ನೆನೆದು.. 
ಆದರೂ ನೀ..
ಬರಲಿಲ್ಲ...
ನಿನ್ನ ನೆನಪುಗಳು ಮಾತ್ರ 
ನನ್ನ ಬಿಡುತಿಲ್ಲ..

ಯೌವ್ವನದ ಹೊಳೆ

ಮತ್ತೆ.. ಮತ್ತೆ...
ನಿನ್ನ ಬಿಸಿಯಪ್ಪುಗೆಯ
ಅಪ್ಪುಗೆಗೆ ಕಾಯುತಿರುವ
ಈ ತೋಳುಗಳಿಗೆ ತಬ್ಬುಗೆಯ
ಹಸಿವನು ಹೆಚ್ಚಿಸದಿರು..
ನಿನ್ನ ತನುವಿನಪ್ಪುಗೆಗೆ 
ಕಾದು.. ಕಾದು... ಕಾದ
ದೇಹವಿದು ಉರಿದು ಹೋಗುವ
ಮೊದಲೆ.. ಬಂದು ಸುರಿಸಿಬಿಡು
ನಿನ್ನ ಅಧರದ ತಂಪಿನ ಮಳೆ
ನಿನ್ನ ಮುತ್ತಿನ ಮಳೆಯಲಿ
ಹರಿದು ಹೋಗಲಿ.... ಈ
ಯೌವ್ವನದ ಹೊಳೆ

ಕಥಾ೩

ಭಾಗ ೩

ಇದಾಗಿ ಎರಡ್ಮೂರು ತಿಂಗಳುಗಳೆ ಕಳೆದು ಹೋಗಿದ್ದವು, ಮತ್ತೆ ಈ ವಿಚಾರವಾಗಿ ನಾನು ಆ ಕ್ಲಿನರ್ ನ ಭೇಟಿಯಾಗಿ ಮಾತು ಆಡಿರಲಿಲ್ಲ. ಅವತ್ತು ಸಂಜೆ ಐದು.. ಐದುವರೆ ಆಗಿರಬಹುದು.. ನಾನು ಏನೊ ಸಾಮಾನುಗಳನ್ನು ಅಂಗಡಿಯಲ್ಲಿ ಹೊಂದಿಸುತ್ತಿದ್ದೆ ಅಂಗಡಿಯಲ್ಲಿ ಒಂದೆರಡು ಗಿರಾಕಿಗಳಿಗೆ ನನ್ನ ತಮ್ಮನು  ಮೊಬೈಲ್ ಕರೆನ್ಸಿಯನ್ನು ಹಾಕುತ್ತಿದ್ದಾಗ ಇಬ್ಬರು ಒಳಗೆ ಬಂದರು, ಗಂಡಸು ' ಮಾಲಕ್ರ ಈ ಏರಟೆಲ್ ನಂಬರಿಗೆ ಒಂದೈವತ್ತು ರೂಪಾಯಿ ರೊಕ್ಕ ಹಾಕ್ರೀ' ಎನ್ನುತ್ತಾ ನನ್ನ ತಮ್ಮನ ಜೊತೆ ಮಾತನಾಡುತ್ತಾ ನಿಂತನು, ಅವನ ಹಿಂದೆ ಬಂದದ್ದು ಹೆಣ್ಮಗಳು ನನ್ನ ಹಿಂದೆ ನಿಂತುಕೊಂಡಳು, ಅವಳ ಕೈ ಬಳೆಗಳ ಸದ್ದು, ದೇಹಕ್ಕೆ ಹಾಕಿಕೊಂಡ ಸೆಂಟಿನ ವಾಸನೆ, ಝಗಮಗಿಸುವಂತಹ ಸೀರೆ, ಮುಡಿತುಂಬ ಮಲ್ಲಿಗೆ ಕನಕಾಂಬರ ಸಾಲದೆಂಬಂತೆ ಎರಡು ತುಂಬು ಅರಳಿದ ಗುಲಾಬಿಗಳು, ಹಿಂದಿನಿಂದಲೆ ನೋಡಿ‌, ಸೊಸಿ ಮಾವನ ಜಾತ್ರಿ ಜೋರ ಮಾಡ್ಸಿರಬೇಕ ಅಂತ ಮನಸ್ಸಿನಲ್ಲಿಯೆ ನಗುತ್ತಾ ಮತ್ತೆ ಕೆಲಸದತ್ತ ಗಮನವನ್ನು ಹರಿಸಿದೆ, ಆಗ ಅವಳು ಏನೊ ಒಂದು ಸಾಮಾನಿಗಾಗಿ ಅವನನ್ನು ಪೀಡಿಸತೊಡಗಿದಳು, ' ನಂಗ ಬೇಕಂದ್ರ ಬೇಕ ನೋಡಿಗ ಏನ. ಆಗ್ಲಿ, ಆರ ಹೋಗಿ ಮೂರರ ಆಗ್ಲಿ, ಒಂಬತ್ತರ ಆಗ್ಲಿ ನಂಗ ಬೇಕಂದ್ರ ಬೇಕ,' ಎನ್ನುತ್ತಾ ಹಠ ಹಿಡಿದಳು. ನನಗಾಗ ಈ ಧ್ವನಿಯನ್ನು ಎಲ್ಲೊ‌ ಕೇಳಿದ ಹಾಗಿದೆಯಲ್ಲ, ಯಾಕೊ‌ ಬಹಳ ಸ್ವಲ್ಪ ಪರಿಚಿತ ಧ್ವನಿ ಇದ್ದ ಹಾಗಿದೆ ಒಮ್ಮೆ ಮುಖವನ್ನು ನೋಡಲೆ ಬೇಕೆಂದುಕೊಂಡು ಅವಳ ಎದುರಿಗೆ ಹೋಗಿ ನಿಂತಾಗ ಅಕ್ಷರಶಃ ಸಿಡಿಲು ಬಡಿದಂತಹ ಅನುಭವ ನನಗೆ, ಅದೆ.. ಅವಳೆ ಅಂದು ಹೊಟ್ಟೆಗೆ ಹಿಟ್ಟಿಲ್ಲದೆ, ಊರಿಗೆ ಹೋಗಲು ಹಣವಿಲ್ಲದೆ ತಾಳಿ ಮಾರಿ ಊರು ಸೇರಲು ಹವಣಿಸುತ್ತಿದ್ದ ಹೆಣ್ಣು ಇವಳೇನಾ...? ಅಬ್ಬಬ್ಬಾ..!!! ಅದೆಂತಹ ಸಂದರ್ಭ ನನಗೊದಗಿ ಬಂದದ್ದು, ಎಣ್ಣೆ ಕಾಣದ ಕೂದಲಿಂದು ಒಪ್ಪವಾಗಿ ಬಾಚಿ, ಮಾರುದ್ದ ಜಡೆಯ ಕಟ್ಟಿಕೊಂಡು ಮುಡಿತುಂಬ ಘಮಘಮಿಸುವ ಹೂವನ್ನು ಮುಡಿದುಕೊಂಡು, ತುಟಿಯ ತುಂಬ ಕೆಂಪು ರಂಗನು ತುಂಬಿಕೊಂಡು, ಕಣ್ಣಂಚಲೆ ಕೊಲ್ಲಲು ಸಾಕಾಗುವಷ್ಟು ಕಾಡಿಗೆಯನ್ನು ತೀಡಿಕೊಂಡು, ಕೈ ಎತ್ತಲು ಭಾರವೆನಿಸುವಷ್ಟು ಕೆಂಪು ಗಾಜಿನ ಚುಕ್ಕಿ ಬಳೆಗಳು ಎರಡು ಕೈಗಳಲ್ಲಿ ಹಾಕಿಕೊಂಡಿದ್ದರೆ, ಕಣ್ಣಲ್ಲಿ ಉತ್ಸಾಹದ ಚಿಲುಮೆ, ಒಟ್ಟಿನಲ್ಲಿ ನೋಡುತ್ತಿದ್ದರೆ ಬೆಂದ ಮರುಳುಗಾಡು ನೀರುಂಡು ಪಶ್ಚಿಮಘಟ್ಟದಂತಹ ಹಸಿರನ್ನು ಹೊದ್ದು ನಿಂತರೆ ಯಾವ ರೀತಿಯಲ್ಲಿ ಕಲ್ಪಿಸಿಕೊಳ್ಳಬಹುದೊ, ಆ ಕಲ್ಪನೆಗೆ ಹೊಂದಿಕೊಳ್ಳುವಂತಿದ್ದಳು. ಅರೆ..!!! ಒಂದಾಶ್ಚರ್ಯ, ಮಗು..!!! ಮಗವೊಂದು ಇರಲಿಲ್ಲ ಅವಳ ಕಂಕುಳಲ್ಲಿ, ತೆರದ ಬಾಯಿಂದ, ಬಿಟ್ಟ ಕಣ್ಣನ್ನು ಬಿಟ್ಟ ಹಾಗೆ ನೋಡುತ್ತಾ ನಿಂತುಬಿಟ್ಟೆ ಎರಡು ಕ್ಷಣ. ಆಗ ಅವಳು ಒಂದೆರಡು ಸಲ ನನ್ನ ಕಡೆ ನೋಡಿ ದೆವ್ವ ನೋಡಿದವರಂತೆ ಅರೆ ಕ್ಷಣದಲ್ಲಿ ಬೆವರಿನಿಂದ ನೀರು ನೀರಾಗಿಬಿಟ್ಟಳು, ನೀನು ಅವಳಲ್ಲವೆ..? ಎನ್ನುವ ನನ್ನ ಹುಬ್ಬು ಗಂಟಿಕ್ಕಿದ ಸೂಜಿ ನೋಟಕ್ಕೆ ಹೆದರಿದಳೇನೊ ಚಿಟ್ಟನೆ ಚೀರಿ ಕೈಯಲ್ಲಿ ಹಿಡಿದುಕೊಂಡಿದ್ದ ಸಾಮಾನನ್ನು ಕೈ ಬಿಟ್ಟು ಅಂಗಡಿಯಿಂದ ಹೊರಗೊಡಿಬಿಟ್ಟಳು. ಎಲ್ಲರು ಕ್ಷಣಕಾಲ ಹೆದರಿಬಿಟ್ಟಿದ್ದರು ಅವಳ ಆಟಕ್ಕೆ, ಅವಳ ಹಿಂದೆ ಬಂದ ಗಂಡಸು ಕರೆನ್ಸಿಯ ಹಣವನ್ನು ಕೊಟ್ಟು ಅವಳ ಹಿಂದೆಯೆ ಓಡಿ ಹೋದನು. ನನಗೆ ಅವತ್ತು ರಾತ್ರಿಪೂರಾ ನಿದ್ದೆನೆ ಬರಲಿಲ್ಲ, ಅವಳು ಅಂದು ನಡೆದುಕೊಂಡ ರೀತಿ, ಇವತ್ತಿನ ವೇಷಭೂಷಣ, ಕಂಕುಳಲ್ಲಿಯ ಕೂಸು ಏನಾಯಿತು, ಕರುಣೆ ತೋರಿ ಬದಾಮಿವರೆಗೂ... ಬಸ್ಸ್ ಚಾರ್ಜ್ ಇಲ್ಲದೆ ಕರೆದೊಯ್ದ ಆ ಕ್ಲಿನರ್ ನ ನಿಯತ್ತು, ಕನಿಕರವೇನಾಯಿತು, ಅಂದವಳ ಅಸಹಾಯಕತೆಯೊ..? ನಾಟಕವೊ..? ಇಂದಿವಳ ನಿಜ ರೂಪವೊ...? ಹಾದರತೆಯೊ...?  ನನಗೊಂದು ಇವತ್ತಿಗೂ ಅರ್ಥವಾಗುತ್ತಿಲ್ಲ.   ಹೇಗೆ ಹೇಳಲಿ ಇದು ಕಥೆಯಲ್ಲ... ಜೀವನ 

ಕಥಾ೨

ಭಾಗ ೨

ಅಷ್ಟರಲ್ಲಿ 'ಸಾವಕಾರ ನಮಸ್ಕಾರ್ರಿ' ಎಂದ ಗಾಡಿ ಕ್ಲಿನರ್ (ನಿರ್ವಾಹಕ) 
ಕಣ್ಬಿಟ್ಟು ನೋಡಿದೆ, ಪರಿಚಯದವನೆ,
'ನಮಸ್ಕಾರ ಹೇಳಯ್ಯ' ಎಂದೆ,
'ಊರಿಗೆ ಹೊಂಟಿರೇನ್ರಿ' ಎಂದ,
'ಹ್ಞೂಂ... ಇಲ್ಲೆ ಬೇವಿನಕಟ್ಟಿಗೆ, ಒಂದ್ ಬಾಸಿಂಗ ಬಿಡೊ ಕಾರಣ ಇತ್ತ ಅದ್ಕ' ಎಂದು ಅಂಗಿಯ ಜೇಬಿನಿಂದ ಹಣವನ್ನು ತೆಗೆದುಕೊಟ್ಟೆ,
'ಅಲ್ಲಾ...' ಎಂದು ತಲೆಯನ್ನು ಕೆರೆದುಕೊಳ್ಳುತ್ತಲೆ
ಹಣವನ್ನು ಪಡೆಯಲು ಹಿಂಜರಿಯತೊಡಗಿದನು, ಯಾಕೆಂದರೆ ನಮ್ಮಂಗಡಿಯ ಮುಂದೆಯೆ ಅವರು ವಾಹನವನ್ನು ನಿಲ್ಲಿಸುತ್ತಿದ್ದರಿಂದ ನನ್ನಿಂದ ಹೇಗೆ ಹಣವನ್ನು ಪಡೆಯುವುದು  ಎಂದು ಅವನಿಗೊಂದಿಷ್ಟು ಪೇಚಿಗೆ ಸಿಲುಕಿದ ಹಾಗಿತ್ತು, ಅವನ ಮುಖದ ಭಾವನೆಯನ್ನು ಕಂಡು
'ಏ ಇರ್ಲಿ ತಗೊಳೊ ಮಾರಾಯ, ಮುಂಜಾನಿ ನಾಷ್ಟಕರ ಬೇಕಲ್ಲ '
ಎನ್ನುತ್ತಾ ಕೊಟ್ಟೆ, ಹಣವನ್ನು ತೆಗೆದುಕೊಂಡು ಮರಳಿ ಚಿಲ್ಲರೆಯನ್ನು ಕೊಟ್ಟು ಪಕ್ಕಕ್ಕೆ ಸರಿದು ಆ ಹೆಣ್ಣು ಮಗಳತ್ತ ಕೈ ಚಾಚಿ 'ಬಸ್ ಚಾರ್ಜ್ ಕೊಡ್ರಿ' ಎಂದ.
ಅವಳ ಕಣ್ಣಲ್ಲಿ ದುಃಖದ ಕಡಲೆ ಕಟ್ಟಿಕೊಂಡಿತ್ತೇನೊ...ಸರಸರನೆ ಕಣ್ಣಿಂದ ಕಣ್ಣೀರು ಸುರಿಯತೊಡಗಿತು, ಸೀರೆಯ ಸೆರಂಗಂಚಿಂದ ಕಣ್ಣೀರನ್ನು ಒರೆಸಿಕೊಳ್ಳುತ್ತಾ, 'ನನ್ಹತ್ರ ರೊಕ್ಕಾ ಇಲ್ಲಣ್ಣಾ ' ಎಂದಳು.
ಮುಖಸಿಂಡರಿಸಿಕೊಂಡ ಅವನು 'ಮೊದ್ಲ ಹೇಳಿ ಹತ್ತಾಕ ಬರ್ತಿತ್ತಿಲ್ಲ ನಿಂಗ, ಮುಂಜಮುಂಜಾನೆದ್ದ ರೊಕ್ಕಿಲ್ಲಂತದ್ರ, ಮಾಲಕನ ಕೈಯ್ಯಾಗೇನ ಚೊಂಬ ಕೊಡ್ಲೇನ ನಾನು, ಗೊತ್ತಾಗತ್ತಿಲ್ಲ ಬೆ ಹೊಟ್ಟಿ ತೆರ್ದ ಮಕ್ಕಳ ಹಡ್ದಿದಿ ಅಷ್ಟು ತಿಳ್ವಳಿಕಿ ಬ್ಯಾಡನ ನಿಂಗ, ಏ ಡ್ರೈವರ್ ಸಾಬ್ ಗಾಡಿ ಸೈಡ್ಗೆ ಹಾಕಪ.. ಇಲ್ಲೊಂದು ಮುಂಜಾನೆದ್ದ ಲಾಭದ ಗಿರಾಕಿನ ಹತ್ತೈತಿ ಗಾಡ್ಯಾಗ ' ಎನ್ನುತ್ತಾ ಗಾಡಿಯನ್ನು ರಸ್ತೆಯ ಬದಿಯಲ್ಲಿ ನಿಲ್ಲುಸಲು‌ ಡ್ರೈವರ್ ನಿಗೆ ಅವಸರಿಸತೊಡಗಿದನು. ಅವಳು ಸರಕ್ಕನೆ ತನ್ನ ರವಿಕೆಯಲ್ಲಿ ಬಚ್ಚಿಟ್ಟುಕೊಂಡಿದ್ದ ತಾಳಿಯನ್ನು ತೆಗೆದು ಅವನ ಮುಂದೆ ಹಿಡಿದು ತೋರಿಸುತ್ತಾ, ' ಅಣ್ಣಾ ಹಂಗ ಮಾಡಬ್ಯಾಡಣ್ಣ, ಇಲ್ಲೆ ಅರ್ಧ ದಾರ್ಯಾಗ ಬಿಟ್ಟು ಹೋಗ್ಬೇಡ, ನೋಡಿಲ್ಲಿ ಬೇಕಿದ್ರ ಬದಾಮಿ ಬಸ್ಟ್ಯಾಂಡನ್ಯಾಗ ಇಳಿದ ತಕ್ಷಣ ಈ ತಾಳಿ ಮಾರಿ ನಿನ್ನ ರೊಕ್ಕ ಕೊಡ್ತೀನ' ಎಂದಳು. ಅವಳ ಮಾತನ್ನು ‌ಕೇಳಿ ಗಾಡಿಯಲ್ಲಿದ್ದ ಎಲ್ಲರು ಒಂದು ಕ್ಷಣ ಸ್ತಬ್ಧಭೂತರಾದರು. ಡ್ರೈವರ್ ಅವಳ ಮಾತನ್ನು ಕೇಳಿ ಗಾಡಿಯನ್ನು ನಿಲ್ಲಿಸದೆ ಓಡಿಸತೊಡಗಿದನು,
'ಎಲ್ಲಿಂದ ಬಂದಿಯವ್ವ' ಎಂದು ಕ್ಲಿನರ್ ಕುತೂಹಲದಿಂದ ಕೇಳಿದ,
' ನಾವು ಇಲ್ಲೆ ಬದಾಮಿ ದಾಟಿ ಒಂದ ಹಳ್ಳಿರಿ, ಈಗೆರಡ ತಿಂಗಳ್ದ ಹಿಂದ ನಾನು ನನ್ನ ಗಂಡ ಮಂಗ್ಳೂರಿಗೆ ದುಡ್ಕೊಂಡ ತಿನ್ನಾಕಂತ ಹೋಗಿದ್ವಿರಿ, ಒಂದ ತಿಂಗಳ ಛಲೊತ್ನ್ಯಾಗ ದುಡ್ದವ್ರ್ಯಾ, ಬಂದ ರೊಕ್ಕಾನೆಲ್ಲ ನನ್ನ ಗಂಡ ಕುಡ್ದ ಜೂಜಿಗೆ ಆಡಾಕ ಹತ್ತಿದ್ನರ್ರಿ, ಮೊನ್ನೆ ರಾತ್ರಿ ಯಾರೊ ಇಬ್ರನ್ನ ಕರ್ಕೊಂಡ ಬಂದ ಈ ಹಸುಗೂಸನ್ನ ಮಾರಾಕ ಹೊಂಟಿದ್ನರ್ರಿ, ಅಲ್ಲೆಲ್ಲಾ ಗುದ್ದಾಡಿ ಬಾಯ್ ಮಾಡಿದ್ದಕ್ಕ ನಮ್ಹಂಗ ಕೆಲ್ಸಕ್ಕ ಬಂದ ಮಂದಿ ಎಲ್ಲಾ ಸೇರಿ ನನ್ನ ಗಂಡನ್ನ ಅವನ ಜೊತಿಗ ಬಂದ್ರವ್ನ ಬಾಸುಂಡೆ ಬರೊ ಹಂಗ ಹೊಡ್ದ ಹೋದರ್ರಿ.. ಇದ ಸಿಟ್ಟಿಲೆ ನನ್ನ ಗಂಡ ಒಡಗಟಗಿ ತಗೊಂಡು ಮೈ ತುಂಬಾ ರಕ್ತ ಬರಂಗ ಹೊಡ್ದ, ಕುಡ್ದ ಬಂದ ಮತ್ತ ಕೈ ತಗೋತಿನಂತ ಹ್ವಾದನ್ರೀ...ಇನ್ನ ಇಂವ ಇಲ್ಲಿದ್ರ ನನ್ನ ಜೀವಾ ಉಳ್ಸಂಗಿಲ್ಲ ಅಂತ ಅನ್ಕೊಂಡ, ಉಟ್ಟ ಬಟ್ಟಿಲೆ ಹಟ್ಟಿ ಬಿಟ್ಟ ಹೊಂಟ ಬಂದೇನ್ರಿ, ಮಂಗ್ಳೂರಿಂದ ನಮ್ಮೂರಿಗ ಬರಾಕ ಟಿಕೆಟ್ಗೆ ರೊಕ್ಕ ಇರಲಾರ್ದಕ್ಕನ ಕಾಲನ ಬೆಳ್ಳಿ ಕಾಲುಂಗ್ರ ಮಾರಿ  ಗಡಾತನ್ಕ ಬಂದಿನ್ರೀ..ಇನ್ನೂ ಒಂದು ಹನಿ ನೀರ ಸೈತ ಬಾಯ್ಯಾಗ ಹಾಕ್ಕೊಂಡಿಲ್ರೀ, ಅಣ್ಣೊರ ನಿಮ್ಗ ಪುಣ್ಯ ಬರತೈತ್ರಿ ಬದಾಮಿ ತಂಕ ಕರ್ಕೊಂಡ ಹೋಗ್ರಿ,  ಈ ತಾಳಿನ ಮಾರಿಸಿಕೊಡ್ರಿ, ನಿಮ್ಮ ರೊಕ್ಕ ಕೊಟ್ಟ ನಾ ಅತ್ಲಾಗ ನಮ್ಮ ತವರ ಮನಿ ಗಾಡಿ ಹಿಡಿತಿನ್ರೀ...' ಎಂದು ತನ್ನ ರಾಮಾಯಣವನ್ನೆಲ್ಲ ಒಂದೆ ಉಸಿರಿನಲ್ಲಿ ಹೇಳಿಬಿಟ್ಟಿದ್ದಳು. ಬಾಯೆಲ್ಲಾ ಒಣಗಿ ಬಿಟ್ಟಿತ್ತು, ಇನ್ನು ಒಂದು ಮಾತನ್ನು ಆಡಲು ಆಗದು ಎನ್ನುವ ಹಾಗೆ ಸೀಟಿಗೊರಗಿ ಕುಳಿತುಬಿಟ್ಟಳು. ಆಗ ನಾನು ಅವಳ ಕರುಣಾಜನಕ ಕಥೆಯಿಂದ ಹೊರಬಂದು, ನನ್ನ ಬ್ಯಾಗನಲ್ಲಿದ್ದ  ನೀರಿನ ಬಾಟಲಿಯನ್ನು ಅವಳಿಗೆ ಕುಡಿಯಲಿಕ್ಕೆಂದು ಕೊಟ್ಟೆ, ಒಂದೆ ಗುಟುಕಿಗೆ ಅರ್ಧದಷ್ಟು ನೀರನ್ನು ಕುಡಿದು ದಣಿವಾರಿಸಿಕೊಂಡಳು. ಅವಳ ಮಾತುಗಳನ್ನು ಕೇಳಿದ ಎಲ್ಲರ ಮೊಗದಲ್ಲು ಅನುಕಂಪದ, ಪಾಪದ ಭಾವನೆ ಎದ್ದು ಕಾಣುತ್ತಿತ್ತು, ಎಲ್ಲೊ ನನ್ನ ಮನದ ಮೂಲೆಯ ಬಣವಿಗೆ ಸಣ್ಣದೊಂದು ನೋವಿನ ಕಿಡಿ ಹೊತ್ತಿದಂತಾಗಿ ನೋವನ್ನು ತಾಳಿಕೊಳ್ಳಲಾದೆ, ಎರಡು ಹನಿ ಕಣ್ಣೀರನ್ನು ಹಾಕಬೇಕೆಂದುಕೊಂಡೆ, ಗಂಡಸಲ್ವ... ಎಂದುಕೊಂಡು ಕಣ್ಮುಚ್ಚಿ ಅವುಡುಗಚ್ಚಿಕೊಂಡೆ.
' ಛೇ...ಛೆ...ಛೆ..ಎಂತ ಮಾತ ಬೆ ತಂಗ್ಯಮ್ಮ, ನನ್ನ ಒಡಹುಟ್ಟಿದ
ತಂಗಿಯಾದ್ರು ಒಂದ, ನೀನಾದ್ರು ಒಂದ, ನಿನ್ನ ತಾಳಿ ಮಾರಿಸಿ ನಾ ಯಾ ನರಕಕ್ಕ ಹೋಗ್ಲೆವ್ವ, ಅಳಬ್ಯಾಡ ನೀನು‌‌, ನೋಡ ರೊಕ್ಕ ಕೊಡದ ಬ್ಯಾಡ, ಮುಂದ ಬದಾಮ್ಯಾಗ ನಿಮ್ಮೂರ ಬಸ್ಸ ಹತ್ತಿಸಿ ಕಳ್ಸೊ ಜವಬ್ದಾರಿ ನಂದ ಐತವ್ವ, ಆ ತಾಳಿನ ಮೊದ್ಲಕ‌ ಜ್ವಾಕ್ಯಾಗಿ ಹಂತ್ಯಾಕ ಇಟ್ಕೊ' ಅಂದ ಆ ಕ್ಲಿನರ್ ನ ಕಣ್ಣಲ್ಲಿ ಎರಡು ಹನಿ ಕಣ್ಣೀರು ಉದುರಿದ್ದನ್ನು ಯಾರು ನೋಡಲೆ ಇಲ್ಲ ಅವನ ಮುಂಗೈಯೊಂದು ಹೊರತುಪಡಿಸಿ, ಇನ್ನೇನು ಅರ್ಧ ಕಿ.ಮಿ. ನಲ್ಲಿ ನಮ್ಮ ನಿಲ್ದಾಣ ಬರುತ್ತದೆಂದು ಗೊತ್ತಾದ ಮೇಲೆ ಕೈ ಚೀಲದಲ್ಲಿದ್ದ ಒಂದು ಅರ್ಧ ಲಿ. ಹಾಲಿನ ಪಾಕೀಟನ್ನು ತೆಗೆದು ನನ್ನವಳ ಕೈಯಿಂದ ಆ ಮಗುವಿಗೆ ಹಾಲನ್ನು ಕುಡಿಸಲು ಕೊಡಿಸಿಬಿಟ್ಟೆ, ನಾವು ಇಳಿಯಬೇಕಾದ ಸ್ಥಳವು ಬಂದಾಗ, ಇಳಿಯುವ ಮುಂಚೆ ತಾಯಿ ಮಗಳನ್ನೊಮ್ಮೆ ದಿಟ್ಟಿಸಿನೋಡಿ, ನಿಟ್ಟುಸಿರೊಂದನು ಬಿಟ್ಟು ಕೆಳಗಿಳಿದೆವು. ಆ ಕ್ಲಿನರ್ ನ ಬೆನ್ನನ್ನು ತಟ್ಟಿ ಹಳ್ಳಿಯೊಳಕ್ಕೆ ಹೆಜ್ಜೆ ಹಾಕಿದೆವು.

ಕಥಾ೧

ಭಾಗ ೧

ಅಂದು ಬೆಳಿಗ್ಗೆ ಬೇಗನೆ ಎದ್ದು ನಾನು, ನನ್ನಾಕೆ ಸ್ನಾನ ಮತ್ತು ಉಪಹಾರವನ್ನು ಮುಗಿಸಿಕೊಂಡು, ವಾರದ ಹಿಂದಷ್ಟೆ ಮದುವೆಯಾಗಿದ್ದತಂಹ ನನ್ನ ಗೆಳೆಯನ ಬಾಸಿಂಗ ಬಿಡುವಂತಹ ಕಾರ್ಯಕ್ರಮಕ್ಕೆಂದು ಅವಸರವಸರವಾಗಿ ಹೊರಟು ನಿಂತೆವು. ಬೇಗನೆ ಹೊರಡಲು ಒಂದು ಕಾರಣವೇನಾಯಿತೆಂದರೆ, ಅವರ ಹಳ್ಳಿಯಲ್ಲಿ  ಹಾಲು ಸಿಗುತ್ತಿರಲಿಲ್ಲವಂತೆ. ಆ ವಿಷಯವನ್ನು ಕೇಳಿ ನಾನು ಆಘಾತಕ್ಕೊಳಗಾದದ್ದುಂಟು, ಹಳ್ಳಿಯಲ್ಲಿಯೆ ಹಾಲು ಸಿಗುವುದಿಲ್ಲ ಅಂದರೆ ಏನು ಅರ್ಥ ಅಂತ. ಅವರ ಹಳ್ಳಿಯಲ್ಲಿ ಎಲ್ಲರು ತಮ್ಮ ಮನೆಗೆ ಎಷ್ಟು ಬೇಕೊ ಅಷ್ಟು ಹಾಲನ್ನು ಉಳಿಸಿಕೊಂಡು ಮಿಕ್ಕ ಹಾಲನ್ನೆಲ್ಲ ಡೈರಿಗೆ ಹಾಕಿಬಿಡುತ್ತಿದ್ದರಂತೆ, ಕಾರಣವೇನೆಂದರೆ, ಮೊದಲು, ಎಲ್ಲರ ಮನೆಯಲ್ಲಿ ದನಕರುಗಳಿರುತ್ತವೆ, ಎರಡು, ಮನೆ ಮನೆಗೆ ಹಾಕಿ ಬರುವ ಹಾಲಿನ ಹಣ ಇವರ ಖರ್ಚಗೆ ಸಾಕಾಗುವುದಿಲ್ಲವಂತೆ, ಮೂರನೇದ್ದು ತಿಂಗಳಿಗೊ, ಎರಡು ತಿಂಗಳಿಗೊ ಒಟ್ಟೊಟ್ಟಿಗೆ ಬರುವ ಡೈರಿಯ ಹಣದಿಂದಾಗಿ ಮಾಡಿದ ಸಾಲಾನೊ, ಮಗಳ ಮದುವೆ ಖರ್ಚಿಗೆಂದೊ, ಬಂಗಾರ ಮಾಡಿಸಲಿಕ್ಕೊ ಹೀಗೆ ಇನ್ನಿತರ ಖರ್ಚು ವೆಚ್ಷಗಳಿಗೆ ಬಳಸಿಕೊಳ್ಳಬಹುದೆಂಬುದು. ಇನ್ನೂ ಒಂದು ಮುಖ್ಯ ವಿಚಾರ ಏನೆಂದರೆ, ಕುಡುಕ ಗಂಡಸರು ಹಾಲು ಹಾಕಿದ ಮನೆ ಮನೆಗೆ ಹೋಗಿ ಮುಂಗಡವಾಗಿ ಹಣವನ್ನು ಪಡೆದುಕೊಂಡು ಕುಡಿದು ಬರುವುದನ್ನು ತಪ್ಪಿಸುವುದಕ್ಕಾಗಿ, ಹಾಲಿನ ಡೈರಿಗೆ ಹಾಕಿದ ಹಣವು ನೇರವಾಗಿ ಇವರ ಬ್ಯಾಂಕ ಖಾತೆಗಳಿಗೆ ಜಮಾವಣೆ ಆಗುವುದಲ್ಲದೆ, ಹಾಗೂ ಹೀಗೂ ಯಾರಿಂದಲೊ ಹಾಲನ್ನು ಹಾಕಿಸಿಕೊಂಡರೆ ಅರ್ಧ ಹಾಲು ಇನ್ನರ್ಧ ನಲ್ಲಿ ನೀರೆ ಬೇರೆತಿರುತ್ತದೆ. ಎಂಬಿತ್ಯಾದಿ ವಿಷಯಗಳನ್ನು ತಿಳಿಸಿ ನನ್ನ ಜ್ಞಾನ ಭಂಡಾರವನ್ನು ಹೆಚ್ಚಿಸಿದ್ದನು.ಅವನು ಅಷ್ಟು ಹೇಳಿದ ಮೇಲೆ ನಮ್ಮೂರು ಗಜೇಂದ್ರಗಡದಿಂದಲೆ ನಾವು ಅರ್ಧ ಲೀಟರ್ ನ ನಾಲ್ಕು ಪಾಕೀಟು ಹಾಲು, ಎರಡು ಲೀ. ಮೊಸರನ್ನು ತೆಗೆದುಕೊಂಡು ಹೊರಟು ನಿಂತೆವು, ಬದಾಮಿ ಕಡೆಗೆ ಬಸ್ಸಿನ ಸೌಲಭ್ಯ ಈಗೀನಷ್ಟಿರಲಿಲ್ಲ. ಖಾಸಗಿ ವಾಹನಗಳಲ್ಲೆ ಓಡಾಡಬೇಕಾಗಿರುತ್ತಿತ್ತು, ಅದು ನಮಗೇನು ಕಷ್ಟಕರವಾಗಿದ್ದಿಲ್ಲ ನಮ್ಮ ಅಂಗಡಿ ಮತ್ತು ಮನೆಯು ಬಸ್ ನಿಲ್ದಾಣದ ಎದುರಿಗೆ ಇದ್ದುದರಿಂದ, ಆ ಖಾಸಗಿ ವಾಹನಗಳು ನಮ್ಮ ಅಂಗಡಿಯ ಎದುರಿಗೆ ನಿಲ್ಲುತ್ತಿದ್ದರಿಂದ ವಾಹನಗಳನ್ನು ಹುಡುಕಿಕೊಂಡು ಹೋಗುವದು ಕಷ್ಟವೆನಿದ್ದಿಲ್ಲ, ಹೋಗಲು ಅನುವಾಗಿದ್ದಂತಹ ಒಂದು ವಾಹನವನ್ನು ಹತ್ತಿ ಕುಳಿತೆವು ಇಬ್ಬರು. ನಮ್ಮಿಬ್ಬರದು ಒಂದಾರೇಳು ತಿಂಗಳುಗಳ ಹಿಂದಷ್ಟೆ ಮದುವೆಯಾಗಿತ್ತು. ಒಬ್ಬರಿಗೊಬ್ಬರು ಒತ್ತೊತ್ತಿಕೊಂಡೆ ಕುಳಿತುಕೊಂಡೆವು, ಟೆಂಪೊ ಹತ್ತು ನಿಮಿಷದ ನಂತರ ಹೊರಟು ನಮ್ಮೂರಿನ ಕಾಲಕಾಲೇಶ್ವರ ಸರ್ಕಲ್ ನಲ್ಲಿ ಮತ್ತೆ ಪ್ರಯಾಣಿಕರನ್ನು ಹತ್ತಿಸಿಕೊಳ್ಳಲು ನಿಂತಿತು, ನಾನು ಅಲ್ಲಿಯೆ ಇದ್ದ ನಮ್ಮ ಹೂ ಮಾರುವ ಅಲ್ಲಾಭಕ್ಷಿಯ ಅಂಗಡಿಗೆ ಹೋಗಿ ಕಾರ್ಯಕ್ರಮದ ಪೂಜೆಗೆಂದು ಎರಡು ಮಾಲೆ, ನನ್ನವಳ ಮುಡಿಗೆಂದು ಒಂದು ಮೊಳ ಕನಕಾಂಬರ, ಇನ್ನೊಂದು ಮೊಳ ಮಲ್ಲಿಗೆಯನ್ನು ಕಟ್ಟಿಸಿಕೊಂಡು ಬಂದು ನನ್ನವಳ ಮುಡಿಗೆ ಮುಡಿಸಿ ಕುಳಿತುಕೊಂಡೆ, ಅಕ್ಕಪಕ್ಕದವರು ಮುಸುಮುಸು ನಕ್ಕರು ಲೆಕ್ಕಿಸದೆ, ಅಷ್ಟರಲ್ಲಾಗಲೆ ನಮ್ಮ ಎದುರು ಸೀಟಿನಲ್ಲಿ ಒಬ್ಬ ಮಹಿಳೆ ಹೆಣ್ಣು ಕೂಸನ್ನು ತೊಡೆಯ ಮೇಲೆ ಮಲಗಿಸಿಕೊಂಡು ಕುಳಿತುಕೊಂಡಿದ್ದಳು, ಎಣ್ಣೆಯಿಲ್ಲದೆ ಕೆದರಿ ನಿಂತ ಕೂದಲು, 
ಮುಖವನ್ನು ಸರಿಯಾಗಿ ತೊಳೆದುಕೊಂಡಿಲ್ಲ ಎಂಬುದಕ್ಕೆ ಮಸುಕು ಮಸುಕಾಗಿ ಕಾಣುತ್ತಿದ್ದ ಹಣೆಯ ಕುಂಕುಮ, ಜೋರಾಗಿ ಹಿಡಿದೆಳೆದರೆ ಹರಿದೆ ಹೋಗುವುದೇನೊ ಎಂಬಂತಹ ಉಟ್ಟ ಸೀರೆ, ಕಾಲಿಗೆ ಮೆತ್ತಿಗೊಂಡಿದ್ದ ಮಣ್ಣಿನ ಕೆಸರನ್ನು ನೋಡಿದರೆ ಚಪ್ಪಲಿ...? ಅಂತ ನೋಡುವ ಮಾತೆ ಇಲ್ಲ, ಆದರೆ ಕಾಲುಂಗರದ ಬೆರಳುಗಳಲ್ಲಿ ನನ್ನದೆ ಇದು ಜಾಗ ಎನ್ನುವ ಕುರುಹುಗಳಿದ್ದವೆ ಹೊರತು, ಅವುಗಳಿರಲಿಲ್ಲ,
ಬೆಳಿಗ್ಗೆಯಿಂದ ಏನನ್ನು ತಿಂದಿಲ್ಲ ಎನ್ನುವುದಕ್ಕಿಂತ ಏನನ್ನು ಕುಡಿದೆ ಇಲ್ಲ ಎಂಬುದಕ್ಕೆ ಒಣಗಿ ಅದರುತ್ತಿದ್ದ ತುಟಿಗಳು, ಮಗುವಿನ ಹೊಟ್ಟೆಗೂ ಏನು ಇಲ್ಲ ಎಂಬುದಕ್ಕೆ ಅಂಗಾತ ಮಲಗಿದ ಮಗುವಿನ ಹೊಟ್ಟೆಯು ತೆಗ್ಗು ಬಿದ್ದಂತಾಗಿತ್ತು, ಗಣಿಧಣಿಗಳು ನೈಸರ್ಗಿಕ ಸಂಪನ್ಮೂಲಗಳ ಮಹತ್ವವನರಿಯದೆ ಹಣದ ದುರಾಸೆಗೆ ನೆಲವನ್ನು ಅಗೆದು ಬಗೆದು ಕಂದರಗಳ ಸೃಷ್ಟಿಸಿದ ಹಾಗಿತ್ತು. ಒಂದು ಕ್ಷಣ ಅವರಿಬ್ಬರ ಸ್ಥಿತಿಯನ್ನು ನೋಡಿ ಮೈ ಝುಮ್ಮೆಂದು ಕರಳು ಹಿಂಡಿದಂತಾಯಿತು. ಕಣ್ಣು ಮುಚ್ಚಿ ಎರಡು ಕ್ಷಣ ಹಾಗೆ ಕುಳಿತುಕೊಂಡುಬಿಟ್ಟೆ. ಅಷ್ಟರಲ್ಲಿ

