ಅವ್ವ....
ನನಗಿಲ್ಲವೆ.. ನೂರಾರು ಕನಸು
ಅರಿತುಕೊಳ್ಳುತ್ತಿಲ್ಲವೇಕೆ ನಿಮ್ಮ ಮನಸು
ನಾನಲ್ಲವಲ್ಲ ನಿಮ್ಮಷ್ಟು ಬಿರುಸು
ಮತ್ತೇ....ಕಿ ಭಾರವಾದ ಕಲ್ಲುಗಳ
ಹೊರೆಯು...
ಆಡಬೇಕಿದೆ.. ಓಡಬೇಕಿದೆ..ನಲಿಯಬೇಕಿದೆ..
ಊರ ಮುಂದಿನ ಮಾವಿನ ಮರಕೆ ನುಗ್ಗಿ
ಮಾವನು ಕದ್ದು ತಿನ್ನುವಾಸೆ..
ಟಾರ್ ಹಾಕಿರದ ರಸ್ತೆಯ ಮೇಲೆ ಟೈರ್
ಗಾಲಿಯ ಹಿಡಿದು ಓಡುವ ಆಸೆ...
ನೆಲ್ಲಿಯ ಮರವ ಹತ್ತಿ ಕಾಯಿಗಳನು
ಚಪ್ಪರಿಸಿ ತಿನ್ನುವಾಸೆ..
ಕೆರೆಯಲಿ ಜಿಗಿಯಲು, ಜಾತ್ರೆಗೆ ಹೋಗಲು
ಲಗೋರಿಯ ಆಡಲು, ಬಾನೆತ್ತರೆತ್ತರಕೆ
ಪಟವ ಹಾರಿಸಲು ಆಸೆ.. ಆಸೆ.. ಆಸೆ.
ಎಲ್ಲ ಆಸೆಗಳಲ್ಲೂ ನಿರಾಸೆ ತುಂಬಿದೆ ಅವ್ವ...
ನನಗೆ ಗೊತ್ತು...
ನೀವು ಒಳ್ಳೆಯ ಧಿರಿಸನು ಕೊಡಿಸಲಾರಿರೆಂದು
ಉತ್ತಮ ಶಾಲೆಗೆ ಕಳಿಸಲಾರಿರೆಂದು..
ಅಂದ ಚೆಂದದ ಬಣ್ಣದ ಗೊಂಬೆಗಳ
ಕೊಡಿಸುವುದಿಲ್ಲವೆಂದು..
ನನಗೆ ಗೊತ್ತಿಲ್ಲ...
ಹಸಿವಿಗೆ ನಾವು ಜೋತು ಬಿದ್ದಿರುವೆವೊ
ಹಸಿವು ನಮಗಷ್ಟೇ ಅಂಟಿಕೊಂಡಿದೆಯೊ..
ಮನೆಯವರೆಲ್ಲರೂ ದುಡಿದರೂ..
ಒಂದು ಹೊತ್ತಿಗಾಗುವಷ್ಟು ಅನ್ನ ಸಿಗುತ್ತಿಲ್ಲ..
ಇದು ನನಗೆ ಗೊತ್ತಾಗುತ್ತದೆ..
ನನ್ನ ಬಾಲ್ಯವನು ಈ ದುಡಿಮೆಯ
ಸಂಕೋಲೆಗೆ ಕಟ್ಟಿ ಹಾಕಿರುವಿರಿ..
ಈ ಹೆಗಲಿಗೆ ಹೊರಲಾರದ ಭಾರವನ್ನು
ಹೊರಿಸಿಬಿಟ್ಟಿರುವಿರಿ..
ಕಾಲುಗಳಿಗೆ ಅಜ್ಞಾನವೆಂಬ ಕಲ್ಲು ಗುಂಡನ್ನು
ಕಟ್ಟಿ ಕೈ ಬಿಟ್ಟಿರುವಿರಿ..
ಬಿಡುಗಡೆಗೊಳಿಸಿ ನನ್ನನು...
ಈ ಸಂಕೋಲೆಯಿಂದ..
ನೋಡಿ ಕರಗಿಹೋಗುತ್ತಿದೆ ನನ್ನ ಬಾಲ್ಯ
ಹಿಂದೆ ಉಳಿದು ಹೋಗುತ್ತಿದೆ ಅಭ್ಯಾಸ
ಮುಂದೆ ಓಡಿ ಹೋಗುತಿದೆ ಕಾಲ
ಅವ್ವ...
ಮೆಟ್ಟಿ ನಿಲ್ಲಬೇಕಿದೆ ಕಣೇ...
ಈ ಹಸಿವಿನ ಲೋಕವ
ಹಸಿವಿನ ಗಾಳಿಯೂ ಸುಳಿಯದಂತೆ
ಕಟ್ಟಬೇಕಿದೆ ಕಣೆ.. ಕೋಟೆಯೊಂದನು..
ನೋವಿನ ನೆರಳು ಬೀಳದಂತೆ ಕಟ್ಟಬೇಕಿದೆ
ಕಣೆ ಅವ್ವ..
ಹೋಗಬೇಕಿದೆ ನಾನು ಶಾಲೆಗೆ...
ಅನುಭವಿಸಬೇಕಿದೆ ಬಾಲ್ಯವ...
ಅರಿಯಬೇಕಿದೆ ಈ ಬಣ್ಣದ ಲೋಕವ
ಬಿಡಿಸಬೇಕಿದೆ... ನನ್ನಂಥ ಎಷ್ಟೋ
ಹುಡುಗರ ಬಾಲ್ಯದ ಸಂಕೋಲೆಗಳ...
ಅವ್ವ...
ಕಳಿಸೆ... ನನ್ನನೊಮ್ಮೆ ಶಾಲೆಗೆ
ಸಾಕಿನ್ನೂ... ದೂಡದಿರು ಈ ಸಂಕೋಲೆಗೆ
No comments:
Post a Comment