Friday, May 12, 2017

ಮಡದಿಯೊ.. ಮಗಳೊ.. ತಾಯಿಯೊ..

ಒಡತಿ...
ನೀನಿರಬೇಕಿತ್ತಿಂದು.. ಇವಳ
ಮೊದಲ ಹುಟ್ಟುಹಬ್ಬದ
ಸಂದರ್ಭದಲ್ಲಿ...

ಬಟ್ಟೆ ಅಂಗಡಿಯಲ್ಲಿ ಅವಳಿಗೊಪ್ಪುವ
ಉಡುಪನು ಆರಿಸುವಲ್ಲಿ... ಅಕ್ಕಸಾಲಿಗನ
ಬಳಿಯಲ್ಲಿ ಚಿನ್ನದ ಕಿವಿಯೊಲೆಗಳ
ಖರೀದಿಸುವಲ್ಲಿ..

ಅವಳ ಸ್ನಾನವ ಮಾಡಿಸುವಾಗ
ನನ್ನೆದೆಗೆ ಪುಟ್ಟ ಪುಟ್ಟ ಮುದ್ದಾದ
ಪಾದಗಳಿಂದ ಒದ್ದೊದ್ದು...ಆ ಬೊಚ್ಚು
ಬಾಯಿಯಿಂದ ನಗುವುದ ನೋಡಲಿಕ್ಕೆ..

ಅವಳ ರೇಷ್ಮೆ ಕೂದಲುಗಳಿಗೆ ಎಣ್ಣೆಯ
ಹಚ್ಚಿ.. ಸೇಬು ಗಲ್ಲಕೆ ದೃಷ್ಟಿ ಬೊಟ್ಟನಿಟ್ಟು..
ನಿನ್ನ ಅಚ್ಚುಮೆಚ್ವಿನ ಬಣ್ಣದ ಬಟ್ಟೆಯ
ತೊಡಿಸಿ...  ನಿನ್ನಷ್ಟಲ್ಲದಿದ್ದರೂ... ನನಗೆ
ತಿಳಿದಷ್ಟು ಸಿಂಗರಿಸಿ....ಅವಳ ನನ್ನ ...
ತೋಳ ತೆಕ್ಕೆಯಲಿ ಎತ್ತುಕೊಂಡಾಗ...
ಅವಳು.. ನನ್ನ ಮೈ ಮೇಲೆ ಉಚ್ಚೆ ಒಯ್ದು
ಬಟ್ಟೆಯನೆಲ್ಲವ ಒದ್ದೆ ಮಾಡಿ... ನನ್ನನು
ಪೇಚಿಗೆ ಸಿಲುಕಿಸಿ ಅವಳು ನಗುವ..
ನೋಟವ ನೀ ನೋಡಬೇಕಿತ್ತು....

ದುಂಡನೆ ಕೇಕನು ಕತ್ತರಿಸಿ... ಅವಳ
ಹವಳದ ತುಟಿಯಂಚಿಗೆ ಸವರುವ...
ಉಡುಗೊರೆಗಳ ನೀಡುವ... ಹಿರಿಯರು
ಅವಳಿಗೆ ಆಶೀರ್ವದಿಸುವ ಕ್ಷಣಗಳ ಸವಿಯಲು
ನೀನಿರಬೇಕಿತ್ತು..

ನಿನ್ನ ನೆನೆ ನೆನೆದು ಕಂಗಳಲಿ ಎರಡು
ಹನಿ ಜಾರದೆ... ನಿಲ್ಲಲಿಲ್ಲ...
ನಿನ್ನ ಹೆರಿಗೆಯ ಹೊತ್ತಿನಲಿ... ಆ ವೈದ್ಯನು
ಕೇಳಿದ ಮಾತುಗಳು... ತಾಯಿ ಬೇಕೊ..
ಮಗು ಬೇಕೊ... ನನ್ನುತ್ತರ ನೀನೆ ಆಗಿದ್ದೆ..

ನೀನಾದಿನ ದೇವತೆಯಾಗಿಬಿಟ್ಟೆ... ನಿನ್ನುಸಿರನು
ನಾವು ಕಂಡ ಕನಸಿಗೆ ನೀಡಿ... ಮರಳಿ ಬಾರದೂರಿಗೆ
ನೀ ನಡೆದು.... ನನ್ನ ಕಂಕುಳಲ್ಲೆ ಮರಳಿ ಮಗುವಾಗಿ
ಬಂದು ಬಿಟ್ಟೆ...

ಏನೆಂದು ಕರೆಯಲಿ ನಿನ್ನ ನಾ..
ಮಡದಿಯೊ.... ಮಗಳೊ.... ನನ್ನ
ಪ್ರೀತಿ ಬದುಕಿನ ತಾಯಿಯೊ...

No comments:

Post a Comment