ಲೇ

ಅವತ್ತು ಹಾಗೆ ಸುಮ್ಮನೆ ಗಿರಾಕಿಗಳಿಲ್ಲದೆ ಅಂಗಡಿಯಲ್ಲಿ  ಒಬ್ಬನೆ ಕುಳಿತುಕೊಂಡಿದ್ದೆ, ಹೊರಗೆಲ್ಲ ರಸ್ತೆಯಲ್ಲಿ ತಮ್ಮ ತಮ್ಮ ಪಕ್ಷಗಳ ಪ್ರಚಾರ ಕಾರ್ಯದಲ್ಲಿ ಕಾರ್ಯಕರ್ತರು ಹುರುಪಿನಿಂದ, ಅಬ್ಬರದ ಪ್ರಚಾರವನ್ನೆ ಕೈಕೊಂಡಿದ್ದರು. ಹತ್ತು ನಿಮಿಷ ಕಳೆಯಿತು, ಒಂದಿಪ್ಪತ್ತು ಇಪ್ಪತ್ತೈದು ಜನರ ಒಂದು ಪಕ್ಷದ ಗುಂಪು ಅಂಗಡಿಯ ಹತ್ತಿರ ಬಂದು ಆ ಗುಂಪಿನ ಮುಂದಾಳತ್ವವನ್ನು ವಹಿಸಿದಂತ ವ್ಯಕ್ತಿಯು ಬಂದು ತಮ್ಮ ಪಕ್ಷದ ಕರಪತ್ರವನ್ನು ನೀಡುತ್ತಾ, ' ನಮಸ್ಕಾರ ಅಣ್ಣವ್ರ ದಯವಿಟ್ಟು ನಿಮ್ಮ ಓಟನ್ನ ನಮ್ಮ ಸಾಹೇಬ್ರಗೆ ಹಾಕ್ಬೇಕ್ರಿ' ಎಂದು ಗುಟ್ಕಾದಿಂದ ಬಣ್ಣ ಬಡ್ಕೊಂಡಿದ್ದ ಅವನ ಅಳಿದುಳಿದ ಹಲ್ಲುಗಳನ್ನು ಪ್ರದರ್ಶಿಸುತ್ತಾ,  
    ಒಂದು ಕ್ಷಣ ಆ ಕರಪತ್ರವನ್ನು ನೋಡಿ ಆ ವ್ಯಕ್ತಿಯ ಮುಖವನ್ನೊಮ್ಮೆ ನೋಡುತ್ತಾ, ಮೆಲ್ಲಗೆ 'ನಂಗ ಒಂದ ಹದಿನೆಂಟ ಸಾವಿರ ರೂಪಾಯಿ ಕೊಡ್ರೀ.. ಒಂದೊಂದ ಓಟಿಗೆ ಮೂರ ಮೂರ ಸಾವಿರ ರೂಪಾಯಿ ಹಂಗ, ನಮ್ಮನಿಯಾಗ ಒಟ್ಟ ಒಂದಾರ ಓಟ ಅದಾವು, ಇಷ್ಟು ಓಟನ್ನ ನಿಮ್ಮ ಪಕ್ಷಕ್ಕ ಹಾಕ್ತೀವಿ, ಗ್ಯಾರಂಟಿಗೆ ನೀವ್ ಯಾ ದೇವ್ರ ಮೇಲ್ ಪ್ರಮಾಣ ಮಾಡಂದ್ರು ಮಾಡ್ತೀವಿ ಬೇಕಿದ್ರ' ಅಂದೆ ನಾನು
ಆ ವ್ಯಕ್ತಿ ನಾನು ಈ ರೀತಿ ಅವನನ್ನು ಪ್ರಶ್ನಿಸುತ್ತೇನೆಂದು ಎಣಿಸಿರಲಿಕ್ಕಿರಲಿಲ್ಲ, ಕ್ಷಣಕಾಲ ಗಲಿಬಿಲಿಗೊಂಡವನಂತೆ ಕಂಡರು ಸಾವರಿಸಿಕೊಂಡು, ' ಏ..ಏನ್ರೀ ಸರ್ ಏಜ್ಯುಕೇಟೆಡ್ ಆಗಿ ನೀವ್ ಹಿಂಗ ರೊಕ್ಕ ಕೇಳಿದ್ರ ಹ್ಯಾಂಗ್ರಿ.. ಮತ್ತಿನ್ನ ಹಳ್ಳೇನರ ಹ್ಯಾಂಗ ಮಾಡ್ಲಿಕ್ಕೇಳ್ರಿ, ಅದು ಅಲ್ದ ನೀವ್ ಹಿಂಗ ರೊಕ್ಕ ಕೇಳೊದು ಕಾನೂನಿನ ಪ್ರಕಾರ ಅಪರಾಧ ಆಕ್ಕೈತ್ರೀ...' ಎಂದು ತನ್ನವರತ್ತ ನೋಡುತ್ತಲೆ, ಅವನ ಸುತ್ತಲಿದ್ದ ಕೆಲವು ಮಂದಿ 'ಹೌದೌದ್ರೀ..., ಅಲ್ಲನು ಮತ್ತ, ಖರೆ ಐತಿದು, ನಮ್ಮ ಸರ್ ಹೇಳೊದ ಬರೊಬ್ಬರಿ ಐತಿ', ಅಂತ ತಲೆಗೊಂದು ಮಾತಿನ ಮುತ್ತುಗಳು ಉದುರಿದವು.
    ಅವರಾಡಿದ ಮಾತಿಗೆ ನಾನು ತುಸು ನಕ್ಕು, 'ಹೌದಲ್ರೀ ಇದು ನಂಗು ಗೊತ್ತಿರ್ಲಿಲ್ಲ, ತಪ್ಪು...ತಪ್ಪು... ನಾನು ಹಣ ಕೇಳೊದು ತಪ್ಪಾಗ್ತದ, ಅಲ್ವಾ, ' ಎಂದೆ,
ಎಲ್ಲರೂ ಹೌದೌದು ಎನ್ನುವಂತೆ ತಲೆಯಾಡಿಸಿದರು,
' ಮತ್ತ ಇಷ್ಟ ಮಂದಿ ಪ್ರಚಾರಕ್ಕಂತ ಬಂದೀರಿ, ನೀವೆಲ್ಲ ನಿಮ್ಮ ಸ್ವಂತ ರೊಕ್ಕಾನ ಖರ್ಚ ಮಾಡ್ಕೊಂಡು ಪ್ರಚಾರಕ್ಕ ಬಂದಿರೊ, ಇಲ್ಲಾ,... ನಿಮ್ಮ ಸಾಹೇಬ್ರ ಮೇಲಿನ ಅಭಿಮಾನಕ್ಕ ಬಂದೀರೊ...' ಎನ್ನುತ್ತಾ ಎಂದು ನಿಂತೆ,
ನಾ ಕೇಳಿದ ಪ್ರಶ್ನೆಗೆ ಅವನ ಹಿಂದೆ ನಿಂತಿದ್ದ ಕೆಲವರು ಹಾಗೆ ಅಂಗಡಿಯಿಂದ ಹೊರಗೆ ನಡೆದರು,
ಆ ವ್ಯಕ್ತಿಯು ' ಏ ನಾವೆಲ್ಲ ಅವರ ಪಕ್ಕಾ ಅಭಿಮಾನಿಗಳ್ರೀ ಒಂದ ಪೈಸಾನು ಮುಟ್ದಂಗ ಕೆಲ್ಸ ಮಾಡಾಕ ಹತ್ತೀವಿ,' ಎಂದ.
ನಾನು ತಟ್ಟನೆ ಅವನ ಕೈಯನ್ನು ಹಿಡಿದುಕೊಂಡು ಕೈ ಕುಲುಕುತ್ತಾ,  'ಇವತ್ತು ನಾನು ನಿಮ್ಮ ಜೊತಿಗೆ ಪ್ರಚಾರ ಮಾಡಾಕ ಬರ್ತೀನಿ ನಡ್ರಿ ನಿಮ್ಮಂಥಹ ನಿಸ್ವಾರ್ಥ ಕಾರ್ಯಕರ್ತರು ಯಾರ್ ಸಿಗ್ತಾರ್ರೀ ಈಗೀನ ಕಾಲ್ದಾಗ, ಹ್ಞಾಂ, ಮತ್ರ ಸಂಜಿಕ ನಿಮ್ಮ ಸಾಹೇಬ್ರನ್ನ ಭೇಟಿ ಮಾಡಿ, ಅವರ್ಗೊಂದು ಅಭಿನಂದನೆಗಳನ್ನ ತಿಳಿಸಿ, ನನ್ನ ಮನೇನ ಓಟ ಒಷ್ಟು ನಿಮ್ಗ ಹಾಕ್ತೀವ್ರೀ ಅಂತಂದ ಹೇಳ ಬರ್ತೇನ, ಹೋಗೊಣ್ರ್ಯಾ' ಎಂದು ಅಂಗಡಿಯಿಂದ ಆಚೆ ಬರಲು ಅನುವಾದೆ. ಈ ಸಲ ಮಾತ್ರ ಆ ವ್ಯಕ್ತಿಯ ಮುಖ ಮಾತ್ರ ಬಿಳಚಿಕೊಂಡುಬಿಟ್ಟಿತು. ಅವನ ಹಿಂಬಾಲಕರಲ್ಲಿ ಒಬ್ಬ 'ಅದ್ಹೆಂಗ್ರಿ ಮನೇನ ದಗದಾ ಬಗ್ಸಿ ಬಿಟ್ಟ, ಇಂತಾ ರಣರಣ ಬಿಸ್ಲಾಗ ಪುಗ್ಸಟ್ಟೆ, ಅದು ಕೈಲೆ ಖರ್ಚ ಮಾಡ್ಕೊಂಡ ಯಾರ್ ಬರ್ತಾರ್ರೀ ತಲಿಗೀಲಿ ಕೆಟ್ಟೈತನು ನಿಮ್ದು, ' ಅಂದ ಸ್ವಲ್ಪ ಮೂಗಿನಿಂದ ಗುಟುರು ಹಾಕುತ್ತಾ, ' ಹೌದ್ರ್ಯಾ ಮತ್ತ ಒಂದಿನಕ್ಕ ಎಷ್ಟ ತಗೊತಿರಿ ಹಾಗಿದ್ರ,' ಎಂದೆ
' ಇನ್ನೂರ ರೂಪಾಯಿರೀ... ಮುಂಜಾನಿ ನಾಷ್ಟ, ಮಧ್ಯಾಹ್ನದೂಟ, ಸಂಜಿಕೆ ಮನಿಗೆ ಹೋಗ ಮುಂದ ಒಂದ ನೈಂಟಿ,' ಎಂದನು ಗರ್ವದಿಂದಲೆ, ನಾನು ಅಷ್ಟೇ ಶಾಂತವಾಗಿ
'ನೋಡ್ರಪ್ಪ.. ಒಂದಿನಕ್ಕ ಎರಡ್ನೂರ ರೂಪಾಯಿ, ಇನ್ನೂ ಹದಿನೈದ ದಿನ ಐತಿ ಓಟ ಹಾಕೋದು ಅಂದ್ರ ಹದಿನೈದ ದಿನಕ್ಕ ಮೂರು ಸಾವಿರ, ಮತ್ತ ಓಟ ಹಾಕೊ ದಿನ ಎಲ್ಲಾ ಪಕ್ಷದವರ ಒಂದೊಂದಿಷ್ಟು ಕೈ ಬೆಚ್ಗ ಮಾಡ್ತಾರ ಒಟ್ಟಾರೆಯಾಗಿ, ಐದುವರಿ ಸಾವ್ರ ರೊಕ್ಕ ಕೂಡ್ತದ, ಹೌದಲ್ಲೊ' ಅಂದೆ, ಅದಾಗಲೆ ಆ ವ್ಯಕ್ತಿಯ ಹಿಂಬಾಲಕರು ಅರ್ಧದಷ್ಟು ಜನರು ಜಾಗ ಖಾಲಿಮಾಡಿ ಬಿಟ್ಟಿದ್ದರು. ಅವನ ಮೊಗದಲ್ಲಿ ಸಣ್ಣಗೆ ಬೇವರ ಹನಿಗಳು ಗರ್ಭಧರಿಸತೊಡಗಿದವು, ಮತ್ತೆ ನಾನೆ ಮಾತನ್ನು ಮುಂದುವರೆಸುತ್ತಾ, 'ಸರಿ ಇರ್ಲಿ ಬಿಡಿ, ನೀವಂತು ಸಾಲಿ ಕಲ್ತಿಲ್ಲ, ಊರಾಗ ದುಡ್ಕಿಲ್ಲ, ಮಾಡಾಕ ಕೆಲ್ಸಿಲ್ಲ, ಹಿಂಗಾಗಿ ಕೂಲಿ ಆಸೆಗೆ ಬಂದಿರಿ' ಎನ್ನುತ್ತಲೆ, ಹೌದೌದು ಎನ್ನುತ್ತಾ ತಲೆಯಾಡಿಸಿದರಿಬ್ಬರು, ' ನಾ ಕಲ್ತಾವ ಅದೀನಿ,‌ ನೀವು ಕೇಳೊದು ಬರೊಬ್ಬರಿ ಐತಿ, ನಿಮಗ್ಯಾಕ ಬೇಕ್ರಿ ರೊಕ್ಕಾ ಅಂತಂದ ಹೇಳಿ, ಇದು ನ್ಯಾಯವಾದ ಮಾತೈತಿ, ಆದ್ರ ನೀವ್ ನನ್ನ ಹಿಂಗ ಕೇಳ್ದಂಗ, ನಿಮ್ಮ ನಾಯಕರನ್ನ ಯಾಕ ಕೇಳೊದಿಲ್ಲ' ಅಂತಂದೆ, 'ಅವರನ್ನ ಏನಂತ ಕೇಳಬೇಕ್ರೀ..' ಒಬ್ಬ ಸ್ವಲ್ಪ ಸಿಟ್ಟಿಲೆ, 'ಏನಿಲ್ಲೊ ಸಾವಕಾರ ಅಷ್ಟ್ಯಾಕ ಸಿಟ್ಟಿಗೆ ಬರ್ತೀದಿ ನೀನು, ಅಲ್ಲ ನಿಮ್ಮ ನಾಯಕರದ್ದು ಆಸ್ತಿ ಇಲೆಕ್ಷನ್ಗೆ ನಿಂದ್ರೊ ಮುಂಚ್ಯಾಕ, ಅವರಾಸ್ತಿ ಹತ್ತ ಲಕ್ಷೊ, ಒಂದ ಕೋಟಿಯೊ ಇರ್ತದ, ಅವರು ಚುನಾವಣೆ ಗೆದ್ದ, ಐದ ವರ್ಷ ಖುರ್ಚಿ ಮ್ಯಾಲ ಕುಂತ, ಕೆಳಗಿಳಿಯೊದ್ರೊಳಗ, ಅವರಾಸ್ತಿ ದುಪ್ಪಟ್ಟ ಆಗಿರ್ತದ, ಹೆಂಗ ಬಂತ್ರೀ ಇಷ್ಟಕ್ಕೊಂಡ ಆಸ್ತಿ ಅಂತ ಇಲ್ಲಿರೊರು ಯಾರರ ಕೇಳ್ತಿರೇನು?, ಇಲ್ಲ, ಒಂದ ಸಣ್ಣ ಇಂಡಿಕಾ ಕಾರ್ ನ್ಯಾಗ ಓಡಾಡಾಂವ ಅಧಿಕಾರದ ಕೊನಿ ಕೊನಿಗೆ ಹತ್ತ ಹನ್ನೊಂದ ಲಕ್ಷ ರೂಪಾಯಿ ಕಾರ್ನ್ಯಾಗ ಓಡಾಡ್ತೀರ್ತಾನ, ಇದು ಹ್ಯಾಂಗ ಬಂತಂದ ಯಾರರ ಕೇಳ್ತಿರನು.? ಅದು ಇಲ್ಲ, ಅಲ್ರೀ ಒಬ್ಬ ಕನ್ನಡ ಸಾಲಿ ಮಾಸ್ತರನ ಪಗಾರ ಎಷ್ಟೈತಪಾ ಒಂದ ತಿಂಗ್ಳಿಗೆ,     ಇಷ್ಟು ಐದು ವರ್ಷಕ್ಕ.   ಇಷ್ಟಾತ,ಹೌದಾ, ನಿಮ್ಮ ಶಾಸಕರದ್ದು ಎಷ್ಟೈತಪ, ತಿಂಗಳ ಪಗಾರ.      ಇಷ್ಟೈತಿ, ಐದ ವರ್ಷಕ್ಕ.      ಇಷ್ಟಾಗತ್ತ ಮತ್ತ ಉಳ್ದಿದ್ದ ಹಣ ಎಲ್ಲಿಂದ ಬಂತಂದ ಯಾರರ ಕೇಳ್ತಿರೇನು..?'
ಅಂದೆ, ಒಬ್ಬನಿಗೆ ಎಲ್ಲಿಲ್ಲದಷ್ಟು ಕೋಪ ಬಂದ ಬಿಡ್ತು, ಗುಂಪಿನಿಂದ ತೂರಿಕೊಂಡ ಮುಂದ ಬಂದವ್ನ, ' ಏ ತಮ್ಮ ನೀ ಓಟ ಹಾಕ್ತೀನ ಅನ್ನೊಗಿದ್ರ ಹಾಕ, ಇಲ್ದಿದ್ರ ಬಿಡು, ಏನ ನಿಮ್ಮನಿ ಆರ ಓಟ ಬಿಳಲಿಕ್ಕಂದ್ರ  ನಮ್ಮ ನಾಯಕರ ಏನ ಸೋಲುದಿಲ್ಲ, ಅವರ ಸಾಕಷ್ಟ ತ್ವಾಟ ಪಟ್ಟಿ ಅದಾವು, ಅದ್ರಾಗ ಜಬರ್ದಸ್ತ ಇನಕಂ ಬರ್ತೈತಿ, ಗೊತ್ತನ ನಿಂಗ' ಎಂದು ಜೋರು ಧ್ವನಿಯಲ್ಲೆ ದಭಾಯಿಸಿದನು. ' ಹೌದ್ರ್ಯಾ.. ಅಲ್ರೀ ಅದು ನಮ್ಗೂ ಗೊತ್ತೈತ ಬಿಡ್ರಿ ಅವರ ತಮ್ಮ ನಾಮಿನೇಷನ್ ಫೈಲ್ ಮಾಡು ಮುಂದನ ತುಂಬಿರರ್ತಾರ ತಮ್ಮ ಆದಾಯದ ಮುಖ್ಯ ಮೂಲ ಕೃಷಿ ಅಂತಂದ, ಅಲ್ರೀ..ಐದೈದ ವರ್ಷದಾಗ ಇಷ್ಟಿಷ್ಟ ಡಬ್ಬಲ ಆದಾಯ ತೆಗಿತಾರ ಅವರು ಕೃಷಿಯೊಳಗ, ಮತ್ತ ಇವರಿಷ್ಟೆಲ್ಲಾ ಕೃಷಿಯೊಳಗ ಆದಾಯ ತೆಗಿಯೊರು, ನಿಮ್ಮಂಥ ಬಡ ರೈತರ್ಗೆ ಯಾಕ ಅವರು ಹೇಳಿಕೊಡಬಾರ್ದು, ಹೆಚ್ಚ ಆದಾಯ ತೆಗೆಯೋದ ಹೇಗಂತ, ಒಂದಿಷ್ಟ ಸಾಲದ ಭಾದಿ ತಾಳಲಾರ್ದನ ಹೊಲ್ದಾನ ಬೇವಿನ ಮರಕ್ಕ ಊರ್ಲ ಹಾಕ್ಕೊಳ್ಳೊ ಮಂದಿ ಜೀವಾನರ ಉಳಿತಿದ್ವ, ಹೌದಲ್ರಿ ಯಜಮಾನ್ರ, ನಾ ಹೇಳೊದ ಖರೆ ಐತಿಲ್ಲ,' ಎಂದ ಮೆಲ್ಲಗೆ ಅವನ ಹೆಗಲ ಮೇಲೆ ಕೈಯಿಟ್ಟು ಹೇಳಿದೆ, ಇರುವೆ ಸಾಲಿನ ಮೇಲೆ ಒಂದು ಕಡ್ಡಿಯನ್ನು ಓಗೆದರೆ ಹೇಗೆ ಗಲಿಬಿಲಿಗೊಂಡು ಓಡಾಡುತ್ತವು ಹಾಗೆಲ್ಲ ಆ ವ್ಯಕ್ತಿಯ ಹಿಂಬಾಲಕರು ಚಡಪಡಿಸುತ್ತಾ ನನ್ನುತ್ತರಕ್ಕೆ ಉತ್ತರಿಸದೆ, ಎಲ್ಲರೂ ಮೆಲ್ಲಗೆ ಜಾರಿಕೊಂಡುಬಿಟ್ಟರು, ಈ ನಾಕೈದು ಜನರನ್ನು ಹೊರತುಪಡಿಸಿ, ಕೊನೆಗೆ ಅವರು ಅಂಗಡಿಯನ್ನು ದಾಟುವಾಗ ನಾನು ಅವರೊಡಗೂಡಿ ಹೊರಬಂದು 'ನೀವು ನನಗೆ ಪ್ರಶ್ನೆ ಮಾಡಿದ ಹಾಗೆ ನಿಮ್ಮ ನಿಮ್ಮ ನಾಯಕರುಗಳಿಗೆ ನೀವೆನಾದರು ಪ್ರಶ್ನಿಸಿದ್ದೆ ಆದರೆ, ನಾಳೆ ನಿಮ್ಮ ಮಕ್ಕಳು ಅವರ ಮನೆ ಮುಂದೆ ಹೋಗಿ ಹಗಲೆಲ್ಲ ಕಾದು, ಅವರ ಬಂದ ಮ್ಯಾಲ ನಡ ಬಗ್ಗಿಸಿ ಧಣಿ ನಮ್ಮ ಓಣಿಯ್ಯಾಗ ನೀರ ಬರವಲ್ವರೀ ಎಂದ ಹಲ್ಗಿಂಜಕೊಂಡ ಕೇಳೊ ಪ್ರಮೇಯಾ ಬರಂಗಿಲ್ಲ, ನನ್ನ ಮಾತಿಂದ ಏನಾರ ನಿಮ್ಮ ಮನಸ್ಸಿಗೆ ನೋವಾಗಿದ್ರ, ನಿಮ್ಮ ತಮ್ಮನಂತೊನು ಅಂದ್ಕೊಂಡು ಕ್ಷಮಿಸಿಬಿಡ್ರಿ ಅಣ್ಣೊರ' ಎಂದೆ ಆ ವ್ಯಕ್ತಿ ನನ್ನ ಕಣ್ಣಲ್ಲಿ ಕಣ್ಣಿಟ್ಟು ನೋಡಲೆ ಇಲ್ಲ, ಸುಮ್ಮನೆ ತಲೆಯಾಡಿಸುತ್ತ, ಪಕ್ಕದ ಅಂಗಡಿಯ ಹತ್ತಿರ ನಿಂತಿದ್ದ ತನ್ನ ಗುಂಪಿನತ್ತ ಭಾರವಾದ ಹೆಜ್ಜೆಗಳೊಂದಿಗೆ ನಡೆದನು. ಇಷ್ಟೇಲ್ಲಾ ಆದರೂ ಅವರು ತಿದ್ದುಕೊಳ್ಲುತ್ತಾರೆ, ತಮ್ಮ ನಾಯಕನನ್ನು ಪ್ರಶ್ನಿಸುತ್ತಾರೆ ಅಂತ ನಾನೇನಾದರೂ ತಿಳಿದುಕೊಂಡಿದ್ದರೆ, ನನ್ನಂತಹ ಮೂರ್ಖ ಈ ಲೋಕದಲ್ಲಿ ಯಾರು ಇರೋದಿಲ್ಲ ಅಲ್ವ.. ಏಕೆಂದರೆ ಸಂಜೆ ಅವರು ಕೊಡಿಸುವ ನೈಂಟಿಯಲ್ಲಿ ಎಲ್ಲ ಆದರ್ಶಗಳು ಕೊಚ್ಚೆಯಲ್ಲಿ ಉಚ್ಚೆಯ ರೂಪದಲ್ಲಿ ಹರಿಯುತ್ತಿರುತ್ತವೆ. ಏಷ್ಟೆಯಾದರೂ....
ಮೇರಾ ಭಾರತ್ ಮಹಾನ್

ಉಕ

ಹೊಡಿಬ್ಯಾಡ ಏ ಹುಡ್ಗಿ ನೀ...ಕಣ್ಣ
ಹಿಂದ..ಹಿಂದ ಬರ್ಲಾಕ ನಾನದೀನಿ ಬಲು ಸಣ್ಣ
ಬಲಶಾಲಿ ಭೀಮನಂತೊನದಾನು... ನಿಮ್ಮಣ್ಣ
ಒಂದ ಕೈಯ್ಲೆ ಎತ್ತೋಗುದು ಮುಕ್ಕುಸ್ತಾನ ನನ್ನ ಮಣ್ಣ

ಏನಾದ್ರೇನ...ಚೆಲ್ವಿ, ನೀನದಿದಿ ನಮ್ಮೂರ ಭಾರಿ ಹೆಣ್ಣ
ಹ್ಯಾಂಗ ಹೇಳ್ಲಿ ಮಾತನ್ಯಾಗ...ರಸಪೂರಿ ಮಾವಿನ ಹಣ್ಣ
ಕಣ್ಣ ತಿರ್ಗತಾವ ಬೆಡಗಿ ನೋಡಿ ನಿನ್ನ ಮೈ ಬಣ್ಣ
ಈ ಯುಗಾದಿಗೆ ಏನಾರ ಮಾಡಿ...ಮನಿ ಗ್ವಾಡಿಗೆ ಬಡ್ಸಬೇಕ ಸುಣ್ಣ

ಕಣ್ಣಿಗೆ ತೀಡ್ಕೊಂಡಿಯಲ್ಲ ಕಡು.. ಕಪ್ಪಾನ ಕಾಡ್ಗಿ
ನಡುವಿಗೆ ದಾವಣಿ ಕಟ್ಟಿಕೊಂಡ ಹೊಂಟಿ, ಏನ್ ನಿನ್ನ ನಡ್ಗಿ
ಮ್ಯಾಲ ಕುಂತಾವ ಯಾ ಹೊತ್ನಾಗ ಮಾಡಿರಬೇಕ ಈ ಗಡ್ಗಿ
ಹತ್ರಕ್ಕ ಹೋಗಬೇಕಂದ್ರ ಅವರಣ್ಣ ಹಿಡ್ಕೊಂಡ ಕುಂತಾನಲ್ಲ ಬಡ್ಗಿ

ಹುಡ್ಗಿ...ಒಂಟಿ ಕಣ್ಣಿಲೆ ಹಾರಿಸಿಬಿಟ್ಟಿಯಲ್ಲ ಗುಂಡು
ಗೊತ್ತಿಲ್ಲ ನಿನ್ಗ.... ನಾನಲ್ಲ ಅಂತಿಂಥ ಗಂಡು
ತಲಿಕೆಟ್ರ...ಯಾರಿಗೂ ಹೇದರದಂತ ಜಗಮೊಂಡು
ಬರ್ತೀನ ನಿಮ್ಮನಿಗೆ ವಿಳ್ಯೆದೆಲೆ ತಾಟ ಹಿಡ್ಕೊಂಡು

ಮದ್ವಿ ಆಗೋನ ಮಲ್ಲಿ, ಕಳಕಪ್ಪನ ಗುಡಿಯಾಗ
ಜೇನಿನ ಹೊಳಿನ ಹರ್ಸ್ತೀನಿ ಬಾಳಿನ ಹಾದ್ಯಾಗ
ವರ್ಷ ಕಳಿಯೊದ್ರಾಗ, ಮಗು ಹಾಕ್ತೀನಿ ನಿನ್ನ ಮಡಿಲಾಗ
ಹಗಲು ರಾತ್ರಿ ದುಡಿದುಣ್ಣೊನು ಭೂ ತಾಯಿ ಒಡಲಾಗ

ಕಜಲ್

ಗಂಧದ ಕೊರಡುಗಳೇನು ಬೇಕಿಲ್ಲ.....
ಬೇವಿನ ಕಟ್ಟಿಗೆಗಳಿಂದಾದರೂ ಸರಿ...
ಇಂದು ಸಂಜೆಗೆ, ನನ್ನನು ಸುಟ್ಟು ಹಾಕಿಬಿಡು ಸಾಕಿ...
ನಾಳೆಯವಳ ಮದುವೆ ಮೆರವಣಿಗೆ ಸಾಗುವುದು..!!!
ಹೇಗೆ ಸಹಿಸಿಕೊಳ್ಳಲಿ ನಾನು...? ಬ್ಯಾಂಡ್ ಬಾಜಾದ ಸದ್ದನು...
ಅದಕ್ಕೂ ಮೊದಲೆ, ನನ್ನ ತಮಟೆಯ ಸದ್ದು ಬೀದಿ...
ಬೀದಿಗಳಲ್ಲಿ ಪ್ರತಿಧ್ವನಿಸಿಬಿಡಲಿ...

ಉರಿದು.... ಸುಟ್ಟು ಹೋದ ನನ್ನ ಬೂದಿಯನ್ನು
ಹೊಳೆಯಲ್ಲಿ ವಿಸರ್ಜಿಸಬೇಡ ಸಾಕಿ...ಂ
ಒಡಕು ಮಡಕೆಯಲ್ಲಾದರು ಸರಿ, ಗಾಳಿಗೆ ಹಾರಿ
ಹೋಗದಂತೆ ಮುಚ್ಚಳವ ಮುಚ್ಚಿ...ಬಚ್ಚಿಟ್ಟುಬಿಡು...
ಗಂಗೆಯನ್ನು ಹೊತ್ತು ತರಲೆಂದು ಬರುವ ನೀರೆಯರು....
ಬೂದಿ ಬೇರೆತ ನೀರನ್ನೊಯ್ದು...ಸುರಿಗಿಯನ್ನಾಗಿ ಅವಳ 
ಮೈ ಮೇಲೆ ಸುರಿದಾರು......ಮದುವೆಗೂ ಮುನ್ನವೆ...
ನಾನನುಭವಿಸಿದ ವಿರಹದ ಉರಿ...
ಅವಳನ್ನು ತಬ್ಬಿಕೊಂಡಾತು...

ಗೋರಿಗೆಂದೆ....ಹೂವಿನ ಚಾದರ ಕಟ್ಟುವ ಬುಟ್ಟಿಯಲ್ಲಿ...
ಒಂದೆ.... ಒಂದು ಮೊಗ್ಗಿನ ಎಸಳು ಉಳಿಯದಂತೆ,
ಕಟ್ಟಬೇಕೆಂದು....ಅಲ್ಲಾಭಕ್ಷಿಗೆ ಆಜ್ಞಾಪಿಸಿಬಿಡು ಸಾಕಿ...
ಮತ್ತೈದೆಯ ಮುಡಿಯನೇರುವ ದಂಡಿಯಲ್ಲಿ...ಸಾವಿನ
ಹೂವೊಂದು ಸೇರಿ..... ಅಪಶಕುನವಾದಾತು...!!!!
ಅವಳ ಮುತ್ತೈದೆತನಕ್ಕೆ ಕಂಟಕ ತರುವ ಪಾಪವು...
ನನ್ನನೆ ಸುತ್ತುಕೊಂಡು......ಹುಗಿದ ಮಣ್ಣಿನೊಳಗು ನನಗೆ
ನೆಮ್ಮದಿಯಿಲ್ಲದಂತಾದಾತು...

ಆತ್ಮಕ್ಕೆ ಶಾಂತಿ ಸಿಗಲೆಂದೇನು...ಮಸಣದಲ್ಲೊಂದು
ದೀಪವ ಹಚ್ಚದಿರು ಸಾಕಿ....
ನಿ ಹಚ್ಚಿಟ್ಟ ಹಣತೆಯ ಬೆಳಕಿನಲ್ಲಿ...ಮೊದಲ ರಾತ್ರಿಗೆ
ಅವಳಾರಿಸುವ ದೀಪದ ದೃಶ್ಯವನ್ನು ಕಣ್ತುಂಬಿಕೊಳ್ಳುವ 
ದೌರ್ಭಾಗ್ಯ ನನ್ನದಾಗದಿರಲಿ...ಹೂ ಮಂಚದಲಿ ಅವಳೊಂದಿಗೆ... ಮಲಗದೆ ಹೋದರು...ಈ ಜನ್ಮಕ್ಕೆ,
ಅವಳ್ಹೆಸರಲೆ ಮಣ್ಣಲೆ ಮಲಗುವ ಸೌಭಾಗ್ಯವಾದರು
ಹಾಗೆ ಇರಲಿ....

ಕಜಲ್

ಈ ಸಂಜೆಗೆ... ತುಸು ಹೆಚ್ಚಿಗೆಯೆ ಸುರಿದುಬಿಡು 
ಸಾಕಿ... ನಿನ್ನ ಮದ್ಯವನ್ನು....ಈ ಬಡವನೆದೆಗೆ....,
ಇಂದವಳ ಮದುವೆ ಮೆರವಣಿಗೆಯ ಡೋರಿಯು
ಮೆರೆಯುವುದು.... 
ತಾಳಮೇಳದ ಸದ್ದಿಗೆ ನನ್ನೆದೆಯ ಬಡಿತವು
ನಿಂತು ಹೋದಾತು.....
ಸುದ್ದಿಯ ತಿಳಿದು... ಸಂಭ್ರಮವು ಸತ್ತು ಹೋದಾತು.

ಮಧ್ಯದಮಲಿನಲ್ಲಿ ಮಲಗಿದ ಮೇಲೆ, ಮುಖದ
ತುಂಬಾ... ಹೊದಿಕೆಯೊಂದನ್ನು ಹೊದಿಸಿಬಿಡು ಸಾಕಿ....
ನಾನುಸಿರಾಡುವ ಉಸಿರೂ.... ಅವಳನ್ನು ಸ್ಪರ್ಶಿಸದಿರಲಿ...
ನಿಟ್ಟುಸಿರನ ತಾಪವು ಸೋಕಿ, ಅವಳ ನಗುವು ಕುಂದಿದರೆ..?
ಸತ್ತು ನಾ ಹೋಗಲಿರುವ ನರಕದ ಬಾಗಿಲೂ...
ಮುಚ್ಚಿಕೊಂಡಾತು...!!!!

