Friday, May 19, 2017

ಮಲ್ಲಿಗೆ

ನನ್ನ ನಿನ್ನ ಮದುವೆಯ ಹೊಸತರಲ್ಲಿ
ನಿಮ್ಮೂರ ಜಾತ್ರೆಗೆ ನಾ ಬಂದಾಗ..
ನೀನು ಕಿಟಕಿಯ ಸರಳುಗಳ ಹಿಂದೆ
ಕದ್ದುಮುಚ್ಚಿ ನನ್ನ ನೋಡಿತ್ತಿದ್ದದ್ದು..
ನನಗಿನ್ನೂ ಚೆನ್ನಾಗಿ ನೆನಪಿದೆ... ಹುಡುಗಿ

ತಂದ ಎಲ್ಲ ತಿಂಡಿ ತಿನುಸುಗಳ ಬಿಟ್ಟು..
ಕಾಗದದಲ್ಲಿ ಸುತ್ತಿ ತಂದಿದ್ದ ದುಂಡು
ಮಲ್ಲಿಗೆಯ ಮಾಲೆಯನು... ನನಗೆ
ಕಾಣುವ ಹಾಗೆ ಮೂಸಿ... ಕಣ್ಮುಚ್ಚಿ
ಎದೆಗೊತ್ತಿಕೊಂಡು.. ಹಾಗೆ ಎರಡು
ಘಳಿಗೆ ನೀ ನಿಂತಿದ್ದು... ನನಗಿನ್ನೂ..
ಈ ಅಕ್ಷಿಪಟದಲಿ ರವಿವರ್ಮನೆ ಚಿತ್ರ
ಬಿಡಿಸಿದ ರೀತಿ ಅಚ್ಚುಳಿದಿದೆ..

ಓಹ್... ಆ ಸಂಜೆ ನೀ ತೊಟ್ಟು ಬಂದ
ಪಚ್ಚೆ ಹಸಿರಿನ ಲಂಗ ದಾವಣಿ... ನಿನ್ನೆದೆಯ
ಮೇಲೆ ಮುತ್ತಿನ ಹರಳುಗಳಾಗಿ....
ಮುಡಿಯಿಂದ ಇಳಿಬಿದ್ದ ಮಲ್ಲಿಗೆಯ
ಬೆರಳಲಿ ಸುತ್ತುತ್ತಾ ನನಗೆ ಸಂಜೆಯ
ಚಹಾ ಕೊಟ್ಟು ನಿಂತಿದ್ದು ನಾ ಹೇಗೆ
ಮರೆಯಲಿ..

ಮಲ್ಲಿಗೆಯ ನಗುವ ಹೊತ್ತು
ಮೆಲ್ಲಗೆ ಬಂದು ಗಲ್ಲಕೆ
ಮುತ್ತು ಕೊಟ್ಟು ಹೋದ ಕ್ಷಣವನು
ನಾ ಹೇಗೆ ಮರೆಯಲಿ..

ನಾ ಕೊಟ್ಟ ಮಲ್ಲಿಗೆ ಒಣಗಿ
ಮಣ್ಣ ಸೇರಿರಬಹುದು..
ಅದರ ನೆನಪು ಮಾತ್ರ
ನನ್ನೆದೆಗೆ ಒಲವಿನ ಬಣ್ಣವ
ಬಳಿದು ಮಲಗಿದೆ.. ಮಲ್ಲಿಗೆ

No comments:

Post a Comment