Monday, May 1, 2017

ಕಾರ್ಮಿಕರು

ಕಾರ್ಮಿಕರು ನಾವು.... ನಿಜ..
ಧನಿಕರೇ..
ನಿಮ್ಮ ಹಾಗೆ ನಮಗೂ...
ಮನಸ್ಸಿದೆ...
ನೋವು ನಲಿವುಗಳಿಗೆ...
ರಕ್ತ ಖಂಡಗಳ, ಮಾಂಸ ಪಿಂಡಗಳ
ಕಾಯವಿದೆ..
ಬಿದ್ದರೆ, ಎದ್ದರೆ, ಎಡವಿದರೆ ಈ
ದೇಹಕ್ಕೂ... ಗಾಯವಾಗುತ್ತದೆ.
ಅದೇ...ಕೆಂಪು ರಕ್ತವು ಹರಿಯುತ್ತದೆ..
ನಿಮ್ಮ ರಕ್ತದಲ್ಲಿ ಸ್ವಲ್ಪ ಸಕ್ಕರೆಯ
ಅಂಶ ಜಾಸ್ತಿ ಇದ್ದೀರಬಹುದು...
ನಮ್ಮ ನೆತ್ತರಿನಲ್ಲಿ... ನಿಮಗಿಂತಲೂ
ದುಪ್ಪಟ್ಟು ನಿಯತ್ತಿನ ಅಂಶವಿದೆ....

ಕೂಲಿಕಾರರು... ನಾವು...
ಈ ಭವ್ಯ ಭಾರತಾಂಬೆಯ
ಬೆನ್ನೆಲುಬುಗಳು ನಾವು..
ಬೆವರಿನ ಹೊಳೆಯನೆ ಹರಿಸಿ..
ನಾಡನು ಕಟ್ಟುವವರು ನಾವು..
ಮುತ್ತಿನ ಹೊತ್ತುಗಳ ದುಡಿಸಿ
ಚಿಲ್ಲರೆ ಕಾಸುಗಳ ಪಡೆಯುವವರು ನಾವು

ಮಣ್ಣನು ಅಗೆದು... ಅಗೆದು...
ಬಂಗಾರವ ಬಗೆದು.. ಬಗೆದು
ಕೊಡುವವರು ನಾವು...
ಆ ಮಣ್ಣ ಕುಸಿತದಲಿ ಮಡಿದರೆ
ಹಾಕುವಿರಲ್ಲ ನಮ್ಮ ಬಾಯಿಗೆ
ಮಣ್ಣು....

ನಮ್ಮ ಮಡದಿ ಮಕ್ಕಳು ಹುಣ್ಣಾಗಿ
ಕಾಣುವರಲ್ಲ ನಿಮ್ಮಂಥ ಧನಿಕರ ಕಣ್ಣಿಗೆ..
ಪರಿಹಾರದ ನೆಪದಲ್ಲಿ ಅಷ್ಟೋ ಇಷ್ಟೋ
ಕೊಟ್ಟು ಮಾಡುವಿರಲ್ಲ ಬೀದಿಪಾಲು..

ಅರಿಯಿರಿ... ರೊಕ್ಕ ಭಕಾಸುರರೆ....
ನಿಮಗಿದೊಂದೆ ಊರು
ನಮಗಿಲ್ಲಾವ ಊರು ಸೂರಿನ ಖಬರು
ಎಲ್ಲಿ ಕಾಯಕವೊ... ಅದೇ ನಮ್ಮೂರು
ಬಯಲು ಜಾಗವೆ.. ನಮ್ಮರಮನೆಯ ಸೂರು

ದೇಹದೊಳಗಿನ ನೆತ್ತರಿನ ಬಿಸಿ
ಆರುವವರೆಗೂ ದುಡಿದು ತಿನ್ನುವೆವು..
ನೋಡಿರಿ... ನಿಮ್ಮ ಮನೆಗಳನ್ನು..
ಕೇಳಿರಿ ಆ ಕಲ್ಲುಗಳಿಗೆ...
ತರುವಾಗ.. ಎತ್ತುವಾಗ... ಕಟ್ಟುವಾಗ
ನನ್ನ ಬೆವರು... ನನ್ನ ಕೈ ಬೆರಳಿನ, ಕಾಲ್ಬೆರಳಿನ
ರಕ್ತವು ಸೋಕದೆಯೆ ನಿರ್ಮಾಣಗೊಂಡಿದೆಯೆ ಎಂದು..

ಇರಲಿ ನಮ್ಮ ಮೇಲೂ ಸ್ವಲ್ಪ ಕರುಣೆ
ನಮ್ಮನೆ ನಂಬಿ ಇರುವವು ಮನೆಯಲಿ
ಒಂದಿಷ್ಟು ಜೀವಗಳು...
ಬಾಯಾರಿ ಹಸಿವಿನಿಂದ ಕುತಿವೆ...
ದುಡಿತಕ್ಕೆ ತಕ್ಕಂತಾದರೂ ಹಣವ ನೀಡಿ
ಎರಡು ಹೊತ್ತಿಗಾಗದಿದ್ದರೂ...
ಒಂದು ಹೊತ್ತಿಗಾಗುವಷ್ಟಾದರೂ ನೀಡಿ
ಇಲ್ಲವಾದರೆ ಕಣ್ಣೀರಿವೆಯಲ್ಲ.....ಕುಡಿಯುವೆ
ಬಿಡಿ......

No comments:

Post a Comment