ಇದೊಂದು ಸಂಜೆ ಕ್ಷಮಿಸಿಬಿಡು ಸಾಕಿ....
ಬಹು ದಿನಗಳ ನಂತರ, ನಿನಗೆಂದೆ ತಂದಿದ್ದ
ಮಲ್ಲಿಗೆಯ ಗುಚ್ಛವನ್ನು... ಹರಿದು ಚೆಲ್ಲಿಬಿಡು...
ದಿಬ್ಬಣದ ಹಾದಿಗೆ, ಹೊತ್ತೊಯ್ಯವ ಬೀದಿಯಲ್ಲಿ
ಅದೇಷ್ಟು ಮುಳ್ಳುಗಳಿವೇಯೊ...ಚುಚ್ಚಿ..ಮೆರವಣಿಗೆಯು
ಅರ್ಧಕ್ಕೆ ನಿಲ್ಲದಿರಲಿ, ನಡು ಮಧ್ಯದಲಿ ಸಿಕ್ಕು...
ನರಳಾಡುವ ನೋವು ನನಗಷ್ಟೇ...ಇರಲಿ...

ಮಧುಶಾಲೆಯ ಅರಮನೆಯ ಮುಂದೆ....ಸುಗಂಧದ
ಧೂಪವನ್ನು ಹಾಕಿಬಿಡು ಸಾಕಿ....
ನಾ ಕುಡಿದುಬಿಟ್ಟ ಬಟ್ಟಲುಗಳ ಮಧ್ಯದ ವಾಸನೆ,
ಅವಳ ಎದೆಯನ್ನು ತಟ್ಟದಿರಲಿ... ಬಟ್ಟಲೊಳಗೆ
ನನ್ನೆದೆಯ ರಕ್ತವದೇಷ್ಟೊ....ಬೇರೆತಿದೆ..!!!! 
ನಾನ್ಹೆಚ್ಚು ದಿನ ಬದುಕಿರಲಾರೆ...ಎಂದವಳಿಗರಿವಾದರೆ...
ರಸಭರಿತವಳ... ಮೊದಲ ರಾತ್ರಿಯು ವಿಷವಾಗಿಬಿಟ್ಟಾತು...
ನನ್ನ ಬದುಕಿಗಿದೆ... ಕೊನೆಯ ಕತ್ತಲಾದಾತು....

ಹೀಗೆ

ತುಫಾಕಿಯ ಗುಂಡುಗಳಿಗಷ್ಟೆ ಇದ್ದ ರಕ್ತದ ರುಚಿ...
ಲೇಖನಿಯ ನಿಬ್ಬಿಗೂ ಸವಿಯುವ ಆಸೆ ಬಂತೇಕೊ...?
ನಂದನವನವಾಗಿಸಬೇಕಿದ್ದ ವಿಚಾರ ಧಾರೆಗಳು
ಧರೆಯನೆ ಹೊತ್ತುರಿಸಲು ಹಪಹಪಿಸುತಿಹುವೇಕೊ....?

ಗಿರಿ...ಕಂದರದೊಳಡಗಿರುವ ನರಿಗಳ ಬುದ್ದಿ 
ನಾಗರಿಕ ನಾಯಕರ ಮತಿಗೂ ಬಳೆದುಕೊಂಡಿತ್ಹೇಗೊ..?
ಧರ್ಮದ ಧಮನಿ...ಧಮನಿಗಳು ಸಿಡಿದು ಪಡೆದ ಉಸಿರಿಗೆ
ಮತ್ತೆ...ಮತ್ತೆ...ಮತಿಯ ದಿಗ್ಭಂದನದಿಂದಲೆ ಉಸಿರುಗಟ್ಟಿಸುತಿರುವಿರೇಕೊ...?

ಅರಳುವ ಹೂಗಳಿಗೆ ಹಾಕಿಕೊಡುವ ದಾರಿ ಇದೇನಯ್ಯ ?
ಮನೆಯ ಸುತ್ತ ಬೇಲಿಯ ಕಟ್ಟಿಕೊಂಡೆ ಬದುಕುವುದು ಸಾಧ್ಯವೇನಯ್ಯ..?
ಅಂಧಕಾರಕೆ ಬೆಳಕಿನ ಹಣತೆಯ ಹಚ್ಚದೆ ಕೆಂಡದಹಾಸು ಹಾಸುವಿರೇನಯ್ಯ...?
ಏರಿಳಿತಗಳ ಸಮವಾಗಿಸುವ ಭರದಲ್ಲಿ ತಾಯಿ ಮಮತೆಯನೆ
ಮರೆಯುವರೇನಯ್ಯ ?

ಸಾಕು...ಸಾಕುಬಿಡಿ ಎದೆಗೆ ಗುರಿಯಿಕ್ಕುವುದನು, ಅರಿವಿಲ್ಲವೇನು..? ಬೆನ್ನು ತೋರಿಸುವ ಹೇಡಿಗಳ ಹೇರುವ ಮಣ್ಣಿದಲ್ಲವೆಂಬುದು
ಹೊಡೆಯುವುದೆ ಆದರೆ, ಹೊಡೆದುರುಳಿಸಿಬಿಡಿ ಮೌಢ್ಯಗಳನು
ಕಟ್ಟುವ ಕಿಚ್ಚೊಂದು ನಿಮ್ಮೆದೆಯಲ್ಲಿ ಉರಿಯುತ್ತಿದ್ದರೆ ಮಾತ್ರ !!

ಚಿಂತನೆಗಳಿರಲಿ...ಚಿತೆಗೇರಿಸುವ ಚಮತ್ಕಾರವ ತೋರದಿರಿ
ಮಥಿಸುತಿರಲಷ್ಟೆ ಮೌನ....ಮತ್ಸರವನ್ನೆ ಮೆಳೈಸಿಕೊಳ್ಳದಿರಲಿ
ಚಿಮ್ಮುತಿರಲಿ ಪದಗಳು...ವಿಷ ಬೀಜಗಳನೆ ಬಿತ್ತದಂತಿರಲಿ 
ಚೆಲ್ಲಿದ ಹನಿ ಹನಿ ಶಾಯಿಯು....ರಕ್ತಚರಿತ್ರೆಯನ್ನ ಸೃಷ್ಟಿಸದಂತಿರಲಿ 

ತಮ್ಮ

ಬುದ್ಧನ ಕಡೆ ಹೊಂಡು...ಬುದ್ಧನ
ಕಡೆ ಹೊಂಡು...ಅಂದೊರೆಲ್ಲ,
ಇನ್ನೂ ಅರ್ಮನಿಯೊಳ್ಗ ಕುಂತಾರೊ
ತಮ್ಮಾ....
ಹೊಂಡ್ರಿ...ಹೊಂಡ್ರಿ...ಅಂತಾ ಬಾಯ್ಬಡ್ಕೊಳೊರೆಲ್ಲ
ಊರಾನ ಮಂದಿನೆಲ್ಲ ಹೊಂಡಿಸಿ, ತಾವ್ ಊರ್ತೂಂಬ ಗಂಟ್ ಮಾಡ್ಹಾಕ ಹತ್ತ್ಯಾರೊ ತಿಮ್ಮ

ಹೀಗೆ

ನನ್ನಾತ್ಮದೊಳಗೆ ಶಾಂತಿಯಿಲ್ಲದಿರುವಾಗ
ನಿಮ್ಮಾತ್ಮಕೆ ನಾ ಹೇಗೆ ಶಾಂತಿಯ ಕೋರಲಿ
ನವರಸಗಳ ಹೊಲಸನೆ ತುಂಬಿಕೊಂಡಿಹ ಮಡಿಕೆಯಿದು
ನಿಮ್ಮ ಹೆಸರನುಸುರಲು ಯೋಗ್ಯವಲ್ಲದ ಜೀವವಿದು
ಮತ್ತೆ...ಮತ್ತೆ...ಹುಟ್ಟಿ ಬನ್ನಿ‌ ಎಂದು ಯಾವ
ನಾಲಿಗೆಯಿಂದ ಪ್ರಾರ್ಥಿಸಲಿ....

ಸಾವಿರ...ಸಾವಿರಗಳ ಕೊಟ್ಟು ಶಿಕ್ಷಣವ ಕಲಿಸಲು
ಬಡಿದಾಡುವೆವಯ್ಯ...
ಲಕ್ಷ..ಲಕ್ಷಗಟ್ಟಲೆ ಪಡೆದರೂ ಜ್ಞಾನವ ಹಂಚದೆ,
ಅನಾಗರೀಕತೆಯನೆ ಹಂಚುತಿರುವರಲ್ಲಯ್ಯ..
ಸುಲಿದು...ಸುಲಿದು...ಪದಗಳನು ಬಜಾರಿನ
ಹರಾಜಿನ ಮೂಟೆಗಳಾಗಿರಿಸಿಹರಯ್ಯ...

ಎಲ್ಲದಕೂ ಬೆಲೆ ಕಟ್ಟುವ ಕಲೆ ನಮಗೆ
ಕರಗತವಾಗಿರುವಾಗ..., ದಾಸೋಹ!!!!
ಅದನ್ನು ಕನಸಿನಲ್ಲಿಯೂ ಕಲ್ಪಿಸಿಕೊಳ್ಳಲಾಗದು.
ಸಂಸ್ಕೃತಿಯನೆ... ಅರಿತುಕೊಳ್ಳಲಾಗದವರೆಲ್ಲ
ಹೋಗಿಬನ್ನಿ‌‌ ಎನ್ನುವರಲ್ಲ... ಅವರಿಗೆಲ್ಲ ಏನು ಗೊತ್ತು
ನಿಮ್ಮ ಕಾಯಕದ ರುಚಿ ಅವರಾರು ಸವಿದಿಲ್ಲ
ದೇಹಿ ಎಂದು ಬೇಡಿ ಬಂದವರ ಹಿಂದೆ ನಾಯಿಗಳನೆ
ಛೂ.. ಬಿಡುವವರಲ್ಲ!!!!

ಕಾಯವ ಬಾಗಿಸದೊಡೆ ಕಾಯಕಕೆಲ್ಲಿ ಬಂತು ಬೆಲೆ
ಬೆವರಿಳಿಸದೆ ಪರರ ಧಾನ್ಯವ ದಾನವಾಗಿಸುವುದು
ದಾಸೋಹದ ಕಗ್ಗೊಲೆ
ದೇವರನ್ನೆ ಕಳೆದುಕೊಂಡು ಸ್ಮಶಾನವಾಗಿಬಿಟ್ಟಿದೆ
ಕರುನಾಡಿನ ನೆಲೆ
ಸಣ್ಣಗಾದರೂ... ವ್ಯಾಪಿಸಬೇಕಿದೆ ಜಗದ ತುಂಬೆಲ್ಲ 
ತ್ರಿವಿಧ ದಾಸೋಹದ ಅಲೆ...

ತಮ್ಮಾ

ಊರ ಹೊತ್ತ ಊರ್ಸಿದವ್ರನ್ನ...ಇವತ್ತ
ಊರ ತುಂಬಾ ಮೆರವಣ್ಗಿ‌ ಮಾಡ್ಕೊಂಡ ಹೊಂಟಾರ್ನೋಡೊ...ತಮ್ಮಾ
ನಾಕ್ಮಂದಿ ಮುಂದ ಶಿಕ್ಷೆ ತಗೋಬೇಕಾದವ್ರು
ಅದ ನಾಕ್ಮಂದಿಗೆ ಬುದ್ದಿ ಹೇಳೊ ಕಟ್ಟಿ ಏರಿಯ್ಯಾರ
ನೋಡು..ಇಂತದ್ಕ ಏನೊ?  ನ್ಯಾಯದವ್ವನ ಕಣ್ಣಿಗೆ
ಕಪ್ಪನ ಬಟ್ಟಿ ಕಟ್ಬಿಟ್ಟಾರು ನೋಡ್ತಿಮ್ಮಾ..

ಹತ್ತಿ ಬಂದವರ್ಯಾರಿಗೂ ತುಳಿದ ಬಂದ
ಮೆಟ್ಲು ನೆಪ್ಪಿರೊದಿಲ್ಲ ನೋಡ್ತಮ್ಮಾ...

ಖಾದಿ ತೊಟ್ಟೊರೆಲ್ಲ...ಗಾಂಧಿಗಳಾಗ್ತರೇನೊ
ತಮ್ಮಾ...
ಹತ್ತ ಹೆಜ್ಜಿ ಹಳ್ಳಿಯಿಂದ ಹಳ್ಳಿಗೆ ಹತ್ತ ಹೆಜ್ಜಿ ಕಾಲ್ಕಿತ್ತಿ
ಇಡ್ಲಿಲ್ಲಂದ್ರ...

ಕ್ವಾಟಿಯಂತ ಮನಿ ಕಟ್ಟಸ್ಕೊಂಡು, ಕಾಯಾಕ ಹುಲಿಯಂತಾದೊಂದು ನಾಯಿನ ಸಾಕ್ಕೊಂಡು..
ಊರೂರ ಕೇರಿ ಮಂದಿ ಮುಂದ ನಿಂತ್ಗೊಂಡು
ಸಮಾನಾತೆಯ ಪಾಠ ಮಾಡಿ ಬರ್ತಾರು ನೋಡ್ತಮ್ಮಾ..

ನಮ್ಮವ್ವ

ಸತ್ತ ಹೆಣಕ್ಕ ಸಿಂಗಾರ ಮಾಡಿ
ಬಾಯ್ಬಡ್ಕೊಂತ
ಕುಂದ್ರತಾರು...
ನೋಡವ್ವ...
ಉಸಿರಿದ್ದಾಗ ಕಿವಿಯಾಗದವ್ರು
ಉಸ್ರ ನಿಂತಮ್ಯಾಲ
ಏನ್..ಹೇಳ್ತಾರೊ
ನಮ್ಮವ್ವ

ಮನಿ ಬಾಗ್ಲಿಗೆ ಬಂದಾಗ
ಎರ್ಡ ರೂಪೆ ಚಾ..‌
ತರ್ಸಿ, ಕುಡ್ಸಿ
ಕಳ್ಸಿಲಿಲ್ಲ 
ಕೇಳವ್ವ...
ಸತ್ತವ್ನ ಮನಿಗೆ
ಇಸ್ಬಾಯಿ ತೊಳ್ಸಾಕಂತ
ಯಾಡ್ನೂರೂಪೆ
ಖರ್ಚ ಮಾಡ್ಕೊಂಡ
ಬಂದಾರ ನೋಡೊ
ನಮ್ಮವ್ವ

ಮ್ಯಾಲನ್ಯಾವ...ಲೆಕ್ಕಾ
ಎಲ್ಲಾ ಬರ್ದಿಟ್ಟಿರ್ತಾನ
ಅಂತಾ ದೊಡ್ಡ...ದೊಡ್ಡ
ಪುರಾಣ ಹೇಳ್ತಾರು
ಕೇಳವ್ವ...
ಸತ್ತ ಹೆಣಕ್ಕ ಹಚ್ಚಿದ
ಬೆಂಕಿ..ಬೂದಿಯಾಗಿಲ್ಲ...
ಕೊಟ್ಟ ರೊಕ್ಕಕ್ಕ, ಲೆಕ್ಕ
ಕೇಳಾಕ, ಆಗ್ಲೆ ಮನಿ
ಹೊಸ್ಲ ಹೊರ್ಗ ನಿಂತಾರಲ್ಲೊ
ನಮ್ಮವ್ವ

ನಮ್ಮವ್ವ

ನಮ್ಮವ್ವ

ಎದಿಮ್ಯಾಲಿನ ಸೀರಿ
ಸೆರ್ಗ ಜಾರಿದ್ರ
ಹೊದ್ಕೊಬೋದು
ಕೇಳವ್ವ...
ಎದಿಯಾಗಿನ ಮನಸ್ಸ
ಒಮ್ಮೆ ಜಾರ್ತಂದ್ರ...
ಸಂಭಾಳ್ಸೋದು ಭಾಳ
ಕಷ್ಟೈತೊ ನಮ್ಮವ್ವ

ಹೀಗೆ

ಮನಸಿನ ನಿರ್ಭಾವತನಕ್ಕೆ
ಮೂಕ ಸಾಕ್ಷಿಯು ನಾನಿಲ್ಲಿ
ಬಾಗಿಲು ಹಾಕಿದವರಾರು? ಗೊತ್ತಿಲ್ಲ...
ಹುಡುಕಿ, ಸುಮ್ಮನೆ ಕುಳಿತಿರುವೆನೀಗ ಕೈ ಚೆಲ್ಲಿ

ಬಾಗಿಲುಗಳಿದ್ದಿದ್ದರೆ ಎಷ್ಟು ಚೆಂದವಿರುತ್ತಿತ್ತು
ಬೀಗ ಹಾಕಿಕೊಂಡು, ಸುಮ್ಮನೆ ಕುಳಿತುಕೊಳ್ಳಬಹುದಿತ್ತು
ನೆರೆ ಮನೆಯವರ ಜಗಳವು ಹೊಸ್ತಿಲು ದಾಟಿ
ಒಳ ಬರುತ್ತಿರಲಿಲ್ಲ, ತೆರದ ಕಿಟಕಿಗಳಿಂದಾದರೂ...
ನೆಮ್ಮದಿಯನ್ನು ಕಂಡುಕೊಳ್ಳಬಹುದಿತ್ತು.

ಹೇಗೆ ತೆರೆಯಲಿ ಕಿಟಕಿಯನ್ನೂ ಧೈರ್ಯಮಾಡಿ!!!
ಸುತ್ತಲಿಂದಲೂ...ಸುತ್ತಿ..ಸುತ್ತಿ... ಸುಳಿಸುಳಿಯಾಗಿ
ಕೊಳೆತ‌ ಮನಸುಗಳ ವಾಸನೆಯೆ, ಹರಡುತಿಹುದಲ್ಲ!!!
ನನ್ನ ಮನೆಯಲ್ಲಿಯೇ ನಾ ಮೂಗು ಮುಚ್ಚಿಕೊಂಡು
ಕುಳಿತುಬಿಡಲೇ?

ಹುಚ್ಚನೆಂದುಬಿಡುವುದಿಲ್ಲವೆ!!!? ಅನ್ನುವುದೇನು?
ಕರೆಯುತ್ತಾರೆ, ಹುಟ್ಟಿಸುತ್ತಾರೆ, ಬರೆಯುತ್ತಾರೆ..
ಊರ ತುಂಬೆಲ್ಲಾ  ಸಸಿ ನೆಟ್ಟು ಬರುತ್ತಾರೆ, ಆಗಾಗ
ಬೇರೆಯವರ ಕೈಯಿಂದ ನೀರನ್ನು ಹನಿಸುತ್ತಾರೆ.

ಸುಮ್ಮನಿದ್ದುಬಿಡಲೆ.... ಹೇಡಿ ಎನ್ನುತ್ತಾರೆ, ಮಾತನಾಡಿ
ಬಿಡಲೆ... ಅಯ್ಯಯ್ಯೊ!!! ಬಾಯ್ಬಡಕ ಎನ್ನುವುದಿಲ್ಲವೆ.
ಹೇಗೆ ಇರಲಿ ನಾನು.. ಕುರಿಯಂತೆ, ಸಾಗುತಿರಲೆ ಮಂದೆಯೊಳಗೆ
ಹೆಜ್ಜೆ ಹಾಕಿದರೆ ನನ್ನ ಗಮ್ಯ...? ಎಲ್ಲಿಯದು ಬರೀ ಶೂನ್ಯ!!!
ಅಕ್ಷರದ ಲೋಕದಲ್ಲೂ ತಾರತಮ್ಯ!!, ಹೇಗಿದ್ದುಬಿಡಲಿ ನಾನು ಸೌಮ್ಯ?

ಬೇಕಿದೆ ನನ್ನ ಮನಸ್ಸಿನ ಬಾಗಿಲಿಗೊಂದು ಕೀಲಿ ಕೈ
ಎತ್ತಿಡಬೇಕಿದೆ, ಯಾರ ಕೈಗೂ ಸಿಗದ ಹಾಗೆ,
ಉಸಿರಬೇಕಿದೆ ಒಂದೆ ಸಲವಾದರು, ನೆಮ್ಮದಿಯ ಉಸಿರನು ಉಸಿರುಗಟ್ಟಿಸುವವರ ಮಧ್ಯದಲ್ಲೆ... ಕಾರಣ
ಬದುಕಬೇಕಿದೆಯಲ್ಲ ನಾನೂ... ಈ ಜಗದಲ್ಲೆ!!

ನಮ್ಮವ್ವ

ಕನ್ನುಡಿ‌ ಮುಂದ
ನಿಂತ್ಗೊಂಡ, ಹಣ್ಗಿಲೆ
ತಲೀ ಕೂದ್ಲಾನ
ಬಾಚ್ಗೊಳ್ಳಾಕ
ಬರುವಲ್ದು ನೋಡವ್ವ...
ವಲಿ ಮುಂದ
ಕುಂದ್ರಿಸಿ, ಕೊಣ್ಗಿ 
ಕೊಟ್ಟು... ಒಂದೊಬ್ಬಿ
ರೊಟ್ಟಿ ಬಡಿಯಂತಾರಲ್ಲೊ
ನಮ್ಮವ್ವ..

ನೆತ್ತಿ ಮ್ಯಾಲಿನ
ಬಿಸ್ಲ್
ತಡ್ಕೊಳ

ನಮ್ಮವ್ವ

ಕನ್ಯೆ ನೋಡೊ ಮುಂದ
ಹುಡ್ಗಿ ಬಂಗಾರ..ಬಂಗಾರ
ಆಗೀರ್ಬೆಕು ಅಂತಿರ್ತಾರ
ನೋಡವ್ವ...
ಬಂಗಾರದಂತ ಹುಡ್ಗಿ
ಸಿಕ್ಕ ಮ್ಯಾಲ, ಕಬ್ಬಿಣ್ದಂಗ
ಕಾಸಿ...ಕಾಸಿ ಬಡಿತಾರಲ್ಲೊ
ನಮ್ಮವ್ವ.

ಹುಡ್ಗಿ ಲಕ್ಷ್ಮೀ ಇದ್ದಂಗಿರ್ಲಿ
ಅಂತಂದ, ಮೈ ತುಂಬಾ ಲಕ್ಷ್ಮೀ
ಹಾಕ್ಕೊಂಡಕ್ಕಿನ ಮನಿ
ತುಂಬ್ಸಕೋತಾರು
ನೋಡವ್ವಾ...
ನಡೆಯೊ ಮುಂದ
ಲಕ್ಷ್ಮೀ ಕಟಾಕ್ಷ ಚೂರ
ಕಮ್ಮ್ಯಾದ್ರ...ಹಟ್ಟಿ 
ಹೊಸ್ತಲಾನ ದಾಟಿಸಿ
ಬಿಡ್ತಾರಲ್ಲೊ ನಮ್ಮವ್ವ

ಹೆಣ್ಣಿನ ಕಣ್ಣೀರ್ಗೆ
ಬೆಲೆ ಐತಿ ಅಂದಾರು,
ನ್ಯಾಯದ ತಕ್ಕಡ್ಯಾಗಿಟ್ಟು
ತೂಗಿ ನೋಡೊರಾದ್ರು
ಯಾರವ್ವ...
ಆಕಿ ಎದಿ ಮ್ಯಾಲಿನ
ಸೆರ್ಗ ಎಳಿಯೊರದಾರು...
ಮನಸ್ಸನ್ನ ಅರಿಯೊರು
ಯಾರ ಅದಾರೊ ನಮ್ಮವ್ವ

ತಮ್ಮಾ

ರೊಕ್ಕದ ಮಾರಿ ನೋಡಿ...
ಹಿಂದ ನಿಂತೋರ ನಂಬ್ಕಿ ಕುತ್ಗಿ
ಮೂರಿಬ್ಯಾಡೊ ತಮ್ಮಾ...
ಗೊತ್ತಿಲ್ಲೇನೊ? ಲಕ್ಷ್ಮೀ.. ಚಂಚಲ್ದಾಳ
ಇವತ್ತಿಲ್ಲೆ, ನಾಳೆ ಅಲ್ಲೆ, ಆಮ್ಯಾಕ
ಹಣಾ ಕೊಟ್ಟ ನಂಬ್ಕಿನ ಕೊಂಡ ತರಾಕ
ಆಗ್ತೈತೇನೊ ತಿಮ್ಮ

ಚಿಉ

ನನ್ನದೂ...
ಇಲ್ಲಿ ಇದೆ ಪಾಡು
ಗೆಳತಿ!
ನಿ ಕುಳಿತುಕೊಂಡ
ಕೆರೆ ದಂಡೆಯೇನೊ
ಗಟ್ಟಿಯಿದ್ದ ಹಾಗಿದೆ...
ನಿನ್ನ ನೆನೆದ ಮನದ
ದಂಡೆಯಿಲ್ಲಿ
ಮೆತ್ತಗಾಗಿದೆ.

ಮೌನವಾಗಿ
ಹೀಗೆ....
ಗಿಡದ ನೆರಳನಲ್ಲಿ
ನಿಂತುಕೊಳ್ಳಬೇಡ
ಗೆಳತಿ...
ಬಿಸಿ ಬರುವ
ತಂಗಾಳಿಯಲ್ಲಿ
ಎದೆಯ ಮಾತುಗಳನ್ನು
ಕಳುಹಿಸಿ ಕೊಟ್ಟಿದ್ದೇನೆ,
ಆಲಿಸದೆ...
ಸುಮ್ಮನಿರಬೇಡ.

ನಾ ಹೇಳುವ
ಮಾತುಗಳೆಲ್ಲ
ಕವಿತೆಗಳಾಗಿವೆ!
ನೀ ಹೇಳುವ
ಮಾತುಗಳಿಗೆ 
ಅವುಗಳೆಲ್ಲ....
ಈಗ
ಕಿವಿಯಾಗಿವೆ!

ಸೃಷ್ಟಿಯ
ಸೊಬಗದು
ಎಂದಿಗೂ
ಮುಗಿಯದ
ಯಾನ!!
ನೋಡುತ್ತಲೆ...
ಮಾಡುತ್ತಿರಬೇಡ
ಕಾಲಹರಣ..
ಮುರಿದುಬಿಡು
ಇಂದಾದರು
ಬಿಗು ಮೌನ!!

ಉಕ್ಕುವ ಬೇವರಿನ
ಬಗ್ಗೆ ಚಿಂತಿಸಬೇಡ...
ಅದು ಕಾಮದಲ್ಲೂ
ಹರಿಯುವುದು...
ಎಂಟಂಕಣದ
ಅರಮನೆಯೇನಿಲ್ಲ
ಬಂದು ಸೇರೊಮ್ಮೆ
ತೋಳ್ಬಂಧನದಲಿ
ಒಲವ ಸುಧೆಯೆ
ಹರಿಯುವುದು...

ಕಾಮ!!!!!!
ಬೇಡ...ಬೇಡವೆನ್ನುತಲೆ
ವಂಶಗಳೆ ಹುಟ್ಟಿ...
ಅಳಿದು ಹೋಗಿವೆ
ಈ ಮಣ್ಣಿನಲ್ಲಿ...
ಎಸಳು ಹೂಗಳನ್ನು
ಹೊಸಕಿ ಹಾಕುತ್ತಿರುವರು
ಕರುಣೆ ಇಲ್ಲದಲಿ..
ಮರೆತು ಬಿಟ್ಟೆಯಾ?
ಕಾಮಸೂತ್ರದ
ಕಟ್ಟನ್ನು ಕಟ್ಟಿಕೊಟ್ಟ
ಕೋಟೆಯಿದೆಂಬುದನು...
ಮರೆತುಬಿಡು, ಹೊರಗೆ
ಬಂದುಬಿಡು ಮೈ ಮೈಲಿಗೆಗಳಿಂದಾಚೆ
ಮಗುವಾಗಿ ಬಿಡು 
ಮಡಿಲೊಳಗೊಮ್ಮೆ... ತೇಲಿಸಿ
ಕರೆದೊಯ್ದು ಬಿಡುವೆ ಈ
ಲೋಕದಾಚೆ...
ಅಲ್ಲಿ ನವರಸಗಳ ಹಂಗಿಲ್ಲ
ಇವರು ಹೀಗೇಕೆ ಎಂದು ಹಂಗೀಸುವರು ಇಲ್ಲ...

ಬಿಟ್ಟು ಹೋದೆಯೆಂದು
ನಾನೇನು
ಸಾಯುವುದಿಲ್ಲ!!!
ಸಾಯುವೆನೆಂದರೆ?
ನಿನ್ನ ನೆನಪುಗಳು
ಬಿಡುವುದಿಲ್ಲ!!

ಸಿಂಹವೂ...
ಇಂದು ಹಳ್ಳಕೆ
ಬಿದ್ದಿದೆ!!!
ಉರಿದುರಿದು
ಮೆರೆಯುತ್ತಿದ್ದವರು
ಸದ್ದಿಲ್ಲದೆ ಮಣ್ಣಲ್ಲಿ
ಹೂತು ಹೋದದ್ದು
ಎಷ್ಟು ಜನರಿಗೆ
ಗೊತ್ತಿದೆ!!

ಎದೆಗೆ ಸುಧೆಯನ್ನು
ಸುರಿಯುತ್ತೇನೆ
ಎಂದವರು...
ಹೊಟ್ಟೆಗೆ ಹಾಲಾಹಲವನ್ನೆ
ಕುಡಿಸಿಬಿಟ್ಟರಲ್ಲ..!!
ಬೆನ್ನಿಗೆ ಚೂರಿ
ಹಾಕಿದ್ದರು ಚಿಂತಿಸುತ್ತಿರಲಿಲ್ಲ,
ನಂಬಿಕೆಯ ಕತ್ತನ್ನೆ
ಹಿಸುಕಿಬಿಟ್ಟರಲ್ಲ...!!

ಎಷ್ಟು ಮತ್ತು
ತುಂಬಿದೆ ಈ
ಒಂಟಿ 
ಕಣ್ಣಿನಲ್ಲಿ....!!!
ನೋಡುಗರ
ಎದೆ ಬಡಿತವು
ನಿಂತು ಹೋಗುವುದೇನೊ?
ಈ ಕ್ಷಣದಲ್ಲಿ!!!

ನನಗೂ...
ಮತ್ತೊಬ್ಬರ ಬೆನ್ನ
ತುಳಿದು, ಮೇಲೆ
ಹೋಗಲು ಸಾಕಷ್ಟು
ಅವಕಾಶಗಳಿವೆ!
ಹೀಗೆ ಹೋದಾಗ,
ಕೀಳರಿಮೆಯೆಂಬ 
ರಣಹದ್ದುಗಳು...
ನನ್ನನು ಕುಕ್ಕಿ
ತಿಂದು ಬಿಡುತ್ತವೆ!!

ಮೌಲ್ಯವಿದ್ದರೆ...
ಹರಿದ ನೋಟು
ಚಲಾವಣೆಗೊಳ್ಳುವುದು!!
ಬರೀ...ಧನವನ್ನೆ
ತುಂಬಿಟ್ಟುಕೊಳ್ಳುತ್ತಿದ್ದರೆ?
ಮಾನವೀಯ ಮೌಲ್ಯ
ದ್ವಿಗುಣಗೊಳ್ಳದು!!

ನಮ್ಮನೂ...
ಬೆಳೆಸುತ್ತಿದ್ದಾರೆ
ಎಂದುಕೊಳ್ಳುವುದು
ತಪ್ಪು...!!!
ನಮ್ಮಿಂದಲೆ
ಅವರು
ಬೆಳೆಯುತ್ತಿದ್ದಾರೆ
ಇದು 
ಒಪ್ಪು..!!!

ಕಲಬೆರಕೆ ಮಾಡಲು
ಬಾರದ, ತೆಂಗಿನಕಾಯಿಯ
ನೀರು... ಒಮ್ಮೊಮ್ಮೆ
ಹುಳಿಯಾಗಿರುವುದು
ಸಾಕಿ...

ಶುಭವಾಗಲೆಂದೆ
ದೇವರ ಮುಂದೆ
ಒಡೆಯುತ್ತಾರೆ
ಕಾಯಿ...!!!
ಶುಭ ಘಳಿಗೆ
ಬರುವವರೆಗಾದರೂ
ನೀನು ಸ್ವಲ್ಪ
ಕಾಯಿ...!!

ನಿದಿರೆ 
ಮಾಡಲು 
ಮುಚ್ಚಿಕೊಳ್ಳಲೆಬೇಕು
ಕಣ್ಣು ರೆಪ್ಪೆಗಳನ್ನು !!
ಮಲಗುವ ಮುಂಚೆ...
ನಾವಿಬ್ಬರು 
ಮುಚ್ಚಿಕೊಳ್ಳಲೆಬೇಕು
ಕೋಣೆಯ ಬಾಗಿಲನ್ನು !!!

ಹುಟ್ಟುತ್ತಲೆ
ಸಾವನ್ನು ಬೆನ್ನಿಗೆ
ಕಟ್ಟಿಕೊಂಡು
ಬಂದವರು ನಾವು!!
ಬಂದಾಗ ಬರಲಿ...
ಅಲ್ಲಿಯವರೆಗಾದರೂ
ತೆಕ್ಕೆಯಲಿ ಕೊಡುತ್ತಿರು
ನೀ... ಪ್ರೀತಿಗೆ
ಕಾವು!!!

ನಾಲಿಗೆಯ
ತುದಿಯಲ್ಲಿ
ಕಾರ್ಕೊಟಕ
ವಿಷವು ತುಂಬಿದೆ
ಕಚ್ಚಿಸಿಕೊಂಡವನು
ನಾನೊಬ್ಬನೇನಾ?
ಮದ್ದಿಲ್ಲದೆ
ತ್ರೇತಾಯುಗದಲ್ಲಿ
ಇದಕ್ಕೆ ಸೀತೆಯು
ಬಲಿಯಾಗಿದ್ದಾಳೆ
ಅವಳಿಗಿಂತಲೂ...
ನಾನು ದೊಡ್ಡವನಾ?

ಮರೆತಿಲ್ಲ
ನಾನು... ಹಳೆ
ಬಾವಿಯ ಕಟ್ಟೆ
ಬರುತ್ತಿದ್ದೆಯಲ್ಲ
ಒಗೆಯಲು ನೀನು
ಬಟ್ಟೆ
ನೀರನ್ನು ಸೇದಿ
ಹಾಕಲು 
ಎಷ್ಟೊಂದು
ಬಲವಿದ್ದವು ನನ್ನ
ರಟ್ಟೆ
ಸೇದಿಸಿಕೊಂಡು
ನೀನು ನನಗೇನು
ಕೊಟ್ಟೆ

ಅವಳನ್ನು
ಕಲ್ಪನೆಗಳ
ಭಾವದಲ್ಲಿ
ಬಂದಿಸಿಟ್ಟೆ....
ಕವಿಯಾಗಿ!!
ಬಿಗಿದಪ್ಪಿ
ಕೊಳ್ಳಲಾಗುತ್ತಿಲ್ಲ!!!
ವಾಸ್ತವದಲ್ಲಿ
ಪ್ರೇಮಿಯಾಗಿ...

ಅವಳು
ತಲೆಯನ್ನು
ನೇವರಿಸಿ...ನೇವರಿಸಿ
ಹಣವನ್ನು ಖಾಲಿ
ಮಾಡಿದಳು...
ಜೊತೆಗೆ ತಲೆಯೂ
ಬೋಳಾಯಿತು!!!
ಬೋಳಾದ ತಲೆ,
ಖಾಲಿಯಾದ ಬಕ್ಕಣವನ್ನು
ನೆನೆಯುತ್ತ ಕೂರುವುದೆ
ನನಗೊಂದು
ಗೋಳಾಯಿತು.

ಗೀತಾಧರ ಅವರ ಕವನಕ್ಕೆ

ಅವಳ ನೋಡಿ
ಹುಚ್ಚೆದ್ದು
ಕುಣಿದಿದೆ ಈ
ಮನಸಿನಾ
ಕೋಡಿ...
ರಾತ್ರಿಗಳು
ಕೂಡಾ 
ಹಗಲಾಗಿಬಿಟ್ಟಿವೆ..
ಅವಳ ಸಂಗವ
ಬೇಡಿ..

ಪರರರನ್ನು ತುಳಿದು
ಬದುಕವ ಕಲೆಯನ್ನು
ಈಗ ಯಾರಿಗೂ
ಹೇಳಿ ಕೊಡುವ
ಹಾಗಿಲ್ಲ!!!
ನಮ್ಮನ್ನು ತುಳಿದರು
ಸರಿ...
ಮತ್ತೊಬ್ಬರನು ಜೊತೆಯಲ್ಲಿ
ಏಳ್ಗೆಯತ್ತ ಕರೆದುಕೊಂಡೆ
ನಡೆಯೋಣ!!

ಕಾಗದಗಳಿಲ್ಲವೆಂದ
ಮೇಲೆ.... ಹೇಳಿಕೊಳ್ಳಬೇಡ
ಸುಂಕದಾರರ ಮುಂದೆ
ನಿನ್ನ ಪಾಡು!!
ಕೊಟ್ಟುಬಿಡೊಂದು
ಬಣ್ಣದ ನೋಟು..
ಅವರಿಗೂ ಸಾಕಾಗಿರುತ್ತದೆ
ಕೇಳಿ...ಕೇಳಿ... ನಮ್ಮಂಥವರ
ಹಾಡು!!

