ಗೆಳತಿ...
ಬಿಡದಿರು ನಿಟ್ಟುಸಿರನು... ಆ
ನಿಟ್ಟುಸಿರಿನ ತಾಪವು ತಟ್ಟುತಿದೆ
ಈ ಹಿಮಗಿರಿಯ ತಪ್ಪಲಿನಲಿ...
ತವರೂರ ಜಾತ್ರೆಗೆ ನಿನ್ನೊಬ್ಬಳನೆ...
ಬಸ್ಸು ಹತ್ತಿಸಿ... ಬರುವುದು
ನನಗೀಷ್ಟವಿರಲಿಲ್ಲ..... ಏನು ಮಾಡಲಿ
ತಾಯಿಯ ಕರೆಯೊಂದು ಬಂದಿರುವುದಲ್ಲ..
ನಾನೀರಬೇಕಿತ್ತು.......ಕಣೇ..
ಆ ಜನಜಂಗುಳಿಯ ಬಸ್ಸಿನಲಿ...
ಅಕ್ಕಪಕ್ಕದಲಿ ಒತ್ತೊತ್ತಾಗಿ ಕುಳಿತಿರಲು..
ನೀ ನನ್ನ ಹೆಗಲಿಗೆ ತಲೆಯಿಟ್ಟು ಮಲಗಿರಲು
ಕಿಟಕಿಯಿಂದ ಬರುವ ಗಾಳಿಗೆ....
ಕೆನ್ನೆಯ ಮೇಲೆ ಹೊಯ್ದಾಡುವ
ಮುಂಗುರುಳನು ತೀಡಲು....
ನಾನೀರಬೇಕಿತ್ತು..
ಮನೆಯಲ್ಲಿ.... ನೀನು ಸ್ವಲ್ಪ ದಪ್ಪವಾಗಿರುವದನ್ನು
ಕುರಿತು ನಿನ್ನ ತಂಗಿ ಮಾಡುವ
ಚೇಷ್ಟೆಗಳಿಗೆ.... ಅವಳ ಕಿವಿಯ
ಹಿಂಡಿ ಥಕಥೈ ಅನ್ನುವ ಹಾಗೆ ಕುಣಿಸಲು
ನಾನೀರಬೇಕಿತ್ತು...
ಜಾತ್ರೆಯ ತುದಿಯಂಚಲಿ.... ಆಲದ
ಮರದ ಕೆಳಗೆ ಕುಳಿತು... ನನ್ನೆದೆಯ
ಮೇಲೆ ಮಲಗಿರಲು ನೀ... ಮಗುವಾಗಿ
ಮೃದು ಮಲ್ಲಿಗೆಯಂಥಹ ಕೇಶರಾಶಿಯ
ಹೊಂದಿದ ನಿನ್ನ ತಲೆಯನ್ನು ಸವರಲು....
ನಾನೀರಬೇಕಿತ್ತು
ಮನೆಯ ತಾರಸಿಯ ಮೇಲೆ... ಕುಳಿತು
ಶಶಿಯ ಹೊಂಬೆಳಕಲ್ಲಿ... ಒಂದೆ
ತಟ್ಟೆಯಲ್ಲಿ... ಒಬ್ಬರಿಗೊಬ್ಬರು ತುತ್ತು
ಉಣಿಸುವಾಗ... ನಿನ್ನ ತಾಯಿ ಕಂಗಳು
ತುಂಬಿ ಬರುವುದ ನೋಡಲಾದರೂ...
ನಾನೀರಬೇಕಿತ್ತು
ಅಲ್ಲಾಭಕ್ಷಿಯ ಬುಟ್ಟಿಯಿಂದ ನಾಲ್ಕು
ಮೊಳ ಮಲ್ಲಿಗೆ ಕನಕಾಂಬರವ ಸುತ್ತಿ..
ನಿನ್ನ ಮುಡಿಗೆ ಮುಡಿಸುವಾಗ ನಿನ್ನ
ಗೆಳತಿಯರು ಹೊಟ್ಟೆ ಉರಿದುಕೊಳ್ಳುವದ
ನೋಡಲಿಕ್ಕಾದರೂ....
ನಾನೀರಬೇಕಿತ್ತು..
ದೇವರು ಗುಡಿಯ ನೆಪದಲ್ಲಿ... ಬಂದು
ಕೆರೆಯ ದಂಡೆಯಲಿ ಕುಳಿತು...
ಕಟ್ಟಿಸಿಕೊಂಡು ಬಂದ ಬಜಿಯ ತಿನ್ನುವಾಗ
ಅದರೊಳಗಿನ ಖಾರವು ನಿನ್ನ ಬಾಯಿಗೆ
ಹತ್ತಿ.. ನೀರಿಲ್ಲದೆ ನನ್ನದರದ ಸವಿಯ
ಸವಿಯಲು ನೀ ತುದಿಗಾಲಲಿ ನಿಂತಿರುವಾಗ
ಆವಾಗಲಾದರೂ...
ನಾನೀರಬೇಕಿತ್ತು..
ಬರುವೆ... ಚಂದ್ರಿಕೆ.. ಬರಲಾದರೂ
ಹೇಗೆ ಬರಿಯ ಕೈಯಲ್ಲಿ... ಶತ್ರು ದೇಶದ
ವೈರಿಯಗಳ ಎದೆಗೆ ಗುಂಡಿಕ್ಕಿ... ಸದಾ
ನನ್ನೆದೆಯಲಿ ಇರುವ ನಿನ್ನ ಹಣೆಯ ಮೇಲೆ
ಚಕ್ರದ ಪದಕವ ಹೊತ್ತು ತರುವೆ... ಇಲ್ಲವಾದಲ್ಲಿ
ಎದೆಗೆ ಗುಂಡು ತಿಂದು... ತ್ರಿವರ್ಣ ಧ್ವಜದಲ್ಲಿ
ನೀ ತಲೆತಗ್ಗಿಸದಂತೆ.... ನಾಲ್ಕು ಜನರು ಹೊತ್ತು
ತರುವ....ಕಾಣಿಕೆಯಾಗಾದರೂ..ಬರುವೆ
No comments:
Post a Comment