ಏಳೂರ
ನೀರನ್ನು ಹುಡುಕಬೇಡ
ಹುಡುಗಿ ಮುಳುಗಿಸಲು..
ಕೆರೆಗಳೆಲ್ಲ
ಬತ್ತಿ ಹೋಗಿವೆ!!!
ಚಿಂತಿಸಬೇಡ,
ತೊಟ್ಟು ವಿಷವನ್ನು
ಕೊಟ್ಟುಬಿಡು
ಕುಡಿದು....ಸತ್ತು
ಹೋಗುವೆ!!!

ನೆನಪಿಸಬೇಡ
ಮೂರಿದು ಬಿದ್ದ
ಹಳೆಯ
ಮಾತು!!
ಸಂಬಂಧವೆ
ಹಳಸಿದ ಮೇಲೆ
ಬೇಕೆ? ಹೊಸ
ಮಾತು!!

ನಾ ಕೊಟ್ಟ ಪ್ರೇಮದ ಗುಲಾಬಿ ತೊರೆದು
ಒಲವ ಎಸಳುಗಳನೆಲ್ಲವ ಹರಿದು
ಉಳಿದ ಮುಳ್ಳಿನ ಕಡ್ಡಿಯ ನನ್ನೇದೆಗೆ ಇರಿದು
ಹೊರಟು ಹೋದೆಯಲ್ಲ.. ಮರು ಮಾತನಾಡದೆ
ನನ್ನನು ತೊರೆದು

ಪ್ರೀತಿಯಲಿ
ನೀನೇನೊ
ನನ್ನೆದೆಯ ಮಧುವ
ಹೀರಿ ಹೋದೆ...
ಮರಳಿ ಬಾರದೆ
ಹೋದ ನಿನ್ನನು 
ನೆನೆ ನೆನೆದು ನಾ
ಈ ಪ್ರೀತಿಯಲಿ
ಬಾಡಿ ಹೋದೆ...

ವೀಣೆಯಾಗಬಾರದೆ ಮನಸೆ
ಅವಳೊಲವಿನ ರಾಗವ ಮೀಟಲು
ಅವಳಿಲ್ಲದ ಈ ಸಮಯದಲಿ
ವಿರಹಕೆ ಹಾಡಿ.... ಹಾಡಿ....
ಮಲಗಿಸಲು..

ಎಲ್ಲ ವಿಷಯಗಳನ್ನೂ...
ಗಂಟಲಲ್ಲಿಯೆ 
ಹಿಡಿದಿಟ್ಟುಕೊಳ್ಳಲು
ನಾನೇನು
ನೀಲಕಂಠನಲ್ಲ!!
ಹಾಗಂತ, ಕಂಡ
ಕಂಡವರ ಮೇಲೆ
ವಿಷ ಕಾರುವ
ಘಟಸರ್ಪವು
ನಾನಲ್ಲ!!!

ಕೊಳಕು ಬಟ್ಟೆಗಳನ್ನು
ತೊಳೆಯಲು ಈಗ
ಅಗಸನಿಗೇನೊ
ಕೊಡಬೇಕಿಲ್ಲ!
ಇದಕ್ಕಾಗಿಯೆ ಮೆಷಿನ್
ಒಂದು ಬಂದಿದೆ.
ಹೀಗೆ ನಂ ಮನಸಿನ
ಕೊಳೆಯನ್ನು ತೊಳೆದುಕೊಳ್ಳಲು
ಇನ್ನೊಬ್ಬರಿಗೆ ಅವಕಾಶವನ್ನು
ಮಾಡಿಕೊಡುವುದು ಬೇಡ

ಒಂದು ಹೆಣ್ಣಿನ
ಬಗ್ಗೆ ಮಾತನಾಡುವಾಗ
ನೂರು ಬಾರಿ
ಯೋಚಿಸು!
ತಪ್ಪು ಮಾಡಿದ್ದಾಳೆ
ಎಂದವರಿದಾಗ
ಕೆನ್ನೆಗೆರಡು
ಬಾರಿಸು!

ಮದ್ಯವನ್ನು
ಕುಡಿದು ಮಲಗಿದವರನ್ನು
ಬೇಕಿದ್ದರೆ
ಎಬ್ಬಿಸಬಹುದು
ಸಾಕಿ....
ಮದವನ್ನು
ಏರಿಸಿಕೊಂಡು
ಮಲಗಿಕೊಂಡವರನ್ನು
ಎಬ್ಬಿಸಲಾಗದು

ಗೆಳತಿ..
ನಿನ್ನ ಮೋಹಕ ನಗುವಿನಲಿ
ತೂಗಿದೆ ಎನ್ನೆದೆಯ ಜೋಕಾಲಿ 
ಆ ಕಾಲ್ಗೆಜ್ಜೆಯ ಸದ್ದಿಗೆ ಸೋತ
ಒಲವಿದು... ಜಿಕುತಿದೆ ನಿನ್ನದೆ
ನೆನಪಿನಲಿ.

ಮನ್ ಕಿ ಬಾತ್ ತುಮ್ ನಾ ಕಹೀ
ಹೊಂಟೊಸೆ..
ಮೈ ಜಾನ್ ಜಾತಾ ಹ್ಞೂಂ ಜಾನೆಮನ್
ತೇರಿ ಆಂಖೋಸೆ...

ನೀ ಕೊಟ್ಟು ಹೋದ
ಮುತ್ತಿನ ಮಳೆಗಳ
ಮತ್ತೆ... ಇಳಿದಿಲ್ಲವಿನ್ನೂ
ಆಷಾಡವು ಕೂಡುವ
ಮೊದಲೆ... ಇನ್ನಷ್ಟು
ಮುತ್ತುಗಳ ಮಳೆಯ
ಸುರಿಸಿ ಹೋಗಬಾರದೆ 
ತವರಿಗೆ...

ಕೆಲವರು 
ನಗುವುದಕ್ಕೆ
ನಾವು ಕೊಡಲೆಬೇಕು
ನಗದು!!!
ಮರಳಿಸುವೀರಾ
ಎಂದು ಕೇಳಿದಾಗ,
ನಿಮಗೆ ಉತ್ತರವು
ಸಿಗದು!!!

ಸದಾ ಬೆಂಕಿಯುಂಡೆಯನೆ
ಉಗುಳುತ್ತಿದ್ದ
ತೋಪು ಇಂದು
ನಿಶ್ಯಬ್ದವಾಗಿದೆ!!
ಅವಳು ಯಾವ
ಘಳಿಗೆಯಲ್ಲಿ ಕೈ
ಇಟ್ಟು ಹೋದಳೊ...?
ಅಂದಿನಿಂದಲೂ
ತಣ್ಣಗಾಗಿದೆ!!!

ಆದರ್ಶಗಳಲ್ಲಿ
ವೈರುದ್ಯವಿದ್ದವರೂ...
ರಾಜಿಯಾಗಿ
ರಾಜ್ಯಭಾರವನ್ನು
ಮಾಡುತ್ತಾರೆ!!

ಚು

ಈ ವರ್ಷ ನಮ್ಮ ಭಾಗದ,
ಅದೇಷ್ಟೊ ಹಳ್ಳಿಗಳ 
ಮನೆಗಳಲ್ಲಿ ಬೆಳಗುತ್ತಿಲ್ಲ
ದೀಪ!!
ಹಬ್ಬದ ಸಂತಸಕ್ಕೆ 
ತಣ್ಣೀರೆರಚಿ, ನಗುತ್ತಿದ್ದಾನೆ
ಮಳೆರಾಯ. ತೋರಿ
ತನ್ನ ಪ್ರತಾಪ!!

ನಡು ನೀರಿನಲ್ಲಿ...
ನಿಂತವರ ಮಧ್ಯದಲ್ಲಿ
ನಾ ಹೇಗೆ ಆಚರಿಸಿಕೊಳ್ಳಲಿ
ದೀಪಾವಳಿ!!!
ಸಾಕು...ಸಾಕೆಂದರು
ನಮ್ಮೆಲ್ಲರ ನೆತ್ತಿಯ
ಮೇಲೆ ರುದ್ರನರ್ತನಗೈಯ್ಯುತಿದೆ
ಮಳಿ!!

ಮೆಹಂದಿ ಹಚ್ಚಿಕೊಳ್ಳಬೇಕಿದ್ದ
ಹೆಂಗಳೆಯರ ಕೈಗಳಿಗೆಲ್ಲ 
ಮೆತ್ತುಕೊಂಡಿದೆಯಿಂದು
ಕೆಸರು!!
ಮನೆಯಂಗಳವು ಹಳ್ಳವಾದ
ರೀತಿಯ ಕಂಡು...ಬಿಡುತ್ತಿರುವರೆಲ್ಲ
ನಿಟ್ಟುಸಿರು!!

ಹೌದು, ಉಳಿತಾಯ
ಖಾತೆಯಲ್ಲಿ ಹಣವು
ಬಂದು ಬಿದ್ದಿದೆ!!!
ಇದರಿಂದಲೆ, 
ಬದುಕನ್ನು ಕಟ್ಟಿಕೊಳ್ಳಬಹುದೆ?
ಎಷ್ಟು ಜನರಿಗೆ
ಗೊತ್ತಿದೆ.

ಅವನ ಅಟ್ಟಹಾಸಕ್ಕೆ
ನಲುಗಿ ಹೋಗಿರುವ
ಈ ಹೂವುಗಳೆ
ಸಾಕ್ಷಿ!!!
ಸುಂಕ ಕಟ್ಟುವರಾರು?
ಕಂಡು..ಕಂಡು..
ಬೆಂದು ಹೋಗುತ್ತಿದೆ
ಮನಸಾಕ್ಷಿ!!

ಚು

ಚುಟುಕುಗಳು

ವರುಣ ಕೊನೆಗೂ
ಭೂರಮೆಯನ್ನು
ಚುಂಬಿಸಿಯೇ..
ಬಿಟ್ಟ.
ನೋಡಿಲ್ಲಿ...
ಎಲೆಗಳೆಲ್ಲ ನಾಚಿ,
ರಂಗೇರಿಬಿಟ್ಟಿವೆ
ಸಾಕ್ಷಿಗೆ

ಮನುಷ್ಯನ ಆಸೆ
ಗುಡಿಯ ಮುಂದಿರುವ
ಹುಂಡಿ...
ಎಂದಿಗೂ ಬತ್ತದ
ಒರತೆಗಳು.

ಕಾಯಿ
ಒಡೆಸಿದ್ದೇನೊ
ಬನಶಂಕರಿ
ತಾಯಿಗೆ.
ರುಬ್ಬಿ
ಹಾಕಿಬಿಡುವುದಿಂದೆ
ತಿಳಿ
ಸಾರಿಗೆ.

ನೋಡಿಲ್ಲಿ
ಸೂಜಿ ಮಲ್ಲಿಗೆ
ದುಂಡು ಮಲ್ಲಿಗೆ
ಕನಕಾಂಬರಿ.
ಪುಟ್ಟಿಯಲ್ಲಿ ತುಂಬಿಟ್ಟಿರುವೆ
ಎಲ್ಲ....ಬಾಡುವ ಮುನ್ನ 
ನೀ ಬರಬೇಕಿಲ್ಲಿಗೆ

ಹಿಡಿ ತುಂಬಾ
ಒಂದಿಷ್ಟು ಮಲ್ಗಿ
ಹೂವಾ ತಂದೀನಿ...
ನಾಚ್ಗೊಂತ ನಿಂದ್ರಬ್ಯಾಡ
ನೀ... ಮನಿ ಬಾಗ್ಲ
ಸಂದ್ಯಾಗ...
ಹೊತ್ತು ಮೀರಿ ಹೊಕ್ಕೈತಿ..
ಹೊತ್ತ ಮೀರ್ತಂದ್ರ
ಹೂ ಬಾಡಿ
ಹೊಕ್ಕೈತಿ....
ಹೂ ಬಾಡಿ ಹೋದ್ವಂದ್ರ
ನಾ ಸತ್ತ್....
ಹೊಕ್ಕೇನಿ..

ಕೆತ್ತಿರುವ
ಶಿಲೆಗಾರನಿಲ್ಲ,
ಸ್ತಂಭವಿದೆ.
ಕುಂಬಾರನಿಲ್ಲ,
ಮಾಡಿಟ್ಟ
ಹಣತೆಯಿದೆ.
ಎಣ್ಣೆ, ಬತ್ತಿಯ
ಹಾಕಿ, ಕಾಯುವ
ಪ್ರೇಮಿಯಿದ್ದೇನೆ.
ದೀಪ ಬೆಳಗಿಸುವ
ಜೀವ ಮಾತ್ರ...
ಸನಿಹದಲ್ಲಿಲ್ಲ.

ಸಾಲು ಕಂಬಗಳ
ಹಿಂದೆ....
ಸಾಲಲಾರದಷ್ಟು
ಕಥೆಗಳಿವೆ.
ನಾನೂ....
ಕಥೆಯಾಗಲೆಂದೆ
ಬಂದವನೇನಲ್ಲ.
ರಂಗೀಯು ಬರದಿದ್ದರೆ?
ನನ್ನ ಕಥೆಯನ್ನು
ಕಂಭಗಳೆ
ಹೇಳುವವಲ್ಲ!!!

ಹೆತ್ತ ಮಕ್ಕಳಿಗಿವಳು
ಹಡದವ್ವ...
ನಮ್ಮಂಥ ಹೊತ್ತು
ಗೊತ್ತಿಲ್ಲದೆ...
ಊರೂರು ಅಲೆವ, 
ಅಲೆಮಾರಿಗಳಿಗೆ
ಕೈ ತುತ್ತನಿಟ್ಟು, 
ತನ್ನೊಡಲ ಹಸಿವ,
ಇಂಗಿಸಿಕೊಳ್ಳುವ
ಕಾಯಕವ್ವ.

ತಲೆಯಲ್ಲಿ ನೆರೆತ
ಕೂದಲುಗಳನೇಣಿಸುತ
ನೀ...ಕೂರಬೇಡ.
ನಿನ್ನೊಲವ ಬೇರು
ಎದೆಯಾಳಕೆ 
ಇಳಿದು... 
ಹಣ್ಣನ್ನು ಬಿಟ್ಟಿದೆ.
ತಡಮಾಡದೆ,
ಓಡೋಡಿ ಬಾ
ಹಣ್ಣು ಮಣ್ಣ
ಸೇರುವ ಮುನ್ನ.

ಅದ್ಹೇಗೆ...
ಭೂದೇವಿಯನ್ನು
ಹೊತ್ತು ನಿಂತಿರುವೇಯೊ!!!
ತುಸು ತಾಳ್ಮೆಯನ್ನಾದರು
ಅನುಗ್ರಹಿಸು
ವರಹಾ....
ಸ್ವಾಮಿ.
ನನ್ನ ರಮೆಯು
ಬಾರದೆ....
ಉರಿದು 
ಹೋಗುತ್ತಿರುವನಿಲ್ಲಿ
ವಿರಹಿ ಪ್ರೇಮಿ.

ಕಾಯಿಸುವುದು
ನಿನಗೆ 
ಹೊಸತಲ್ಲ...
ಕಾಯುವುದು...
ಬೇಯುವುದು ನನಗೂ
ಹೊಸತೇನಲ್ಲ...
ಬಿಸಿಲು...!!!
ನಿನ್ನೆಯ ಹಾಗಿಲ್ಲ,
ಅಳಿದುಳಿದ ತಾಳ್ಮೆಯು
ಉರಿದು ಹೋಗುವ
ಮುನ್ನ... ನೀ ಬಂದು
ಸೇರು ನನ್ನನ್ನ.

ಕಲ್ಯಾಣಿಯೇನೊ
ಬತ್ತಿ ಹೋಗಿದೆ
ನಮ್ಮೆಲ್ಲರ ದುರಾಸೆಯಿಂದ.
ಚಿಂತೆಯಿಲ್ಲ !!! ಯಾರಿಗೂ....
ಜೀವ ಜಲವೇ...
ಇಂಗಿ ಹೋದ ಮೇಲೆ,
ನಾವಿನ್ನು ವರ್ಷಗಳನ್ನೇಣಿಸುವದರಲ್ಲಿ
ಅರ್ಥವಿಲ್ಲ.
ಏನು ಮಾಡುವುದು?
ಸ್ವಾರ್ಥವೆ ತುಂಬಿ ಬಿಟ್ಟಿದೆ
ಜಗದಲೆಲ್ಲ..

ಮೊನ್ನೆತಾನೆಯಷ್ಟೆ
ಬೇವಿನ ಕಹಿಯನುಂಡು
ಇಂದು...
ಮಾವಿನ ನೆರಳಿನಲ್ಲಿ
ಕುಳಿತಿರುವೆ.
ನೀ ಬರುವ ಹಾದಿಗೆ
ಹೂ ಹಾಸುವಷ್ಟು
ನಾನು ಸಾಹುಕಾರನಲ್ಲ.
ಪದಗಳಲ್ಲಿ ನಿನ್ನಂದವ
ಕಟ್ಟಿಕೊಡಲಾರದಷ್ಟು
ಬಡವನು ಅಲ್ಲ.

ನಿನ್ನನೂ...
ಬೇವಿನಮರಕ್ಕೆ
ಜಡಿದುಬಿಟ್ಟರಾ?
ತುಕ್ಕು ಹಿಡಿದರೇನಾಯಿತು
ನಿನಗೆ....ಪತ್ರಗಳೆ
ಬರುವುದಿಲ್ಲವಾ?
ನನಗೂ...
ವಯಸ್ಸಾದರೇನಾಯ್ತು?
ಎದೆಯಲ್ಲಿ  ಪ್ರೀತಿಯೇ....
ಉಕ್ಕುವುದಿಲ್ಲವಾ?.

ನೀನು....
ಬಿಟ್ಟು ಹೋದ
ಘಳಿಗೆ...ನೋಡು,
ನಿತ್ಯ ಹರಿದ್ವರ್ಣದಲ್ಲೆಲ್ಲೂ...
ಚಿಗುರಿಲ್ಲ.
ಚಿಗರಿ ಇಲ್ಲದ
ಕಾಡಿನಲ್ಲಿ...
ಸಾರಂಗವು
ಒಂಟಿಯಾಗಿಯೇ
ಅಲೆಯುತ್ತಿದೆ
ದಿಕ್ಕಿಲ್ಲದಂತೆ,
ಇದರರಿವು
ನಿನಗಿಲ್ಲ!!!

ಪುಣ್ಯಕ್ಕೆ....
ನೀನಿಲ್ಲದ
ಹೊತ್ತಿಗೆ,
ಕಲ್ಲುಗಂಭಗಳ
ನಡುವೆ ನಿಂತಿರುವೆ,
ಬದುಕಿರುವೆ.
ನಾಲ್ಕು ಜನರ
ಮದ್ಯವಿದ್ದಿದ್ದರೆ?

ಹೌದು...
ಇಂದು ಕಣ್ಣಿಗೆ
ಬಣ್ಣದ ಕನ್ನಡಕವನ್ನು
ಹಾಕಿಕೊಂಡಿರುವೆ.
ಚೆಂದ ಕಾಣುತ್ತೆನಂತಂದಲ್ಲ!!!
ಕಣ್ಣೊಳಗಿನ
ನೋವು....ನಿನ್ನನು
ನೋಯಿಸದಿರಲೆಂದು.

ತಲೆಯ ಮೇಲೆ
ಹೂವಿನ
ಚಪ್ಪರವಿಲ್ಲ!!!
ಕಲ್ಲು ಚಪ್ಪಡಿಯಿದೆ.
ನೋಡಿದವರೆಲ್ಲ
ಏನು ಅಂದಾರು.
ನಮ್ಮಿಬ್ಬರ ಕುರಿತು
ಏನೆಲ್ಲ ಸುದ್ದಿಯ
ಬಿತ್ತಾರು...


ಈ ವರುಷ...
ಮಲ್ಲಯ್ಯನ
ತೇರು...
ಪಥವನ್ನು 
ತಪ್ಪಿ ನಿಂತಿದೆ.
ನೀನೂ...
ಹಾದಿಯನ್ನು
ತಪ್ಪಬೇಡ!!!
ನಿನ್ಹೆಸರಲಿ
ಉಸಿರೊಂದು
ಜಪ ಮಾಡುತಿದೆ
ತಡ ಮಾಡಬೇಡ!

ಜಾತ್ರೆಯ 
ತಯಾರಿಗಾಗಿ
ಗೋಡೆಗಳಿಗೆಲ್ಲ
ಬಳಿದಿದ್ದಾರೆ 
ಸುಣ್ಣ...
ತುಸು ಹೆಚ್ಚಾದ್ರೂ
ಪರ್ವಾಗಿಲ್ಲ...
ಜಾತ್ರೆಗೆ, ಹಚ್ಗೊಂಡ
ಬಾ ನೀ...
ಮುಖಕ್ಕ ಬಣ್ಣ...

ತುಳಿದು ಹೋದವರ
ಹೆಜ್ಜೆ ಗುರುತೊಂದೊ....
ಮೆಟ್ಟಿಲುಗಳ ಮೇಲೆ
ಮೂಡಿಲ್ಲ...!!!
ತುಳಿಯಿಸಿಕೊಂಡು,
ಎಲ್ಲರನೂ ಮೇಲಕ್ಕೆ
ಕಳುಹಿಸಿದೆನೆಂಬ
ಜಂಭ... ಯಾವ
ಮೆಟ್ಟಿಲುಗಳಲ್ಲೂ
ಇಲ್ಲ..!!

ಗಾಲಿ
ಹೋಳಾಗಿ
ಬಿದ್ದಿದೆ...
ಯಾರಿಗಿಲ್ಲ
ಇದರ ಚಿಂತನೆ!
ಬಹುಶಃ...
ಇದು ಅನುಭವಿಸುತ್ತಿರುವುದೇನೊ?
ನನ್ನ ಹಾಗೆ
ಮೂಕ ವೇದನೆ!

ನಾಟಕಗಳಲ್ಲಿ 
ಮಾಡಿದ್ದೀರಿ...
ಎಂತೆಂತಹ
ಪಾತ್ರಗಳನ್ನು!!!
ಮುಗಿಸಿ
ನಡೆದಿರಲ್ಲ
ಇಂದು
ಬದುಕಿನ
ಪಾತ್ರವನ್ನು!!!
🙏🙏🙏🙏

ಇಂದೇನೊ
ಬೆನ್ನೆಲುಬಿಗೆ 
ರಜೆ
ಆಲೀಸುವರಾರು
ಹೊಟ್ಟೆಗೆ
ಬೀಳುವ
ಸಜೆ

ಕಡೆದು
ಸುಟ್ಟು ಬಿಟ್ಟರೂ...
ಮತ್ತೆ ಚಿಗುರಿ, 
ಹೂಗಳರಳಿಸಿ
ತೋರುತ್ತಿದೆ
ಪ್ರೀತಿ..
ಸುಟ್ಟ ಮನಗಳು
ಅರಿತುಕೊಳ್ಳುವವೇ...
ಇದರ ರೀತಿ
ನೀತಿ

ಬಾಡಿ ಹೋಗಿವೆ
ಗುಲಾಬಿಯ
ಹೂಗಳು
ಸುಡು ಬಿಸಿಲಿಗೆ!!
ಪ್ರೀತಿಯಿಂದ,
ಬಣ್ಣದ ಹಾಳೆಗಳಲ್ಲೆ
ಮಾಡಿಟ್ಟಿರುವೆ
ಹೂಗಳನ್ನು...
ನೀ ಬರದಿದ್ದರೆ!!
ಇವೂ... 
ಉರಿದು ಹೋಗುವವು.. 
ನನ್ನೆದೆಯ ವಿರಹದ 
ಬಿಸಿಗೆ

ಹೌದು ನಾನು
ಸ್ವಲ್ಪ ದಪ್ಪ
ಆದರೂ...
ನಾನಲ್ಲ ಬೆಪ್ಪ
ಸೋತಿರುವೆ,
ಕೊಟ್ಟುಬಿಡಲೆ
ಇಂದೆ... 
ನಿನ್ನ  ರಂಗೇರಿದ
ಕೆನ್ನೆಗಳಿಗೆ ಮುತ್ತುಗಳ
ಕಪ್ಪ..

ನಿನ್ನ ನೆನೆದಾಗಲೆಲ್ಲ...
ಮನಸ್ಸು ಮೆತ್ತಗಾಗುತ್ತಿತ್ತು..
ನಿನ್ನ ನೆನೆದಾಗಲೆಲ್ಲ...
ಮನಸ್ಸು ಮೆತ್ತಗಾಗುತ್ತಿತ್ತು..
ನೀನು.. ಬಿಟ್ಟು ಹೋದ 
ಮೇಲೆಕೆ....ಈ
ಮನಸ್ಸು ಕಲ್ಲಾಗಲಿಲ್ಲ

ಬೆರಸದಿರು ನೋಟಕ್ಕೆ
ನೋಟವ...
ಕಣ್ಣುಗಳವೇಷ್ಟು
ಮಾತನಾಡಿಕೊಳ್ಳುತ್ತವೆ,
ನಿನಗೆ ಗೊತ್ತಾ...?
ಬಿಡುವುದೆ ಇಲ್ಲ ರಾತ್ರಿಗೆ 
ನಿದ್ರಿಸಲು...
ಎಚ್ಚರವಾಗಿಯೆ ಇರುತ್ತವೆ
ನನ್ನ ನಯನಗಳು 
ನಿನ್ನನೆ ನೆನೆಯುತ್ತಾ...

ಮನಸಿನಲ್ಲಿ ಅವಳಿಗೆಂದೆ..
ಕನಸೊಂದು ಮೂಡಿತು..
ಒಪ್ಪಿಸಿಬಿಟ್ಟೆ ಕಾಗದಕ್ಕೆ
ಕಾಗದವು ಆ ಕನಸಿನ
ಸಾಲುಗಳನೊದಿ..
ಅವಳಿಗಿಂತಲೂ... 
ಹೆಚ್ಚು, ಇದೆ
ನಾಚಿ ಮುದುಡಿಕೊಂಡಿತು

ಸಮಾಜ
ಅದೇಷ್ಟು
ಬೆಂದಿದೆ!!!
ಅದಕ್ಕೆ 
ಇವಳನ್ನು
ಅರೆಬರೆ
ಸುಟ್ಟಿದೆ!!!

ಬ್ಯಾಟರಿಯು
ತಣ್ಣಗಾದರೆ?
ಗಡಿಯಾರದ
ಮುಳ್ಳೂ...
ನಿಂತು 
ಹೋಗುವುದಿಲ್ಲವೇನು?
ನೀನು
ಸುಮ್ಮನಾದರೆ?
ನನ್ನೆದೆಯ ಬಡಿತವು
ನಿಂತು ಹೋಗುವುದಿಲ್ಲವೇನು?

ಮನೆಯ
ಬಾಗಿಲಿಗೆ 
ಹಾಕಿದೆ ಬೀಗ
ಮನಸ್ಸಿಗಲ್ಲ!
ಕೂಗಿ ಬಿಡು
ಒಮ್ಮೆ
ಕರೆಗಂಟೆಯ
ಹಾಗೆ, ಬಂದು
ಬಿಡುವನು ಈ
ನಲ್ಲ!!

ಅವಳು
ಕವಿತೆಯಾಗಲೆಂದೆ
ಬಂದವಳು...
ಕಥೆಯಾದಳು!
ನಾನು!!!!!?
ಕಾದಂಬರಿಕಾರನಾದೆ.

ನಾನೂ...
ಸಾಯಬಹುದು
ಇಂದೊ...ನಾಳೆಯೊ
ಈಗಲೊ..
ದಿನಗಳನ್ನಲ್ಲ,
ಕ್ಷಣಗಳನ್ನು
ಲೆಕ್ಕವಿಟ್ಟಿಲ್ಲ
ಇಟ್ಟುಕೊಂಡುವರು
ನನಗೀನ್ನು
ಎದುರಾಗಿಲ್ಲ!

ಕೈಯ ಮೇಲೆ
ಕೈಯಿಟ್ಟು
ಆಣೆ 
ಮಾಡಿದ್ದವಳು
ಕಾಣೆಯಾಗಿದ್ದಾಳೆ!
ಹುಡುಕಿಕೊಂಡು
ಹೊರಟಾಗ,
ಅವಳೀಗ
ಮದುವೆ ಮಂಟಪದಲ್ಲಿದ್ದಾಳೆ!!!

ತವರಿಗೆ
ಹೋದವಳು
ಹೇಳಿದ್ದಳು ಬರುತ್ತೇನೆ
ಇಂದು ಸಂಜೆ!
ಬರದಿದ್ದರೆ!!!!!!
ಎಲ್ಲ ಪಾತ್ರೆಗಳನ್ನು
ನಾನೆ ತಿಕ್ಕಬೇಕಲ್ಲ
ಎಂತಹ
ಸಜೆ!!

ನಿನ್ನ ಚಿಗುರು 
ಮೀಸೆಯ ನಗುವಿಗೆ
ಸೋತು ಹೋಗಿದೆ
ಮನಸು...
ರಪ್ಪೆಗಳೆರಡು 
ಅಪ್ಪಿಕೊಳ್ಳುತ್ತಲೆ...
ಇಲ್ಲ, ನಲ್ಲ
ಬರಿ ನಿನ್ನದೆ
ಕನಸು..


ಕಡೆದು, ಗೂಡಿಸಿ
ಹಾಕಿಬಿಟ್ಟೆ...
ಹೊಲದೊಳಿದ್ದ
ಕಸ-ಕಡ್ಡಿ,
ಮುಳ್ಳು ಕಂಟಿಗಳ...!!
ಕಿತ್ತೊಗೆಯಲೆ
ಆಗುತ್ತಿಲ್ಲ....
ಮನದಾಳದಲ್ಲಿ
ಬೇರು ಬಿಟ್ಟಿರುವ
ಮೋಹ-ವ್ಯಾಮೋಹಗಳ..!!

ನನ್ನ ಬಗ್ಗೆ
ನಿನಗಿಲ್ಲ
ಒಂಚೂರು
ಮರುಕ...
ನನ್ನೆದೆಯ
ನೋವಿಗೆ,
ಭೂಮಿಯು
ಬಿಟ್ಟಿದೆ ನೋಡ..
ಬಿರುಕ

ಅಲ್ಲಿ ನಿನ್ನ
ಮನದಲ್ಲಿ
ತುಂಬಿದೆ
ಕತ್ತಲು!!
ಇಲ್ಲಿ ನನ್ನ
ಮನಸ್ಸಿಗೆ
ಹತ್ತಿದೆ
ಗೆದ್ದಿಲು!!

ಹೂಗಳನ್ನು 
ಮೂಸಬೇಡ,
ಅವುಗಳೆದೆಯಲ್ಲಿ
ಸುಗಂಧವಿಲ್ಲ!!
ನನ್ನನೆ ದಿಟ್ಟಿಸಿ
ನೋಡಬೇಡ,
ನಾನು 
ಅಂದವಿಲ್ಲ!!!
ಆದರೆ ಎದೆಯಾಳಕ್ಕೆ
ಇಳಿದು ನೋಡು..
ಮತ್ತೆ ನೀ...
ಎದ್ದು ಬರುವುದೆ
ಇಲ್ಲ!!!

ಖೇದವೇನಿಲ್ಲ!!
ನಿಂತು ಹೋಗಲಿ
ಉಸಿರು...
ನಿನ್ನ ಹೆಸರಿನಲ್ಲೆ
ಘಾಸಿಗೊಳಿಸಿದರು
ಮನಸ್ಸನ್ನು
ಉಸಿರಾಡುತಿರಲಿ
ಹೇಗೆ?
ನೋವಿನಲ್ಲೆ!!

ನಾನು
ಬಂಗಾರವೇನಲ್ಲ!!
ಕಬ್ಬಿಣವಂತೂ
ಮೊದಲೆ ಅಲ್ಲ!!
ಒಂದನ್ನು ಅರಿತಿಕೊ...
ತಾಮ್ರ ಬೆರೆಯದೆ
ಬಂಗಾರವು ರೂಪಗೊಳ್ಳದು,
ನೀನು ಸೇರದೆ...
ನಮ್ಮ ಬಾಳು
ಹೊನ್ನಾಗದು.

ಹಪ್ಪಳದ ಹಿಟ್ಟನ್ನು
ಹದವಾಗಿ ಲಟಿಸಲು
ಅವಳ ಕೈಯ್ಯಲ್ಲಿದೆ
ಲಟ್ಟಣಿಗೆ!!
ಹೇಳುವುದು, ಕೇಳುವುದು
ಮಾಡಬಾರದು ಈ
ಹೊತ್ತಿಗೆ!!
ಕೇಳಿದರೆ?!!!! ಸಿಗಬಹುದೇನೊ?
ಹೆಚ್ಚಿಗೆ!!

ಕಾಯಕವೇ
ಕೈಲಾಸವೆಂದ
ಬಸವಣ್ಣ....!!
ಕಾಯಕವ ಮರೆತು,
ನಿನ್ನ ಹೆಸರನ್ನೆ
ಹೇಳಿಕೊಂಡು
ಉದರವ 
ಹೊರೆಯುತಿಹರು
ನೋಡಣ್ಣ!!!!

ನೆತ್ತಿಯು
ಸುಡುವುದೆಂದರೆ
ಹೊಟ್ಟೆಯು
ತುಂಬುವುದೇನು?
ನಂ ಕೆಲಸವನ್ನು
ನಾವೆ ಮಾಡಿಕೊಳ್ಳದಿದ್ದರೆ!!!
ಕಾಯಕಕ್ಕೆ
ಅರ್ಥವುಂಟೇನು?

ನಾನು...
ಹೊಲಸು
ತಿಂಬುವ
ಹೊಲಿಯ...!!!
ನಾದರೂ...
ಅನುಸರಿಸೇನು
ಇಬ್ಬಗೆಯ
ನೀತಿಯ!!

ಬೇಡಿ ಬಂ್ಇರುವೆ
ಹನುಮ...
ತೂಗಿ ನೋಡು
ನನ್ನ ಕರ್ಮ

ಶುಭ ಕಾರ್ಯಕ್ಕೆಂದೆ
ಸುಣ್ಣದ ಗೋಡೆಯ
ಮೇಲೆ ಸುರಿದಿದ್ದಾರೆ
ಸುರುಮಾ...



ಶಾ

ಮಸಣವಾದರೇನು?
ಹೂಬನವಾದರೇನು?
ಅವಳೆ ಇಲ್ಲದ ಮೇಲೆ
ಸಾಕಿ...
ನನ್ನುಸಿರೆ... ನಿಂತು ಹೋದ
ಮೇಲೆ,
ಮಧು ಮಂಚವನು ಸಿಂಗರಿಸಿದರೇನು?
ಗೋರಿಗೆ ಹೂವಿನ ಚಾದರವ
ಹೊದಿಸಿದರೇನು?

ಚು

ಚುಟುಕು

ನೀನು....
ಕಸದಲ್ಲೆ, ಹುಟ್ಟಿದ್ದರು
ಸೂಸುವ ಸುಗಂಧ
ಮಾತ್ರ ದುರ್ಗಂಧವಾಗಿಲ್ಲ!!


ಮಾಡಿದ್ದನ್ನು ಇಲ್ಲಿಯೆ
ಉಂಡು ಹೋಗಬೇಕು!
ಪಾಪದ್ದು...
ಹಳಸಿ ಹೋಗುತ್ತದೆ!!
ಪುಣ್ಯದ್ದು, ಹೊಟ್ಟೆಯನ್ನಾದರು
ತುಂಬಿಸುತ್ತದೆ!

ಎಷ್ಟು ದರವಾದರೇನು?
ಖರಿದೀಸಿಕೊಳ್ಳಬೇಕೆಂದಿದ್ದೆ
ಈ ಸೀರೆಯನ್ನು 
ನನ್ನವಳಿಗಾಗಿ...
ಖರಿದಿಸಲಿಲ್ಲ!!!
ಕಾರಣವಿಷ್ಟೆ, ಇದರಷ್ಟು
ನುಣುಪು ನಡವು
ನನ್ನವಳದ್ದು ಇಲ್ಲದ್ದಕ್ಕಾಗಿ

ಸಾಲು ಕದ್ದವನ
ಮಾತು ಬಿಡು! ಅವನೇನು
ಭಾವವ ಕದಿಯಬಲ್ಲನೇನು?
ಮನಸ್ಸು ಕದ್ದವಳು
ನೀನು... ಬಾ ಇಲ್ಲಿ
ಉತ್ತರಿಸು, ಈ ವಿರಹದ
ಸೆರಮನೆವಾಸಿಯನ್ನು
ಬಿಡಿಸಿಕೊಂಡು ಹೋಗುವುದು
ಯಾವಾಗ?

ನನ್ನೆದೆಯೆ..
ಕತ್ತಲೆಯ ಕೂಪ!
ನಾನೇಕೆ ಹಚ್ಚಲು
ಹೋಗಲಿ...
ಬೇರೆಯವರಂಗಳದಲ್ಲಿ
ದೀಪ!!

ಇದಲ್ಲವೇನು ಮೋಸ?
ತುಟಿಯಂಚಿನಲ್ಲಿಯೆ.. ತುಂಬಿಟ್ಟು
ಕೊಂಡಿರುವೆಯಲ್ಲ,
ಮಧುರಸ...
ಅರಿವಾಗುತ್ತಿಲ್ಲವೇನು?
ಬಾಯಾರಿ.. ಕುಳಿತಿಹನಿಲ್ಲಿ
ಪ್ರೇಮದಾಸ!

ಕಲ್ಲು ಗೋಡೆಗಳಿಗಾಗಿ
ನಿಮ್ಮ ಮನಸ್ಸುಗಳನ್ನು
ಕಲ್ಲಾಗಿಸಿಕೊಳ್ಳಬೇಡಿ!
ಇಲ್ಲಿ ಯಾವುದು
ಶಾಶ್ವತವಲ್ಲ!! ಇದ್ದ
ನೆಲವನ್ನೆ, 
ಸ್ವರ್ಗವಾಗಿಸಿಕೊಂಡುಬಿಡಿ

ಎಷ್ಟರ ಮೆರದಾಡ್ತಿದಿ ಓಣ್ಯಾಗ
ಮೂಗಿಗೆ ಚುಚ್ಚಿಸಿಕೊಂಡ ದೊಡ್ಡ ಮೂಗುತಿ
ಕೇಳ್ದೊರ ಮುಂದೆಲ್ಲ, 

ಭಾರವಾಗುವುದಿಲ್ಲೇನು?
ಚೆಲುವೆ, ಮೂಗಿಗೆ
ಈ ನತ್ತು!!
ತರದಿದ್ದರೆ ಸಾಕು...
ನಿನ್ನ ಸೌಂದರ್ಯಕ್ಕೆ
ಕುತ್ತು!!

ಪ್ರೀತಿಯೂರಿನಲ್ಲಿ
ನೋವಿಗೆ ಮದ್ದಿಲ್ಲವೆಂದರಿತಿದ್ದರೂ
ಹೆಜ್ಜೆ ಇಟ್ಟೆ!
ಮರಳಲಿ ಹೇಗೆ?
ಅವಳಿಲ್ಲದೆ ಬರಿಗೈಯಲ್ಲಿ!
ಸಾವಾದರು ಬರಬಹುದಲ್ಲ!!!
ಕರೆಯಲೆಂದು, ಅದಕೆ
ಇಲ್ಲಿಯೇ... ಸುಮ್ಮನೆ
ಕುಳಿತುಬಿಟ್ಟೆ!!

ಕಣ್ಣ ಹನಿಗಳಿಗೆ
ಬೆಲೆ ಕಟ್ಟುವರಾರು?
ಅದು ಬರೀ ಉಪ್ಪು!
ಅತಿಯಾಗಿ ನಂಬಿ
ಮೋಸ ಹೋಗುವುದಿದೆಯಲ್ಲ
ಅದು ನಮ್ಮ ತಪ್ಪು!!

ಬಿಟ್ಟು ಹೋಗುವುದಾದರೆ....
ಹೇಳದೆ ಹೊರಟುಬಿಡು!!
ಕಾಯುವುದರಲ್ಲೂ ಒಂಥರಾ
ಸುಖವಿದೆ!
ನಿನಗೇನು ಗೊತ್ತು!!,
ನೀನಿಲ್ಲವೆಂಬ ಸತ್ಯದ
ಜೊತೆ ಬದುಕುವುದರಲ್ಲಿ
ಅನುಭವಿಸಿಕೊಳ್ಳಲಾರದಷ್ಟು
ಯಾತನೆಯಿದೆ!

ನಾವು ದೇವರಿಗೂ
ಬೆಲೆಯನ್ನು ಕಟ್ಟುತ್ತೇವೆ
ಉಡುಗೊರೆಯ 
ಅಂಗಡಿಯಲ್ಲಿ!!
ಸ್ವೀಕರಿಸುವವರು
ಪೂಜಿಸುವವರೊ? 

ಎಡೆಬಿಡದೆ ಸುರಿದು
ಹೋಗಿದೆ ಮಳೆ
ಫಸಲಿಗಿಂತಲೂ ಫಲವತ್ತಾಗಿ
ಬೆಳೆದಿದೆ ಕಳೆ
ಎರಡರ ನಡುವೆ ಸಿಕ್ಕು
ಕೊಳೆತು ಹೋಗುತ್ತಿದೆ
ಬೆಳೆದ ಬೆಳೆ

ಚಂದಿರನಿಗೂ ದಕ್ಕಿತಿಂದು
ಸ್ವಾತಂತ್ರ್ಯ.....
ಮೋಡಗಳ
ಸೆರೆಯಿಂದ!
ಇನ್ನಾದರೂ...
ಸಿಗಬಹುದೇನೊ?
ನಮಗೆಲ್ಲ ಮುಕ್ತಿ
ನೆರೆಯಿಂದ!!!

ಹೇಳಿಕೊಳ್ಳಬೇಕೆಂದಿರುವೆ
ನಿಮ್ಮೆದುರಿಗೊಂದು
ಗುಟ್ಟಿನ ವಿಷಯ!
ಕಾಡುತ್ತಿದೆ...
ಈ ಗುಟ್ಟು, ನಿಮ್ಮೊಳಗೆ
ಗುಟ್ಟಾಗಿ ಉಳಿಯುವುದೆ?
ಎಂಬ ಸಂಶಯ!!!

ಈಗೀಗ ಎಲ್ಲರೂ...
ಕಟ್ಟುತ್ತಿದ್ದಾರೆ
ಬೆಲೆಯನ್ನು!!
ಕಟ್ಟುವ ನೂಲಿಗೂ
ತೊಡುವ ನೂಲಿಗೂ...

ಯಾರಿಗೂ...
ಅರಿವಾಗುತ್ತಿಲ್ಲ
ನಮ್ಮಯ ಗೋಳು!!
ಇನ್ನೂರು ಕೊಟ್ಟರು
ಸಿಗುತ್ತಿಲ್ಲ ಆಳು!!
ಸಿಕ್ಕರೂ...ಪದೆ..ಪದೆ
ಮಳೆಯು ಸುರಿದು
ಮಾಡುತ್ತಿದೆ, ಮೂರಾಬಟ್ಟೆ
ನಮ್ಮೆಲ್ಲ‌ ಒಕ್ಕಲಿಗರ ಬಾಳು!!

ವರೋಪಚಾರ ಅಪರಾಧ!!!
ಅದಕ್ಕಾಗಿ,  ನಿನ್ನನ್ನು ಬಿಟ್ಟು
ಬೇರೇನು... ಬೇಡೆನು
ಚೆಂದುಳ್ಳಿ!!
ಸಂಸಾರ ಸಾಗಿಸಲು
ರಸಿಕತೆಯಾದರು ಬೇಕಲ್ಲವೆ?
ತಡಮಾಡಬೇಡ, ಹೊತ್ಗೊಂಡು 
ಬಾ ಪುಟ್ಟಿ,  ಈರುಳ್ಳಿ!!

ನಿಮ್ಮೊಳಗಿನಷ್ಟು
ಶಾಂತಿಯು ತುಂಬಿಕೊಂಡಿಲ್ಲ
ನನ್ನೆದೆಯಲ್ಲಿ
ಗಾಂಧಿ...
ಆದರೂ....
ವಿನಾಕಾರಣ, ಹಿಂಸಿಸುವ
ನೆನಪುಗಳಿಗೆ ಹಾಡಬೇಕಿದೆ
ನಾಂದಿ...

ನಾನೀಗ
ಬೀಜವಿಲ್ಲದ ಹಣ್ಣಾಗಬೇಕಿದೆ.
ಹಳತುಗಳ ನಡುವೆ
ಸಿಕ್ಕು...‌ಕೊಳೆತು
ಹೋಗುವ ಮುನ್ನ,
ಹೊಸತನಗಳೊಳಗೆ
ಬೆರೆತು ಮತ್ತೆ
ಚಿಗುರಬೇಕೆಂದೆನಿಸಿದೆ.

ಸುಡುವ ಸೂರ್ಯನಿಗೂ
ಕೂಡಿ ಬಂದಿತಿಂದು
ಕಂಕಣದ ಭಾಗ್ಯ!
ನೀಡುವೆ ನೀನೆಂದು
ಒಪ್ಪಿಗೆ, ಕೂಡಿಬರಲು
ನಮ್ಮಿಬ್ಬರಿಗೂ
ಕಂಕಣದ ಸೌಭಾಗ್ಯ!!

ಚು

ಇಡುವ ಹೆಜ್ಜೆಗಳು
ಎಚ್ಚರದಿಂದರಲೆಂದು
ನಾನೇನು ಎಚ್ಚರಿಸುವುದಿಲ್ಲ!!
ಕೊಟ್ಟಿರುವ ಗೆಜ್ಜೆಗಳಲ್ಲಿ
ಲಜ್ಜೆಯನ್ನೇನು
ತುಂಬಿಲ್ಲ!!
ತಿಳಿದಿರಲಿ, ಬದುಕಿನ
ಎಲ್ಲ ತಿರುವುಗಳಲಿ
ನನ್ನಂತವನೆ...ನಿನಗೆ
ಸಿಗುವುದಿಲ್ಲ!!

ಉಸಿರು ತುಂಬಿದವನನ್ನೆ
ಮಾರಿ, ಹೊಟ್ಟೆಯನ್ನು
ತುಂಬಿಸಿಕೊಳ್ಳಬೇಕಿ
ಬಡಪಾಯಿ....!
ಸಂಸಾರಕ್ಕಾಗಿ,
ಎಲ್ಲ ಸುಖಗಳನ್ನು
ಕೊಂದುಕೊಂಡು, ಸಂಪಾದಿಸಬೇಕಿದೆ.. 
ಒಂದೊಂದು
ರೂಪಾಯಿ..!

ನಿ

ನನ್ನ, ನಿನ್ನ ನಡುವಿನ ಸಂಬಂಧಕ್ಕೊಂದು
ಹೆಸರನ್ನು ಊರೆ ಇಟ್ಟು ಮಾತನಾಡಿ,
ಹೊಟ್ಟೆಯ ತುಂಬಿಸಿಕೊಂಡಿತು
ಮಾತನಾಡಲಿಲ್ಲ!!
ಆ ಸಂಜೆಯ ಇಳಿಹೊತ್ತಿನಲ್ಲಿ,
ಕಣ್ಣಂಚಿನ ಕೊನೆಯಲ್ಲಿ ಜಿನುಗುವ
ಹನಿಗಳಿಗೂ ನೀನು
ಉತ್ತರಿಸಲಿಲ್ಲ!!
ಎದೆಯೊಳಗಿನೊಲವು, ಬೆಂದು
ಬೆಂಗಾಡಾಗಿ, ಬಿರುಕು ಬಿಟ್ಟು, ಹನಿ
ಹನಿ ಪ್ರೇಮ ಸಿಂಚನಕಾಗಿ ಕಾದು
ಕುಳಿತಾಗಲೂ ನೀ...
ಉಸಿರೆತ್ತಲಿಲ್ಲ!!
ಮತ್ತೇತಕೆ ಬೇಕು ನಾನು?
ಸಮಯ ಕಳೆಯುವುದಕಾ?
ಕತ್ತಲು ಕರಗಿಸುವುದಕ್ಕಾ?

ನನ್ನೆದೆಯೇನು.. ದುಃಖದ
ಭಂಡಾರವೇನಲ್ಲ!
ಅವುಡುಗಚ್ಚಿ ಎಲ್ಲ ನೋವುಗಳನ್ನು 
ಅದುಮಿಟ್ಟುಕೊಳ್ಳಲು.
ತೋಡಿಕೊಳ್ಳಲೆ? ಹೇಗೆ?
ಮಿಡಿಯುವ ಮನಸ್ಸಿಗಿಂತ, ಆಡಿಕೊಳ್ಳುವ
ತಾಮ್ರದ ಬಾಯಿಗಳೆ ಹೆಚ್ಚು.
ಜಗತ್ತು... ಮೊದಲು ಮನೆಯಲ್ಲಿಯೆ
ಕೂಡಿ ಹಾಕಿ, ಹಿಂಡುತ್ತಿತ್ತು...ಹಿಂಸೆ
ಸಂಕಟಗಳಾರಿಗು ಕಾಣಿಸುತ್ತಿರಲಿಲ್ಲ!
ಈಗ!!! ಸಮಾನತೆಯ ಹೆಸರಿನಲ್ಲಿ ಬಯಲಿಗೆ
ಬಿಟ್ಟು, ಹಗಲಿರುಳು ಬೇಟೆಯಾಡುತ್ತಿದೆ
ಹೂವನ್ನು ಹೊಸಕುವುದು ಇವರಿಗೆ
ಹೊಸತಲ್ಲ! ವಿಧಾನ ಬೇರೆಯಾಗಿದೆಯಷ್ಟೆ!.

ಮ ೫

ಮಂಗಳಮುಖಿ - ೫

ಬಸ್ಸಿನಲ್ಲಿ ಹತ್ತಿ ಕುಳಿತುಕೊಂಡ ಕಲ್ಲವ್ವನಿಗೆ ಲೋಕದ ಪರಿವೆ ಇಲ್ಲದ ಹಾಗಾಗಿ ಹೋಯಿತು, ಬಸ್ ಕಂಡಕ್ಟರ್ ಎರಡೆರಡು ಸಲ ಕೂಗಿ, ಹಣವನ್ನು ಪಡೆದು ಟಿಕೆಟನ್ನು ಕೊಟ್ಟು ಮುನ್ನಡೆದಿದ್ದನು, ಕಲ್ಲವ್ವನ ತಲೆಯಲ್ಲಿ ಅದೆ ಮಾತುಗಳು, ಅವರ ಚೆಲ್ಲಾಟಗಳು, ಹಣವನ್ನು ಕಿತ್ತುಕೊಂಡ ರೀತಿ, ಮಗನು ಅವರ ಸಂಗದಲ್ಲಿ ಇದ್ದದ್ದನ್ನು ಕಂಡು, ಎಡವಿದ ಬೆರಳಿನ ಮೇಲೆ ಕೈ ಜಾರಿ ಬಿದ್ದ ಪಾತ್ರೆಯ ನೀಡುವ ನೋವಿನಷ್ಟೆ ಅಧಿಕ ಸಂಕಟ, ತಳಮಳವುಂಟಾಗಿಬಿಟ್ಟಿತ್ತು ಕಲ್ಲವ್ವನೆದೆಯಲ್ಲಿ.
########
ಸಮಯ ಆಗಲೆ ರಾತ್ರಿ ಹತ್ತೂವರೆ ಎಂದು ಸೂಚಿಸುತ್ತಿತ್ತು, ಕಾಂತಳು ಎಂದಿನಂತೆಯೆ, ಮನೆಯ ಬಾಗಿಲವರೆಗೂ ಇಬ್ಬರು ಯುವಕರ ಜೊತೆಯಲ್ಲಿಯೆ ಬಂದು ನಿಂತಗೊಂಡು ಕ್ಷಣಕಾಲ ಲಲ್ಲೆಯನ್ನು ಹೊಡೆದು, ಒಳಗೆ ಬಂದಳು. ಗೋಡೆಗಾಣಿಸಿಕೊಂಡು ಓಡುವ ಗಡಿಯಾರವನ್ನೆ ನೋಡಿಕೊಂಡು ಕುಳಿತಿದ್ದಂತಹ ಕಲ್ಲವ್ವನತ್ತ ಒಂದು ಉದಾಸೀನತೆಯ ನೋಟವನ್ನು ಬಿರಿ, ಮನೆಯ ಬಾಗಿಲನ್ನು ಮುಚ್ಚಿ, ತನ್ನ ಮಲಗುವ ಕೋಣೆಗೆ ಹೋಗಿ ಮಲಗಿಕೊಂಡುಬಿಟ್ಟಳು.
©©©©©
'ಯವ್ವಾ... ಕಲ್ಲವ್ವ,... ಕಲ್ಲವ್ವ.. ಕಲ್ಲವ್ವಾ... ಯಾರು ಇಲ್ಲನಬೆ ಹಟ್ಯಾಗ, ಎಷ್ಟೊತ್ತ್ ಆತ ನಾ‌ ಮನಿ ಬಾಗಲ್ದಾಗ ನಿಂತ್ಗೊಂಡ ದನಾ ಒದ್ರದಂಗ ಒದ್ರಾಕ್ಹತ್ತೀನಿ, ಒಬ್ರನೂ ಹ್ಞಾಂ ಅನುವಲ್ರು ಹ್ಞೂಂ ಅಂತರ ಅನುವಲ್ರ, ಚಿಗವ್ವಾ, ಬೇ ಕಲ್ಲವ್ವಾ' ಮತ್ತೊಂದೆರಡು ಸಾರಿ ಕೂಗಿದಳು ಹಿಂದಿನ ಮನೆಯ ಶಾಂತವ್ವ.
ಶಾಂತವ್ವಳ ಕೂಗಿಗೆ ಎಚ್ಚರಕೊಂಡ ಕಾಂತಳು, ಎದ್ದು ಹಾಳು ಮುಖದಲ್ಲೆ ಹೊರಗೆ ಬಂದಳು. ಸಮಯ ನೋಡಿಕೊಂಡಾಗ ಏಳು ಇಪ್ಪತ್ತಾಗಿತ್ತು
'ಹ್ಞೂಂ... ಏನ್ ಬೇಕಿತ್ತವ್ವ ಬೆಳ್ಗ ಬೆಳ್ಗೆನ ಬಂದ ನಿದ್ದಿ ಹಾಳ ಮಾಡಿದಿ' ಕಣ್ಣನ್ನು ತಿಕ್ಕಿಕೊಳ್ಳುತ್ತಾ, ಮೈಯನ್ನು ಮುರಿಯುತ್ತಾ,
ಕಣ್ಣನ್ನು ತಿಕ್ಕಿಕೊಳ್ಳುತ್ತಲೆ ಕೇಳಿದಳು.
'ಏನಿಲ್ಲ, ಗಿಂಡಿ ಹಾಲ್ ಬೇಕಾಗಿತ್ತ್ ಆವಾಗ್ಲಿಂದ ಕರಿಯಾಕ್ಹತ್ತಿನಿ ಯಾರು ಹ್ಞೂಂ ಅನುವಲ್ರಿ, ಹ್ಞಾಂ ಅನುವಲ್ರಿ'
ಕಾಂತಾಳು ಇನ್ನೇನೊ ಹೇಳಬೇಕೆನ್ನುವಷ್ಟರಲ್ಲಿ ಎದುರು ಮನೆ ಬಸಲಿಂಗ ಓಡುತ್ತಾ ಬಂದು ಎದುಸಿರನ್ನು ಬಿಡುತ್ತಾ, 'ನಿಮ್ಮವ್ವ.....
'ಹ್ಞೂಂ.. ನಮ್ಮವ್ವ?'
'ನಿಮ್ಮವ್ವ... ತ್ವಾಟದಾಗ ಹೆಣ ಆಗ್ಯಾಳ..' 
'ಏನಂದಿ..' ಅಂತ ಪ್ರಶ್ನೆ ಕೇಳಿದ ಕಾಂತಾಳು ಬಸಲಿಂಗನ ಮರುತ್ತರಕ್ಕು ಕಾಯದೆ, ತೋಟದ ಕಡೆಗೆ ಓಟಕಿತ್ತಳು,
###
ಹಳ್ಳಿಗೆ ಹಳ್ಳಿಯೆ ಜಮಾಯಿಸಿಬಿಟ್ಟಿತ್ತಾಗಲೆ, ಕಲ್ಲವ್ವನ ಹೆಣದ ಸುತ್ತ, ಒಂದೆ ಉಸಿರಿನಲ್ಲಿ ಓಡಿಬಂದ ಕಾಂತಳು, ಜನರನ್ನು ತಳ್ಳುತ್ತಾ ತಾಯಿಯ ಹೆಣದ ಮುಂದೆ ಬಂದು ನಿಂತಳು. ಕಲ್ಲವ್ವ ಹೊಲದಲ್ಲಿ ಬೊರಲಾಗಿ ಬಿದ್ದಿದ್ದಳು, ಎಡಗೈಯಲ್ಲಿ ದನಕ್ಕೆಂದು ಕೊಯ್ದುಕೊಂಡಿದ್ದ ಕಸ, ಬಲಗೈಯಲ್ಲಿ ಬಲವಾಗಿ ಹಿಡಿದುಕೊಂಡಿದ್ದ ಕುಡಗೋಲು ಎರಡರಲ್ಲಿ ಒಂದನ್ನು ಕೈ ಬಿಟ್ಟಿರಲಿಲ್ಲ. ಆಗ ಅಲ್ಲೊಂದು, ಇಲ್ಲೊಂದು ಮಾತುಗಳು ಕೇಳಿ ಬರಲಾರಂಭಿಸಿದವು
'ಎಂಥ ಹೆಣ್ಮಗ್ಳರಿ, ನಾಕಾಳ ಗಂಡಿನ ಕೆಲ್ಸಾನ ಒಬ್ಬಾಕಿ ನಿಗ್ಸ್ತಿದ್ಳ, ಹಗ್ಲೆನು, ರಾತ್ರೆನು ಎರ್ಡು ಒಂದ ಮಾಡ್ಬಿಡ್ತಿದ್ಲು ಹೊಲ್ದಾಗ ದಗ್ದ ಅದಾವಂತಂದ್ರ,'
'ಹೌದ್ರಿ, ಅದ್ಕ ದ್ಯಾವ್ರ ದೇವ್ರಂತವ್ರನ್ನ ಜಲ್ದಿ ತನ್ ಹತ್ರಕ್ಕ ಕರ್ಸಿಕೊಂಡ ಬಿಡ್ತಾನ ನೋಡ್ರಿ, ಅಲ್ಲ,.. ನನ್ವು ಮೂರ ಮೊಮ್ಮಕ್ಳನ್ನು ಅದೆಷ್ಟು ಹಚ್ಗೊಂಡಿದ್ಳು ಅಂತೀನಿ, ಉಂಡ್ರು ಬಿಟ್ರು ಎಲ್ಲಾ ಈಕಿ ಮನಿಯಾಗ, ಇನ್ನೀಕಿ ಇಲ್ಲ ಅನ್ನೊ ಸುದ್ದಿ ಅವಕ್ಕೇನರ ಗೊತ್ತಾತಂತಂದ್ರ ಏನ್ಮಾಡ್ತಾವೊ ಏನೊ?'
ಎಲ್ಲರೂ ಕಲ್ಲವ್ವನ ಗುಣಗಾನವನ್ನು ಮಾಡುವವರೆ, ಕೊನೆಗೆ ಊರಿನ ಹಿರಿಯರು ಬಂದು ಬಂಡಿಯಲ್ಲಿ ಹೆಣವನ್ನು ಹಾಕಿಕೊಂಡು ಬಂದು ಶಾಸ್ತ್ರಗಳನ್ನು ಮುಗಿಸಿಕೊಂಡು, ಮರಳಿ ತೋಟಕ್ಕೆ ಕಲ್ಲವ್ವನ ಹೆಣವನ್ನು ತಂದುಕೊಂಡು, ತೋಟದ ಮದ್ಯದಲ್ಲಿ ಗುಂಡಿಯನ್ನು ತೋಡಿ, ಹುಗಿದು,‌ ಎಲ್ಲರೂ ಕೊನೆಯದಾಗಿ ಕೈ ಮುಗಿದು ಊರಿಗೆ ಮರಳಿದರು.
##
ವಾರ ಕಳೆಯಿತು, ಕಲ್ಲವ್ವನನ್ನು ಕ್ರಮೇಣವಾಗಿ ಮರೆತ ಜನರು ತಮ್ಮ ನಿತ್ಯದ ಬದುಕಿನಲ್ಲಿ ಕಳೆದುಹೋಗಿದ್ದರು. ಮಣ್ಣ ಗರ್ಭದಲ್ಲಿ ನಿಶ್ಚಿಂತೆಯಾಗಿ ಮಲಗಿದ್ದ ಕಲ್ಲವ್ವನ ಹುಗಿದ ಜಾಗದಲ್ಲೊಂದು ಕಟ್ಟೆಯನ್ನು ಕಟ್ಟಿ ಹೂವಿನ ಹಾರಗಳಿಂದ ಸಿಂಗರಿಸಿದ್ದರು. ಅವಳ ನೆನಪಿಗಾಗಿ ಒಂದು ಗಿಡವನ್ನು ನೆಟ್ಟಿದ್ದರು. ಕಾಂತಾಳ ಮನಸ್ಸು ತಾಯಿ ತೀರಿಕೊಂಡಾಗಿನಿಂದ ಬಹಳಷ್ಟು ನೊಂದುಕೊಂಡಿತ್ತು, ಯಾರ ಸಂಪರ್ಕಕ್ಕೂ ಸಿಗದೆ, ಕಲ್ಲವ್ವನ ಕಟ್ಟೆಯ ಪಕ್ಕದಲ್ಲೆ ಕುಳಿತಿರುತ್ತಿದ್ದಳು. 
ಮಧ್ಯಾಹ್ನ ಮೂರರ ಹೊತ್ತು,  ಸಣ್ಣಪ್ಪನ ಮಡದಿ ಶಾಂತವ್ವಳು ತಲೆ ತುಂಬಾ ಸೇರಗನ್ನು ಹೊದ್ದುಕೊಂಡು ಕೈಯಲ್ಲಿ ಬುತ್ತಿಯನ್ನು ಕಟ್ಟಿಕೊಂಡು ಕಾಂತಾಳ ಎದುರು ಬಂದು ನಿಂತುಗೊಂಡಳು. ಬಂದವರನ್ನು ಕಣ್ಣೆತ್ತಿ ನೋಡಿದ ಕಾಂತಳು 
'ನೀವ್ ಯಾಕ ಬರಾಕ ಹೋಗಿದ್ರಿ ಇಷ್ಟ ಬಿಸ್ಲಾಗ'
'ಎರ್ಡ ದಿನ್ದ ಹೊತ್ತಾತ್ ಹೊಟ್ಟಿಗೆ ಸರಿಯಾಗಿ ಕೂಳು ನೀರಿಲ್ಲ, ಅಂತಾದ್ರಾಗ ಸುಡೊ ಬಿಸ್ಲಾಗ ಇಲ್ಲೆ ಹಿಂಗ ಬಂದ ಕುಂತ್ಗೊಂಡ್ರ ಹ್ಯಾಂಗ?'
'ಎರ್ಡ ದಿನ ಕೂಳ ತಿನ್ದಿದ್ರ ನಾನೇನ ಸಾಯೋದಿಲ್ಲಾಳ್ಬೆ'
'ಮುಚ್ಚ ಬಾಯಿ ಭಾಡೆನ ಮಗ್ನ, ನನ್ಗ ಎದ್ರುತ್ರ ಕೊಡ್ತಿ, ನಿಮ್ಮವ್ವ ಇದ್ದಿದ್ರ ನಿ ಹಿಂಗ ಇರಾಕ ಬಿಡ್ತಿದ್ಲನ ನಿಂಗ' ಗದರಿಸಿದಳು ತುಸು ಗಡಸಿನ ಧನಿಯಲ್ಲಿ.
ತಾಯಿಯ ಹಳೆಯ ನೆನಪುಗಳೆಲ್ಲ ಉಕ್ಕಿಬಂದು, ಎರಡು ಕೈಯಿಂದ ಮುಖವನ್ನು ಮುಚ್ಚಿಕೊಂಡು ಗಳಗಳನೆ ಅಳತೊಡಗಿದನು.
'ಸಾಕ್ಬಿಡು ಅತ್ತಿದ್ದ, ಹ್ವಾದ ಜೀವ ಏನ್ ಹೊಳ್ಳಿ ಬರ್ತದನು, ದೇವ್ರಂತಾಕಿ, ದೇವ್ರ ಹಂತೇಕನ......' ಮಾತು ಗಂಟಲದಲ್ಲೆ ಸಿಕ್ಕಿ ಹಾಕಿಕೊಂಡಿತು ಶಾಂತವ್ವಳಿಗೆ, ಗಂಟಲು ಕಟ್ಟಿ ಉಮ್ಮಳಿಸಿ ಬಂದ ಎದೆಯ ದುಃಖವನ್ನು ಸೀರೆ ಸೇರಗಂಚಿನಿಂದ ಬಾಯನ್ನು ಮುಚ್ಚಿಕೊಂಡು ಕಣ್ಣೀರಾದಳು.
ಕಾಂತಳು ಶಾಂತವ್ವಳು ದುಃಖಿಸುವ ಪರಿಯನ್ನು ಕಂಡು ಎದ್ದು ಬಂದು ಅವಳ ಕಾಲನ್ನು ಹಿಡಿದುಕೊಂಡು ಮತ್ತಷ್ಟು ಜೋರಾಗಿ ಅಳಲಾರಂಭಿಸಿದಳು. ಶಾಂತವ್ವಳು ಅವಳ ತೋಳನ್ನು  ಹಿಡಿದು ಎಬ್ಬಿಸಿಕೊಂಡು, ಸಮಾಧಾನ ಮಾಡಿ, ಅಲ್ಲೆ ತೋಟದ ಬದುವಿನಲ್ಲಿದ್ದ ಬೇವಿನಗಿಡದ ನೆರಳಿಗೆ ಕರೆ ತಂದು, ಕುಡಿಯಲಿಕ್ಕೆ ನೀರನ್ನು ಕೊಟ್ಟು, ಬುತ್ತಿಯ ಗಂಟನ್ನು ಬಿಚ್ಚಿ, ತಾಟಿನಲ್ಲಿ ಅನ್ನವನ್ನು ನೀಡಿ ಕೊಟ್ಟಳು. ಒಂದೆರಡು ತುತ್ತುಗಳನ್ನು ಉಂಡ ನಂತರ ಊಟ ಸೇರದೆಂದು ತಟ್ಟೆಯನ್ನು ಕೆಳಗಿಟ್ಟು ಕೈ ತೊಳೆದುಕೊಂಡು ಬಿಟ್ಟಳು ಕಾಂತ. ಕ್ಷಣಕಾಲ ಇಬ್ಬರು ಮೌನವಾಗಿದ್ದರು, ಆಗಾಗ ಬೀಸುವ ಸುಂಯ್ಯ ಎಂಬ ಗಾಳಿ, ಗುಂಯ್ಯ ಎಂದು ತಿಪ್ಪೆಗುಂಡಿಯಿಂದ ಹಾರಾಡಿ ಬರುತ್ತಿದ್ದ ನೊಣಗಳು, ನಿಮ್ಮದು ಆಗಿದ್ದರೆ ನನ್ನ ಪಾಲಿನದ್ದು ನೀಡಿಬಿಡಿ ಎಂದು ಅವರಿಬ್ಬರ ಎದುರಿನಲ್ಲಿ ಬಾಲವನ್ನು ಅಲ್ಲಾಡಿಸಿಕೊಂಡು ನಿಂತಿದ್ದ ಪಕ್ಕದ ತೋಟದ ಚಂದಪ್ಪನ ನಾಯಿ, ಚೆಲ್ಲಿದ ಅನ್ನದಗಳನ್ನು ತನ್ನ ಗರ್ಭವ ಸೇರಿಸಿಕೊಳ್ಳುವ ಕಾತುರದಲ್ಲಿ ಕಾ...ಕಾ.. ಎಂದು ಒಂದೆ ಸಮನೆ ಒದರುತ್ತಿದ್ದ ಕಾಗೆಗಳ ಗುಂಪು, ಇವಾವು ಅವರಿಬ್ಬರ ಅರಿವಿಗೆ ಬಂದಿಲ್ಲವೇನೊವೆಂಬಂತೆ, ಶಿಲ್ಪಿಯು ಕೆತ್ತಿಟ್ಟ ಮಾತಿಲ್ಲದ ಮೂರ್ತಿಗಳಂತೆ ಕುಳಿತುಬಿಟ್ಟಿದ್ದರು. ಸಮಯ ಕಳೆಯುತ್ತಿತ್ತು, ನಾಯಿಯು ಹಸಿವನ್ನು ತಾಳಲಾರದೆ, ಶಾಂತವ್ವಳ ಪಕ್ಕದಲ್ಲಿದ್ದ ಬುತ್ತಿಯ ಚೀಲಕ್ಕೆ ಬಾಯಿಯನ್ನು ಹಾಕಿ ಓಟ ಕಿತ್ತಿತು, ಮರದ ಕೊಂಬೆಯ ಮೇಲೆ ಕುಳಿತ ಕಾಗೆಗಳೆಲ್ಲ ನಾಯಿ ಹಿಂದೆ ಹಾರಿ ಹೋದವು. ಆಗ ಎಚ್ಚೆಂತಹ ಕಾಂತಳು, 'ಅಯ್ಯೊ, ಆ ನಾಯಿ ನಮ್ಮ ಬುತ್ತಿಯನ್ನು ಒಯ್ಯುತ್ತಿದೆ,' ಎಂದು ಎದ್ದು ಅದನ್ನು ಹಿಂಬಾಲಿಸಲು ಮುಂದಾದನು. ಆಗ ಶಾಂತವ್ವಳು ಅವನ ಕೈಯನ್ನು ಹಿಡಿದು ಕುಳ್ಳರಿಸಿದಳು.
'ಕೈ ಬಿಡ್ಬೆ ಯವ್ವಾ, ಆ ನಾಯಿ ಬುತ್ತಿ ಕಸ್ಕೊಂಡ ಹೊಂಟೈತಿ
ಹೊಡ್ದ ಕಿತ್ಗೊಂಡ ಬರ್ತಿನಿ'
'ಬ್ಯಾಡೆಪ್ಪ, ಹೋದ್ರ ಹೋತ್ ಬಿಡು ಅತ್ಲಾಗ'
'ಹಂಗಂದ್ರ ಹ್ಯಾಂಗ್ಬೆ'
'ಒಂದ ಕಳ್ಕೊಂಡ್ರ ಏನಾತ ಮತ್ತೊಂದ ಸಿಕ್ತಲ್ಲ'
ಹುಬ್ಬನ್ನು ಗಂಟಿಕ್ಕಿಕೊಂಡು ಏನು ಎನ್ನುವ ದೃಷ್ಠಿಯಲ್ಲಿ ಶಾಂತವ್ವಳನ್ನು ನೋಡಿದಳು ಕಾಂತಳು.
'ಗೊತ್ತಾಗ್ಲಿಲ್ಲೇನ?'
ಇಲ್ಲವೆಂದು ತಲೆಯಾಡಿಸಿದಳು.
' ನೀನ್ ಮತ್ತ್ ನನ್ ಹೊಳ್ಳಿ ಅವ್ವಾ ಅಂತಂದ ಬಾಯ್ತುಂಬಾ ಕರ್ದೆಲ್ಲ, ಇದಕ್ಕಿಂತ ಮತ್ತೀನೆನ ಬೇಕಿತ್ತ, ತಮ್ಮ'
ಮತ್ತೊಮ್ಮೆ ಎದೆಯೊಳಗಿನ ದುಃಖವೊ, ಮಾಡಿದ ತಪ್ಪಿನ ಅರಿವಾದಂತಾಗಿ ಗಳಗಳನೆ ಅಳತೊಡಗಿದಳು ಕಾಂತಳು.
'ಹೋಗ್ಲಿ ಬಿಡು ಆದದ್ದಾತು, ಮತ್ತ್ ಅದನ್ನ ಯಾಕ ಮನಸ್ನ್ಯಾಗ
ಇಟ್ಗೊಂಡ ಮರ್ಗತಿದಿ'
'ತಪ್ಪಾತ್ಬೆ ಯವ್ವಾ, ಆವತ್ತ ನಿಮ್ಗ ನಾನ ಅನ್ಬಾರ್ದ ಅಂದ ಬಿಟ್ನಿ'
'ಹುಚ್ಚಪ್ಪ, ಮಕ್ಳ ತಪ್ಪ ಮಾಡ್ತಾವಂತಂದು ದೊಡ್ಡವ್ರು ಮಾಡೊಕಾಗ್ತದನು, ಬಾ.. ಕುಂದರಿಲ್ಲೆ' ಹಿಡಿದಿದ್ದ ಕೈಯನ್ನು ಎಳೆದು ಪಕ್ಕದಲ್ಲಿ ಕುಳ್ಳರಿಸಿಕೊಂಡಳು.
'ಹೌದ್ವಾ.. ನಾ ದೊಡ್ಡ ತಪ್ಪ ಮಾಡ್ಬಿಟ್ನಿ, ಅಲ್ಬೆ ಆ ಬುತ್ತಿನರ ತಗೊಂಡ ಬರ್ತಿನ ಹೋಗಿ' ಮತ್ತೆ ಎಳಲನುವಾದಳು.

ಮ ೪

ಮಂಗಳಮುಖಿ -೪

'ಯವ್ವಾ ಹ್ಯಾಂಗ ಕೆ.ಜಿ ಬೆ ಟಮಾಟಿ ಹಣ್ಣು'
'ಯಪ್ಪಾ ಹದ್ನೆಂಟ ರುಪೈ ಕಿಲೊ ನೋಡ ನನ್ಮಗ್ನ, ಹೇಳ್ ಎಷ್ಟ ಕೊಡ್ಲೆಪ್ಪ, ಎನ್ನುತ್ತಾ  ಎಡಗೈಯಿಂದ ತಕ್ಕಡಿಯನ್ನು ಎತ್ತಿಕೊಳ್ಳುತ್ತಾ, ಬಲಗೈಯಿಂದ ಟೊಮ್ಯಾಟೊ ಹಣ್ಣಿನ ಬುಟ್ಟಿಗೆ ತಾನೆ ಕೈ ಹಾಕಿ ಒಳ್ಳೊಳ್ಳೆ ಹಣ್ಣುಗಳನ್ನು ಆರಿಸಿ ತೂಗಲು ಮುಂದಾದಳು ಕಲ್ಲವ್ವ,
'ಭಾಳ ತುಟ್ಟಿ ಆತಲ್ಲಬೆ, ಮೊನ್ನೆರ ಹನ್ನೆರ್ಡ ರುಪಾಯ್ಗೆ ಕೆಜಿ ಹಂಗ ಒದಿದ್ನಿ' 
'ಯಪ್ಪಾ ದಿನ್ದಿಂದ ದಿನಕ್ಕ ರೇಟ್ ಹೆಚ್ಚು ಕಡ್ಮಿ ಆಕ್ಕಿರ್ತಾವೊ ತಂದೆ, ಹೊಲ್ದಾಗ ನೀರ ಕಮ್ಮಿ ಆಗಿ ಪಿಕ ಬರ್ವಲ್ದಂಗ ಆಗೈವು ನೋಡ್ಪಾ' ಮುಖವನ್ನು ಗಿಂಜುತ್ತಾ, ಬೇಗಬೇಗನೆ ಹಣ್ಣುಗಳನ್ನು ಆರಿಸಿಕೊಂಡು ಕೆ.ಜಿ ಲೆಕ್ಕದಲ್ಲಿ ತೂಗಿ ಗಿರಾಕಿಯ ಚೀಲಕ್ಕೆ ಹಾಕಲು ತಕ್ಕಡಿಯನ್ನು ಮುಂದಕ್ಕೆ ಚಾಚಿದಳು.
'ಅಯ್ಯ, ಬ್ಯಾಡ ಬಿಡ್ಬೆ ಇವತ್ತ, ಊರ ಸೇರಾಕ ರೊಕ್ಕ ಕಮ್ಮಿ ಬಿಳ್ತಾವ, ಅದಲ್ದನಾ ಮನ್ಯಾಗ ಸಣ್ಣ ಸಣ್ಣ ಯಾಡ ಹುಡ್ರ ಅದಾವು ಅವುಕ್ಕ ತಿನ್ನಾಕ ಇನ್ನಾ ಬಿಸ್ಕಿಟ್ ಪಡ್ಕ ತಗೊಂಡ ಹೋಗ್ಬೇಕು, ಮಾಲಾಕ್ನು ಇವತ್ತ್ ಚೂರು ರೊಕ್ಕಾನು ಕಮ್ಮಿ ಕೊಟ್ಟಾನ' ಎನ್ನುತ್ತಲೆ ಮುಂದಕ್ಕೆ ಹೆಜ್ಜೆ ಹಾಕುವವನಿದ್ದವನ ಕೈ ಚೀಲವನ್ನು ಕಸಿದುಕೊಂಡು ಹಣ್ಣನ್ನು ಸುರಿದುಕೊಡುತ್ತಾ,
'ರೊಕ್ಕೆಲ್ಲರ ಓಡಿ ಹೊಕ್ಕತೇನ ಮಗ್ನ, ಇವತ್ತಿಲ್ಲ, ನಾಳ್ಗಿ ತಂದ ಕೊಡ, ಏನ ದುಡ್ದ ಕಟ್ಗೊಂಡ್ ಸಾಯೋದೈತ ಹೇಳು, ಸತ್ತಾಗೇನ ಹೊತ್ಗೊಂಡ ಹೊಕ್ಕಿವೇನು ಎಲ್ಲಾನು?, ತಗೊಂಡ ಹೋಗ್ಪಾ,' ಅಂತಃಕರಣದಿಂದ ನುಡಿದಳು
ಅವಳು ಮಾತುಗಳನ್ನು ಕೇಳಿ ಆ ಗಿರಾಕಿ ಮರುಮಾತನಾಡದೆ,
ತಲೆಯಾಡಿಸಿ, ಚೀಲವನ್ನು ಎತ್ತಿ ಹೆಗಲ ಮೇಲಿಟ್ಟುಕೊಂಡು ನಡೆದನು.

ಐದು ನಿಮಿಷದಲ್ಲಿ  ಕುಳಿತ ಸ್ವಲ್ಪ ದೂರದಿಂದ ಏನೊ ಕೂಗಾಡ, ಗದ್ದಲದ ಸದ್ದು ಕೇಳಿಸಿದಂತಾಯಿತು ಕಲ್ಲವ್ವನಿಗೆ, ಆಗಲೆ ಹಳ್ಳಿಗೆ ಹೋಗುವ ಹೊತ್ತಾದ್ದರಿಂದ ತಡಬಡಿಸಿ ಎದ್ದು,  ತರಕಾರಿಗಳನ್ನು ಪುಟ್ಟಿಯಲ್ಲಿ ತುಂಬಿಕೊಂಡು, ಅಲ್ಲಿಯೆ ಹಿಂದ ಇದ್ದ ಶೆಟ್ಟರ ಕಿರಾಣಿ ಅಂಗಡಿಯಲ್ಲಿಟ್ಟು, ಮೇಲೆ ಹಸಿಮಾಡಿದ ಗೋಣಿಚೀಲವೊಂದನ್ನು ಹೊದಿಸಿ, ಅಂದು ಸಂಪಾದನೆ ಮಾಡಿದ ಹಣವನ್ನು ಲೆಕ್ಕ ಹಾಕಿ, ಹಳ್ಳಿಗೆ ಹೋಗಲು ಬೇಕಾಗುವಷ್ಟು ಹಣವನ್ನಷ್ಟೆ ಕೈಯಲ್ಲಿ ಹಿಡಿದುಕೊಂಡು, ಉಳಿದ ಹಣವನ್ನು  ಗದ್ದಲ ನಡೆದ ದಿಕ್ಕಿನತ್ತ ನಡೆದಳು. ಅದಾಗಲೆ ಗುಂಪು ಚದುರಿ ಹೋಗಿ ಒಬ್ಬಿಬ್ಬರು ಅಷ್ಟೇ ನಿಂತುಕೊಂಡಿದ್ದರು, ಕೆಳಗೆ ಒಬ್ಬ ವ್ಯಕ್ತಿಯು ಅಳುತ್ತಾ ಕುಳಿತುಕೊಂಡಿದ್ದನು ಅವನ ಅನತಿ ದೂರದಲ್ಲಿ ಮಂಗಳಮುಖಿಯರ ಗುಂಪೊಂದು ನಗುತ್ತಾ, ಕೆಕೆ ಹಾಕುತ್ತಾ ನಿಂತಿತ್ತು. 
ಕಲ್ಲವ್ವ ಸಮೀಪಕ್ಕೆ ಹೋಗಿ ನೋಡಿದಾಗ, ಆ ಮಂಗಳಮುಖಿಯರ ಗುಂಪಿನಲ್ಲಿ ತನ್ನ ಮಗನಿದ್ದದ್ದನ್ನು ಕಂಡು ಕಣ್ಣ ಹುಬ್ಬುಗಳನ್ನು ಗಂಟಿಕ್ಕಿಕೊಂಡು, ನೆಲದ ಮೇಲೆ ಕುಳಿತುಕೊಂಡ ವ್ಯಕ್ತಿಯ ಕಡೆಗೆ ನೋಡಿದಳು, ಅರೆ! ಅವನೆ, ಈಗ ತಾನೆ ನನ್ನ ಬಳಿ ತರಕಾರಿಯನ್ನು ತೆಗೆದುಕೊಂಡು ಬಂದವನಲ್ಲವೆ ಎಂದುಕೊಳ್ಳುತ್ತಾ, ಅವನ ಹತ್ತಿರ ಹೋಗಿ 'ಯಾಕ್ಮಗ್ನ ಏನಾತ' ಅನ್ನುತ್ತಾ ಕುಕ್ಕರ್ಗುಂಡಿಲೆ ಅವನೆದುರು ಕುಳಿತು ಕೇಳಿದಳು. ತಲೆಯೆತ್ತಿ ನೋಡಿದ ವ್ಯಕ್ತಿ, 'ನೋಡ್ಬೆ, ಊರ್ಮುಟ್ಟಾಕ ಅಂತಿಟ್ಗೊಂಡಿದ್ದ ರೊಕ್ಕಾನೆಲ್ಲ ಕಸ್ಕೊಂಡ್ಬಿಟ್ರು' ಎಂದನು ಹತಾಶೆಯ ಧನಿಯಲ್ಲಿ, ' ಅಯ್ಯ ತಮ್ಮ ಹೋದ್ರ ಹೋಗ್ಲ ತಗೋ ಅತ್ಲಾಗ ಹಾಳಾಗಿ, ಈಕ ನಾ ಕೊಡ್ತಿನಿ ತಗೊ ಏಳು, ನಾಳೆರ ಇಲ್ಲ ನಾಡಿದ್ದರ ತಂದು ಕೊಡ್ವಂತಿಯಂತ, ಏಳ, ಏಳ ಹೊತ್ತ್ ಮುಳ್ಗಾಕ ಬಂತ ಆಗ್ಲೆ' ಎನ್ನುತ್ತಾ, ಅವನ ಮರುಮಾತಿಗೂ ಕಾಯದೆ, ತನ್ನೂರಿಗೆಂದು ತೆಗೆದಿಟ್ಟುಕೊಂಡಿದ್ದ ಹಣವನ್ನು ಅವನ ಜೇಬಿಗೆ ತುರುಕಿ, ಭುಜಕ್ಕೆ ಕೈ ಹಾಕಿ ಎಬ್ಬಿಸಿ, ಜೊತೆಯಲ್ಲಿಯೆ ಕರೆದುಕೊಂಡು ನಡೆಯುತ್ತಾ, ಮಂಗಳಮುಖಿಯರ ಕಡೆಗೊಮ್ಮೆ ನೋಡಿದಳು, ಅವರಾಗಲೆ ಹಣದ ವಸೂಲಿಗಾಗಿ ಮತ್ತೊಬ್ಬನ ಮೈ ಮೇಲೆ ಬಿದ್ದಿದ್ದರು. 
ದಾರಿಯಲ್ಲಿ ಹೋಗುತ್ತಾ, ಕಲ್ಲವ್ವ ಆ ವ್ಯಕ್ತಿಯನ್ನು ಕೇಳಿದಳು
'ತಮ್ಮಾ, ತಪ್ಪ ತಿಳ್ಕೊಬ್ಯಾಡ, ನಿನ್ ಹೆಸರೇನ್ಪಾ?'
'ಹ್ಞಾಂ..., ಶಂಕ್ರಯ್ಯ ಬೆ'
'ಊರು?'
'ಇಲ್ಲೆ ಬೆ, ನಿಡಗುಂದಿ '
' ಹೌದಾ!!, ಮದ್ವಿ ಮಕ್ಳು?'
'ಹ್ಞೂಂ ಲಗ್ನ ಆಗಿ ಎರ್ಡ ಹೆಣ್ಮಕ್ಳ ಅದಾವ್'
'ಗಂಡು?'
' ಇಲ್ವಾ, ನಾನ ಯಾವುದ್ಕೂ ಆಸೆನ ಪಟ್ಟಾಂವಲ್ಲ, ಹೆಣ್ಣಾದ್ರನ, ಗಂಡಾದ್ರೆನ ಮಕ್ಳ, ಮಕ್ಳ.. ಗಂಡ... ಗಂಡಂತದ ಹಡ್ಕೊಂತ ಕುಂತ್ರ, ಆಕಿ ಆರೋಗ್ಯಾ ಹಾಳಾಗಿ ಹೊಕ್ಕೈತಲ್ರಿ, ಅದಕ್ ಮ್ಯಾಲ...ಮ್ಯಾಲ ಯಾಡು ಹೆಣ್ಣ್ ಆದ್ವು, ಅದ್ಜ ಎಲ್ಲಿದ ತಗಿ ಅತ್ಲಾಗ ಅನ್ಕೊಂಡ, ಆಪ್ರಷೇನ್ ಮಾಡ್ಸಬಿಟ್ಟಿನ ನೋಡ್ವಾ, '
'ಛಲೊ ಆತ ನೋಡ ನನ್ನಪ್ಪ, ನಿಮ್ಮಂತೊರು ಊರಿಗೆ ನಾಕ್ಮಂದಿ ಇದ್ರಂದ ಸಾಕ, ಹೆಣ್ಣ ಹಡಿಯೊ ಹೆಣ್ಮಕ್ಳ ಭಾಳೆ ಬಂಗಾರಾಗಿರ್ತೈತಿ' ಎಂದು ಹುಸಿ ನಗವನ್ನು ಮುಖದಲ್ಲಿ ತುಂಬಿಕೊಳ್ಳುತ್ರಾ,  ಉಗುಳನ್ನು ನುಂಗಿಕೊಂಡು
'ಯಪ್ಪಾ, ಅವ್ರೆಲ್ಲ ಈಗ ನಿನ್ಹತ್ರ ರೊಕ್ಕಾ ಕಿತ್ಕೊಂಡ ಹೋದ್ರಲ್ಲಾ, ಅವ್ರಗೇನ ನಿ ಕೈಗಡ ಏನರ ಕೊಡೊದಿತ್ತೇನ' ಸ್ವಲ್ಪ ಅಳುಕಿನ ಧ್ವನಿಯಲ್ಲಿಯೆ ಕೇಳಿದಳು.
ಪ್ರಶ್ನಾರ್ಥಕವಾಗಿ, ಹುಬ್ಬುಗಳನ್ನು ಗಂಟಿಕ್ಕಿಕೊಂಡು ಕಲ್ಲವ್ವನನ್ನೆ ದಿಟ್ಟಿಸಿನೋಡಿದನು.
ಅವನ ಈ ನೋಟವನ್ನು ಕಂಡಂತ ಕಲ್ಲವ್ವಳು ಮನದಲ್ಲಿಯೆ ಹೆದರಿಕೊಂಡಳು.
'ಇಲ್ಲವ್ವ, ಇವ್ರ ಹತ್ರ ಯಾರ ಕೈಗಡ ತಗೊತಾರ್ಬೆ'
'ಮತ್ತ್ ಹಾಂಗ ಎದಿಮ್ಯಾಲ ಬಿದ್ದ ಹಂತೇಕಿನ ರೊಕ್ಕಾನೆಲ್ಲಾ ಕಿತ್ಗೊಂಡ ಹೋದ್ರು'
'ಅದಾ...‌ಅವ್ರದೊಂದು ಛಾಳಿ ಅದು'
'ಛಾಳಿ..!!! ಹಂಗಂದ್ರ'
'ಅಯ್ಯ, ಇತ್ತಿತ್ಲಾಗ ಇವ್ರ ಆಟ ಭಾಳ ಜೋರಾಗೈತ್ಬೆ ಯವ್ವ, ದುಡಿಯಂಗಿಲ್ಲ ದುಖ್ ಪಡೊಂಗಿಲ್ಲ, ಮುಂಜಾನಿದ್ದ ಸಂಜಿತನ್ಕ ಊರ...ಊರ ಸಂತಿ ಅಡ್ಡಾಡಿ, ರೊಕ್ಕಾ ಇಸ್ಗೊತಾರ, ಕೊಟ್ರ ಛಲೊ, ಕೊಡದಿದ್ರ? ಈಗ ನೋಡಿದೆಲ್ಲವ್ವ, ಹಿಂಗಾ, ತ್ರಾಸ್ ಅಂದ್ರು ಇಲ್ಲ, ಬ್ಯಾನಿ ಅಂದ್ರು ಇಲ್ಲ, ಇರ್ಲಿ, ಇರ್ದ ಹೋಗ್ಲಿ ಎದಿಮ್ಯಾಲ ಬಿದ್ದು ಇದ್ಬದ್ದ ರೊಕ್ಕಾನೆಲ್ಲ ಕಸ್ಗೊಂಡ ಹೋಕ್ಕಾರ, ಇತ್ತಿತ್ಲಾಗ ಇವ್ರನ್ನ ಹೇಳೊರ ಕೇಳೊರ ಯಾರಿಲ್ದಂಗಾಗೈತಿ'
ಅವನ ಮಾತುಗಳನ್ನು ಕೇಳುತ್ತಿದ್ದಂತೆಯೆ, ಕಲ್ಲವ್ವನ ನಡಿಗೆ ಸಣ್ಣದಾಯಿತು, ಬಾಯರಿದಂತಾಗಿ, ಮೈಯಲ್ಲ ಬೆವರಿಕೊಂಡು,  ಕ್ಷಣಕಾಲ‌ ಕಣ್ಣಿಗೆ ಕತ್ತಲು ಕಟ್ಟಿದಂತಾಗಿ, ಆ ಹುಡುಗನ ತೋಳನ್ನು ಹಿಡಿದುಕೊಂಡು ನಿಂತುಬಿಟ್ಟಳು.
'ಯಾಕಬೆ,‌ ಏನಾತ?' ಎಂದನಾತ ತುಸು ಗಾಬರಿಯಿಂದ
'ಏನಿಲ್ಲಪಾ ತಂದೆ, ನಿ ಹೇಳಿದ್ದ ಮಾತ ಕೇಳಿ, ನನ್ನೆದಿ ಝಲ್ ಅಂದಂಗಾತು ಅದ್ಕ,' ಎಂದಳು ಮೆಲ್ಲನೆ ಸಾವರಿಸಿಕೊಳ್ಳುತ್ತಾ
ಕಣ್ಣನ್ನು ತೆರೆದಳು.
'ಈಗ ಹ್ಯಾಂಗೈತಿ ಆರಾಮ, ಐತಿಲ್ಲೊ, ಏನ್ ನೀರು ಪಾರು ಕುಡಿತಿರೊ' ಕೇಳಿದನು ಕಾಳಜಿಯಿಂದ
'ಬ್ಯಾಡ್ತಮ್ಮ, ಬ್ಯಾಡ, ಅಲ್ಲಾ, ಮತ್ತ್ ಅವಕ್ಕ...ದಗದಾ ಬಗ್ಸಿ ಅಂತ ಏನಿಲ್ಲನ'
'ಯಾ ದಗದಾ ತರ್ತಿಬೆ, ಹಿಂಗ ಗಂಡರಗೂಳಿ ಅಡ್ಡಾಡ್ದಂಗ ಅಡ್ಡಾಡ್ತಾವು, ಕೆಲವೊಬ್ರ ಅದಾರ, ತಂ ಪಾಡಿಗೆ ತಾವು ದುಡ್ಕೊಂಡ, ಛಲೊತ್ನಾಗಿ ಬಾಳೆ ಮಾಡಾಕ ಹತ್ತ್ಯಾವು, ಇವ್ ಒಂದಿಷ್ಟು ಪ್ಯಾಸನ್ ಅಂತಂದ ಗಂಡ ಹೋಗಿ ಹೆಣ್ಣಿನ ವೇಷಾ ಹಾಕ್ಕೊಂಡ, ಹಿಂಗ ಬೀದಿ ಬೀದಿ ಅಲಿತಾವ,'
'ಅಂದ್ರ ಇವ್ರ ಹೊಟ್ಟಿ ಉಪಜೀವ್ನ ಇದ ಅಂದಂಗಾತು'
'ಹೌದವ್ವಾ, ಇದ ಕಾಡೋದು, ಬೇಡೊದು, ಇಸ್ಕೊಳ್ಳುದು ಮಜಾ ಮಾಡೋದ, ಹೊಟ್ಟಿಗೊಂದಿಷ್ಟ ಹಿಟ್ಟ, ಜುಟ್ಗೊಂದಿಷ್ಟ ಹೂವ, ಆತಲ್ಲ ಮತ್ತಿನ್ನೇನ ಯಾರ್ದ ದುಡ್ಡ್ ಹಾಂ ಎಲ್ಲವ್ವನ ಜಾತ್ರಿ' ಹೇಳುತ್ತಾ... ಹೇಳುತ್ತಾ ನಿಲ್ದಾಣ ಬಂದೆ ಬಿಟ್ಟಿತು.
ಕೊಡುಬ ಹಣವನ್ನು ಇನ್ನೆರಡು ದಿನದಲ್ಲಿ ಕೊಡುವುದಾಗಿ ಹೇಳಿ ಕಲ್ಲವ್ವನನ್ನು ಹಳ್ಳಿಯ ಬಸ್ಸಿಗೆ ಹತ್ತಿಸಿ, ತಾನು ತನ್ನೂರಿನ ಹಾದಿಯನ್ನು ಹಿಡಿದನು.

ಮ ೧

ಮಂಗಳಮುಖಿ ೧

ತೋಟದ ಅಲ್ಲಿ ಹರಿದು ಬಿದ್ದಿದ್ದಂತಹ ವಿದ್ಯುತ್ ತಂತಿಯನ್ನು ಗಮನಿಸಿದ ಕಲ್ಲವ್ವನ ಗಂಡನು ಬೆಳೆಗೆ ನೀರು ಹಾಯಿಸಲು ಹೋಗಿ, ದೇಹದ ತುಂಬಾ ವಿದ್ಯುತ್  ಪ್ರವರ್ಸಿಸಿ ಮರಣಹೊಂದಿದ್ದನು. ಆಗಿನ್ನೂ ಚಿಕ್ಕ ವಯಸ್ಸು ಕಲ್ಲವ್ವನದು. ಒಬ್ಬನೆ ಮಗ, ಮೂರು ವರ್ಷದವನಿರಬೇಕು. ಚಿಕ್ಕ ವಯಸ್ಸಿನಲ್ಲಿಯೇ ಈ ದುರ್ಗತಿ ಬಂದಿದ್ದನ್ನು ನೋಡಿ ಊರಿಗೆ ಊರೆ ದುಃಖದ ಮಡುವಿನಲ್ಲಿ ಮಿಂದಿತ್ತು. ತವರು ಮನೆಯವರು ಎಷ್ಟೊ ಒತ್ತಾಯವನ್ನು ಮಾಡಿದರು ತವರಿಗೆ ಕರೆದುಕೊಂಡು ಹೋಗಲು. ಕೊಟ್ಟು ಹೆಣ್ಣು ಕುಲಕ್ಕೆ ಹೊರಗೆ ಎಂಬಂತೆ ಕಲ್ಲವ್ವ ಕಲ್ಲುಬಂಡೆಯಂತೆ ಧೃಡ ನಿರ್ಧಾರಕ್ಕೆ ಬಂದುಬಿಟ್ಟಿದ್ದಳು. ಗಂಡನ ಪಾಲಿಗೆ ಬಂದಿದ್ದಂತಹ ಮೂರುವರೆ ಎಕರೆ ತೋಟದಲ್ಲೆ ದುಡಿದು, ಮಗುವನ್ನು ಬೆಳಸಿಕೊಂಡು, ಕಷ್ಟಾನೊ?, ಸುಖಾನೊ? ಬಂದದ್ದು ಬರಲಿ ಗಂಡನ ಮನೆ ಹೊಸ್ತಿಲನ್ನು ನಾನು ದಾಟಿ ಬರುವುದಿಲ್ಲ ಎಂದು ಹಿಡಿದುಕೊಂಡಿದ್ದ ಅವಳ ಹಠವೆ ಜಯಿಸಿತ್ತು. ಇವಳ ನಿರ್ಧಾರಕ್ಕೆ ಬೆಂಬಲವಾಗಿ, ಗಂಡನ ಪ್ರಾಣ ಸ್ನೇಹಿತನಾದಂತಹ ಸಣ್ಣಪ್ಪನು ಬೆಂಗಾವಲಾದನು. ಕಾಲದ ಸುರುಳಿ ಸುತ್ತುತ್ತಲೆ ಬಂದಿತು. ಸಣ್ಣಪ್ಪನ ಸಹಾಯ, ಬೆಂಬಲದೊಂದಿಗೆ ತೋಟವನ್ನು ನಳನಳಿಸತೊಡಗಿದಳು, ವರ್ಷಕ್ಕೆರಡು ಬೆಳೆಗಳು, ಕಾಲಕಾಲಕ್ಕೆ ಗೊಬ್ಬರ ನೀರನ್ನು ಕೊಡುತ್ತಾ ಬಂಗಾರದ ಬೆಳೆಯನ್ನು ಬೆಳೆಯುವಲ್ಲಿ, ಮಗನ ಆರೈಕೆ, ಅಭ್ಯಾಸದ ಕಡೆಗೂ ಗಮನವನ್ನು ಹರಿಸಿ, ಕಾಲೇಜ್ ನ್ನು ಸೇರಿಸಿದ್ದಳು. ಸಣ್ಣಪ್ಪನ ಮಗನು ಕಲ್ಲವ್ವನ ಮಗನು ಒಂದೆ ವಯಸ್ಸಿನವರಾದ್ದರಿಂದ ಇಬ್ಬರನ್ನು ಜೊತೆಗೂಡಿಯೆ ಪದವಿಪೂರ್ವ ಶಿಕ್ಷಣಕ್ಕೆ ಊರಿಂದ ಸುಮಾರ ಇಪ್ಪತ್ತೆರಡು ಕಿ. ಮೀ. ದೂರವಿರುವ ನಗರದ ಕಾಲೇಜಿನಲ್ಲಿ ಸೇರಿಸಿಬಂದಿದ್ದರು. 
ಎಲ್ಲವು ಸರಿಯಾಗಿಯೆ ನಡೆದುಕೊಂಡು ಹೊರಟಿತ್ತು.  

ಎಲ್ಲವೂ... ಸರಿಯಾಗಿ, ನಾವಂದುಕೊಂಡಂತೆಯೆ ನಮ್ಮ ಬದುಕಿನ ಹಾದಿ ಹಾಸಿದ್ದರೆ!!! ನರೇಂದ್ರ ಬುದ್ಧನಾಗುತ್ತಿರಲಿಲ್ಲ,
ರಾವಣ ಸಾಯುತ್ತಿರಲಿಲ್ಲ, ಗಾಂಧಿ ಮಹಾತ್ಮನಾಗುತ್ತಿರಲಿಲ್ಲ, 
ತಿಮ್ಮಕ್ಕ ಸಾಲುಮರಗಳ ತಾಯಿಯಾಗುತ್ತಿರಲಿಲ್ಲ, ವೀರಪ್ಪನ್ ಬಂದೂಕು ಹಿಡಿದುಕೊಳ್ಳುತ್ತಿರಲಿಲ್ಲ! ಕಾಡುವ ಹಸಿವಿಗೆ ಮಂಚವನೇರುವ ದುಸ್ಥಿತಿ ಅವಳಿಗೆ ಬರುತ್ತಿರಲಿಲ್ಲ ಬದುಕೆ ಹೀಗೆ ಅಲ್ಲವೆ? ಹಾದಿಯೊಳಗಿನ ಅದಾವ ತಿರುವು ಬಂದು ನಮ್ಮ ಬದುಕಿನ ದಿಕ್ಕನ್ನೆ ಬದಲಿಸಿಬಿಡುತ್ತದೆಯೋ? ಯಾರಿಗೆ ಗೊತ್ತು. ಹಾಲೆಂದುಕೊಂಡದ್ದು ವಿಷವಾಗಿಬಿಡುತ್ತದೆ,  ಕೊಳವಾಗಿದ್ದದ್ದು ಕೆಸರಾಗಿಬಿಡುತ್ತದೆ, ಕಲಿಸಿಟ್ಟ ಅಗುಳು ಹಳಸಿ ಹೋಗುತ್ತದೆ. ಹೀಗೆ ಶಶಿಕಾಂತನ ಯೌವ್ವನದ ಹಾದಿಯು ಒಂದು ತಿರುವನ್ನು ಕಂಡಿತು. 

ಸಣ್ಣಪ್ಪನ ಮಗ ನಾಗರಾಜನಿಗೂ ಗೊತ್ತಿರಲಿಲ್ಲ, ಕಾಲೇಜ್ ಬಿಟ್ಟ ತಕ್ಷಣ ಒಂದರ್ಧ ಗಂಟೆ ನಾಗರಾಜನನ್ನು ಬಸ್ ನಿಲ್ದಾಣದಲ್ಲಿಯೆ ಕೂರಿಸಿ, ಶಶಿಕಾಂತನು ಎಲ್ಲಿಗೂ ಹೋಗಿ ಬರುತ್ತಿದ್ದನು. ಬರುವಾಗ ಮಾತ್ರ ಅವನ ಮುಖ ತುಂಬು ಚಂದಿರನ ಬೆಳದಿಂಗಳಿಗಿಂತಲೂ ಹೆಚ್ಚು ಕಾಂತಿಯನ್ನು ಬಿರುವಂತೆ ತೋರುತ್ತಿತ್ತು. ನಾಗರಾಜ ಈ ವಿಷಯವನ್ನು ಎಷ್ಟು ಕೇಳಿದರು ಶಶಿಕಾಂತ ಒಂದಿನಾನು ಬಾಯ್ಬಿಟ್ಟಿರಲಿಲ್ಲ, ಟೈಂ ಬರ್ಲಿ ತಗೊಳ್ಲೆ ಮಗ್ನ ಆವಾಗ ನಿಂಗ ಎಲ್ಲಾ ಗೊತ್ತಾಕೈತಿ' ಎಂದು ಊರ ಬಸ್ಸನ್ನು ಹತ್ತಿ ಹಳ್ಳಿಯನ್ನು ತಲುಪುವವರೆಗೂ ಮೊಬೈಲ್ ನಲ್ಲಿ ಆ ವ್ಯಕ್ತಿಯೊಂದಿಗೆ ಮಾತನಾಡುತ್ತಲೆ ಇರುತ್ತಿದ್ದ.

ರಾತ್ರಿ ಎಂಟೂವರೆಯಾಗಿತ್ತು, ಸಣ್ಣಪ್ಪನು ಅದೆ ತಾನೆ ಊಟವನ್ನು ಮಾಡಿಕೊಂಡು ಬಂದು ಜಗುಲಿಯ ಮೇಲೆ ಕುಳಿತುಕೊಂಡಿದ್ದನು. ಮಡದಿ ಶಾಂತವ್ವ ವಿಳ್ಯೆದೆಲೆ ತಟ್ಟೆಯನ್ನು ತಂದು ಗಂಡನ  ಮುಂದಿಟ್ಟಳು. ಸಣ್ಣಪ್ಪನು ಒಂದೆರಡು ಎಲೆಗಳನ್ನು ತೆಗೆದುಕೊಂಡು ತೊಟ್ಟನ್ನು ಚಿವುಟಿ ಒಗೆದು,  ಬಲಗೈ ಹೆಬ್ಬರಳಿನಿಂದ ಸುಣ್ಣದ ಡಬ್ಬಿಯಲ್ಲಿದ್ದ ಸುಣ್ಣವನ್ನು ಗೀರಿಕೊಂಡು ಎಲೆಗಳಿಗೆ ಸವರಿ, ಒಣ ಕೊಬ್ಬರಿಯ ತುಂಡನ್ನು ಮುರಿದಿಟ್ಟುಕೊಂಡು ಎಲೆಯನ್ನು ಮಡಿಚಿ, ಬಾಯೊಳಗೆ ಹಾಕಿಕೊಂಡು ಜಗಿಯತೊಡಗಿದನು. ಹತ್ತು ನಿಮಿಷ ಕಳೆಯಿತು , ಎದುರು ಮನೆಯಿಂದ ಕಲ್ಲವ್ವ ಮೈ ತುಂಬಾ ಸೆರಗನ್ನು ಹೊದ್ದುಕೊಂಡು ಬಂದಳು 'ಯಣ್ಣಾ ಊಟಾಯ್ತಾ?, ಅತ್ತೆಮ್ಮ ನಿಂದು' ಎಂದು ಕೇಳುತ್ತಲೆ ತಲೆಯ ಮೇಲಿನ ಸೆರಗನ್ನು ಸರಿಪಡಿಸಿಕೊಳ್ಳುತ್ತಾ, ಸಣ್ಣಪ್ಪನ ಹೆಂಡತಿಯ ಹತ್ತಿರಕ್ಕೆ‌ ಬಂದು ನಿಂತಳು. ಸಣ್ಣಪ್ಪನೆಂದರೆ ಎಲ್ಲಿಲ್ಲದ ಭಯ, ಭಕ್ತಿ, ಗೌರವ ಅಲ್ಲದೆ ಸ್ವಂತ ಅಣ್ಣನಿಗಿಂತಲೂ ಒಂದು ಕೈ ಮೇಲೆಯೆ ಎನ್ನುವಂತಿದ್ದ ನಂಬಿಕೆ.
ಸಣ್ಣಪ್ಪ ಬಾಯಲ್ಲಿ ತುಂಬಿಕೊಂಡಿದ್ದ ವಿಳ್ಳದ ರಸವನ್ನು ಕಟ್ಟೆಯಾಚೆಗೆ ಉಗಿಯುತ್ತಾ, 'ನಿಂದೂಟ ಆತನವಾ?'
'ಹ್ಞೂಂ' 
'ಮತ್ತೇನವ ಸಮಾಚಾರ, ಬೆಳಿಗೆ ಹುಳಾ ಬಿದ್ದಾವಂತ, ಆ ಹಿತ್ಲಮನಿ ಸೀನ್ಯಾಗ ಹೇಳಿನಿ, ಹೊತ್ತಾರೆನೆ ಹೋಗ್ಬಿಟ್ಟು ಬೆಳಿಗೆಲ್ಲಾ ಎಣ್ಣಿ ಹೊಡ್ದಬಿಟ್ಟ ಬಂದ್ಬಿಡು ಅಂತಂದೀನಿ'
'ಹಂಗಾ ಆಗ್ಲಾಳಣ್ಣ' ಸೋತ ಧ್ವನಿಯಲ್ಲಿ ಮಾತನಾಡಿದಳು.
ಅವಳ ಮಾತಿನಲ್ಲಿ ಗೆಲುವಿಲ್ಲದಿರುವುದನ್ನು ಕಂಡುಕೊಂಡ ಸಣ್ಣಪ್ಪನು, ಮುಂದೆ ತುಂಬಿಟ್ಟಿದ್ದ ಚರಿಗೆ ನೀರನ್ನು ಎತ್ತಿಕೊಂಡು ಬೀದಿಯ ಪಕ್ಕಬಂದು, ಬಾಯಲ್ಲಿ ಹಾಕಿಕೊಂಡಿದ್ದ ವಿಳ್ಯದೆಲೆಯನ್ನು ಉಗುಳಿ, ಚರಿಗೆ ನೀರಿನಿಂದ ಬಾಯನ್ನು ತೊಳೆದುಕೊಂಡು, ಮರಳಿ ಕಟ್ಟೆಯ ಮೇಲೆ‌ ಕುಳಿತುಕೊಂಡು ಗಂಭೀರವಾಗಿ ಮಾತನಾಡಲು ಗಂಟಲನ್ನು ಕೆಮ್ಮಿ ಧ್ವನಿಯನ್ನು ಸರಿಪಡಿಸಿಕೊಂಡು ಎರಡು ನಿಮಿಷ ಸುಮ್ಮನಿದ್ದು, 'ಹೇಳವಾ ಏನ್ ವಿಷ್ಯಾ ಅಂತಂದ್ರ .

ಉಕ

ಹಿಂಗ್ಯಾಕ ನೋಡಾಕ್ಹತ್ತಿದಿ, ಹೊತ್ಗೊಂಡ
ಖಾಲಿ ಹಿತ್ತಾಳಿ ಕೊಡ...!
ನೀರು ತುಂಬ್ಕೊಂಡ ಬರುವಾಗ ಹುಷಾರು...
ಉಳುಕಿ-ಗಿಳಕಿ ಬಿಟ್ಟಾತ, ಆ ನಿನ್ನ ಸಪೂರಾನ ನಡ!

ಸುನೆ ಮುಗ್ದು, ಚಂದಪ್ಪನ ಗ್ರಾಣಾನು ಕಳಿತು
ಇನ್ನ್ಯಾಕ ಕೂಡೊಕ ತಡ...!
ಸಂಕ್ರಾಂತಿನು ಹೋತು ... ಇನ್ನ ತಂಡಿ ಕಮ್ಮಿ.. ಬಿಸ್ಲ
ಜಾಸ್ತಿ! ಅವಸರಿಸಿ ಬರಬಾರ್ದೇನ ಬಡಬಡ..!

ಯಾರೇನರ ಹೇಳ್ಲಿ ನನ್ಬಗ್ಗೆ, ಮಾಡ್ಕೊಬ್ಯಾಡ
ಪ್ರೀತಿ ಮಾಡೊ ಮುಂದ ಗಡಬಡ!
ಹ್ಯಾವಿಲೆ ಮಾಡುವಂತಾದ್ದಲ್ಲಿದು, ಸಂಬಂಧ ಕುದ್ರಿದ
ಮ್ಯಾಲ, ಅನ್ಕೊಬಾದ್ರು ಹಿಂಗ್ಯಾಕಾತಂತ ತಡಬಡ!

ಮಳ್ಳ ಹುಡ್ಗ, ಮತ್ತೇರಿ ಕುಂತಾನ ಬೇವಿನಕಟ್ಟಿ‌ ಮ್ಯಾಲ,
ಹೊತ್ತ ಸರ್ದ, ಉರ್ದ ಹೊಕ್ಕೇತನ ನನ ಮೂಡ!
ಕಾಲಾನ ಗೆಜ್ಜೆನ ಲಜ್ಜಿನರ ತೆಗ್ದ, ಬಾರ... ನನ್ನಂಗಳಕ್ಕ
ಒಂಟೆತ್ತಿನ ಬಂಡಿ ಏನ್ಚಂದ, ಜೋಡೆತ್ತರ ಆಗ್ಬಾರ ನನ ಕೂ..ಡ!
ಜೋಡೆತ್ತು ಆಗ್ಬಾರ ನನ ಕೂ...ಡ!

ಚುಟು

ಕಣ್ಣು....,
ಮನಸ್ಸಿನೊಳಗಿಳಿಯದಂತೆ
ದಿಗ್ಭಂದನವ ಹಾಕಿಬಿಟ್ಟಿದೆಯಲ್ಲ
ನಿನ್ನೀ....ಕಣ್ಣ ಕಾಡಿಗೆ!
ರಂಗೀ,
ಕಾಯುವುದಾದರು
ಎಷ್ಟಂತ!?
ವಿರಹದಲೆ ಸುಟ್ಟು,
ಅಟ್ಟಿಬಿಡುವುದೇನೊ?
ನನ್ನನು ಸುಡುಗಾಡಿಗೆ!

ಇಪ್ಪತ್ತು ವಸಂತಗಳು
ಕಳೆದರೂ...ನಿ ಕೊಟ್ಟು
ಹೋದ, ನವಿಲು ಗರಿ
ಇನ್ನೂ.....ಉಸಿರಾಡುತ್ತಿದೆ
ಡೈರಿಯಲ್ಲಿ!
ಹೂತು... ಹೋದ
ನೆನಪುಗಳು ಮತ್ತೆ
ಜೀವ ಪಡೆದುಕೊಳ್ಳುತ್ತಿವೆ
ಮನದಲ್ಲಿ!

ರಸಗುಲ್ಲ!!!
ಇವುಗಳನ್ನು ನೋಡಿದಾಗಲೆಲ್ಲ
ಕೆಂಪಗಾಗುತ್ತದೆ
ನನ್ನವಳ ಗಲ್ಲ!!
ನೆನಪಾಗುವುದೇನೊ?
ಅವಳಿಗೆ
ನಾ ಕೊಟ್ಟ
ಬೆಲ್ಲ!!

ಚುಟುಕು

ನೀ... ಕೊಟ್ಟು ಹೋದ
ನವಿಲು ಗರಿಗೀಗ...
ಇಪ್ಪತ್ತರ 
ಹರೆಯ!
ನೋಡಿದಾಗಲೆಲ್ಲ
ನೆನಪಿಸುತ್ತದೆ, ನನ್ನ
ಯೌವ್ವನದ
ಸಮಯ!

ಗರಿಯ ಬಣ್ಣ
ಮಾಸದು!
ಹೂವಿನ ಗಂಧ
ಮರೆಯಲಾರದು!
ಹೀಗೆ, ಮಾಸದ ಕನಸುಗಳನ್ನು
ಮರೆಯದ ನೆನಪುಗಳನ್ನು
ಎದೆಯಲ್ಲಿ ತುಂಬಿ...
ನೀ ನಡೆದು ಹೋದರೆ
ಹೇಗೆ?

ಶಾಯರಿ

ಯಾವ ವಿಷವು
ನನ್ನನು ಕೊಲ್ಲುವುದಿಲ್ಲ!
ರಂಗೀಯ ನೆನಪುಗಳ
ಪಂಜು ನನ್ನೆದೆಯಲ್ಲಿ
ಉರಿಯುತಿರಲು
ಸಾಕಿ....
ಯಾವ ಅಮೃತವು
ಉಳಿಸಿಕೊಳ್ಳಲಾರದು
ವಿರಹಿಯನ್ನು. 
ಒಲವ ತೈಲವ,
ನಂದುತಿರುವ ಹಣತೆಗೆ 
ಸುರಿಯದ ಹೊರತು.

ಶಾಯರಿ

ರಂಗೀಯು ತೊರೆದು
ಹೋದ, ದುಃಖಕ್ಕಾಗಿ
ಶರಾಬನ್ನು
ಕುಡಿಯುತ್ತಿಲ್ಲ
ಸಾಕಿ...
ಅವಳಿಗಾಗಿ,
ಲೆಕ್ಕವಿರದಷ್ಟು
ಹೂಗಳನ್ನು 
ಕೊಂದಿದ್ದೇನೆ. ಅದರ
ಪಶ್ಚಾತ್ತಾಪಕ್ಕಾಗಿ.

ಉಸಿರುಗಟ್ಟಿ ಹೋಗುತ್ತಿವೆ,
ಧರ್ಮ ಗ್ರಂಥಗಳು
ನಿಟ್ಟುಸಿರು, ಜೀವಗಳನ್ನು
ಬಲಿ ಪಡೆದ ಕಟ್ಟಡಗಳಲ್ಲಿ
ಸಾಕಿ...
ನಾನು ಬರೆದದ್ದು
ಪ್ರೇಮಗ್ರಂಥ. ಮಡಿ
ಮೈಲಿಗೆ ಮುರ್ಚಟ್ಟುಗಳಿಂದಲೆ
ತುಂಬಿ ಹೋಗಿದೆ. 
ಬದುಕಿಸುತ್ತದೆ ನಾಲ್ಕು
ದಿನ ಹೆಚ್ಚಿಗೆ
ಓದಿದವರನ್ನು.

ಕಜಲ್

ನಾನೇನು...ಅಸಹಾಯಕ ಶೂರರೆದುರು
ಶಪತಗೈದವಳೇನಲ್ಲ, ಬಿಚ್ಚಿದ ಮುಡಿಯ
ಕಟ್ಟಿಕೊಳ್ಳಲು ನೆತ್ತರಿನಾಭಿಷೇಕವನ್ನು
ಆಪೇಕ್ಷಿಸಿದವಳೇನಲ್ಲವೊ ಪಾಗಲ್..
ಬಟ್ಟಲು ಮದಿರೆ ಕುಡಿಯಲು, ಬಿಡಿಗಾಸು ಇಲ್ಲದ
ನೀನು...ಹೂಗಾರನು ಮಾರಿ, ಅಳಿದುಳಿದು ಚೆಲ್ಲಿದ
ಹೂವಿನ ಪಕಳೆಗಳ ತಂದು, ಸಿಂಚೈಸುವೆಯಲ್ಲ 
ಎನ್ನ ಮೇಲೆ!!! ಹಾ.....‌‌ ಆ ಮಧುರ ಕ್ಷಣಕ್ಕಾಗಿಯೆ
ನಾನಿಲ್ಲಿ ಕಾಯುತಿರುವೆ.

ತುಳುಕುವ ಮದಿರೆ, ಅರಮನೆಯ ತುಂಬೆಲ್ಲ 
ಘಮಘಮಿಸುವ ಅತ್ತರಿನ ಸುವಾಸನೆ,
ಸಂಜೆಗೆ ಕಾಲ್ಗೆಜ್ಜೆಯ ಸದ್ದು, ಅತ್ತಿತ್ತ ಹೋಗದೆ,
ಸುತ್ತ ಸುಳಿದಾಡುವ ಭಂಗಿ ಸೇದಿ ಬಿಟ್ಟ ಘಾಟು,
ವಾಕರಿಕೆ ತರಿಸುವಷ್ಟು ಹೂಗಳ ಪರಿಮಳ ಇವೆಲ್ಲವ
ತೊರೆದು, ನಿನ್ನ ಜೊತೆಯಲ್ಲಿ ಊರಿನ ನಡು ಬೀದಿ ಬೀದಿಗಳನ್ನು ಸುತ್ತಬೇಕೆಂದಿರುವೆ ಪಾಗಲ್.
ಹಸಿವೊ, ಬಾಯಾರಿಕೆಯೊ, ಬಿಸಿಲೊ ನೆರಳೊ, ಬಿಸಿಯೊ ತಂಗಳೊ, ಏನಿದ್ದರು ಸರಿ ನಡೆದುಬಿಡುವೆ ನಿನ್ನೊಂದಿಗೆ
ವಿರಹದುರಿಯಡುಗೆಯಲ್ಲಿ ನನಗೊಂದೆರಡು ತುತ್ತು ಮೀಸಲಿರಲಿ.

ಮೈ ತುಂಬ ಸಿಂಗರಿಸಿಕೊಂಡ ಆಭರಣಗಳು
ಭಾರವಾಗಿಬಿಟ್ಟಿವೆ, !! ತೆಗೆದಿಟ್ಟು ಬರಲೆ?, ಕರೆದುಕೊಂಡು
ಹೋಗುವೆಯಲ್ಲ ನೀನು ಪಾಗಲ್..
ಊರೊಳಗಿನ ಎಲ್ಲ ಅಂಗಡಿಗಳಿಗೂ ಹಳೆಯ ಗಿರಾಕಿ ನೀನು.

ಹೀಗೆ

ಎಲ್ಲರು ಮಲಗಿರುವಾಗ, ನಾನೊಬ್ಬನೇಕೆ
ಎದ್ದಿರಲಿ?
ಬುದ್ದನ ಹಾಗಿಲ್ಲೀ...ಯಾರು ಪ್ರಭುದ್ಧರೆನಲ್ಲವಲ್ಲ!!
ಬೆಳಕನು ಅರಸಲು ಇರುಳಲಿ ಮನೆ ಬಿಟ್ಟವರದೆಷ್ಟು ಮಂದಿ
ಎಲ್ಲರ ಮನೆಯ ಬಾಗಿಲುಗಳು, ಜೈಲು ಕೋಣೆಗಿಂತಲೂ
ಬಲಿಷ್ಠವಾಗಿರುವಾಗ.

ಹೇಳುವುದಕ್ಕೆ, ಕೇಳುವುದಕ್ಕೆ ಇನ್ನೇನುಳಿದಿದೆ?
ಮಾತು ಮಾತಿಗೂ ಬೆನ್ನು ತೋರಿಸುವವರೀರುವಾಗ!
ಸುಮ್ಮನೆ, ಒಡೆದು ಹೋದ ಮುತ್ತುಗಳ ಜೋಡಿಸುವ
ವ್ಯರ್ಥ ಪ್ರಯತ್ನ
ಮುಟ್ಟಿದರೆ ನುಂಗಿಬಿಡುವಂತಹ ವಿಲಕ್ಷಣ ಸೋಂಕಿತ
ಮನಸುಗಳು.

ಅಳಿಸುವುದಕ್ಕೆ ನನ್ನ ಕೈಯ್ಯಲ್ಲೊಂದು ಡಸ್ಟರ್ ಇರಬೇಕಾಗಿತ್ತು!!
ಅಳಿಸಿ ಬರೆದರೆ? ಮತ್ತೆ ಜೀವ-ಭಾವ ಮೂಡುವುದೇನು
ಸಂಬಂಧಗಳಲ್ಲಿ!
ಹುಚ್ಚುತನ!! ನಾನೇನ್ನಬಹುದು, ಅವರು ತೆವಲೆಂದು ಕರೆದು ಬಿಡುತ್ತಾರೆ.
ಬರೆದ ಪದಗಳಿಗೆ ಬೆಲೆಯಿಲ್ಲವೆಂದ ಮೇಲೆ, ಪುಸ್ತಕ
ಲೇಖಕನಿಗೂ, ಓದುಗರ ಜೇಬಿಗೂ ಹೊರೆ.

ಹೋಗಲಿಬಿಡಿ ಎಂದು ಕೈಯ್ಯನ್ನು ತೊಳೆದುಕೊಂಡು ಬಿಡುವುದಾ?
ಯಾರೊ ಹಚ್ಚಿದ ದೀಪವನು ಊದಿ, ಕತ್ತಲಲಿ ಗಹಗಹಿಸಿ 
ನಗುತ್ತಲಿರುವುದಾ?
ಹರಕು-ಮುರಕು ಗುಡಿಸಲಿಗೆ ಕಡ್ಡಿಯ ಗೀರಿ, ಬಂಗಲೆಯಲ್ಲಿ ಹೊದ್ದು ಮಲಗಿಬಿಡುವುದಾ?

ತುಂಬಿಕೊಳ್ಳಲಿಲ್ಲ ಅರಿವನ್ನು, ಹಂಚಿಕೊಳ್ಳಲಿಲ್ಲ
ಅನುಭವವನ್ನು, ತೋರಿಸುವ ದಾರಿಗಳಂತು ಪ್ರಪಾತಗಳೆ.
ಹಾದಿಗೆ ಹಚ್ಚಿದ ಮುಳ್ಳುಗಳ ನಡುವೆಯೂ ಹೂವೊಂದು
ನಸುನಗುತ್ತದೆ, ಚಿವುಟದಿದ್ದರೆ ಸಾಕು, ದುಂಬಿ ಮಧುವನ್ನು
ಹೀರಲಿ, ಗೂಡನ್ನು ತುಂಬಿಸಲಿ, ತುಂಬು ಜೇನು ಎಲ್ಲರ
ನಾಲಿಗೆಯ ಮೇಲಿನ ವಿಷವನ್ನು ಕಳೆಯಲಿ, ಬದಲಾಗಲಿ,
ಹೊಸಬೆಳಕು ಮೂಡಲಿ.

ಇದಾಗದಿದ್ದರೆ?, ಜೇನು ವಿಷವಾಗಿಬಿಡಲಿ, ಬಿದ್ದು ಹೋಗಲಿ ಸಾಲು ಸಾಲು ಹೆಣಗಳು, ಗಂಟಲಿಗೆ ಹನಿ ನೀರು ದಕ್ಕದಂತೆ.
ತಟ್ಟಿಬಿಡಲಿ ನಿಸ್ಸಹಾಯಕ ಕೈಗಳ ಶಾಪ, ದಾರಿ ಹೆದ್ದಾರಿಗಳಗುಂಟ
ತುಂಬಿ ಬಿಡಲಿ ಮಾಂಸದ ಮುದ್ದೆಗಳು. 
ಶತ ಶತಮಾನಗಳಿಂದ ಹಸಿವಿನಿಂದ ಹಾರಾಡುತಿರುವ ಹದ್ದುಗಳು ಕುಕ್ಕಿ... ಕುಕ್ಕಿ.. ಎಳೆದು ತಿಂದು ತೇಗಿಬಿಡಲಿ, 

ಬಹುಶಃ ಅವುಗಳಿಗೂ ಅಜೀರ್ಣವಾಗಬಹುದೇನೊ?
ಮತ್ತೊಬ್ಬರನ್ನು ತಿಂದೆ ಬದುಕಿದಂತವರಿವರು,
ಸುಲಭವಾಗಿ ಹೇಗಾದರೂ ಜೀರ್ಣವಾದಾರು?
ರಕ್ತ ಬೀಜಾಸುರನ ಸಂತತಿಯೆ ಇರಬಹುದೇನೊ?
ಎಲ್ಲವು ಅಳಿಯಿತು ಎನ್ನುತ್ತಿರುವಾಗಲೆ, ಮೂಲೆಯಲ್ಲೊಬ್ಬ
ಉಸಿರಿರುತ್ತಾನೆ.

ಸಾಕು...ಸಾಕು.. ಒಂದೆ ಉಸಿರಿಗೆ ಅದೇಷ್ಟೊಂದು ಸಾಥಗಳು!!
ಇಲ್ಲದಿದ್ದರೆ? ಆಳುತ್ತಿದ್ದರೇನು ಸ್ವಾಮಿ ಮಸಾಲೆಯ ವಾಸನೆಗೆ
ಬಂದ ಮಂದಿ.
ಕಂಡು ಹಿಡಿಯಬೇಕ್ಹೇಗೆ ಕಾಗೆಗಳೊ? ಕೋಗಿಲೆಗಳೊ? ಎಂಬುದನ್ನು
ವದರುವುದನ್ನು ಸಮರ್ಥಿಸುಕೊಳ್ಳುತ್ತವೆ, ನಾವು ಕೋಗಿಲೆಗಳೆಂದೆ

ನಿಜ. ಇವರು ವದರುತ್ತಾರೆ, ವಟಗುಟ್ಟುತ್ತಾರೆ, ಗುಂಯ್ಯಗುಡುತ್ತಾರೆ
ಎಲ್ಲಿ?  ಹೂಗಾರನ ಹೊಟ್ಟೆಯ ಮೇಲೆ ಹೊಡೆದು, ಕತ್ತಿನ ತುಂಬಾಹೂ ಹಾರವನ್ನು ಹಾಕಿಸಿಕೊಂಡು, ಹೆದರಿಸಿ-ಬೆದರಿಸಿ ಹಾಕಿಸಿಕೊಂಡ ಪೆಂಡಾಲಿನ ನೆರಳಿನಲ್ಲಿ
ಇವರ ಬಾಯ್ಚಪಲಕ್ಕೊಂದೆರಡು ಗುಡಿಸಲು, ಡಬ್ಬಾ ಅಂಗಡಿಗಳಿಗೆ
ಹೋಮವನ್ನು ಮಾಡಿದರಾಯಿತು. ಮುಗಿಯಿತು.

ಊರಿಗೆ ಬೆಂಕಿ ಹಚ್ಚಿ, ಬಂದು ಕುಳಿತುಕೊಳ್ಳುತ್ತಾರೆ,
ಅದೆ ಬಡವರ ಬೇವರಿನಲ್ಲಿ ಮಿಂದೆದ್ದ, ಸುಭದ್ರವಾದ
ಕಲ್ಲು ಕೋಟೆಯ ಅರಮನೆಯಂಥಹ ಮನೆಯಲ್ಲಿ.
ಎರಡು ತಿಂಗಳು ಸಂಬಳ ಪಡೆಯದ ಆಳು ತಂದುಕೊಟ್ಟ
ಪಾನೀಯವನ್ನು ಕುಡಿದು, ಹೇಳುತ್ತಾರೆ 'ಇಂದಿನ ಕಾರ್ಯ
ಇತಿಹಾಸದ ಪುಟದಲ್ಲಿ ಅಚ್ಚಳಿಯದೆ ಉಳಿಯುವಂತದ್ದು'

ಉಳಿಯುತ್ತದೆ ಸ್ವಾಮಿ, ಕೆಲವರ ಹೆಸರು ಪೋಲಿಸ್ ಕೇಸ್
ರಜಿಸ್ಟಾರ್ ನಲ್ಲಿ, ವಾರಂಟ್ ನಲ್ಲಿ, ತಲೆ ಮರೆಸಿಕೊಂಡವರಲ್ಲಿ,
ಗಡಿಪಾರು ಆದವರಲ್ಲಿ, 

ಬುದ್ಧ ಬಿಟ್ಟುಬಂದ ಕತ್ತಿ ಗುರಾಣಿಗಳು ಇವರ ಬೆನ್ನ ಹಿಂದೆಯೆ ಇವೆ,
ಕಳಿಂಗ ರಣರಂಗಕ್ಕೆ ಸಿದ್ಧವಾಗುತ್ತಿದ್ದಾರೆ ಎಲ್ಲರೂ...
ಯುದ್ಧವಾದ ಮೇಲೆ? ಸಾಮ್ರಾಟನಂತೆ, ಮರಗುವರಾ?
ಕರಗುವರಾ? ಚಿಂತಿಸುವರಾ? ದುಃಖಿಸುವರಾ? ಎಲ್ಲದಕ್ಕಿಂತಲೂ ಮೊದಲು, ದೀಕ್ಷೆಗಾಗಿ ಹಪಹಪಿಸುವರಾ?
ಇಲ್ಲಾ....!! ಹರಿಸಿದ ನೆತ್ತರಿನ ಗುರುತುಳಿಯದಂತೆ, ಸಾಗರಕ್ಕೆ
ಕಾಲುವೆಯನೆ ಕಟ್ಟುವರಾ?

ಕಟ್ಟಿಸುವುದೆ ಇರಲಾರರೆ? ಸುಂಮಗಳೆಯನು ಅಮಂಗಳೆಯನ್ನಾಗಿಸಿ,
ಮತ್ತೆ ನಡು ಬೀದಿಗೆ ಬಂದು, ಮುಂಜಾನೆ ಮುನ್ಸಿಪಾಲ್ಟಿ ನೌಕರ
ಗುಡಿಸಿದ ರಸ್ತೆಯ ಮೇಲೆ, ಅವಳ ಕೈಯಲ್ಲೆ ರಂಗೋಲಿಯನ್ನು
ಹಾಕಿಸಿ, ಎದೆಯುಬ್ಬಿಸಿ ಬೀಗುವುದಿಲ್ಲವೇನು? ನಾವೆ
ಸಮಾಜ .......ಕರೆಂದು.

ಮತ್ತೆ, ಮುಗ್ದ? ಜನತೆ ತಲೆದೂಗುತ್ತಾರೆ, ಕಿವಿಗಡಚಿಕ್ಕುವಂತೆ
ಚಪ್ಪಾಳೆಯನ್ನು ಹೊಡೆಯುತ್ತಾರೆ, ಬೆನ್ನನ್ನು ತಟ್ಟಿಸಿಕೊಳ್ಳುತ್ತಾರೆ.
ಮುಂದೇನು?, ಮುಂದೇನು?... ಮುಂದೇನು?
ಈ ನಡು ರಸ್ತೆಯ ಕ್ರಾಂತಿ ಕಾರ್ಯಕ್ಕೆ, ಖಾತೆಯಲ್ಲೊಂದಿಷ್ಟು
ಹಣ ಜಮಾವಣೆಯಾಗುತ್ತದೆ, ಕಲ್ಲಿನ ಕೋಟೆಯಲ್ಲಿ
ಅಮಂಗಳೆಗೆ ಸುಖದ ಪರಿಚಯವನ್ನು ಮಾಡಿಸುತ್ತಾರೆ.

ಮತ್ತದೇ... ನಿಟ್ಟುಸಿರು, ಮತ್ತದೆ ಸವಕಲು ಪ್ರಶ್ನೆ, ಮತ್ತದೆ ನಿರ್ಭಾವ ನೋಟ, ಮತ್ತದೇ ದಾರಿ ತಪ್ಪಿಸುವವರ ಮಾತುಗಳು.
ಯಾವುದನ್ನು ಕೇಳಬೇಕು, ಅರ್ಥೈಸಿಕೊಳ್ಳಬೇಕು, ಚರ್ಚಿಸಬೇಕು, 
ಅಳವಡಿಸಿಕೊಳ್ಳಬೇಕು, ಅನುಸರಿಸಬೇಕು. ಎಲ್ಲದಕ್ಕೂ
ನಿರುತ್ತರ.

ಯಾಕೆ ಹೀಗೆ, ಈ ಮಣ್ಣಿನ ಗುಣಧರ್ಮವೆ ಹೀಗೆಯೆ?
ಶಿಲುಬೆಗೆರಿದವನಿಗದೇಷ್ಟು ಬೆಳಕು!!! ದೇವಧೂತನಿಗೂ
ಶಾಂತಿ ಸಿಕ್ಕಿಲ್ಲವಾ!?
ಮಣ್ಣು ಗೋರಿಯ ಮೇಲೆ ಕಲ್ಲಿನ ಕಟ್ಟೆಯನ್ನು ಕಟ್ಟಿ,
ಸುಕೋಮಲ ಹೂವನ್ನು ಹೊದಿಸಿಕೊಳ್ಳುವ ಅಲ್ಲಾನಿಗೂ
ಏಕೆ? ನೆಮ್ಮದಿ ಸಿಕ್ಕಿಲ್ಲವಾ?
ಹಣ್ಣು, ಹಾಲು, ತುಪ್ಪ, ಬಂಗಾರಗಳಿಂದ ಅಲಂಕೃತಗೊಳ್ಳುವ
ಮುಕ್ಕೊಟಿ ದೇವರುಗಳಿಗೂ ಆಸೆಗಳೆ ತೀರಿಲ್ಲವಾ?

ಯಾರಲ್ಲಿ ಕೇಳಬೇಕು? ಅವರು ಚಿಂತಾನಾಶೀಲರು
ಇವರು ದೈವ ಭಕ್ತರು, ಕೆಲವರು ನಾಸ್ತಿಕರು, ಹಲವರು
ಸಂಶೋಧಕರು. ಬಹುಶಃ ಎಲ್ಲರೂ ಹೇಳುವುದೆ ಒಂದೆ
'ಹುಚ್ಚ' ನೀನು... ಇಲ್ಲಿ ಬಾ ಶಾಂತಿಯಿದೆ, ಅಲ್ಲಿ ನೋಡು
ಕ್ರಾಂತಿಯ ಭ್ರಾಂತಿಯಿದೆ, ನಾವು ಕೊಂದು ಬದುಕೋಣ‌.

ಎಲ್ಲ ಎಲ್ಲವ ನೋಡಿ, ಎಲ್ಲರ ಮಾತಿನ ಮಂಟಪದ
ಅಡಕತ್ತರಿಯಲ್ಲಿ ಸಿಕ್ಕು, ನನಗೆ ನಾನೆ ಹಾಕಿಕೊಳ್ಳುವ
ಪ್ರಶ್ನೆ. ಯಾಕಾದರೂ ಬಂದೇನೊ ಈ ಭೂಮಿಗೆ.

ಹಿ ಶಾ

ಅಬ್, ಇಸ್ ಗಲೀ ಮೆ ಹೀ...
ಮೇರಿ ಸಾಂಸ ಚಲಿ ಜಾತಿ ಹೈ!
ಯೇ.. ನಾ ಪೂಚೊ
ಕ್ಯೂಂ....?
ಜೊ..‌ ಛೊಡ್ಕೆ ಛಲಿ ಗಯೀ
ಹೈ ವೊ... ಉಸ್ಕಾ ಪೈರೊಂಕಾ 
ನಿಶಾನಾ, ಲಾ ಪತಾ ಹೈ!

ಉಸ್ಕೊ ಭೂಲ್ ಜಾನೇಕೊ
ಮೈ ನಾ... ಕೀಯಾ ಭಗವಾನ್
ಕಿ ಮಂದಿರಮೆ ದುವಾ....!!!

ಉಸ್ಕೊ ಭ್ಹೂಲಾನಾ ನಹೀ ಸಕಾ
ಮಂದಿರ ಮೆ ಬೈಟ್ಕೆ, ಭಗವಾನ್
ಕೆ ಸಾಮ್ನೆ ಕಿತ್ನೆ ಕಿಯೆತೊಬಿ ದುವಾ!!
ಸರ್ ಜುಕಾಕೆ ಕರೂಂಗಾ ಹರ್ದಿನ್ 
ತುಜೆ ಸಲಾಂ ಸಾಕಿ...
ಜೀವನ್ ಕಾ ಸಾರಾ ಘಮ ಮೀಟಾದಿಯಾ
ತೆರೆ ಆಂಗನ್ ಕೆ ಏಕ್ ಪ್ಯಾಲಾ ದವಾ!!


ಕಥಾ

'ಎದ್ದೇಳವ್ವ, ಸಾಕಿನ್ನ ಅತ್ತದ್ದ, ಕಾವ್ ಕೊಟ್ಟ ಮರಿ ಮಾಡಿದ್ದ ಹಕ್ಕಿನ ಹದ್ದು ಬಂದ ಕಿತ್ಗೊಂಡ ಹೋದಂಗ ಆತ, ಆಸ್ರ ಅನ್ಕೊಂಡಿದ್ದ ಕೋಲು ಮುರ್ದಬಿದ್ದೈತಿ, ಮಲ್ಲಯ್ಯ ಹಿಂಗ ಕೊಟ್ಟ, ಹಾಂಗ ಕಸ್ಗೊಂಡಬಿಟ್ಟ 

'ಜೀವಾ ಅಂದ್ರ ಹೆಂಗಪ್ಪಾ, ಹುಲ್ಲಕಡ್ಡಿ ಮಾಡಿಯೇನು? ಇವತ್ತ ಒಣಗಿ ಹ್ವಾದದ್ದು
ನಾಳೆ ಚಿಗಿತೈತಿ ಅನ್ನಾಕ. 

'ಹುಚ್ಚುಡುಗಿ, ಯಾರ್ ಜೀವ ಯಾರ ಕೈಯ್ಯಾಗ ಇರ್ತೈತಿ ಹೇಳ, ನಾಕ ಮಕ್ಳನ್ನ ಇದ ಕೈಯ್ಲೆ ಹೊತ್ಗೊಂಡ ಹೋಗಿ ಮಣ್ಣ ಮಾಡಿ ಬಂದಿನಿ ನಿನ್ನ ಅಣ್ಣ, ಅಕಂದ್ರದ್ದು, ಹಾಂಗಂತ ನಿಮ್ಮವ್ವ ಹಡೆದ ಬಿಟ್ಲೆನು? ನಿ ಹುಟ್ಟಿದ ಮ್ಯಾಲ ಸಾವಿನ ಜಾತ್ರಿ ನಿಂತು ಮನಿಯಾಗ ಮತ್ ನಿನ್ ಹಿಂದ ನಾಕ್ಮಂದಿ ತಮ್ಮ ತಂಗಿ ಹುಟ್ಟಿದ್ರ.
'ಇಲ್ಲೆ ಹಡಿಯೊ ತ್ರಾಸ ಬಂದಿಲ್ಲಪ್ಪ, ಕೂಡಿ ಬಾಳೋದ ಬಂದೈತಿ, ಅವ್ವ ನೀನು ಜೊತೆಯಾಗೆ ಇದ್ರಿ, ನಮ್ಮನ್ನ ಹಡದ್ರಿ, ಈಗ ನನ್ ಗತಿ ಏನ ಹೇಳ್ರಿ? ಹಡಿಯಾಕ ಗಂಡ ಇಲ್ಲ, ಬದಕಾಕ ಇದ್ದೊಂದ ಎಸಳು ಬಾಡಿ ಹೋತ. 
'ಮಗನ ಕಳ್ಕೊಂಡ ದುಃಖ ನಿನ್ನ ಹಿಂಗ ಮಾತಾಡ್ಸಾಕ ಹತ್ತೈತಿ, ಗಂಡನ ಮನಿ ಇವತ್ತ್ ನಿನ್ ಪಾಲಿಗೆ ಮುಚ್ಚಿರ್ಬೋದು, ಲೋಕದ ಬಾಗ್ಲ ಯಾವಾಗ್ಲೂ ತೆಗದಿರ್ತೈತಿ, ಹುಡಕ್ಕೊಂತ ಹೋಗ್ಬೇಕಷ್ಟ. ನಾವು ಮೊನ್ನೆ ಇಟಗಿ ಭೀಮವ್ವನ ಗುಡಿಗೆ ಹೋಗಿದ್ವಿ, ನೆಪ್ಪೈತನು?
'ಹ್ಮೂಂ, ನೆಪ್ಪಿಲ್ದೇನು? ಮಗಾ ಆರಾಮಾಗಿ ಬರ್ಲಂತಂದ ಕಾಯಿ ಕಟ್ಟಿ ಬಂದಿದ್ವಲ್ಲ!.
'ಹೌದು, ಕಟ್ಟಿದ ಕಾಯಿ ಫಲ ಪಲಿಸ್ಲಿಲ್ಲ, ಯಾವ ಸಾಮಿ ಮನಿ ಅಡ್ಗಿ ಸಾಂಬಾರ ಆಗೈತೊ ಏನೊ?, ಹೋಗ್ಲಿಬಿಡು ಹುಳ ಬಿದ್ದ ಹಣ್ಣನ್ನ ಎಷ್ಟಂತ ತೊಳಿಯಾಕ ಆಗ್ತದ. ಹ್ಮ, ಭೀಮವ್ವನ ಗರ್ಭ ಗುಡಿ ಒಳಗ ಒಂದ ಕಡಿಗೆ ಎರಡು ಸಾಲು ಬರ್ದಿದ್ರು, ಅದನ್ನ ನೀನ್ ಎಷ್ಟ ಚಂದ ಓದಿ ಹೇಳಿದಿ, ನೆನಪೈತನು?'
ಕ್ಷಣಕಾಲ, ಮೌನವಹಿಸಿದ ಮಂಜುಳಾ 
ತಟ್ಟನೆ ತಲೆ ಎತ್ತಿ ತಂದೆಯ ಮೊಗವನ್ನು ದಿಟ್ಟಿಸಿ ನೋಡಿದಳು. ತಂದೆಯ ಕಣ್ಣಲ್ಲಿ ಕಣ್ಣೀರಿನ ಕಡಲು ಮಾಯವಾಗಿ, ಪೌರ್ಣಿಮೆ ಚಂದ್ರನು ಬೆಳಗಿದಂತೆ ಭಾಸವಾಯಿತು.
"ಹಡದ ಮಕ್ಕಳಿಗೆ ತಾಯಿ ಆಗೋದ ದೊಡ್ಡ ಮಾತಲ್ಲ!, ಎಲ್ಲಾ ಮಕ್ಕಳಿಗೂ ತಾಯಾಗೋದು ದೊಡ್ಮಾತು!". ಮೆಲ್ಲನೆ ಉಸಿರಿ, ಸಂದಿಗ್ಧತೆಗೊಳಗಾದಂತೆ ಕಂಡು ಬಂದಳು. ಅತ್ತ ಸೂರ್ಯ ಸಣ್ಣಗೆ ಕರಗುತ್ತಿದ್ದ, ಹಕ್ಕಿಗಳ ಹಿಂಡು ಚಿಲಿಪಿಲಿಗೈಯ್ಯುತ್ತ ಮರಳಿ ಗೂಡಿಗೆ ಹೊರಟಿದ್ದವು, ಅಪ್ಪ ಭುಜದ ಮೇಲೆ ಕೈಯಿಟ್ಟ, ಕತ್ತಲಾಗುತ್ತಾ ಬಂತು ಹೊರಡೋಣ ಎಂಬ ವಿಚಾರದೊಂದಿಗೆ.
ಮಂಜುಳಾ ಧೀರ್ಘ ನಿಟ್ಟುಸಿರೊಂದನ್ನು ಹೊರಬಿಟ್ಟು, ಸೇರಗಿನಂಚಿಂದ ಕಣ್ಣೀರು, ಮೂಗನ್ನು ಒರೆಸಿಕೊಂಡು, ತೊಡೆಯ ಮೇಲೆ ಹಾಕಿಕೊಂಡಿದ್ದ ಮಗನ ಶವವನ್ನು ಎತ್ತಿ ಹೆಗಲ ಮೇಲೆ ಹಾಕಿಕೊಂಡು ಎದ್ದು ನಿಂತಳು.
'ಆವತ್ತ ನನ್ನ ಹೊಟ್ಟ್ಯಾನ ಕೂಸಿನ ಬದ್ಕ ಕಟ್ಟೊಕಾ ತಯಾರಿದ್ದಾಕಿ ನಾ, ಇವತ್ತ 

ಶಾಯರಿ

ಇವುಗಳೆಲ್ಲದರ
ಮರಣೋತ್ತರ ಪರೀಕ್ಷೆಯನ್ನು
ನಡೆಸಲಾಗಿ,
ಎಲ್ಲದರಲ್ಲಿಯೂ
ರಂಗೀಯ ನಿರಾಕರಣೆಯ
ಸೋಂಕೆ 
ಕಾರಣವಾಗಿದೆಯಂತೆ
ಸಾಕಿ....
ಹೂಗಳನ್ನೆ
ಹೊಸಕಿದವಳಿಗೆ
ನಾನು ಯಾವ ಲೆಕ್ಕ!!
ಮದ್ದಿಲ್ಲದ ರೋಗಕ್ಕೆ
ತುತ್ತಾದ ಬಡಪಾಯಿ
ರೋಗಿ ನಾನೀಗ!


ಕಥಾ

'ಹಲೋ... ಯಪ್ಪಾ ನಾನು '
'ಗೊತ್ತಾತ ಹೇಳಲೆ, 
'ಇಲ್ಲೆ ಸರ್ಕಲ್ ನ್ಯಾಗ ಒಬ್ಬಾಂವ ಪೋಲೀಸ್ ಗಾಡಿ ಚಾವಿ ಕಸ್ಗೊಂಡಾನ'
'ಹ್ಞಾಂ, ಚಾವಿ ಕಸ್ಗೊಂಡಾನ, ನಾನ ಯಾರಂತ ಹೇಳಿದಿಲ್ಲ ನಿ ಅವಂಗ'
'ಹೇಳಿದ್ರು ಬಿಡವಲ್ಲಂವಾ'
'ಏನಾ? ನನ್ ಹೆಸ್ರ ಹೇಳಿದ ಮ್ಯಾಲು ಬಿಡುವಲ್ನಾ ಅಂವ, ಮಬ್ಬಸೂಳೆಮಗನ್ನ ತಂದ ನಡ್ಮನಿಯಾಗ ಇಟ್ರಂತ. ಎಲ್ಲೆ ಕೊಡಿಲ್ಲಿ ಅವ್ನ ಕೈಯ್ಯಾಗ ಪೋನ ಒಂತಟ್ಗ, ಹುಚ್ಚ ಬಿಡಸ್ತಿನಿ ಇವತ್ತ ಅವಂದ.'

'ಹೇಳ್ರಿ' ಸ್ವಲ್ಪ ಖಾರವಾಗಿಯೇ ಕೇಳಿದನು ಸಹದೇವಪ್ಪ.
'ನಾನೊ ಸಿಂಡೂರ ಹಳ್ಳಿ ಮೆಂಬರ ಮಾತಾಡೊದು'
'ಏನಾತೀಗ' 
'ಏನಿಲ್ಲ, ನಂ ಹುಡ್ಗನ ಬೈಕಿನ ಚಾವಿ ಕಸ್ಗೊಂಡಿಯಂತಲ್ಲ ಯಾಕ?'
'ಅವಂದ ಡ್ರೈವಿಂಗ್ ಲೈಸೆನ್ಸ್ ಇಲ್ಲ. ಮೇಲಾಗಿ ತಲಿಗೆ ಹೆಲ್ಮಟ್ ಹಾಕ್ಕೊಲಾರ್ದನ ಗಾಡಿ ಓಡ್ಸಕೊಂಡ ಬಂದಾನ'
'ಹ್ಹ....ಹ್ಹ..ಹ್ಹ... ಇಷ್ಟ ಅನ, ನಾನೆಲ್ಲರ ಯಾವ್ದರ ಮಾಲ ಹಾರ್ಸ್ಕೊಂಡ ಹೊಂಟಾನಂತ ತಿಳ್ಕೊಂಡಿದ್ಯಾ, ಅಲ್ಲೊ ಮಾರಾಯಾ ಅಂವ ಈ ಗಾಡಿಯಲ್ಲ ಯಾ ಗಾಡಿ ಒಡ್ಸಿದ್ರುನು ಹೆಲ್ಮಟ್ ಹಾಕೊಳ್ಳೊದಿಲ್ಲ ಅದು ಕೆಳ್ಗಿಂದರ ಇರ್ಲಿ, ಮ್ಯಾಗಿಂದರ ಇರ್ಲಿ ಅಂತ ವಯಸ್ಸದು, ಸುಮ್ನ ಗಾಡಿ ಚಾವಿ ಕೊಟ್ಟ ಕಳ್ಸ'
'ಕೊಡ್ಲಿಲ್ಲಂದ್ರ?'
'ಕೊಡ್ಲಿಲ್ಲಂದ್ರ?' ಕೋಪ ನೆತ್ತಿಗೇರಿ 'ಕೊಡ್ಲಿಲ್ಲಂದ್ರ ಹಗಾ ಅಲ್ಲ, ನೀನಲ್ಲ ನಿಮ್ಮನಿ ದೇವ್ರು ಕೊಡುತ್ತ ನೋಡುವಂತಿ ಬೇಕಿದ್ರ'
'ಮೊದ್ಲ ನಿಮ್ಮನಿ ದೇವ್ರ ಉಳಸ್ಕೊ ಆಮ್ಯಾಲ ನಮ್ಮನಿ ದೇವ್ರ ಹತ್ರ ಹೋಗುವಂತಿ'
'ನೋಡ ತಮ್ಮ ಛಲೊ ಅಲ್ಲಿದು ನಾನು ಸೀದಾ ಎಮ್ ಎಲ್ ಎ ಸಾಹೇಬ್ರಗ ಖಬರ ತಿಳ್ಸಿ ನಿನ್ನ ಖಬರಗೇಡಿ ಮಾಡ್ಬಿಡ್ತೇನ ಹುಷಾರ'
'ಯಾರಿಗೇರ ಹೇಳ್ಕೊರೊ, ನಂಗಿಂತವಲ್ಲ ಆಗಿ ಬರೋದಿಲ್ಲ, ಸುಮ್ನ ಫೈನ್ ಕಟ್ತಿರ್ಬೇಕು ಹೋಗ್ತಿರಬೇಕ ಅಷ್ಟ'
ಹುಚ್ಚನಂತಾಗಿಬಿಟ್ಟ ಸೋಮಯ್ಯ. ತಕ್ಷಣವೆ ಪೋನ್ ನ್ನು ಕಟ್ ಮಾಡಿ, ಎಮ್.ಎಲ್.ಎ ಪಿ.ಎ.ಗೆ ಪೋನಾಯಿಸಿದಾ.
ಒಂದು ಎರಡು ಮೂರ ಸಲದ ಪ್ರಯತ್ನದ ನಂತರ ರಿಸೀವ್ ಮಾಡಿದ
'ಹಲೋ ಬಸವರಾಜರ ನಾನ್ರೀ ಸಿಂಡೂರ ಹಳ್ಳಿ ಮೆಂಬರ ಸೋಮಯ್ಯ ಮಾತಾಡೊದ್ರಿ'
'ಹ್ಞಾಂ ಹೇಳ್ರಿ' ಪಿ.ಎ‌. ಉದಾಸೀನ ಧನಿಯಲ್ಲಿ.
'ನಾನ್ರೆಪಾ ಸೋಮಯ್ಯಾ, ಮಾವಿನತೋಪಿನ ಸೋಮಯ್ಯ ರೀ, ಹೋದ್ವಾರ ನಂ ಹಳ್ಳಿಗೆ ಬಂದಾಗ ಬಿಸಿಬಿಸಿ ಚಪಾತಿ, ನಾಟಿ ಕೋಳಿ, ಕುಚಲಕ್ಕಿ ಅನ್ನ ಉಂಡ ಹೋಗಿದ್ರೆಲ್ರಿ'
'ಓಹೋ..‌ ನೀವಾ...' ನೆನಪಿಸಿಕೊಂಡವರಂತೆ
'ಹೊನ್ರಿ ಯಪ್ಪಾ, ಸಾಹೇಬ್ರ ಅದಾರನ್ರಿ?'
'ಇಲ್ರಿ ಅವ್ರ ಮೀಟಿಂಗನ್ಯಾಗ ಅದಾರ, ಇನ್ನೊಂದೆರಡ ತಾಸ ಟೈಂ ಹಿಡಿತದ ನೋಡ್ರಿ'
'ಚೂರ ಅರ್ಜಂಟ ಇತ್ತಲ್ರಿ'
'ಸಣ್ಣ ಸಾಹೇಬ್ರ ಅದಾರ ಇಲ್ಲೆ, ಅವ್ರ ಕೈಯ್ಯಾಗ ಬೇಕಿದ್ರ ಕೊಡಲೆನ್ರಿ'
'ಹೇ...ಹೇ.. ಕೊಡ್ರೆಪಾ ಕೊಡ್ರಿ ನಂ ಭಾವಿ ಧನಿಗಳ್ವರು' ಹಲ್ಲನ್ನು ಗಿಂಜುತ್ತಾ,
'ಹಲೋ ಹೇಳ್ರಿ ಯಾರದು?' ಎಮ್.ಎಲ್.ಎ. ಮಗನು ಮಾತಾಡುತ್ತಾ.
'ಧನೆರ ನಾನ್ರೀ ಸಿಂಡೂರ ಗ್ರಾಂ ಷಂಚಾಯ್ತಿ ಮೆಂಬರ್ ಸೋಮಯ್ಯ ಮಾತಾಡೊದ್ರಿ'
'ಹ್ಞಾಂ, ಗೊತ್ತಾಯ್ತು ಏನ್ ಹೇಳಿ ವಿಷಯ'
ನಡೆದದ್ದನ್ನೆಲ್ಲ ಹೇಳಿದನು.
'ಇಷ್ಟಕ್ಕೆಲ್ಲ ಪೋನ್ ಮಾಡಿ ನಂ ಸಮಯಾನ ಹಿಂಗೆಲ್ಲ ಹಾಳ ಮಾಡ್ಬಾರ್ದ ರಿ ಸೋಮಯ್ಯ'
'ಅಯ್ಯೋ ಬ್ಯಾಸ್ರ ಮಾಡ್ಕೊಬ್ಯಾಡ್ರಿ ದೇವ್ರು. ಆ ಯಪ್ಪಗ ಎಷ್ಟೊಂದ ಧಿಮಾಕಂತಂದ್ರ ದೊಡ್ಡ ಧನೆರ ಹೆಸ್ರ ಹೇಳಿದ್ರು, ನನ್ ಮುಖ್ಳಿ ಹಿಂದ ಹೇಳ, ಅನ್ನುವಂಗ ಮಾತಾಡ್ತನ್ರಿ ಅಂವ. ಅಲ್ಲ ಒಬ್ಬ ಸಣ್ಣ ಪಿ.ಸಿ. ಧನೆರ ಹೆಸ್ರಿಗೆ ಮರ್ಯಾದಿ ಕೊಡ್ಲಿಲ್ಲಂದ್ರ ಸಿಟ್ಟ ಬರ್ತಾದಿಲ್ರಿ ಚಿಕ್ಕಧನಿ'
'ಆತ..ಆತ ತಡಿಪಾ ಅದೇನಂತ ನಾ ವಿಚಾರ ಮಾಡಿ ಮುಗ್ಸತೀನ ವಿಷಯಾನ'
'ಅಷ್ಟ ಮಾಡಿ ಪುಣ್ಯ ಕಟ್ಕೊಳ್ರಿ ದ್ಯಾವ್ರು'

'ಏ, ಆ ಎಸ್.ಆಯ್. ಗೆ ಪೋನ್ ಮಾಡಿ ಆ ಗಾಡಿನ ಬಿಟ್ಟ ಕಳ್ಸಂತಂದ ಹೇಳ'
'
'ಹಲೋ ಎಸ್. ಆಯ್. ಸ್ಪೀಕಿಂಗ ಹಿಯರ್'
'ಸಾಹೇಬ್ರ ನಾನ್ರಿ ಎಮ್.ಎಲ್.ಎ. ಸಾಹೇಬ್ರ ಪಿ.ಎ. ಮಾತಾಡ್ತಿರೋದು'
'ಹ್ಞಾಂ ಹೇಳ್ರಿ ಸರ್'
'ಏನಿಲ್ಲ ನಿಮ್ಮೂರಿನ ಮಲ್ಲಯ್ಯನ ಕ್ರಾಸ್ ನ್ಯಾಗ ನಿಮ್ಮ ಪಿ.ಸಿ. ಸಹದೇವಪ್ಪ ಅನ್ನಾತ ನಮ್ಮ‌ ಹುಡ್ಗಂದ ಬೈಕ್ ಹಿಡ್ದಾರಂತ ಅದನ್ನ ಬಿಡ್ಸಿ ಕಳ್ಸಬೇಕಂತ ನೋಡ್ರಿ ಸಣ್ಣ ಸಾಹೇಬ್ರ ಹೇಳ್ಯಾರ'
'ಆತ ತಗೋರಿ, ಈ ಸಧ್ಯೆಕ ಪೋನ್ ಹಚ್ಚಿ ಬಿಟ್ಟ ಕಳ್ಸಂತ ಹೇಳ್ತಿನ ತಗೋರಿ'

'ರೀ ಕಲ್ಲಯ್ಯ ಆ ಸಹದೇವಪ್ಪ ಮಲ್ಲಯ್ಯನ ಸರ್ಕಲ್ ನ್ಯಾಗ ಯಾವ್ದ ಬೈಕ ಹಿಡ್ದಾನಂತ ಬಿಟ್ಟ ಕಳ್ಸಂತ ಹೇಳ್ರಿ'
'ಆಯ್ತ ಸರ್ ಈ ಸಧ್ಯಕ ಹಚ್ಚಿ ಹೇಳ್ತಿನ್ರಿ' ಎಂದನು ಹೆಡ್ ಕಾನಸ್ಟೇಬಲ್ ಕಲ್ಲಯ್ಯ

'ಹೇಳ್ರಿ ಕಲ್ಲಯ್ಯಜ್ಜರ'
'ಯಾವ್ದ ಗಾಡಿ ಹಿಡ್ದಿಯಂತಲ್ಲೊ ಮಾರಾಯಾ, ಎಸ್.ಆಯ್ ಸಾಹೇಬ್ರ ಆರ್ಡರ್ ಮಾಡ್ಯಾರ ಅದನ್ನ ಬಿಟ್ಟ ಕಳ್ಸಬೇಕಂತ, ಅವ್ರನ್ನ ಕಳಿಸಿ ಸ್ಟೇಶನ್ನಿಗೆ ಬಾ ಒಂದು ಕೇಸ್ ವಿಚಾರ್ಣಿಗೆ ಹೋಗೊದೈತಿ'


'ಯಾಕಪಾ ಹೇಳಿದ್ದು ಕೇಳಿಸ್ತೊ‌ ಇಲ್ಲೊ?'
'ಹೂನ್ರೀ...'

'ಏನಲೇ.. ಬಂದಿಲ್ಲ? ಇನ್ನ ಎಲ್ಲೆದಿ?'
'ಇಂವಾ ಬಿಡವಲ್ಲ ನನ್ ಒಟ್ಟಾ'
'ಏನತಾ? ಇನ್ನೂ ಬಿಟ್ಟಿಲ್ಲ!!, ಸಾಹೇಬ್ರ ಪೋನ್ ಹಚ್ಚಿದ್ರ ಇಲ್ಲ ಅವಂಗ'
'ಹ್ಞೂಂ..‌ ಯಾರ ಪೋನ್ ಮಾಡಿದ್ರು, ಆ ಪೋನ್ ಬಂದ ಮ್ಯಾಲ್ನ ಮತ್ತಿಷ್ಟ್ ರಾಂಗ್ ಆಗ್ಯಾನವ'
'ಕಡೆ ಮಾತ ಏನ ಅಂತಾನ್ಲೆ ಅಂವಾ, ನೌಕ್ರಿ ಮಾಡ್ಬೇಕನ್ನೊ ಆಸೆ ಐತಂತೊ ಇಲ್ಲಂತೊ ಅವಂಗ'
'ಅವ್ನ ಕೈಯ್ಯಾಗ ಕೊಡ್ತಿನ್ ನೀನ ಹೇಳ ಒಂದಿಟು'

'ಏನ್'
'ಯಾಕೊ? ಇನ್ನ ಗಾಡಿನ ಬಿಟ್ಟ ಕಳ್ಸಿಲ್ಲಂತ'
'ಏನ್ ನಿನ್ಮಗಂದ ಊರಾಗಿಲ್ದ ಗಾಡಿ, ಬಿಟ್ಟ ಕಳ್ಸಾಕ, ಲೈಸೆನ್ಸ್ ತಗೊಂಡ ಬಂದ, ತಗೊಂಡ ಹೋಗ ನಿಂ ಗಾಡಿ'

'ಹೇಳ್ರಿ'
'ನಾನ್ರಿ ಸೋಮಯ್ಯ, ರಿ ಸಾಹೇಬ್ರ'
'ಏನ್ರಿ ನಿಮ್ದು ಹೊಳ್ಳೆ-ಮುಳ್ಳೆ ಪೋನ್ ಹಚ್ಚಿ ಕಾಟ ಕೊಡ್ಹಾಕತ್ತಿರಿ' ಅಸಹನೆಯಿಂದಲೆ
'ಏನಂದ್ರೀ...? ಕಾಟ.. ಕಾಟ ಹೆಚ್ಚಾತ, ಅಲ್ರೀ ಈ

ಕಜಲ್

ಬಿಕೋ...ಎನ್ನುತಿರುವ ಬೀದಿಗಳು, ಮಾಂಸ ಖಂಡಗಳನೆ ಕಿತ್ತು ತಿನ್ನಲು ಕಾಯುತಿರುವ ನಾಯಿಗಳು, 
ಶಾಪಕ್ಕೆ ತುತ್ತಾಗಿರುವಂತಹ ನಗರಗಳು, ವಾಸಿಯೇ... ಮಾಡಲಾರದಂತಹ ರೋಗಗ್ರಸ್ತ ಮನಸ್ಸುಗಳ ಮದ್ಯದಲ್ಲಿ ನನ್ನನು ಒಬ್ಬಂಟಿಯಾಗಿ ಬಿಟ್ಟು ಹೋಗದಿರು ಸಾಕಿ....
ಮದ್ದಿಲ್ಲದ ಮತಾಂದತೆಯ ವ್ಯಾಧಿಯನ್ನು ಗುಣಪಡಿಸಲು, ಶರಣ-ಸಂತರು, ಪ್ರವಾದಿ-ಪಾದ್ರಿಗಳೆ... ಕಾಲಕಾಲಕ್ಕೆ ಜನ್ಮವನೆತ್ತಿ ಬಂದರೂ....ಉಳಿಸಿಕೊಳ್ಳಲಿಲ್ಲ ನಾಲ್ಕು ದಿನ ಹೆಚ್ಚಿಗೆ! ಇನ್ನೂ ನನ್ನನ್ನು ಬಿಡುವರೇನು?
ಈ ಜನ.‌
ಕೊಲ್ಲಲು ಆಯುಧಗಳೆ ಬೇಕಂತೇನಿಲ್ಲ,
ಎದೆಯ ತುಂಬ ವಿಷವ ತುಂಬಿಕೊಂಡ 
ನಾಲ್ಕು ನಂಜಿನ ಮಾತುಗಳೆ ಸಾಕಲ್ಲವೆ
ಮಸಣವ ಸೇರಲು.

ಉಸಿರು ನಿಂತು ಹೋಗುವ ಮುನ್ನ, 
ಹನಿ ಗಂಗಾಜಲವನ್ನು ಬಾಯಲ್ಲಿ ಹಾಕುವರೆಂಬ ಭರವಸೆ ನನ್ನೊಳಗಿನ್ನು ಉಳಿದಿಲ್ಲ ಸಾಕಿ....
ವಿರಹಿಗಳು ಕುಡಿದು ಬಿಸಾಡಿ ಹೋದ,
ಮದ್ಯದ ಬಾಟಲಿಯ ಕೊನೆಯ ಹನಿಗಳನ್ನಾದರು ನೀ..‌. ತುಟಿಗೆ ಸವರಿಬಿಡು
ಚಪ್ಪರಿಸಿ, ಸ್ವರ್ಗದ ಮೆಟ್ಟಿಲನ್ನೇರಿಬಿಡುವೆ.

ಉಸಿರು ನಿಂತ ಮೇಲೆ? ಹಳೆಯ ಮನೆಯ ತೊಲೆಗಳಿಂದ ಮಾಡಿದ, ಶವದ ಪೆಟ್ಟಿಗೆಯಲ್ಲಿ ತುರುಕಿಕೊಂಡು, ಮೊದಲೆ ಹೂತು ಹೋಗಿದ್ದ ಖುಣಿಯನ್ನ ಕೆಬರಿ, ಅಸ್ಥಿಪಂಜರಗಳನ್ನು ಹೊರಹಾಕಿ, ನನ್ನನಲ್ಲಿ ಹುಗಿದುಬಿಟ್ಟಾರು ಸಾಕಿ...
ಹುಗಿಯುವುದಾದರೆ, ನಿನ್ನ ಹೂದೋಟದಲ್ಲೆ ಹೂಳು, ವಿವಸ್ತ್ರವಾಗಿಸಿ. ಅನುದಿನವು ನಿನ್ನ
ಸುಕೋಮಲ ಹೆರಳುಗಳನ್ನು ಸಿಂಗರಿಸುವ
ಗುಲಾಬಿ ಗಿಡಗಳ ಬೇರಿಗೆ ಗೊಬ್ಬರವಾಗಿಯಾದರು ಸಾರ್ಥವಾಗುತ್ತೇನೆ.

ಅಳಿಸಿ ಹೋದನೆಂದು ಯಾರಲ್ಲಿಯೂ ಬಾಯ್ಬಿಡಬೇಡ ಸಾಕಿ...
ಸತ್ತವರ ಹೆಸರನ್ನು ಎತ್ತಿ ಹಿಡಿದುಕೊಂಡು
ಕೆಸರೆರಚಾಟವನಾಡುವರಿಲ್ಲಿ ನಾಟಕದ ಜನರು. 

ಇಲ್ಲಿ ನನ್ನೊಬ್ಬನ ಸಾವಿನಿಂದ ಅಂಕಣದ ಪರದೆ ಎಳೆಯದು ಸಾಕಿ... ಎಳೆಯದು
ಮುಗಿಯದು.
ನಾನೀಗ ಪಾಪ-ಪುಣ್ಯ, ಕರ್ಮ-ಫಲಗಳ
ಬೆಲೆಯನರಿಯದ ಮುಗ್ದ ಮಗುವಿನಂತೆ.
ಕರೆದುಕೊಂಡು ಹೋಗು, ತೋರಿಸುವ ದಾರಿ
ಮಸಣದ್ದೆ ಆದರು ಸರಿ. ಕಣ್ಮುಚ್ಚಿ ನಡೆದುಬಿಡುವೆ ನಿನ್ನ ಹಿಂದೆ.

ಕಜಲ್

ಊರೂರ ಬೀದಿಗಳಲೆಯುವ ಭಿಕಾರಿಯ 
ಹೆಗಲಿಗಾದರೊಂದು ಜೋಳಿಗೆ ಇರುತ್ತದೆ.
ಮೈ ಮೇಲೆ ಹಾಕಿಕೊಂಡ ತುಂಡು ಬಟ್ಟೆಯಲ್ಲಿ
ಬಕ್ಕಣದ ಕುರುಹುವು ಇಲ್ಲದಂತಹ ಪಕೀರ
ನಾನು ಸಾಕಿ....
ಮುಳುಗುವ ಸೂರ್ಯನಿಗೆ, ಅರಳುವ ಚಂದ್ರನಿಗೆ
ಮತ್ತೆ ಉದಯಿಸುವ ದಿನಕರನಲ್ಲಿ ಬೇಕಿದ್ದರೆ, ಬೇಡಿಕೊಳ್ಳುವೆ

ಕನ್ನಡ ಶಾಯರಿಗಲು

ಬಾವಿಕಟ್ಟಿ ಮ್ಯಾಲ ಎಷ್ಟೊ ಮಂದಿ
ಕೊಡಾ ನೀರನ್ನ ಜಗ್ಗಿ ಕೊಟ್ನಿ ಹುರುಪಿಲೆ
ಎದ್ರು ಮನಿ ಹನ್ಮಿ ಮೊಖ ನೋಡ್ಕಂತ!
ಮನಿಗ ಬಂದ ಅತ್ಗೊಂತ ಕುಂತಿನಿಲ್ಲೆ
ಅಂಗ್ಯಯ್ಯಾಗ ಎದ್ದ ಬೊಬ್ಬಿ ಉದ್ಕೊಂತ!

ನಮ್ಮವ್ವ ಗಿಣಿಗೆ ಹೇಳ್ದಂಗ ಹೇಳ್ತಿದ್ಲು
ಸುಮ್ಕ ಕುಂದ್ರ ಮನಿಯಾಗ, ಸುಮ್ಕ ಕುಂದ್ರಂತಂದ
ತಮ್ಮಾ ಅವ್ವನ ಮಾತ ಕೇಳಲಿಲ್ಲಲೆ!
ಹನ್ಮಿ ಕೇಳಿದ್ಲಂತಂದ ಮೊಳ ಹೂವ 
ತರಾಕ ಹೋದೆ ಬಜಾರಕ್ಕ, ಮೀಸಿ ಮಾಂವ
ಕರೋನಾ ಬಂದೈತಂತ, ಮೈಯ್ಯಾಗ ಕರಿಯವ್ವ
ಹೊಕ್ಕಂಗಾಡಿ, ಬೆಸ್ನ್ಯಾಗ ನಾಕ ಬಿಟ್ಟ
ಕಳ್ಸಿದ್ನಲೆ ಕುಂಡಿ ಮ್ಯಾಲೆ!


ಗೆಳೆಯ

ಅಳುವವರು ಮತ್ತು
ಆಳುವವರು...
ಯಾವಾಗಲೂ ಹೆಗಲುಗಳನ್ನು
ಬದಲಿಸುತ್ತಲೆ ಇರುತ್ತಾರೆ
ಗೆಳೆಯ.
ಇಂದು ನಾನು, ನಾಳೆ
ನೀನು, ನಾಡಿದ್ದು ಮತ್ತಾರೊ?
ಒಟ್ಟಿನಲ್ಲಿ ಅವರ ಬುಡ
ಯಾವಾಗಲೂ ಹಸಿಯಾಗಿರಬೇಕಷ್ಟೆ.

ಹಾಯ್ಕುಗಳು

ಹಾಯ್ಕುಗಳು.

೧೬೪.
ಶಿವರಾತ್ರಿ ಬಂದಾಗಲೆಲ್ಲ
ಹಣ್ಣಿನ ವ್ಯಾಪಾರ
ಜೋರಾಗಿರುತ್ತದೆ.

೧೬೫.
ಅಂಗಡಿಯಲ್ಲಿ ಯಾವ
ದೇವರಿರುತ್ತಾರೊ,
ದುಡಿಯುವ ಕೈಗಳು ಅವುಗಳನ್ನೆ
ಪೂಜಿಸುತ್ತಾರೆ.

೧೬೬.
ಬಾಯಿಂದ ಬಾಂಧವ್ಯಗಳನ್ನು
ಬೇಸೆಯಬೇಕೆಂದಾಗ,
ನೆಲದ ಮೇಲೆ ಕುಳಿತವನು 
ಎದ್ದು ನಿಂತ.

೧೬೭.
ಬಿಟ್ಟು ಹೋದ ಸಂಜೆಗೆ
ಕಾರಣವ ಹೇಳಲಿಲ್ಲ.
ತಂದ ಮಲ್ಲಿಗೆಯ ಮುಡಿದಿದ್ದರು ಸಾಕಿತ್ತು.

೧೬೮.
ಕರೆಂಟ್ ಹೋಗಿ ಆಫೀಸ್ ನಲ್ಲಿ
ಕಂಟ್ರ್ಯಾಕ್ಟರ್ ಬೆವತು ನೀರಾಗಿದ್ದ.
ಗಿಡಗಳನ್ನು ಕಡೆದು ನಿವೇಶನಕ್ಕಾಗಿ ನಕ್ಷೆ ಹಾಕುತ್ತಿದ್ದ.

೧೬೯.
ಮದುವೆ ಮಂಟಪದಲ್ಲಿ
ಅನ್ನವನ್ನು ಕೆಡಿಸದಿರಿ ಎಂಬ ಬೋರ್ಡಿತ್ತು.
ಅಕ್ಷತೆಗಾಗಿ ಜನರು ಪರದಾಡುತ್ತಿದ್ದರು.

೧೭೦.
ಮಕ್ಕಳು ಪುಡಿಗಾಸಿಗಾಗಿ ಅಳುತ್ತಿದ್ದರು
ಅಪ್ಪನ ಜೇಬಿನಲ್ಲಿ ಹಣವಿರಲಿಲ್ಲ.
ಹಡೆದದ್ದು ಸಾಕುವುದಕ್ಕಾ, ಕಾಮಕ್ಕಾ, ಅರ್ಥವಾಗಲಿಲ್ಲ.

ಹಾಯ್ಕು -೧೭೧
ಮಾತಿಗಿಂತ, ಮೌನದ ದರವೆ
ದುಬಾರಿಯಾಗಿತ್ತು.
ಕೊಂಡುಕೊಂಡೆ! ನೋವನ್ನು ಒತ್ತೆಯಿಟ್ಟು.

೧೭೨.
ಯಾವಾಗಲೂ ಹತ್ತಿ ಬಟ್ಟೆಯನ್ನೆ
ಧರಿಸಬೇಡಿ.
ಕಡ್ಡಿ ಗೀರುವವರು ಕಾಯುತ್ತಿರುತ್ತಾರೆ.

೧೭೩.
ಹೊಟ್ಟೆಗಾಗಿ ಸೇರಗು ಹಾಸಿದ
ಹಾದರದ ಹೆಂಗಸಿಗೂ ಹೇಳುತ್ತಾರೆ
'ಕೆಲಸ' ಮುಗಿದ ನಂತರ ಕೊಡುತ್ತೇನೆ.

೧೭೪.
ಹಾಸಿಗೆಯಲ್ಲಿ ದೇಹಗಳು ಬಿಸಿಯಾಗುತ್ತವೆ.
ಆಸ್ತಿಯಲ್ಲಿ ತಲೆಗಳು ಬಿಸಿಯಾಗುತ್ತವೆ.
೨ನ್ನೂ ಸರಿದೂಗಿಸಲು 'ಕೈ' ಯನ್ನು ಬಿಸಿ
ಮಾಡಿಕೊಳ್ಳುತ್ತಾರೆ.

೧೭೫.
ವಂದನಾರ್ಪಣೆಗಾಗಿ ಮೈಕನ್ನು ಹಿಡಿದುಕೊಂಡಾಗ
ಕಾರ್ಯಕ್ರಮ ಮುಗಿಯಿತು ಎಂದುಕೊಳ್ಳುತ್ತಾರೆ.
'ಇವರು' ಮತ್ತೆ ಶುರುವಿಟ್ಟುಕೊಳ್ಳುತ್ತಾರೆ.

೧೭೬.
ಉಕ್ಕಿಹೋದ ಹಾಲಿಗಾಗಿ ಅತ್ತೆ
ಸೊಸೆಗೆ ಮಂಗಳಾರತಿ ಎತ್ತುತ್ತಿದ್ದಳು.
ಹಾಲನ್ನು ಕುಡಿದ ವಲೆ ನಗುತ್ತಿತ್ತು.

೧೭೭.
ಬೇಸಿಗೆಯ ಹೊಸ್ತಿಲಲ್ಲಿ ನಿಂತಿದ್ದರು
ಕಂಡವರ ಮನ-ಮನೆಗೆ ಬೆಂಕಿಯ
ಹಚ್ಚಿ, ಚಳಿಯನ್ನು ಕಾಯಿಸಿಕೊಳ್ಳುತ್ತಿದ್ದಾರೆ.

೧೭೮.
ಹಲ್ಲಿ ಬಿದ್ದ ಹಾಲು 
ವಿಷಪೂರ್ಣವಾಗಿ ಹೋಗಿತ್ತು.
ಕುಡಿಸಲು ಕೆಲವರು ತಲೆಗಳನ್ನು ಎಣಿಸುತ್ತಿದ್ದರು.

೧೭೯.
ಸಂಸಾರ ಸನ್ಯಾಸದ ಕುರಿತು
ಉಪನ್ಯಾಸ ನೀಡುತ್ತಿದ್ದರು ಸ್ವಾಮೀಜಿ.
ಎದೆಯೊಳಗೆ ಮದನ ಹೂವರಳಿಸುತ್ತಿದ್ದ‌.

೧೮೦.
ಮಹಿಳಾ ದೌರ್ಜನ್ಯದ ವಿರುದ್ಧ
ಸಾವಿರಾರು ಮಹಿಳೆಯರು ಸೇರಿದ್ದರು.
ಕಣ್ಣುಗಳನ್ನು ಬಿಟ್ಟು, ಯಾರೊಬ್ಬರ ಮೊಗವು
ಕಾಣಿಸುತ್ತಿರಲಿಲ್ಲ.

೧೮೧.
ಬೇಕಿದ್ದರೆ ಹೂಗಳನ್ನು ಕೊಂದುಬಿಡಿ
ಅಕ್ಷತೆಯನ್ನು ಬಳಸಬೇಡಿ ವೇದಿಕೆಯಲ್ಲಿ.
ಭೂ ತಾಯಿ ನಗುತ್ತಿದ್ದಳು, ಇವರ ರೀತಿ-ನೀತಿಗೆ.

೧೮೨.
ತೋಡಿದ ಖೆಡ್ಡಾದಲ್ಲಿ ಆನೆಯೆ
ಬೀಳಬೇಕೆಂದೆನಿಲ್ಲ!, ಮತ್ತು
ಹೆಚ್ಚಾದರೆ, ನಾವೆ ಬಿಳಬೇಕಾಗುತ್ತದೆ.

೧೮೩.
ಮಹಿಳಾ ದಿನಾಚರಣೆಯ ಆಚರಣೆಗೆ
ಹೋಗಲು ತಯಾರಾಗಿದ್ದಳು ಮನೆಯೊಡತಿ.
ರಜೆ ಸಿಗದ ಕೆಲಸದಾಳು ಸಂಜೆಗಸವನ್ನು ಗುಡಿಸುತ್ತಿದ್ದಳು.

೧೮೪.
ಕೊಲ್ಲಲು ಸಿದ್ಧವಾಗುವ ಕೈಗಳು
ಕಣ್ಣೀರನ್ನು ಒರೆಸಲು ಸಾಧ್ಯವಿಲ್ಲ.
ನರಿಗಳು ಸಹಾನುಭೂತಿಯ ಮಾತುಗಳನ್ನು
ಆಡುತ್ತವೆ.

೧೮೫.
ನನ್ನ ನೆಲವೀಗ ಬಲಿಷ್ಠವಾಗುತ್ತಿದೆ
ವಿಷದ ಬೀಜಗಳನ್ನು ಬಿತ್ತಲಾಗುತ್ತಿಲ್ಲ.
ಬೆಳೆ ಬೆಯಿಸಿಕೊಳ್ಳುವವರು ಹತಾಶರಾಗಿದ್ದಾರೆ.

೧೮೬.
ತಂದು ಹಾಕುವವರನ್ನು ನಂಬಬಾರದು
ನಾವೆನೆಂಬುದನ್ನು ಅರಿತುಕೊಂಡಿರಬೇಕು. 
ಕಬ್ಬಿಣವನ್ನು ಕಟ್ಟುವುದಕ್ಕಷ್ಟೆ ಉಪಯೋಗಿಸಬೇಕು.

೧೮೭.
ಹಿಂದೆ ಸರಿದುಬಿಡು ಮಳೆರಾಯ
ಅನ್ನವಿನ್ನು ಒಲೆಯ ಮೇಲಿದೆ.
ಇನ್ನೂ ಹಸಿವನ್ನು ಅರಗಿಸಿಕೊಳ್ಳುವ ಶಕ್ತಿ ನಮ್ಮೊಳಗುಳಿದಿಲ್ಲ.

೧೮೮.
ಶರಣಪ್ಪ ಮಾಂಸಾಹಾರವ ತ್ಯಜಿಸುತ್ತೇನೆಂದ
ಸಹಪಾಠಿಗಳು ಸಂತೋಷವ ವ್ಯಕ್ತಪಡಿಸಿದರು.
ಸೊಂಕು ಭೇದ-ಭಾವವಿಲ್ಲದೆ ಅಪ್ಪಿಕೊಳ್ಳುತ್ತಿತ್ತು.

೧೮೯.
ಬೇಕಾದವರು ಬೇಡವಾದಾಗ, ಬೇಕಾದವರಿಗೆ
ಬೇಡವಾದವರು ನಮಗೆ ಬೇಕಾಗುತ್ತಾರೆ.
ಇಲ್ಲಿ ಬೇಕು-ಬೇಡಗಳಿಷ್ಟೆ ಪ್ರಾಮುಖ್ಯತೆ.

೧೯೦.
ಪವಿತ್ರ ಸ್ಥಳಗಳಲ್ಲಿಯೂ ಔಷಧಿಯನ್ನು
ಸಿಂಪಡಿಸುತ್ತಿದ್ದಾರೆ.
ಯಾರು ಮಾಡಿದ್ದನ್ನು ಯಾರು ಉಣ್ಣುವುದೊ?.

೧೯೧.
ಕೆಲವು ಆತ್ಮೀಯರ ಒತ್ತಾಸೆಗಾಗಿ
ಅನೌಪಚಾರಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕಾಗುತ್ತದೆ.
ಅವಮಾನದ ಸನ್ಮಾನವನ್ನು ಸ್ವೀಕರಿಸಬೇಕಾಗುತ್ತದೆ.

೧೯೨.
ವೇದಿಕೆಯ ಮೇಲೆ 

೧೯೩.
ವಿಲ್ ಪತ್ರವನ್ನು ಓದಿದಾಗ
ಮಕ್ಕಳಿಗೆ ಅನಿಸಿತು.
ಅಪ್ಪ ಇನ್ನೂ ಬದುಕಬೇಕಿತ್ತು.

೧೯೪.
ಅವರು ಬೆಟ್ಟವನ್ನು ಬಿಟ್ಟುಕೊಟ್ಟರು.
ಇವರು ದುಡ್ಡನ್ನು ಕೈಗಿಟ್ಟರು.
ಮನೆ‌ ಮಕ್ಕಳು ಬೀದಿ ಪಾಲು.

೧೯೫.
ದೀಪ ಹಚ್ಚಲು 'ಎಣ್ಣೆ' ಇಲ್ಲವೆಂದವರು
ಬಾಗಿಲನ್ನು ತೆರೆಯಲೆಂದೆ ಕಾಯುತ್ತಿದ್ದಾರೆ.
ಮನೆಯಲ್ಲಿ, ಬಾಟಲಿಯ 'ಎಣ್ಣೆ' ಖಾಲಿಯಾಗಿದೆ.

೧೯೬.
ಅವನು ಕೇಳಿದ ಖಾಲಿ ಇದ್ದೀರಾ?
ಏನೆಂದು ಉತ್ತರಿಸಲಿ.
ಮೇಲಿನವನೆ ಇನ್ನೂ ಸುಮ್ಮನೆ ಕುಳಿತಿಲ್ಲ.

೧೯೭.
ತಿಂಡಿಯ ಪೊಟ್ಟಣವ ಕೊಟ್ಟು
ಪೋಟೊವನ್ನು ತೆಗೆಸಿಕೊಳ್ಳುತ್ತಿದ್ದರು.
ಒಂದೆರಡು ಜಿರಲೆಗಳು ಹೊರಬಂದವು.

೧೯೮.
ಕೆಚ್ಚಲನ್ನು ಹಿಂಡುವಾಗ ಆಕಳು ಕಣ್ಮುಚ್ಚಿರುತ್ತದೆ.
ಪೋಟೊದಲ್ಲಿ ಕಣ್ಣು ಮುಚ್ಚಿದ್ದ ಅಧಿಕಾರಿ 
ಛಾಯಾಗ್ರಾಹಕನಿಗೆ ಬೈಯ್ಯುತ್ತಿದ್ದ.

೧೯೯.
ಹಸಿವಾದಾಗ, ಕೈ ಚಾಚುವವರ
ನೈತಿಕತೆಯನ್ನು ಪ್ರಶ್ನಿಸುವಂತಿಲ್ಲ!
ಸಾವಿಗೂ..‌.ಹಸಿವಾಗುತ್ತದೆ.